ಇಲ್ಲಿದೆ ಚಿಕನ್ ಪೆಪ್ಪರ್ ರಸಂ ರೆಸಿಪಿ; ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಖಾದ್ಯವಿದು
ಈ ಮಳೆಗೆ ಏನಾದರೂ ಬಿಸಿಬಿಸಿಯಾದ ಅಥವಾ ಖಾರ-ಖಾರವಾಗಿರುವ ಖಾದ್ಯ ತಿನ್ನಬೇಕು ಎಂದೆನಿಸುವುದು ಸಹಜ. ನಿಮಗೂ ಹಾಗನಿಸುತ್ತಿದ್ದರೆ ಚಿಕನ್ ಪೆಪ್ಪರ್ ರಸಂ ಮಾಡಿ ಸವಿಯಿರಿ. ಇದುಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹಲವೆಡೆ ಮಳೆ ಉಧೋ ಎಂದು ಸುರಿಯುತ್ತಿದೆ. ಈ ಮಳೆಗೆ ಏನಾದರೂ ಬಿಸಿಬಿಸಿಯಾದ ಅಥವಾ ಖಾರ-ಖಾರವಾಗಿರುವ ಖಾದ್ಯ ತಿನ್ನಬೇಕು ಎಂದೆನಿಸುವುದು ಸಹಜ. ಅಲ್ಲದೆ, ಈ ಸಮಯದಲ್ಲಿ ಶೀತ, ಗಂಟಲು ನೋವು, ಜ್ವರ ಮುಂತಾದ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಚಿಕನ್ ಪೆಪ್ಪರ್ ರಸಂ ಸಹಕಾರಿ. ಇದು ರುಚಿಕರವಾಗಿರುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.
ಚಿಕನ್ ಪೆಪ್ಪರ್ ರಸಂ ಹೆಸರು ಕೇಳಿದರೆ ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಬಹುದು. ಈ ಖಾರವಾದ ಖಾದ್ಯವನ್ನು ಒಮ್ಮೆ ಮಾಡಿ ನೋಡಿದರೆ, ಮತ್ತೆ ಮತ್ತೆ ಮಾಡಿ ತಿನ್ನಬೇಕು ಎಂದೆನಿಸಬಹುದು. ಇದರಲ್ಲಿ ಕಾಳುಮೆಣಸು, ಕೋಳಿ ಮಾಂಸ ಮತ್ತು ಅರಿಶಿನವನ್ನು ಬಳಸಲಾಗುತ್ತದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸೋಂಕುಗಳನ್ನು ದೂರವಿಡುತ್ತವೆ. ಹಾಗಾದರೆ ಚಿಕನ್ ಪೆಪ್ಪರ್ ರಸಂ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಪೆಪ್ಪರ್ ರಸಂ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ - ಅರ್ಧ ಕಿಲೋ, ಉಪ್ಪು - ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಈರುಳ್ಳಿ – ಎರಡು, ಹುಣಸೆಹಣ್ಣು – ಒಂದು ನಿಂಬೆಹಣ್ಣಿನ ಗಾತ್ರ, ಟೊಮೆಟೊ – ಎರಡು, ಎಣ್ಣೆ - ಎರಡು ಚಮಚ, ಸಾಸಿವೆ - ಒಂದು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಮೆಣಸಿನ ಪುಡಿ - ಅರ್ಧ ಚಮಚ, ರಸಂ ಪುಡಿ - ಒಂದು ಚಮಚ, ಜೀರಿಗೆ - ಅರ್ಧ ಚಮಚ, ಮೆಣಸಿನಕಾಯಿ – ನಾಲ್ಕು, ಕರಿಬೇವು - ಒಂದು ಹಿಡಿ, ಕೊತ್ತಂಬರಿ ಸೊಪ್ಪು - ಒಂದು ಹಿಡಿ, ಉಪ್ಪು - ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ - 1 ಚಮಚ.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ದೊಡ್ಡ ತುಂಡುಗಳು ಬೇಗನೆ ಬೇಯುವುದಿಲ್ಲ. ಈಗ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ. ಇದಕ್ಕೆ ಅರಿಶಿನ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮ್ಯಾರಿನೇಟ್ ಮಾಡಿ.
ಈಗ ಹುಣಸೆಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ ನೆನೆಸಿ. ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಒಣಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ, ಸಣ್ಣಗೆ ಹೆಚ್ಚಿದ ಟೊಮೆಟೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಿ. ಟೊಮೆಟೊ ಮೃದುವಾಗುತ್ತದೆ. ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿಡಿ.
ಸುಮಾರು ಹತ್ತು ನಿಮಿಷಗಳ ನಂತರ, ಮುಚ್ಚಳ ತೆಗೆದು, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ ಮುಚ್ಚಳವನ್ನು ಮುಚ್ಚಿ. ಈ ಮಧ್ಯೆ, ಹುಣಸೆಹಣ್ಣಿನ ತಿರುಳಿಗೆ ಸ್ವಲ್ಪ ನೀರು ಬೆರೆಸಿ ಅದನ್ನು ಹಿಂಡಿ ಮಿಶ್ರಣಕ್ಕೆ ಹಾಕಿ.
ಈ ಮಿಶ್ರಣ ಕುದಿಯುತ್ತಿರುವಾಗ ರಸಂ ಪುಡಿ ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಜೊತೆಗೆ ಒಂದು ಚಮಚ ಕಾಳುಮೆಣಸಿನ ಪುಡಿ ಸೇರಿ ಮಿಶ್ರಣ ಮಾಡಿ. ಈಗ ಮೇಲೆ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಒಲೆ ಆಫ್ ಮಾಡಿದರೆ ರುಚಿಕರವಾದ ಚಿಕನ್ ಪೆಪ್ಪರ್ ರಸಂ ಸಿದ್ಧ.
ಚಿಕನ್ ಪೆಪ್ಪರ್ ರಸಂ ಖಾರ-ಖಾರವಾಗಿದ್ದು, ರುಚಿಕರವಾಗಿರುತ್ತದೆ. ಇದನ್ನು ಇಡ್ಲಿ, ದೋಸೆ, ಅನ್ನ ಮತ್ತು ಚಪಾತಿಯೊಂದಿಗೆ ಸಹ ತಿನ್ನಬಹುದು. ಒಮ್ಮೆ ತಿಂದ ನಂತರ, ಅದರ ರುಚಿಯನ್ನು ನೀವು ಎಂದಿಗೂ ಮರೆಯುವುದಿಲ್ಲ. ಇದರಲ್ಲಿರುವ ಕಾಳುಮೆಣಸು ಮತ್ತು ಕೋಳಿ ಮಾಂಸದ ಸಂಯೋಜನೆಯು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ದರಿಂದ ಒಮ್ಮೆಯಾದರೂ ಅದನ್ನು ತಿನ್ನಲು ಪ್ರಯತ್ನಿಸಿ. ನಿಮಗೆ ಖಂಡಿತ ಇಷ್ಟವಾಗುತ್ತದೆ.