ವೀಕೆಂಡ್ ಬಂದ್ರೆ ಏನಪ್ಪಾ ವೆರೈಟಿ ಮಾಡೋದು ಅನ್ನೋ ಚಿಂತೆ ಬಿಡಿ; ಸಿಂಪಲ್ಲಾಗಿ ಮಾಡಿ ಚಿಕನ್ ಉರುವಲ್ ರೆಸಿಪಿ
ಈ ವೀಕೆಂಡ್‍ನಲ್ಲಿ ಯಾವ ಚಿಕನ್ ಖಾದ್ಯ ಮಾಡುವುದು ಅನ್ನೋ ಯೋಚನೆಯಲ್ಲಿದ್ದೀರಾ?ಹಾಗಿದ್ದರೆ ಸಿಂಪಲ್ಲಾಗಿ ಮಾಡಿ ಚಿಕನ್ ಉರುವಲ್ ರೆಸಿಪಿ. ಮಂಗಳೂರು ಭಾಗದ ಜನಪ್ರಿಯ ಖಾದ್ಯವಾಗಿರುವ ಈ ರೆಸಿಪಿ ಮಾಡುವುದು ತುಂಬಾ ಸರಳ. ಅನ್ನ, ದೋಸೆ, ಚಪಾತಿ, ಸೈಡ್ ಡಿಶ್ ಆಗಿಯೂ ಸವಿಯಬಹುದು.ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ವೀಕೆಂಡ್ ಹತ್ರಾ ಬಂತು ಅಂದ್ರೆ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಬೇಕು ಅನ್ನೋದು ಬಹುತೇಕ ಹೆಂಗಳೆಯರ ಮಹದಾಸೆ. ಹೊಸ ಹೊಸ ಖಾದ್ಯಗಳನ್ನು ಅನ್ವೇಷಿಸುವುದು ಅಥವಾ ವಿಭಿನ್ನ ಖಾದ್ಯಗಳನ್ನು ತಯಾರಿಸುವುದು ಹಲವರಿಗೆ ಖುಷಿ ಕೊಡುವ ಸಂಗತಿ. ಆದ್ರೆ ಯಾವ ರೆಸಿಪಿ ಮಾಡೋದು ಎನ್ನುವ ಚಿಂತೆ ಕೆಲವರಿಗೆ ಇರುತ್ತೆ. ನೀವೇನಾದರೂ ರುಚಿಕರವಾದ ಚಿಕನ್ ಖಾದ್ಯ ತಯಾರಿಸಬೇಕು ಅಂತಾ ಅಂದುಕೊಂಡಿದ್ದರೆ ಚಿಕನ್ ಉರುವಲ್ ರೆಸಿಪಿ ಮಾಡಬಹುದು. ಇದನ್ನು ತಯಾರಿಸುವುದು ತುಂಬಾನೇ ಸರಳ. ಮಂಗಳೂರು ಭಾಗದ ಜನಪ್ರಿಯ ಖಾದ್ಯವಾಗಿರುವ ಈ ಚಿಕನ್ ಉರುವಲ್ ರೆಸಿಪಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಉರುವಲ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- ಅರ್ಧ ಕೆ.ಜಿ, ಗರಂ ಮಸಾಲೆ ಪುಡಿ- ½ ಟೀ ಚಮಚ, ಅರಿಶಿನ- 1/4 ಟೀ ಚಮಚ, ಕೊತ್ತಂಬರಿ ಪುಡಿ- 1 ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಚಮಚ, ಜೀರಿಗೆ ಪುಡಿ- ½ ಟೀ ಚಮಚ, ನಿಂಬೆ ಹಣ್ಣು- 1, ಉಪ್ಪು – ರುಚಿಗೆ ತಕ್ಕಷ್ಟು, ಬ್ಯಾಡಗಿ ಮೆಣಸು- 12, ತುಪ್ಪ- 2 ಟೀ ಚಮಚ, ಗೋಡಂಬಿ- 4 ರಿಂದ 5, ಒಣ ಮೆಣಸು (ಒಗ್ಗರಣೆಗೆ)- 2, ಕರಿಬೇವಿನ ಎಲೆ- 10, ಬೆಲ್ಲ- ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅದನ್ನು ಮ್ಯಾರಿನೇಟ್ ಮಾಡಬೇಕು. ಇದಕ್ಕಾಗಿ ಚಿಕನ್‍ಗೆ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, 1 ನಿಂಬೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಅರ್ಧಗಂಟೆ ಮ್ಯಾರಿನೇಟ್ ಆಗಲು ಬಿಡಿ.
