ಎಳ್ಳು-ಬೆಲ್ಲ ಹಂಚದಿದ್ದರೆ ಮಕರ ಸಂಕ್ರಾಂತಿ ಅಪೂರ್ಣ: ಇದನ್ನು ತಯಾರಿಸುವ ವಿಧಾನ ಇಲ್ಲಿದೆ
ಕರ್ನಾಟಕದಲ್ಲಿ ಸುಗ್ಗಿ ಹಬ್ಬ ಎಂದೇ ಕರೆಯಲಾಗುವ ಮಕರ ಸಂಕ್ರಾಂತಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸಂಕ್ರಾಂತಿಯಂದು ಎಳ್ಳು-ಬೆಲ್ಲವನ್ನು ಹಂಚಿ ಹಬ್ಬವನ್ನು ಆಚರಿಸುವುದು ರೂಢಿ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಮೀಪಿಸಿದೆ. ಈಗಾಗಲೇ ಎಲ್ಲರೂ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಭಾರತದ ಬೇರೆ-ಬೇರೆ ರಾಜ್ಯಗಳಲ್ಲಿ ಬೇರೆ-ಬೇರೆ ಹೆಸರಿನಿಂದ ಕರೆಯಲ್ಪಡುವ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬ ಎಂದೇ ಕರೆಯಲಾಗುವ ಮಕರ ಸಂಕ್ರಾಂತಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸಂಕ್ರಾಂತಿಯಂದು ಎಳ್ಳು-ಬೆಲ್ಲವನ್ನು ಹಂಚಿ ಹಬ್ಬವನ್ನು ಆಚರಿಸುವುದು ರೂಢಿ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಚಳಿಗಾಲದ ತಿಂಗಳಿನಲ್ಲಿ ಬರುವ ವರ್ಷದ ಮೊದಲ ಹಬ್ಬವನ್ನು ಜನರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಎಳ್ಳು-ಬೆಲ್ಲ ಇಲ್ಲದಿದ್ದರೆ ಹಬ್ಬ ಪೂರ್ಣವಾಗುವುದಿಲ್ಲ. ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸುವ ಹಬ್ಬವಿದು. ಚಳಿಗಾಲದಲ್ಲಿ ಶೀತದ ವಾತಾವರಣ ಇರುತ್ತದೆ. ಹೀಗಾಗಿ ಎಳ್ಳು-ಬೆಲ್ಲವನ್ನು ತಿನ್ನುವುದರಿಂದ ದೇಹವನ್ನು ಬೆಚ್ಚಗಿರಿಸಿಬಹುದು ಅನ್ನೋ ನಂಬಿಕೆಯಿಂದ ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನು ಹಂಚಲಾಗುತ್ತದೆ. ಎಳ್ಳನ್ನು ಸೇವಿಸುವುದರಿಂದ ಉಷ್ಣತೆ ಹೆಚ್ಚಾಗುತ್ತದೆ ಹಾಗೂ ಬೆಲ್ಲವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಇವೆರಡರ ಸಂಯೋಜನೆಯು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಹಲವರದ್ದು. ಹೀಗಾಗಿ ಈ ದಿನದಂದು ಎಳ್ಳು-ಬೆಲ್ಲ ಹಂಚಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಎಳ್ಳು-ಬೆಲ್ಲ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಹುರಿಗಡಲೆ- 2 ಕಪ್, ಕಡಲೆಕಾಯಿ- 2 ಕಪ್, ಬಿಳಿ ಎಳ್ಳು- 1 ಕಪ್, ಸಿಹಿ ಜೀರಿಗೆ- ಅರ್ಧ ಕಪ್, ಬೆಲ್ಲ- 1 ಕಪ್, ಸಕ್ಕರೆ ಅಚ್ಚು- 1 ಕಪ್, ಒಣ ಕೊಬ್ಬರಿ- 1 ½ ಕಪ್.
ಮಾಡುವ ವಿಧಾನ: ಮೊದಲಿಗೆ ಕೊಬ್ಬರಿಯ ಮೇಲೆ ಇರುವ ಕಪ್ಪು (ಹೊಟ್ಟಿನ) ಅಂಶವನ್ನು ತೆಗೆಯಬೇಕು. ನಂತರ ಇದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
ಒಲೆ ಮೇಲೆ ಬಾಣಲೆ ಇಟ್ಟು ಕಡಲೆಕಾಯಿಯನ್ನು ಹಾಕಿ. ಸಣ್ಣ ಉರಿಯಲ್ಲಿಟ್ಟು ಹುರಿಯಿರಿ. ಪರಿಮಳ ಬರುತ್ತಿದ್ದಂತೆ, ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ, ಇದನ್ನು ತಣ್ಣಗಾಗಲು ಬಿಡಿ. ಬಳಿಕ ಅದರ ಸಿಪ್ಪೆಯನ್ನೆಲ್ಲಾ ತೆಗೆಯಿರಿ.
ಬೆಲ್ಲವನ್ನು ಕೂಡ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈಗ ಬೆಲ್ಲ, ಒಣಕೊಬ್ಬರಿ ಹಾಗೂ ಹುರಿಗಡಲೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಎರಡು ದಿನ ಬಿಸಿಲಿನಲ್ಲಿ ಒಣಗಿಸಿ. ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಅರ್ಧ ಕಪ್ ಬಿಳಿ ಎಳ್ಳು ಹಾಕಿ ಹುರಿಯಿರಿ. ಉರಿಯನ್ನು ಸಣ್ಣ ಪ್ರಮಾಣದಲ್ಲಿಟ್ಟು ಹುರಿಯಬೇಕು. ಇಲ್ಲದಿದ್ದರೆ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ. ಎಳ್ಳು ಸಿಡಿಯುತ್ತಿಂತೆ ಒಲೆ ಆರಿಸಿ ಒಂದು ತಟ್ಟೆಗೆ ವರ್ಗಾಯಿಸಿ.
ನಂತರ ಒಂದು ಪಾತ್ರೆಗೆ ಹುರಿಗಡಲೆ, ಹುರಿದ ಕಡಲೆಕಾಯಿ, ಬಿಳಿ ಎಳ್ಳು, ಸಿಹಿ ಜೀರಿಗೆ, ಬೆಲ್ಲ- 1 ಕಪ್, ಒಣ ಕೊಬ್ಬರಿ ಇವೆಲ್ಲವನ್ನೂ ಒಂದೊಂದಾಗಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಎಳ್ಳು-ಬೆಲ್ಲ ಸಿದ್ಧ. ಇದನ್ನು ಸಕ್ಕರೆ ಅಚ್ಚು ಜೊತೆ ಮನೆಮಂದಿ, ಅಕ್ಕಪಕ್ಕದ ಮನೆಯವರಿಗೆ, ಅತಿಥಿಗಳಿಗೆ ಹಂಚಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬಹುದು.