ಛೀ, ಬೆಂಡೆಕಾಯಿ ರೆಸಿಪಿನಾ ಅನ್ನಬೇಡಿ: ಮೊಟ್ಟೆಯೊಂದಿಗೆ ಈ ಖಾದ್ಯ ಮಾಡಿ ನೋಡಿ, ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ
ಬೆಂಡೆಕಾಯಿ ಅಂದ್ರೆ ಕೆಲವರು ಇಷ್ಟಪಡಲ್ಲ, ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನಗಳಿಂದ ಕಷ್ಟಪಟ್ಟಾದ್ರೂ ತಿಂತಾರೆ. ನಿಮಗೂ ಬೆಂಡೆಕಾಯಿ ಖಾದ್ಯ ಅಷ್ಟಕಷ್ಟೇ ಅಂದ್ರೆ ಬೆಂಡೆಕಾಯಿ-ಮೊಟ್ಟೆ ರೆಸಿಪಿ ಮಾಡಿ ನೋಡಿ. ತುಂಬಾ ರುಚಿಕರವಾದ ಈ ರೆಸಿಪಿ ತಯಾರಿಸುವುದು ಕೂಡ ಅಷ್ಟೇ ಸರಳ. ಇಲ್ಲಿದೆ ಪಾಕವಿಧಾನ.
ಬೆಂಡೆಕಾಯಿ ಅಂದ್ರೆ ಕೆಲವರು ಇಷ್ಟಪಡಲ್ಲ, ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನಗಳಿಂದ ಕಷ್ಟಪಟ್ಟಾದ್ರೂ ತಿಂತಾರೆ. ಬೆಂಡೆಕಾಯಿ ಕೊಬ್ಬಿನಿಂದ ಮುಕ್ತವಾಗಿದೆ. ಇದು ಪೆಕ್ಟಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಈ ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಕಾರಣವಾಗುತ್ತದೆ. ಬೆಂಡೆಕಾಯಿ ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಬಹುತೇಕ ಮಂದಿ ಬೆಂಡೆಕಾಯಿ ಖಾದ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಬೆಂಡೆಕಾಯಿ ಜತೆಗೆ ಮೊಟ್ಟೆಯನ್ನು ಹಾಕಿ ಮಾಡುವ ಖಾದ್ಯ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮೊಟ್ಟೆ ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಬೆಂಡೆಕಾಯಿ-ಮೊಟ್ಟೆಯ ರೆಸಿಪಿ ವಿಶಿಷ್ಟ ರುಚಿ ನೀಡುತ್ತದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೆಂಡೆಕಾಯಿ-ಮೊಟ್ಟೆಯ ವಿಶಿಷ್ಟ ಪಾಕವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕಡಲೆಕಾಯಿ- 1 ಟೀ ಚಮಚ, ಒಣ ಮೆಣಸಿನಕಾಯಿ– 2, ಜೀರಿಗೆ- ಕಾಲು ಚಮಚ, ಎಣ್ಣೆ- 2 ಟೀ ಚಮಚ, ಸಾಸಿವೆ- ಕಾಲು ಟೀ ಚಮಚ, ಉದ್ದಿನ ಬೇಳೆ- ಕಾಲು ಟೀ ಚಮಚ, ಕರಿಬೇವಿನ ಎಲೆಗಳು- ಒಂದು ಹಿಡಿ, ಬೆಳ್ಳುಳ್ಳಿ- 8 (ಪುಡಿಮಾಡಿ), ಈರುಳ್ಳಿ- 1 (ಸಣ್ಣದಾಗಿ ಹೆಚ್ಚಿದ), ಮೊಟ್ಟೆ- 2, ಬೆಂಡೆಕಾಯಿ- 1/4 ಕೆಜಿ, ಗರಂ ಮಸಾಲೆ- ಕಾಲು ಟೀ ಚಮಚ, ಅರಿಶಿನ ಪುಡಿ- ಕಾಲು ಟೀ ಚಮಚ, ಉಪ್ಪು- ಅಗತ್ಯವಿದ್ದಷ್ಟು, ಕೊತ್ತಂಬರಿ ಪುಡಿ- ಕಾಲು ಟೀ ಚಮಚ.
ಪಾಕವಿಧಾನ: ಕಡಲೆಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಬಾಣಲೆಯಲ್ಲಿ ಹಾಕಿ ಸರಿಯಾಗಿ ಹುರಿದುಕೊಳ್ಳಿ. ಅವುಗಳನ್ನು ತಣ್ಣಗಾಗಿಸಿ, ಮಿಕ್ಸರ್ ಜಾರ್‌ನಲ್ಲಿ ಹಾಕಿ ಪುಡಿ ಮಾಡಿ.
- ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ. ನಂತರ, ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ತುರಿದ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
- ಇದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ಕೂಡಲೇ, ಸಣ್ಣದಾಗಿ ಕತ್ತರಿಸಿದ ಬೆಂಡೆಕಾಯಿ ಸೇರಿಸಿ ಫ್ರೈ ಮಾಡಿ. ಇದನ್ನು ಸ್ವಲ್ಪ ಚೆನ್ನಾಗಿ ಎಣ್ಣೆಯಲ್ಲಿ ಫ್ರೈ ಮಾಡಬೇಕು. ಬಳಿಕ ಮೊಟ್ಟೆಯನ್ನು ಒಡೆದು ಫ್ರೈಗೆ ಹಾಕಿ, ಅದಕ್ಕೆ ಪುಡಿ ಮಾಡಿದ ಕಡಲೆಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆ ಪುಡಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಸೂಪರ್ ಟೇಸ್ಟಿಯಾದ ಬೆಂಡೆಕಾಯಿ-ಮೊಟ್ಟೆ ಖಾದ್ಯ ಸವಿಯಲು ಸಿದ್ಧ.
ಬೆಂಡೆಕಾಯಿಯಲ್ಲಿ ಇತರ ತರಕಾರಿಗಳಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕಗಳಿವೆ. ಉತ್ಕರ್ಷಣ ನಿರೋಧಕಗಳು ದೇಹದ ಜೀವಕೋಶಗಳಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನಾರಿನಂಶವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ. ಇದು ಕರುಳಿನ ಕ್ಯಾನ್ಸರ್ ಅನ್ನು ತಡೆಯುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಖಾದ್ಯವನ್ನು ಅನ್ನ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಂದೇ ರೀತಿಯ ಪಲ್ಯ ಮಾಡಿ ಬೇಜಾರಾಗಿದ್ದರೆ ಈ ರೀತಿ ಮಾಡಬಹುದು. ಇದು ವಿಶಿಷ್ಟವಾಗಿದ್ದು ತಿನ್ನಲು ರುಚಿಯಾಗಿರುತ್ತದೆ. ಒಮ್ಮೆ ಮಾಡಿ ತಿಂದು ನೋಡಿ, ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನವುದರಲ್ಲಿ ಸಂಶಯವಿಲ್ಲ.