ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್: ಒಮ್ಮೆ ಮಾಡಿ ನೋಡಿ, ಮಕ್ಕಳು ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್: ಒಮ್ಮೆ ಮಾಡಿ ನೋಡಿ, ಮಕ್ಕಳು ಇಷ್ಟಪಟ್ಟು ತಿಂತಾರೆ

ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್: ಒಮ್ಮೆ ಮಾಡಿ ನೋಡಿ, ಮಕ್ಕಳು ಇಷ್ಟಪಟ್ಟು ತಿಂತಾರೆ

ಆಲೂಗಡ್ಡೆಯಿಂದ ತಯಾರಿಸಿದ ಫ್ರೆಂಚ್ ಫ್ರೈಗಳನ್ನು ಅನೇಕ ಜನರು ಇಷ್ಟಪಡುತ್ತಾರೆ.ಆದರೆ ಸಬ್ಬಕ್ಕಿಯಿಂದ ತಯಾರಿಸಿದ ಫ್ರೈಸ್ ಆರೋಗ್ಯಕ್ಕೂ ಉತ್ತಮ ಹಾಗೂ ಉತ್ತಮ ರುಚಿಯನ್ನು ಹೊಂದಿರುತ್ತದೆ. ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್, ಇಲ್ಲಿದೆ ರೆಸಿಪಿ
ಫ್ರೆಂಚ್ ಫ್ರೈಸ್‌ನಂತೆ ತಯಾರಿಸಿ ರುಚಿಕರ ಸಬ್ಬಕ್ಕಿ ಫ್ರೈಸ್, ಇಲ್ಲಿದೆ ರೆಸಿಪಿ

ಫ್ರೆಂಚ್ ಫ್ರೈ ಅಂದ್ರೆ ಬಹುತೇಕ ಮಂದಿ ಇಷ್ಟಪಟ್ಟು ತಿಂತಾರೆ. ಹೊರಗೆ ಖರೀದಿಸಿ ಹಾಗೂ ಮನೆಯಲ್ಲೇ ತಯಾರಿಸಿ ತಿಂತಾರೆ. ಇದು ಆಲೂಗಡ್ಡೆಯಿಂದ ಮಾಡುವಂತಹ ಖಾದ್ಯ. ಆದರೆ, ಆಗಾಗ ಫ್ರೆಂಚ್ ಫ್ರೈಸ್ ತಿನ್ನುತ್ತಿದ್ದರೆ ಬೇಸರವಾಗುವುದು ಸಹಜ. ಒಂದೇ ತರಹದ ಸ್ನಾಕ್ಸ್ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ಸಬ್ಬಕ್ಕಿಯಿಂದ ಮಾಡಲಾಗುವ ಫ್ರೈಸ್ ಅನ್ನು ತಯಾರಿಸಬಹುದು. ಮಕ್ಕಳು ಇದನ್ನು ಖಂಡಿತ ಇಷ್ಟಪಟ್ಟು ತಿಂತಾರೆ. ಸಬ್ಬಕ್ಕಿ ಫ್ರೈಸ್ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಸಬ್ಬಕ್ಕಿ ಫ್ರೈಸ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ- ಒಂದು ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಆಲೂಗಡ್ಡೆ- ಎರಡು, ಉಪ್ಪು ರುಚಿಗೆ ತಕ್ಕಷ್ಟು, ಕಡಲೆಕಾಯಿ- ಅರ್ಧ ಕಪ್, ಕೊತ್ತಂಬರಿ ಪುಡಿ - ಎರಡು ಚಮಚ, ತುರಿದ ಶುಂಠಿ - ಒಂದು ಚಮಚ, ಬೆಳ್ಳುಳ್ಳಿ- ಒಣಮೆಣಸಿನಕಾಯಿ ಪೇಸ್ಟ್ - ಒಂದು ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ: ಸಬ್ಬಕ್ಕಿ ಫ್ರೈಸ್ ಮಾಡಲು ಸಬ್ಬಕ್ಕಿಯನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಡಿ. ಒಂದು ಕಪ್ ಸಬ್ಬಕ್ಕಿಯನ್ನು ತೆಗೆದುಕೊಂಡು ಅದು ಮುಳುಗುವವರೆಗೆ ನೀರು ಹಾಕಿ.

ಮರುದಿನ ಬೆಳಗ್ಗೆ ನೀರನ್ನು ಸೋಸಿ ಸಬ್ಬಕ್ಕಿಯನ್ನು ಪಕ್ಕಕ್ಕೆ ಇರಿಸಿ. ಈಗ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ನೀರು ಹಾಕಿ ಕುದಿಸಿ. ಈ ವೇಳೆ ಬಾಣಲೆಯನ್ನು ಒಲೆ ಮೇಲಿಟ್ಟು ಕಡಲೆಕಾಯಿ ಹಾಕಿ ಹುರಿಯಿರಿ. ನಂತರ ಇದನ್ನು ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇರಿಸಿ.

ಈಗ ಒಂದು ಬಟ್ಟಲಿನಲ್ಲಿ ನೆನೆಸಿಟ್ಟ ಸಬ್ಬಕ್ಕಿಯನ್ನು, ಬೇಯಿಸಿದ ಆಲೂಗಡ್ಡೆ, ನುಣ್ಣಗೆ ಪುಡಿಮಾಡಿದ ಕಡಲೆಕಾಯಿ ಮಿಶ್ರಣ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಶುಂಠಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಜೀರಿಗೆ ಪುಡಿ ಮತ್ತು ಬೆಳ್ಳುಳ್ಳಿ-ಒಣಮೆಣಸಿನಕಾಯಿ ಪೇಸ್ಟ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಇದು ಚಪಾತಿ ಹಿಟ್ಟಿನಂತೆ ತುಂಬಾ ಗಟ್ಟಿಯಾಗಿರಬೇಕು. ನಂತರ ಹಿಟ್ಟಿನಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣ ತೆಗೆದುಕೊಂಡು ಫ್ರೈಸ್ ಆಗಿ ರೂಪಿಸಿ. ಈಗ ಒಲೆಯ ಮೇಲೆ ಪ್ಯಾನ್ ಇರಿಸಿ. ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಕೈಯಿಂದ ಮಾಡಿದ ಫ್ರೈಗಳನ್ನು ಎಣ್ಣೆಗೆ ಹಾಕಿ ಅವು ಬಣ್ಣ ಬದಲಾಗುವವರೆಗೆ ಕರಿಯಿರಿ.

ಸಬ್ಬಕ್ಕಿ ಫ್ರೈಸ್ ಅನ್ನು ಚೆನ್ನಾಗಿ ಕರಿದ ನಂತರ ಅವುಗಳನ್ನು ಹೊರತೆಗೆದು ಟಿಶ್ಯೂ ಪೇಪರ್ ಇಟ್ಟ ತಟ್ಟೆ ಮೇಲೆ ಇರಿಸಿ. ಟಿಶ್ಯೂ ಪೇಪರ್ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಅಷ್ಟೇ, ರುಚಿಕರವಾದ ಸಬ್ಬಕ್ಕಿ ಫ್ರೈಸ್ ಸಿದ್ಧ. ಇವು ತುಂಬಾ ರುಚಿಕರವಾಗಿರುತ್ತವೆ. ಅವು ತುಂಬಾ ಗರಿಗರಿಯಾಗಿರುತ್ತವೆ. ಮಕ್ಕಳು ಖಂಡಿತ ಇಷ್ಟಪಟ್ಟು ತಿಂತಾರೆ. ಸಬ್ಬಕ್ಕಿ ಫ್ರೈಸ್ ಫ್ರೆಂಚ್ ಫ್ರೈಗಳಿಗಿಂತಲೂ ಬಹಳ ಆರೋಗ್ಯಕರ ಸ್ನಾಕ್ಸ್ ಆಗಿದೆ.

ಸಬ್ಬಕ್ಕಿಯಿಂದ ಮಾಡಿದ ಈ ಪಾಕವಿಧಾನ ತುಂಬಾ ರುಚಿಕರವಾಗಿರುತ್ತದೆ. ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಇದು ತುಂಬಾ ಇಷ್ಟ. ನಾವು ಹೇಳಿದ ರೀತಿಯಲ್ಲಿ ಸಬ್ಬಕ್ಕಿಯನ್ನು ಕರಿಯಿರಿ. ನಿಮಗೆ ಈ ಸ್ನಾಕ್ಸ್ ಖಂಡಿತ ಇಷ್ಟವಾಗುತ್ತದೆ.

Priyanka Gowda

eMail
Whats_app_banner