ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿ ಸುಕ್ಕಿನುಂಡೆ ತಯಾರಿಸುವುದು ಹೀಗೆ; ನೋಡಿದರೆ ಬಾಯಲ್ಲಿ ನೀರೂರುತ್ತೆ
ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಸುಕ್ಕಿನುಂಡೆಯೂ ಒಂದು. ಹೂರಣ ತಯಾರಿಸಿ ಎಣ್ಣೆಯಲ್ಲಿ ಕರಿಯಲಾಗುವ ಈ ಸಿಹಿತಿಂಡಿ ಬಹಳ ರುಚಿಕರವಾಗಿರುತ್ತದೆ. ಕೆಲವೊಮ್ಮೆ ಇದನ್ನು ಎಣ್ಣೆಯಲ್ಲಿ ಕರಿಯುವಾಗ ಹೂರಣ ಹೊರಬರುತ್ತದೆ. ಈ ರೀತಿ ಆಗದಂತೆ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿತಿಂಡಿಗಳಲ್ಲಿ ಸುಕ್ಕಿನುಂಡೆಯೂ ಒಂದು. ಹೂರಣ ತಯಾರಿಸಿ ಎಣ್ಣೆಯಲ್ಲಿ ಕರಿಯಲಾಗುವ ಈ ಸಿಹಿತಿಂಡಿ ಬಹಳ ರುಚಿಕರವಾಗಿರುತ್ತದೆ. ಹಬ್ಬಕ್ಕೆ ಮಾತ್ರವಲ್ಲ ಮನೆಗೆ ಅತಿಥಿಗಳು ಬಂದಾಗಲೂ ಈ ಸಿಹಿತಿಂಡಿಯನ್ನು ತಯಾರಿಸಿ ಬಡಿಸಲಾಗುತ್ತದೆ. ಸುಕ್ಕಿನುಂಡೆಯನ್ನು ತೊಗರಿಬೇಳೆ, ಎಳ್ಳು, ತೆಂಗಿನಕಾಯಿ ಇತ್ಯಾದಿಗಳಿಂದಲೂ ಮಾಡಬಹುದು. ಇಲ್ಲಿ ಕಡಲೆಬೇಳೆಯಿಂದ ಸುಕ್ಕಿನುಂಡೆ ಮಾಡುವ ವಿಧಾನವನ್ನು ತಿಳಿಸಲಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಕೆಲವೊಮ್ಮೆ ಇದನ್ನು ಕರಿಯುವಾಗ ಹೂರಣ ಹೊರಬರುತ್ತದೆ. ಈ ರೀತಿ ಆಗದಂತೆ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸುಕ್ಕಿನುಂಡೆ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ- 1 ಕಪ್, ಅಕ್ಕಿ- ಅರ್ಧ ಕಪ್, ಕಡಲೆಬೇಳೆ- ಒಂದು ಕಪ್, ಬೆಲ್ಲ- ಒಂದೂವರೆ ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಉಪ್ಪು- ಚಿಟಿಕೆ, ಅಡುಗೆ ಎಣ್ಣೆ- ಕರಿಯಲು ಬೇಕಾದಷ್ಟು, ಅಡುಗೆ ಸೋಡಾ- ¼ ಚಮಚ.
ಮಾಡುವ ವಿಧಾನ: ಮೇಲೆ ತಿಳಿಸಿರುವ ಅಳತೆಗಳ ಪ್ರಕಾರವೇ ತೆಗೆದುಕೊಂಡು ಈ ಸಿಹಿಖಾದ್ಯ ತಯಾರಿಸಿ. ಮೊದಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಡಿ. ನಾಲ್ಕರಿಂದ ಆರು ಗಂಟೆಗಳ ಕಾಲ ನೆನೆಸಿಡಿ. ನಂತರ ಎರಡನ್ನೂ ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಡಿ. ಹಿಟ್ಟು ದಪ್ಪವಾಗಿರಲಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತುಂಬಾ ಗಟ್ಟಿಯಾಗಿರಬಾರದು ಹಾಗೆಯೇ ಹಿಟ್ಟು ತೆಳುವಾಗಿಯೂ ಇರಬಾರದು. ಇಡ್ಲಿ ಹಿಟ್ಟಿನ ಹದದಷ್ಟಿದ್ದರೆ ಸಾಕು. ಇದನ್ನು ಎರಡು ಗಂಟೆಗಳ ಕಾಲ ಮುಚ್ಚಿಟ್ಟು, ಪಕ್ಕಕ್ಕೆ ಇಡಿ.
