ಈ ರೀತಿ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ದೋಸೆ, ಚಪಾತಿಯೊಂದಿಗೆ ಸೂಪರ್ ಕಾಂಬಿನೇಷನ್; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ರೀತಿ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ದೋಸೆ, ಚಪಾತಿಯೊಂದಿಗೆ ಸೂಪರ್ ಕಾಂಬಿನೇಷನ್; ಇಲ್ಲಿದೆ ರೆಸಿಪಿ

ಈ ರೀತಿ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ದೋಸೆ, ಚಪಾತಿಯೊಂದಿಗೆ ಸೂಪರ್ ಕಾಂಬಿನೇಷನ್; ಇಲ್ಲಿದೆ ರೆಸಿಪಿ

ಮೊಟ್ಟೆಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಒಮ್ಮೆ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಪಾಕವಿಧಾನವೂ ಸುಲಭ.ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ರೀತಿ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ
ಈ ರೀತಿ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ

ಮೊಟ್ಟೆ ಖಾದ್ಯವನ್ನು ಅನೇಕ ಮಂದಿ ಬಹಳ ಇಷ್ಟಪಡುತ್ತಾರೆ. ಮೊಟ್ಟೆ ಆರೋಗ್ಯಕ್ಕೂ ಒಳ್ಳೆಯದು. ಮೊಟ್ಟೆ ಸಾರು, ಗ್ರೇವಿ, ಆಮ್ಲೆಟ್, ಘೀ ರೋಸ್ಟ್ ಇವೆಲ್ಲಾ ಖಾದ್ಯಗಳು ತುಂಬಾ ರುಚಿಕರವಾಗಿರುತ್ತದೆ. ಸ್ವಲ್ಪ ವಿಭಿನ್ನ ರುಚಿ ಹಾಗೂ ಖಾರ ತುಸು ಹೆಚ್ಚು ಬೇಕು ಎಂದೆನಿಸಿದರೆ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ. ಅನ್ನ, ದೋಸೆ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಹಸಿಮೆಣಸಿನಕಾಯಿ ಮೊಟ್ಟೆ ಕರಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ- ನಾಲ್ಕು, ಅರಿಶಿನ- ಅರ್ಧ ಚಮಚ, ಈರುಳ್ಳಿ- ಮೂರು, ಹಸಿ ಮೆಣಸಿನಕಾಯಿ- ಆರು, ಶುಂಠಿ- ಒಂದು ಸಣ್ಣ ತುಂಡು, ಬೆಳ್ಳುಳ್ಳಿ- 10, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ನಾಲ್ಕು ಚಮಚ, ಎಣ್ಣೆ- ಮೂರು ಚಮಚ, ಬಿರಿಯಾನಿ ಎಲೆ- ಒಂದು, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಲವಂಗ- ಮೂರು, ಕಾಳುಮೆಣಸು- ಕಾಲು ಚಮಚ, ಏಲಕ್ಕಿ- ಎರಡು, ಜೀರಿಗೆ- ಅರ್ಧ ಚಮಚ, ಅರಿಶಿನ- ¼ ಚಮಚ, ಕೊತ್ತಂಬರಿ ಪುಡಿ- ಒಂದು ಚಮಚ, ಗರಂ ಮಸಾಲೆ- ಅರ್ಧ ಚಮಚ, ಕಸೂರಿ ಮೇಥಿ- ಒಂದು ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ಮಾಡುವ ವಿಧಾನ: ಮೊದಲಿಗೆ ಮೊಟ್ಟೆಯನ್ನು ಬೇಯಿಸಿ ತಣ್ಣಗಾದ ನಂತರ ಮೇಲ್ಭಾಗದ ಸಿಪ್ಪೆ ತೆಗೆಯಿರಿ. ಈಗ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ. ಇದಕ್ಕೆ ಅರಶಿನ ಬೆರಿಸಿ ಜೊತೆಗೆ ಮೊಟ್ಟೆ ಕತ್ತರಿಸಿ ಹಾಕಿ ಹುರಿಯಿರಿ. ಈಗ ಮೊಟ್ಟೆಗಳನ್ನು ತೆಗೆದು ಪಕ್ಕಕ್ಕೆ ಇರಿಸಿ. ಉಳಿದ ಎಣ್ಣೆಯಲ್ಲಿ ಕತ್ತರಿಸಿದ ಈರುಳ್ಳಿ, 4 ಹಸಿ ಮೆಣಸಿನಕಾಯಿ, ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿ ಎಸಳುಗಳನ್ನು ಬೆರೆಸಿ ಹುರಿಯಿರಿ. ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಈ ಮಿಶ್ರಣ ಹಾಗೂ ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.

ಈಗ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಇದಕ್ಕೆ ಬಿರಿಯಾನಿ ಎಲೆ, ಲವಂಗ, ದಾಲ್ಚಿನ್ನಿ, ಎರಡು ಏಲಕ್ಕಿ ಮತ್ತು ಕಾಳುಮೆಣಸು, ಜೀರಿಗೆ ಬೆರೆಸಿ ಹುರಿಯಿರಿ. ಈಗ ಕತ್ತರಿಸಿರುವ 2 ಹಸಿ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹಾಕಿ ಮಿಶ್ರಣ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ, ಗರಂ ಮಸಾಲೆ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ. ನಂತರ ರುಬ್ಬಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ

ಈಗ ಮೊದಲೇ ಹುರಿದ ಮೊಟ್ಟೆಗಳನ್ನು ಈ ಮಿಶ್ರಣಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ. ಎಣ್ಣೆ ಮೇಲೆ ತೇಲಿ ಬಂದರೆ ಮೊಟ್ಟೆ ಖಾದ್ಯ ಸಿದ್ಧವಾಗಿದೆ ಎಂದರ್ಥ. ನಂತರ ಕಸೂರಿ ಮೇಥಿಯನ್ನು ಹಾಕಿ ಚೆನ್ನಾಗಿ ತಿರುವಿಕೊಂಡು, ಐದು ನಿಮಿಷಗಳ ಕಾಲ ಬೇಯಿಸಿ. ನಂತರ ಒಲೆಯನ್ನು ಆಫ್ ಮಾಡಿದರೆ ರುಚಿಕರವಾದ ಮೊಟ್ಟೆ ಗ್ರೇವಿ ಸಿದ್ಧ.

ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಖಾರ ಖಾರವಾಗಿ ತಿನ್ನಲು ರುಚಿಯಾಗಿರುತ್ತದೆ. ಈ ಖಾದ್ಯದಲ್ಲಿ ಮೆಣಸಿನಕಾಯಿ, ಕೊತ್ತಂಬರಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಇತ್ಯಾದಿ ಪದಾರ್ಥಗಳನ್ನು ಬಳಸಲಾಗಿದೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಕೂಡ ದೊರೆಯುತ್ತದೆ. ಇನ್ಯಾಕೆ ತಡ ಈ ಮೊಟ್ಟೆ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner