ಆಹಾ, ಏನು ರುಚಿ ಗೊತ್ತೇನ್ರಿ; ಜೇನಿನಂಥ ಸಿಹಿ ರುಚಿ ಕೊಡುವ ಖರ್ಜೂರ ಪಾಯಸ ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ
ಸಿಹಿ ರುಚಿಯನ್ನು ಹೊಂದಿರುವ ಖರ್ಜೂರ ಹಣ್ಣು ತಿನ್ನುವುದುಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಹಾಗೆಯೇ ತಿನ್ನಬಹುದು ಅಥವಾ ಸಿಹಿತಿಂಡಿ ಮಾಡಿಯೂ ಸವಿಯಬಹುದು. ಇದರಿಂದ ರುಚಿಕರವಾದ ಪಾಯಸ ಕೂಡ ತಯಾರಿಸಲಾಗುತ್ತದೆ. ಈ ರೆಸಿಪಿ ತಯಾರಿಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಖರ್ಜೂರ ಹಣ್ಣು ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದನ್ನು ವಿಶೇಷವಾಗಿ ಬಿಡಿಸಿ ಹೇಳಬೇಕಿಲ್ಲ. ಸಿಹಿ-ರುಚಿ ಹೊಂದಿರುವ ಈ ಹಣ್ಣು ಪೋಷಕಾಂಶ-ಭರಿತ ಉಳ್ಳದ್ದು. ಖರ್ಜೂರವನ್ನು ಹಾಗೆಯೇ ತಿನ್ನಬಹುದು ಅಥವಾ ಸಿಹಿ-ತಿಂಡಿ ಮಾಡಿಯೂ ಸವಿಯಬಹುದು. ತಿನ್ನಲು ಎಷ್ಟು ರುಚಿಕರವಾಗಿರುತ್ತದೋ, ಇದರಿಂದ ಮಾಡುವ ಸಿಹಿ ಭಕ್ಷ್ಯಗಳು ಕೂಡ ಅಷ್ಟೇ ಅದ್ಭುತವಾಗಿರುತ್ತವೆ. ಇದರ ಪಾಯಸ ಕೂಡ ತಿನ್ನಲು ಬಹಳ ಮಧುರವಾಗಿರುತ್ತದೆ. ನಿಮಗೆ ಗೊತ್ತಾ, ಇದನ್ನು ತಯಾರಿಸುವುದು ತುಂಬಾ ಸರಳ.
ಬಹಳ ಬೇಗನೆ ಸಿದ್ಧವಾಗುವ ಈ ರೆಸಿಪಿಯನ್ನು ಮನೆಗೆ ಅತಿಥಿಗಳು ಬಂದಾಗ ಬೇಕಿದ್ದರೂ ಮಾಡಿ ಬಡಿಸಬಹುದು. ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಏನಾದರೂ ಚಿಕ್ಕಪುಟ್ಟ ಕಾರ್ಯಕ್ರಮವಿದ್ದರೂ ಖರ್ಜೂರ ಪಾಯಸ ಮಾಡಿ ಅತಿಥಿಗಳಿಗೆ ಬಡಿಸಬಹುದು. ಖರ್ಜೂರ ಪಾಯಸಕ್ಕೆ ಬೆಲ್ಲವನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೂ ಉತ್ತಮ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಈ ರೆಸಿಪಿ ತಯಾರಿಸುವುದು ಹೇಗೆ, ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಖರ್ಜೂರ ಪಾಯಸ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಖರ್ಜೂರ- 1 ಕಪ್, ತೆಂಗಿನತುರಿ- 1 ಕಪ್, ಬೆಲ್ಲ- ಅರ್ಧ ಕಪ್, ತುಪ್ಪ- 2 ಟೀ ಚಮಚ, ದ್ರಾಕ್ಷಿ-ಗೋಡಂಬಿ – ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಬಾಣಲೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ. ನೀರು ಬಿಸಿಯಾದಾಗ ಇದಕ್ಕೆ ಖರ್ಜೂರವನ್ನು ಹಾಕಿ ಕುದಿಯಲು ಬಿಡಿ. 5 ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಇದನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
ಒಂದು ತೆಂಗಿನಕಾಯಿಯನ್ನು ತುರಿದು ಅದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಇದರ ಕಾಯಿ ಹಾಲನ್ನು ತೆಗೆದು ಒಂದು ಪಾತ್ರೆಗೆ ಹಾಕಿ. ನಂತರ ಖರ್ಜೂರವನ್ನು ರುಬ್ಬಿಕೊಳ್ಳಿ. ಅದರಲ್ಲಿ ಬೀಜವಿದ್ದರೆ ಬೀಜ ತೆಗೆದು ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ.
ನಂತರ ಬಾಣಲೆಗೆ ರುಬ್ಬಿರುವ ಖರ್ಜೂರದ ಮಿಶ್ರಣವನ್ನು ಹಾಕಿ. ಇದಕ್ಕೆ ತೆಂಗಿನಕಾಯಿ ಹಾಲನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿ ಬಂದ ನಂತರ ಬೆಲ್ಲವನ್ನು ಕರಗಿಸಿ, ಸೋಸಿ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿಯಲು ಬಿಡಿ. ಹಾಗೆಯೇ ಚಮಚಧಲ್ಲಿ ತಿರುಗಿಸುತ್ತಿರಿ. ನಂತರ ಸಣ್ಣ ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ತುಪ್ಪ ಹಾಕಿ. ಅದಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಇದನ್ನು ತಯಾರಾಗುತ್ತಿರುವ ಪಾಯಸಕ್ಕೆ ಸೇರಿಸಿ. 2 ನಿಮಿಷಗಳ ಕಾಲ ಕುದಿಸಿ.
ಇಷ್ಟು ಮಾಡಿದರೆ ರುಚಿಕರ, ಸಿಹಿಯಾದ ಖರ್ಜೂರ ಪಾಯಸ ಸವಿಯಲು ಸಿದ್ಧ. ಏನಾದರೂ ಸಿಹಿ ತಿನ್ನಬೇಕು ಎಂದು ಬಯಕೆಯಾಗುತ್ತಿದ್ದರೆ, ಈ ಪಾಯಸ ಮಾಡಬಹುದು. ಅಥವಾ ಒಂದೇ ರೀತಿಯ ಪಾಯಸ ತಿಂದು ಬೇಜಾರಾಗಿದ್ದರೆ, ಖರ್ಜೂರ ಪಾಯಸ ಮಾಡಿ ಸವಿಯಬಹುದು. ಇದು ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ. ಒಮ್ಮೆ ಈ ಪಾಯಸ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು. ಖರ್ಜೂರ ಸಿಹಿ ರುಚಿಯನ್ನು ಹೊಂದಿರುವುದರಿಂದ ಸ್ವಲ್ಪ ಬೆಲ್ಲ ಹಾಕಿದರೆ ಸಾಕಾಗುತ್ತದೆ. ಆದರೆ, ಸಿಹಿ ಕಡಿಮೆಯಾಯಿತು ಎಂದೆನಿಸಿದ್ದಲ್ಲಿ ಬೆಲ್ಲವನ್ನು ಸೇರಿಸಬಹುದು. ಹೆಚ್ಚು ಸಿಹಿಯಾಗಿದ್ದಾರೆ ಮತ್ತಷ್ಟು ತೆಂಗಿನಕಾಯಿ ಹಾಲು ಸೇರಿಸಬಹುದು.