ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ; ಇಲ್ಲಿದೆ ರೆಸಿಪಿ

ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ: ಅನ್ನ, ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ; ಇಲ್ಲಿದೆ ರೆಸಿಪಿ

ಮಧ್ಯಾಹ್ನದ ಊಟಕ್ಕೆ ಮಸಾಲೆಯುಕ್ತ ಖಾದ್ಯ ತಿನ್ನಲು ಬಯಸುವಿರಾದರೆ ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ. ಈ ಪಾಕವಿಧಾನ ತುಂಬಾ ಸರಳ. ಅನ್ನ, ಚಪಾತಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ
ಕೊಲ್ಹಾಪುರಿ ಮೊಟ್ಟೆ ಗ್ರೇವಿ ಮಾಡಿ ನೋಡಿ (Pinterest )

ಮೊಟ್ಟೆಯಿಂದ ವಿವಿಧ ರೀತಿಯ ಪಾಕವಿಧಾನಗಳನ್ನು ಮಾಡಬಹುದು. ಮೊಟ್ಟೆ ಸಾರು, ಮೊಟ್ಟೆ ಆಮ್ಲೆಟ್, ಮೊಟ್ಟೆ ಘೀ ರೋಸ್ಟ್, ಮೊಟ್ಟೆ ಗ್ರೇವಿ ಇತ್ಯಾದಿ ಖಾದ್ಯಗಳನ್ನು ನೀವು ತಯಾರಿಸಿರಬಹುದು. ಈ ಬಾರಿ ಕೊಲ್ಹಾಪುರಿ ಶೈಲಿಯಲ್ಲಿ ಮೊಟ್ಟೆ ಗ್ರೇವಿ ಮಾಡಿ ನೋಡಿ. ಇದು ಬಹಳ ರುಚಿಕರವಾಗಿರುತ್ತದೆ. ಅನ್ನ, ಚಪಾತಿ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ರೊಟ್ಟಿ, ನಾನ್ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಕೊಲ್ಹಾಪುರಿ ಮೊಟ್ಟೆ ಗ್ರೇವಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೊಲ್ಹಾಪುರಿ ಮೊಟ್ಟೆ ಗ್ರೇವಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಅಡುಗೆ ಎಣ್ಣೆ- ಮೂರು ಚಮಚ, ಅರಿಶಿನ- ಕಾಲು ಚಮಚ, ಮೆಣಸಿನ ಪುಡಿ- ಒಂದು ಚಮಚ, ಬೇಯಿಸಿದ ಮೊಟ್ಟೆ- ಆರು, ತುರಿದ ತೆಂಗಿನಕಾಯಿ- ಅರ್ಧ ಕಪ್, ಲವಂಗ- ಆರು, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಏಲಕ್ಕಿ- ನಾಲ್ಕು, ಕಾಳುಮೆಣಸು- ಅರ್ಧ ಚಮಚ, ಜೀರಿಗೆ- ಎರಡು ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಬಿಳಿ ಎಳ್ಳು- ಎರಡು ಚಮಚ, ಹಸಿ ಮೆಣಸಿನಕಾಯಿ- 2, ಟೊಮೆಟೊ- ಎರಡು, ಈರುಳ್ಳಿ- ಎರಡು, ಕಾಶ್ಮೀರಿ ಮೆಣಸಿನ ಪುಡಿ- 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲಿಗೆ ಮೊಟ್ಟೆ ಬೇಯಿಸಿ ಅದರ ಸಿಪ್ಪೆ ತೆಗೆದು ಪಕ್ಕಕ್ಕೆ ಇಡಿ. ಈಗ ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಬೆರೆಸಿ. ಮೊಟ್ಟೆಗಳನ್ನು ಮೂರರಿಂದ ನಾಲ್ಕು ತುಂಡುಗಳಾಗಿ ಕತ್ತರಿಸಿ ಬಾಣಲೆಯಲ್ಲಿ ಹುರಿಯಬೇಕು. ನಂತರ ಅವುಗಳನ್ನು ತೆಗೆದು ಪಕ್ಕಕ್ಕೆ ಇರಿಸಿ.

ಈಗ ಮತ್ತೊಂದು ಕಡಾಯಿಯನ್ನು ಒಲೆಯ ಮೇಲಿಟ್ಟು ತೆಂಗಿನ ತುರಿ, ಲವಂಗ, ದಾಲ್ಚಿನ್ನಿ, ಏಲಕ್ಕಿ, ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ಎಳ್ಳು ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಹುರಿಯಿರಿ. ನಂತರ ಒಲೆಯನ್ನು ಆಫ್ ಮಾಡಿ. ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸರ್ ಜಾರ್‌ಗೆ ಹಾಕಿ ನಿಧಾನವಾಗಿ ರುಬ್ಬಿಕೊಳ್ಳಿ.

ಈಗ ಕಡಾಯಿಗೆ ಎಣ್ಣೆ ಹಾಕಿ, ಅದು ಬಿಸಿಯಾದಾಗ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಬೆರೆಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಈರುಳ್ಳಿ ಬೆಂದಾಗ ಇದಕ್ಕೆ ಟೊಮೆಟೊ ಪೇಸ್ಟ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರೆಸಿ ಹುರಿಯಿರಿ. ಇವು ಚೆನ್ನಾಗಿ ಬೆಂದ ನಂತರ, ಅರಿಶಿನ ಪುಡಿ ಮತ್ತು ಕಾಶ್ಮೀರಿ ಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಅರ್ಧ ಲೋಟ ನೀರು ಬೆರೆಸಿ ಸ್ವಲ್ಪ ಹೊತ್ತು ಬೇಯಿಸಿ. ನಂತರ ಮೊದಲೇ ಹುರಿದಿಟ್ಟಿರುವ ಮೊಟ್ಟೆಗಳನ್ನು ಈ ಮಿಶ್ರಣಕ್ಕೆ ಬೆರೆಸಿ 10 ನಿಮಿಷಗಳ ಕಾಲ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿದರೆ ರುಚಿಕರವಾದ ಕೊಲ್ಹಾಪುರಿ ಮೊಟ್ಟೆ ಗ್ರೇವಿ ತಿನ್ನಲು ಸಿದ್ಧ. ಅನ್ನ, ಚಪಾತಿಯೊಂದಿಗೆ ತಿಂದು ನೋಡಿ. ಖಂಡಿತ ಇಷ್ಟವಾಗಬಹುದು.

Whats_app_banner