ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್; ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್; ಇಲ್ಲಿದೆ ಪಾಕವಿಧಾನ

ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್; ಇಲ್ಲಿದೆ ಪಾಕವಿಧಾನ

ಹೈದರಾಬಾದಿ ಚಿಕನ್ ಖಾದ್ಯವನ್ನು ವಿಶೇಷ ಮಸಾಲೆಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ರೆಸ್ಟೋರೆಂಟ್ ಶೈಲಿಯಲ್ಲಿ ಮನೆಯಲ್ಲೇ ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್
ಮನೆಯಲ್ಲೇ ಈ ರೀತಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಹೈದರಾಬಾದಿ ಚಿಕನ್

ಮೃದು ಮತ್ತು ತಿನ್ನಲು ರುಚಿಕರವಾದ ಹೈದರಾಬಾದಿ ಚಿಕನ್ ಖಾದ್ಯವನ್ನು ಬಹುತೇಕ ಎಲ್ಲಾ ಚಿಕನ್ ಪ್ರಿಯರು ಇಷ್ಟಪಡುತ್ತಾರೆ. ಆದರೆ, ಇದನ್ನು ಮನೆಯಲ್ಲೇ ತಯಾರಿಸುವಾಗ ರೆಸ್ಟೋರೆಂಟ್‌ನಲ್ಲಿ ತಿನ್ನುವ ರುಚಿ ಇರುವುದಿಲ್ಲ. ಹೈದರಾಬಾದಿ ಚಿಕನ್ ತಯಾರಿಸಲು ವಿಶೇಷ ರೀತಿಯ ಮಸಾಲೆಯನ್ನು ಬಳಸಲಾಗುತ್ತದೆ. ಅಲ್ಲದೆ, ಇದನ್ನು ಮ್ಯಾರಿನೇಟ್ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಹೈದರಾಬಾದಿ ಚಿಕನ್ ಖಾದ್ಯ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಹೈದರಾಬಾದಿ ಚಿಕನ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಒಂದು ಚಮಚ ಜೀರಿಗೆ, ಒಂದು ಚಮಚ ಸೋಂಪು, ಒಂದು ಚಮಚ ಕಾಳುಮೆಣಸು, ಒಂದು ಚಮಚ ಕೊತ್ತಂಬರಿ ಬೀಜ, 8 ಲವಂಗ, 2 ಜಾವಿತ್ರಿ, 1 ನಕ್ಷತ್ರ ಹೂವು, ಮೂರು ದಾಲ್ಚಿನ್ನಿಯ ಸಣ್ಣ ತುಂಡು, ಎರಡು ಕಪ್ಪು ಏಲಕ್ಕಿ, 8 ಸಣ್ಣ ಹಸಿರು ಏಲಕ್ಕಿ, 4 ಒಣಕಾಶ್ಮೀರಿ ಕೆಂಪು ಮೆಣಸಿನಕಾಯಿ, 3-4 ಈರುಳ್ಳಿ, ಎರಡು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದು ಕಪ್ ಮೊಸರು, ಒಂದು ಕಪ್ ಹುರಿದ ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು, ಒಂದು ಚಮಚ ಬಿಳಿ ವಿನೆಗರ್, ಒಂದು ದೊಡ್ಡ ಏಲಕ್ಕಿ, ಎರಡು ಸಣ್ಣ ದಾಲ್ಚಿನ್ನಿ, 1 ಜಾವಿತ್ರಿ, 4 ರಿಂದ 5 ಸಣ್ಣ ಏಲಕ್ಕಿ, 6-7 ಕಾಳುಮೆಣಸು, 3 ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, 4 ರಿಂದ 5 ಟೊಮೆಟೊ, ಕೋಳಿ ಮಾಂಸ- 1 ಕೆಜಿ.