ಈಗ, ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 1 ಗಂಟೆ ಕಾಲ ನೆನೆಸಿಡಿ. ನಂತರ ಇದನ್ನು ಕುಕ್ಕರ್‌ಗೆ ಹಾಕಿ 3 ರಿಂದ 4 ಸೀಟಿ ಬರುವವರೆಗೆ ಬೇಯಿಸಿ, ಒಲೆ ಆಫ್ ಮಾಡಿ. ನಂತರ ಮುಚ್ಚಳವನ್ನು ತೆಗೆದು ನೀರನ್ನು ಸೋಸಿ. ಕಡಲೆ ಬೇಳೆಯನ್ನು ತಣ್ಣಗಾಗಿಸಿ ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಬಹುದು. ಇಲ್ಲವೇ ಕಡಲೆಬೇಳೆಯನ್ನು ಚಮಚದಿಂದ ಕಲಸುತ್ತಾ ಮೆತ್ತಗಾಗುವವರೆದೆ ಬೇಯಿಸಬಹುದು. ನಂತರ ಇದಕ್ಕೆ ಬೆಲ್ಲವನ್ನು ಬೆರೆಸಿ ಮತ್ತೆ ಒಲೆ ಮೇಲಿಟ್ಟು ಕುದಿಸಿ.
ಈ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಗಟ್ಟಿಯಾಗುವವರೆಗೆ ಬೆರೆಸುತ್ತಿರಿ. ನಂತರ ಒಲೆ ಆಫ್ ಮಾಡಿ. ಸ್ವಲ್ಪ ತಣ್ಣಗಾಗಲು ಬಿಟ್ಟು ಈ ಹೂರಣದಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಕಟ್ಟಿ. ಈ ವೇಳೆ 2 ಗಂಟೆ ಮ್ಯಾರಿನೇಟ್ ಮಾಡಲು ಇಟ್ಟಿರುವ ಅಕ್ಕಿ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಳ್ಳಿ.
ಈ ವೇಳೆ ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಕಡಲೆಬೇಳೆ ಉಂಡೆಯನ್ನು ತೆಗೆದುಕೊಂಡು ಅದನ್ನು ರುಬ್ಬಿರುವ ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ. ಇದನ್ನು ಬಣ್ಣ ಬದಲಾಗುವವರೆಗೆ ಚೆನ್ನಾಗಿ ಕರಿದು ಬಳಿಕ ಹೊರತೆಗೆದರೆ ರುಚಿಕರವಾದ ಸುಕ್ಕಿನುಂಡೆ ತಿನ್ನಲು ಸಿದ್ಧ.
ಎಣ್ಣೆಯಲ್ಲಿ ಉಂಡೆ ಒಡೆದರೆ ಹಿಟ್ಟನ್ನು ಸರಿಯಾಗಿ ತಯಾರಿಸಿಲ್ಲ ಎಂದರ್ಥ. ಮೇಲೆ ತಿಳಿಸಿದ ಪಾಕವಿಧಾನವನ್ನು ಅನುಸರಿಸಿದರೆ ಎಣ್ಣೆಯಲ್ಲಿ ಇದು ಒಡೆಯುವುದಿಲ್ಲ, ಪರಿಪೂರ್ಣವಾಗಿರುತ್ತದೆ. ಹಿಟ್ಟು ತುಂಬಾ ದಪ್ಪ ಹಾಗೂ ತೆಳುವಾಗಿದ್ದರೂ ಎಣ್ಣೆಯಲ್ಲಿ ಹಾಕಿದ ತಕ್ಷಣ ಒಡೆಯುತ್ತದೆ. ಹೀಗಾಗಿ ಹಿಟ್ಟಿನ ಹದವನ್ನು ನೋಡಿಕೊಳ್ಳಿ.
ಅಂದಹಾಗೆ, ಸುಕ್ಕಿನುಂಡೆ ಪಾಕವಿಧಾನವು ಇಂದು ನಿನ್ನೆಯದಲ್ಲ. ಸುಮಾರು 100 ವರ್ಷ ಹಿಂದಿನಿಂದಲೂ ಈ ಸಿಹಿಖಾದ್ಯವನ್ನು ತಯಾರಿಸಲಾಗುತ್ತಿದೆ ಎಂದು ನಂಬಲಾಗಿದೆ. ನೀವು ಇದುವರೆದೂ ಈ ರೆಸಿಪಿಯನ್ನು ಪ್ರಯತ್ನಿಸದಿದ್ದರೆ ಒಮ್ಮೆ ಮಾಡಿ ನೋಡಿ. ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ವಿಭಾಗ