- ಈ ವೇಳೆ ಬ್ಯಾಡಗಿ ಮೆಣಸನ್ನು ಬಿಸಿ ನೀರಿನಲ್ಲಿ 20 ನಿಮಿಷಗಳ ಕಾಲ ನೆನೆಸಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಿ.
- ಬಾಣಲೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಬಹುದು. ನಂತರ ರುಬ್ಬಿರುವ ಬ್ಯಾಡಗಿ ಮೆಣಸಿನ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಮಸಾಲೆಯನ್ನು ಚೆನ್ನಾಗಿ 5 ರಿಂದ 10 ನಿಮಿಷಗಳ ಕಾಲ ಹುರಿಯಬೇಕು. ನಂತರ ಮ್ಯಾರಿನೇಟ್ ಮಾಡಿರುವ ಚಿಕನ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- 5 ನಿಮಿಷಗಳ ಕಾಲ ಉರಿಯನ್ನು ಹೆಚ್ಚಿಗೆ ಇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಬೆಲ್ಲವನ್ನು ಹಾಕಬೇಕು. ಅರ್ಧ ಚಮಚದಷ್ಟು ಬೆಲ್ಲ ಹಾಕಿದರೆ ರುಚಿ ಹೆಚ್ಚಾಗುತ್ತೆ. ನಂತರ ಈ ಚಿಕನ್ ಅನ್ನು ಬೇಯಲು ಬಿಡಿ. ಆಗಾಗಾ ಚಮಚದಲ್ಲಿ ತಿರುಗಿಸುವುದನ್ನು ಮಾತ್ರ ಮರೆಯಬೇಡಿ. ಚಿಕನ್ ಚೆನ್ನಾಗಿ ಬೆಂದ ನಂತರ, ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಹಾಕಿ. ಇದಕ್ಕೆ 2 ಒಣಮೆಣಸು, ಗೋಡಂಬಿ, ಕರಿಬೇವಿನ ಎಲೆಗಳನ್ನು ಹಾಕಿ. ಗೋಡಂಬಿಯನ್ನು ಚೆನ್ನಾಗಿ ಫ್ರೈ ಮಾಡಿದ ನಂತರ ಚಿಕನ್ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ರುಚಿಕರವಾದ ಚಿಕನ್ ಉರುವಲ್ ಸವಿಯಲು ಸಿದ್ಧ.
ಇದನ್ನು ಸೈಡ್ ಡಿಶ್ ಆಗಿಯೂ ಸವಿಯಬಹುದು. ದೋಸೆ, ಚಪಾತಿ, ಅನ್ನಕ್ಕೂ ಸೂಪರ್ ಕಾಂಬಿನೇಷನ್ ಈ ರೆಸಿಪಿ. ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ವೀಕೆಂಡ್‍ನಲ್ಲಿ ಯಾವ ರೆಸಿಪಿ ಟ್ರೈ ಮಾಡುವುದು ಅನ್ನೋ ಯೋಚನೆಯಲ್ಲಿದ್ದರೆ ಚಿಕನ್ ಉರುವಲ್ ಮಾಡಿ ನೋಡಿ. ಮಂಗಳೂರು ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಈ ಚಿಕನ್ ಉರುವಲ್ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ಇಷ್ಟವಾಗಬಹುದು.