ತಯಾರಿಸುವ ವಿಧಾನ: ಮೊದಲನೆಯದಾಗಿ, ಸೋಂಪು, ಕೊತ್ತಂಬರಿ, ಕಾಳುಮೆಣಸು, ಲವಂಗ, ದೊಡ್ಡ ಏಲಕ್ಕಿ, ಸಣ್ಣ ಏಲಕ್ಕಿ, ಜಾವಿತ್ರಿ, ನಕ್ಷತ್ರ ಕೋಡು ಮತ್ತು ಒಣ ಕೆಂಪು ಮೆಣಸಿನಕಾಯಿಯನ್ನು ಬಾಣಲೆಯಲ್ಲಿ ಹುರಿದು ಪುಡಿ ಮಾಡಿ.

ಈಗ ಚಿಕನ್ ಅನ್ನು ದೊಡ್ಡ ಪಾತ್ರೆಯಲ್ಲಿ ತೆಗೆದುಕೊಳ್ಳಿ. ಇದಕ್ಕೆ ಪುಡಿ ಮಾಡಿದ ಮಸಾಲೆ ಮಿಶ್ರಣವನ್ನು ಬೆರೆಸಿ. ಜೊತೆಗೆ ಎರಡು ಚಮಚ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಹುರಿದ ಈರುಳ್ಳಿ, ಉಪ್ಪು ಮತ್ತು ಒಂದು ಚಮಚ ವಿನೆಗರ್ ಹಾಕಿ. ಜೊತೆಗೆ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಮ್ಯಾರಿನೇಟ್ ಮಾಡಲು ರಾತ್ರಿಯಿಡೀ ಫ್ರಿಜ್‌ನಲ್ಲಿಡಿ.

ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದು ಬಿಸಿಯಾದ ತಕ್ಷಣ, 1 ಜಾವಿತ್ರಿ, 2 ದಾಲ್ಚಿನ್ನಿ, 4 ರಿಂದ 5 ಸಣ್ಣ ಏಲಕ್ಕಿ, 1 ದೊಡ್ಡ ಏಲಕ್ಕಿ, 6 ರಿಂದ 7 ಕಾಳುಮೆಣಸು ಬೆರೆಸಿ. ಹಾಗೆಯೇ ನುಣ್ಣಗೆ ಕತ್ತರಿಸಿದ ಎರಡರಿಂದ ಮೂರು ಈರುಳ್ಳಿಯನ್ನು ಬೆರೆಸಿ. ಈರುಳ್ಳಿಯನ್ನು ಚೆನ್ನಾಗಿ ಹುರಿಯಿರಿ. ಈರುಳ್ಳಿ ಹುರಿದ ನಂತರ, ಮೂರು ಚಮಚ ಕಾಶ್ಮೀರಿ ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಹುರಿಯಿರಿ.

ಈಗ ಈ ಮಿಶ್ರಣಕ್ಕೆ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ, ಪಾತ್ರೆಯನ್ನು ಮುಚ್ಚಿಟ್ಟು ಬೇಯಿಸಿ. ಚಿಕನ್ ಬೇಯಿಸಿದ ನಂತರ, ಅದಕ್ಕೆ ಟೊಮೆಟೊವನ್ನು ರುಬ್ಬಿ ಅದರ ರಸ ಅಥವಾ ಪ್ಯೂರಿಯನ್ನು ಬೆರೆಸಿ. ಕಡಿಮೆ ಉರಿಯಲ್ಲಿಟ್ಟು ಮುಚ್ಚಳವನ್ನು ಮುಚ್ಚಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಬೇಯಿಸಿ. ಚಿಕನ್ ಸಂಪೂರ್ಣವಾಗಿ ಬೆಂದ ನಂತರ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ಟವ್ ಆಫ್ ಮಾಡಿ. ಅರ್ಧ ಗಂಟೆಯ ನಂತರ ಮುಚ್ಚಳ ತೆಗೆದರೆ ರುಚಿಕರ ಹೈದರಾಬಾದಿ ಚಿಕನ್ ಸಿದ್ಧ.

Whats_app_banner