ಈ ರೀತಿ ತಯಾರಿಸಿ ಮಶ್ರೂಮ್ ಫ್ರೈ: ತಿಂದವರು ಸೂಪರ್ ಅಂತಾರೆ, ಇಲ್ಲಿದೆ ರೆಸಿಪಿ
ಅಣಬೆ ನಮ್ಮ ಆರೋಗ್ಯಕ್ಕೆ ಉತ್ತಮವಾದ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ವಾರಕ್ಕೊಮ್ಮೆಯಾದರೂ ಅಣಬೆಯಿಂದ ತಯಾರಿಸಲಾದ ವಿವಿಧ ಭಕ್ಷ್ಯಗಳನ್ನು ತಿನ್ನುವುದು ಒಳ್ಳೆಯದು. ಅದೇ ರೀತಿ ಮಶ್ರೂಮ್ ಫ್ರೈ ಕೂಡ ತುಂಬಾ ರುಚಿಕರವಾಗಿರುತ್ತದೆ. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಅಣಬೆ ನಮ್ಮ ಆರೋಗ್ಯಕ್ಕೆ ಉತ್ತಮವಾದ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ವಾರಕ್ಕೊಮ್ಮೆಯಾದರೂ ಅಣಬೆಯಿಂದ ತಯಾರಿಸಲಾದ ವಿವಿಧ ಭಕ್ಷ್ಯಗಳನ್ನು ತಿನ್ನುವುದು ಒಳ್ಳೆಯದು. ಮಶ್ರೂಮ್ ಬಿರಿಯಾನಿ, ಮಶ್ರೂಮ್ ಪಲ್ಯ ಇತ್ಯಾದಿ ಖಾದ್ಯ ತಯಾರಿಸಬಹುದು. ಅದೇ ರೀತಿ ಮಶ್ರೂಮ್ ಫ್ರೈ ಕೂಡ ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ಮಶ್ರೂಮ್ ಫ್ರೈ ಪಾಕವಿಧಾನವನ್ನು ನೀಡಲಾಗಿದೆ. ಇದು ಅನ್ನಕ್ಕೆ ಮಾತ್ರವಲ್ಲ ಚಪಾತಿಗೂ ತಿನ್ನಲು ರುಚಿಕರವಾಗಿರುತ್ತದೆ. ಅಣಬೆ ಫ್ರೈ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಅಣಬೆ ಫ್ರೈ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅಣಬೆ- 200 ಗ್ರಾಂ, ಅರಿಶಿನ- ಅರ್ಧ ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ- ಎರಡು, ಎಣ್ಣೆ- ಎರಡು ಚಮಚ, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಲವಂಗ- ಮೂರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಕರಿಬೇವು- ಒಂದು ಹಿಡಿ, ಹಸಿ ಮೆಣಸಿನಕಾಯಿ- ಮೂರು, ಹಸಿಮೆಣಸು- ಎರಡು ಚಮಚ, ಕೊತ್ತಂಬರಿ ಪುಡಿ- ಒಂದು ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಮೆಣಸಿನ ಪುಡಿ- 1/4 ಚಮಚ, ಗರಂ ಮಸಾಲೆ- ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಅಣಬೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಿಸಿ ಒಲೆಯ ಮೇಲಿಟ್ಟು ಕುದಿಸಿ. ಚೆನ್ನಾಗಿ ಕುದಿಸಿದ ನಂತರ, ಒಲೆ ಆಫ್ ಮಾಡಿ. ಕುದಿಸಿದ ನೀರಿನಲ್ಲಿ ಅರಿಶಿನ, ಅಣಬೆ ಹಾಕಿ, ಎರಡು ನಿಮಿಷಗಳ ಕಾಲ ಬಿಡಿ. ನಂತರ ಅವುಗಳನ್ನು ಕೈಯಿಂದ ಸ್ವಚ್ಛಗೊಳಿಸಿ.
ಈಗ ಅಣಬೆಯನ್ನು ಲಂಬವಾಗಿ ನಾಲ್ಕು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಕಡಾಯಿಯನ್ನು ಒಲೆ ಮೇಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ. ಇದರಲ್ಲಿ ದಾಲ್ಚಿನ್ನಿ, ಲವಂಗ ಮತ್ತು ಅರಿಶಿನ ಹಾಕಿ ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಹಸಿ ವಾಸನೆ ಹೋಗುವವರೆಗೆ ಈರುಳ್ಳಿಯನ್ನು ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಕತ್ತರಿಸಿದ ಅಣಬೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಣಬೆ ಬೇಯುವ ವೇಳೆ ಸ್ವಲ್ಪ ನೀರು ಹೊರಬರುತ್ತದೆ. ನೀರು ಆವಿಯಾಗುವವರೆಗೆ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಬೇಯಿಸಿ. ನಂತರ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಮೆಣಸಿನ ಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಮುಚ್ಚಳವನ್ನು ಮುಚ್ಚಿ 5 ನಿಮಿಷ ಬೇಯಲು ಬಿಡಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆ ಆಫ್ ಮಾಡಿದರೆ ರುಚಿಕರ ಅಣಬೆ ಫ್ರೈ ತಿನ್ನಲು ಸಿದ್ಧ.
ಈ ಖಾದ್ಯವನ್ನು ಅನ್ನ, ಚಪಾತಿ ಮತ್ತು ರೊಟ್ಟಿಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅಣಬೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಇವು ಸೆಲೆನಿಯಂ, ವಿಟಮಿನ್ ಡಿ, ರೈಬೋಫ್ಲೇವಿನ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ತೂಕ ಇಳಿಕೆಗೂ ಇದು ಸಹಕಾರಿ. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಾಯಕವಾಗಿದೆ. ಇಲ್ಲಿ ತಿಳಿಸಿದಂತೆ ಅಣಬೆ ಫ್ರೈ ಮಾಡಿ ನೋಡಿ ಖಂಡಿತ ಇಷ್ಟಪಡುತ್ತೀರಿ.

ವಿಭಾಗ