ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಎಲೆಕೋಸು ಸೂಪ್ ತಯಾರಿಸುವುದು ತುಂಬಾ ಸುಲಭ; ಇಲ್ಲಿದೆ ಪಾಕವಿಧಾನ
ಚಳಿಗಾಲದಲ್ಲಿ ಸೂಪ್ ಕುಡಿದರೆ ದೇಹ ಬೆಚ್ಚಗಿರುತ್ತದೆ ಎಂದು ಬಹುತೇಕರು ಇದನ್ನು ಮನೆಯಲ್ಲೇ ತಯಾರಿಸಿ ಸೇವಿಸುತ್ತಾರೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಸೂಪ್ ಸೇವಿಸುವುದು ಉತ್ತಮ ಆಯ್ಕೆ. ಬೆಳಗ್ಗಿನ ಉಪಾಹಾರಕ್ಕೂ ಈ ಸೂಪ್ ತಯಾರಿಸಿ ಕುಡಿಯಬಹುದು. ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಎಲೆಕೋಸು ಸೂಪ್ ತಯಾರಿಸಿ ಸೇವಿಸಿ. ಇಲ್ಲಿದೆ ರೆಸಿಪಿ.

ಹೋಟೆಲ್‌ಗಳಿಗೆ ಹೋದಾಗ ಊಟ ಮಾಡುವ ಮುನ್ನ ಬಹುತೇಕ ಮಂದಿ ಸೂಪ್ ಕುಡಿಯುತ್ತಾರೆ. ಕೆಲವರು ಮನೆಯಲ್ಲೇ ತಯಾರಿಸಿ ಸೇವಿಸುತ್ತಾರೆ. ಚಳಿಗಾಲದಲ್ಲಿ ಸೂಪ್ ಕುಡಿದರೆ ದೇಹ ಬೆಚ್ಚಗಿರುತ್ತದೆ ಎಂದು ಬಹುತೇಕರು ಇದನ್ನು ಮನೆಯಲ್ಲೇ ತಯಾರಿಸಿ ಸೇವಿಸುತ್ತಾರೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಸೂಪ್ ಸೇವಿಸುವುದು ಉತ್ತಮ ಆಯ್ಕೆ. ಬೆಳಗ್ಗಿನ ಉಪಾಹಾರಕ್ಕೂ ಈ ಸೂಪ್ ತಯಾರಿಸಿ ಕುಡಿಯಬಹುದು. ಚಿಕನ್ ಸೂಪ್, ಕಾಲು ಸೂಪ್, ಜೋಳ ಸೂಪ್, ಕ್ಯಾರೆಟ್ ಸೂಪ್ ಇತ್ಯಾದಿ ಸವಿದಿರಬಹುದು. ಅದೇ ರೀತಿ ಎಲೆಕೋಸು ಸೂಪ್ ಮಾಡಿ ನೋಡಿ. ಬಹಳ ರುಚಿಕರವಾಗಿರುತ್ತದೆ. ಆರೋಗ್ಯಕರ ಎಲೆಕೋಸು ಸೂಪ್ ಅನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಎಲೆಕೋಸು ಸೂಪ್ ರೆಸಿಪಿ ಇಲ್ಲಿದೆ
ಬೇಕಾಗುವ ಸಾಮಾಗ್ರಿಗಳು: ಎಲೆಕೋಸು - 1 ಕಪ್, ಬೆಣ್ಣೆ- 2 ಚಮಚ, ಈರುಳ್ಳಿ- 1, ಟೊಮೆಟೊ- 2, ಬೆಳ್ಳುಳ್ಳಿ ಎಸಳು- 3, ಶುಂಠಿ- 1 ಇಂಚು, ಮೆಣಸಿನ ಪುಡಿ- 1/2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು, ತುಪ್ಪ- 1 ಚಮಚ, ಹಸಿ ಮೆಣಸಿನಕಾಯಿ- 2, ನೀರು- 4 ಕಪ್.
ತಯಾರಿಸುವ ವಿಧಾನ: ಮೊದಲಿಗೆ ಎಲೆಕೋಸನ್ನು ತೆಳುವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಈರುಳ್ಳಿ, ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿ. ಜೊತೆಗೆ ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿಯನ್ನು ಸಹ ಸಣ್ಣದಾಗಿ ಕತ್ತರಿಸಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ಒಂದು ಪಾತ್ರೆಯಲ್ಲಿ ಕತ್ತರಿಸಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಬೆರಿಸಿ ಪರಿಮಳ ಬರುವವರೆಗೆ ಹುರಿಯಿರಿ.
ಇದು ಬೆಂದ ನಂತರ ಅದಕ್ಕೆ ಟೊಮೆಟೊ ಹಾಕಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ನಂತರ ಎಲೆಕೋಸು, ಮೆಣಸಿನ ಪುಡಿ, ಉಪ್ಪು ಬೆರಿಸಿ 2 ರಿಂದ 3 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಲು ಬಿಡಿ. ಈಗ ಸ್ವಲ್ಪ ನೀರು ಹಾಕಿ ಅದಕ್ಕೆ ಮತ್ತೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹಸಿಮೆಣಸಿನಕಾಯಿ ಹಾಕಿ ಮುಚ್ಚಳವನ್ನು ಮುಚ್ಚಿಡಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಹಾಗೂ ಆರೋಗ್ಯಕರ ಎಲೆಕೋಸು ಸೂಪ್ ಸವಿಯಲು ಸಿದ್ಧ. ಇದನ್ನು ಬಿಸಿ ಬಿಸಿಯಾಗಿ ಸೇವಿಸಿ.
ಎಲೆಕೋಸು ಸೂಪ್ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಈ ಚಳಿಗೆ ಇದು ಬೆಸ್ಟ್ ಸೂಪ್ ಎಂದರೆ ತಪ್ಪಿಲ್ಲ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ.
ಜೀರ್ಣಕ್ರಿಯೆಗೆ ಪ್ರಯೋಜನಕಾರಿ: ಎಲೆಕೋಸಿನಲ್ಲಿ ನಾರಿನಂಶ ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಎಲೆಕೋಸಿನಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಇತರ ಪೋಷಕಾಂಶಗಳು ರಕ್ತ ಪೂರೈಕೆ ವ್ಯವಸ್ಥೆಗೆ ಒಳ್ಳೆಯದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಕ್ತ ಶುದ್ಧೀಕರಣ: ಎಲೆಕೋಸಿನಲ್ಲಿರುವ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ದೇಹದಲ್ಲಿನ ಟಾಕ್ಸಿನ್ ಅಥವಾ ವಿಷಾಂಶ ಹೊರಹಾಕಲು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
