ಆಲೂಗಡ್ಡೆ, ಎಲೆಕೋಸು, ಮೂಲಂಗಿ ಪರೋಟ ನೀವು ತಿಂದಿರಬಹುದು: ಎಂದಾದರೂ ಚಿಲ್ಲಿ ಪನೀರ್ ಪರೋಟ ಟ್ರೈ ಮಾಡಿದ್ದೀರಾ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಲೂಗಡ್ಡೆ, ಎಲೆಕೋಸು, ಮೂಲಂಗಿ ಪರೋಟ ನೀವು ತಿಂದಿರಬಹುದು: ಎಂದಾದರೂ ಚಿಲ್ಲಿ ಪನೀರ್ ಪರೋಟ ಟ್ರೈ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

ಆಲೂಗಡ್ಡೆ, ಎಲೆಕೋಸು, ಮೂಲಂಗಿ ಪರೋಟ ನೀವು ತಿಂದಿರಬಹುದು: ಎಂದಾದರೂ ಚಿಲ್ಲಿ ಪನೀರ್ ಪರೋಟ ಟ್ರೈ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

ಬಿಸಿ ಬಿಸಿ ಪರೋಟಗಳನ್ನು ತಿನ್ನಲು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ವಿಶೇಷವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಪರೋಟ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ನೀವು ಆಲೂಗಡ್ಡೆ, ಎಲೆಕೋಸು, ಪನೀರ್ ಅಥವಾ ಮೂಲಂಗಿ ಸ್ಟಫಿಂಗ್ ಮಾಡಿರುವ ಪರೋಟಗಳನ್ನು ತಿಂದಿರಬಹುದು. ಆದರೆ ನೀವು ಎಂದಾದರೂ ಚಿಲ್ಲಿ ಪನೀರ್ ಪರೋಟ ಪ್ರಯತ್ನಿಸಿದ್ದೀರಾ? ಇಲ್ಲಿದೆ ಪಾಕವಿಧಾನ.

ಚಿಲ್ಲಿ ಪನೀರ್ ಪರೋಟ ರೆಸಿಪಿ
ಚಿಲ್ಲಿ ಪನೀರ್ ಪರೋಟ ರೆಸಿಪಿ (Shutterstock)

ಮನೆಯಲ್ಲೇ ತಯಾರಿಸಿದ ಬಿಸಿ ಬಿಸಿ ಪರೋಟಗಳನ್ನು ತಿನ್ನಲು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಪರೋಟ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ನೀವು ರುಚಿಕರವಾದ ಮತ್ತು ಆರೋಗ್ಯಕರ ಪರೋಟಗಳನ್ನು ವಿವಿಧ ಸ್ಟಫಿಂಗ್‍ಗಳೊಂದಿಗೆ ತಯಾರಿಸಬಹುದು. ಇಲ್ಲಿಯವರೆಗೆ ನೀವು ಆಲೂಗಡ್ಡೆ, ಎಲೆಕೋಸು, ಪನೀರ್ ಅಥವಾ ಮೂಲಂಗಿ ಸ್ಟಫಿಂಗ್ ಮಾಡಿರುವ ಪರೋಟಗಳನ್ನು ತಿಂದಿರಬಹುದು. ಆದರೆ ನೀವು ಎಂದಾದರೂ ಚಿಲ್ಲಿ ಪನೀರ್ ಪರೋಟ ಪ್ರಯತ್ನಿಸಿದ್ದೀರಾ? ಇಲ್ಲದಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಲ್ಲಿ ಪನೀರ್ ಪರೋಟ ಪಾಕವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಒಂದು ಕಪ್, ಬೆಳ್ಳುಳ್ಳಿ 6 ರಿಂದ 7 ಎಸಳು, ಹಸಿ ಮೆಣಸಿನಕಾಯಿ- 5, ಕಡಲೆಕಾಯಿ- 2 ಟೀ ಚಮಚ, ಜೀರಿಗೆ- 2 ಟೀ ಚಮಚ, ಪನೀರ್- ಸುಮಾರು 100 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ತುಪ್ಪ.

ತಯಾರಿಸುವ ವಿಧಾನ: ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇರಿಸಿ. ಇದಕ್ಕೆ 1 ಚಮಚ ತುಪ್ಪ (ಎಣ್ಣೆ ಸಹ ಸೇರಿಸಬಹುದು) ಹಾಕಿ. ಇದು ಬಿಸಿಯಾದಾಗ ಜೀರಿಗೆ, ಬೆಳ್ಳುಳ್ಳಿ ಎಸಳು, ಹಸಿ ಮೆಣಸಿನಕಾಯಿ, ಕಡಲೆಕಾಯಿ ಸೇರಿಸಿ ಹುರಿಯಿರಿ. ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಿರಿ, ನಂತರ ಒಲೆ ಆಫ್ ಮಾಡಿ. ಈಗ ಅವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ.

ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಈ ಪುಡಿ ಮಾಡಿರುವ ಮಿಶ್ರಣವನ್ನು ಬೆರಿಸಿ. ನಂತರ ತುರಿದ ಪನೀರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ತುಪ್ಪ ಸೇರಿಸಿ. ಈಗ ಅದಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಬೆರೆಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ಮೃದುವಾಗಿರಬಾರದು ಹಾಗೆಯೇ ತುಂಬಾ ಗಟ್ಟಿಯಾಗಿಯೂ ಇರಬಾರದು. ಈ ಮಿಶ್ರಣ ಮಾಡಿದ ಹಿಟ್ಟನ್ನು ಐದರಿಂದ ಹತ್ತು ನಿಮಿಷಗಳ ಕಾಲ ಮುಚ್ಚಿಡಿ.

ನಂತರ ಅದನ್ನು ಸಣ್ಣ ಉಂಡೆಗಳಾಗಿ ಮಾಡಿ ಚಪಾತಿಯಂತೆ ಲಟ್ಟಿಸಿ. ಒಲೆ ಮೇಲೆ ತವಾ ಇಟ್ಟು ಲಟ್ಟಿಸಿರುವ ಪರೋಟವನ್ನು ಅದರಲ್ಲಿ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಇದಕ್ಕೆ ತುಪ್ಪ ಅಥವಾ ಬೆಣ್ಣೆ ಹಾಕಬಹುದು. ಇಷ್ಟು ಮಾಡಿದರೆ ರುಚಿಕರವಾದ ಚಿಲ್ಲಿ ಪನೀರ್ ಪರೋಟ ತಿನ್ನಲು ಸಿದ್ಧ. ಇದನ್ನು ದಾಲ್, ಪಲ್ಯ ಅಥವಾ ಚಟ್ನಿಯೊಂದಿಗೂ ತಿನ್ನಬಹುದು. ಒಮ್ಮೆ ಮಾಡಿ ನೋಡಿ ನಿಮಗೆ ಇಷ್ಟವಾಗಬಹುದು.

Whats_app_banner