ಪಾಲಕ್ ಆಮ್ಲೆಟ್ ಎಂದಾದರೂ ತಿಂದಿದ್ದೀರಾ: ರುಚಿಯಲ್ಲೂ ಅದ್ಭುತ, ಆರೋಗ್ಯಕ್ಕೂ ಇದೆ ಹಲವು ಪ್ರಯೋಜನ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪಾಲಕ್ ಆಮ್ಲೆಟ್ ಎಂದಾದರೂ ತಿಂದಿದ್ದೀರಾ: ರುಚಿಯಲ್ಲೂ ಅದ್ಭುತ, ಆರೋಗ್ಯಕ್ಕೂ ಇದೆ ಹಲವು ಪ್ರಯೋಜನ, ಇಲ್ಲಿದೆ ರೆಸಿಪಿ

ಪಾಲಕ್ ಆಮ್ಲೆಟ್ ಎಂದಾದರೂ ತಿಂದಿದ್ದೀರಾ: ರುಚಿಯಲ್ಲೂ ಅದ್ಭುತ, ಆರೋಗ್ಯಕ್ಕೂ ಇದೆ ಹಲವು ಪ್ರಯೋಜನ, ಇಲ್ಲಿದೆ ರೆಸಿಪಿ

ಪಾಲಕ್ ಸೊಪ್ಪು ಹಾಗೂ ಮೊಟ್ಟೆ ಎರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವೆರಡರಿಂದ ಮಾಡಿದ ಭಕ್ಷ್ಯಗಳು ರುಚಿಕರವಾಗಿರುತ್ತವೆ. ಇಲ್ಲಿ ಪಾಲಕ್ ಹಾಗೂ ಮೊಟ್ಟೆಯಿಂದ ಮಾಡಲಾಗುವ ಆಮ್ಲೆಟ್ ರೆಸಿಪಿಯನ್ನು ನೀಡಲಾಗಿದೆ. ಇದು ಸಾಮಾನ್ಯ ಆಮ್ಲೆಟ್‍ಗಿಂತ ಹೆಚ್ಚು ಟೇಸ್ಟಿ ಮತ್ತು ಆರೋಗ್ಯಕರವಾಗಿದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಎಂದಾದರೂ ಪಾಲಕ್ ಆಮ್ಲೆಟ್ ಸವಿದಿದ್ದೀರಾ: ಇಲ್ಲಿದೆ ರೆಸಿಪಿ
ಎಂದಾದರೂ ಪಾಲಕ್ ಆಮ್ಲೆಟ್ ಸವಿದಿದ್ದೀರಾ: ಇಲ್ಲಿದೆ ರೆಸಿಪಿ (PC: Canva)

ಮೊಟ್ಟೆ ಮತ್ತು ಪಾಲಕ್ ಸೊಪ್ಪು, ಎರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವೆರಡರ ಮಿಶ್ರಣದ ಆಮ್ಲೆಟ್ ರೆಸಿಪಿ ಬಹಳ ರುಚಿಕರವಾಗಿರುವುದು ಮಾತ್ರವಲ್ಲದೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಪಾಲಕ್ ಆಮ್ಲೆಟ್ ತಿನ್ನುವುದು ಅಪೌಷ್ಟಿಕತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೂ ಸಹಕಾರಿಯಾಗಿದೆ. ಪಾಲಕ್ ಆಮ್ಲೆಟ್ ತಯಾರಿಸುವುದು ತುಂಬಾನೇ ಸಿಂಪಲ್. ಈ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಪಾಲಕ್ ಸೊಪ್ಪಿನ ಆಮ್ಲೆಟ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು - 1 ಕಟ್ಟು, ಮೊಟ್ಟೆ- 2, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- 1 ಟೀ ಚಮಚ, ಕತ್ತರಿಸಿದ ಈರುಳ್ಳಿ- 1 ಸಣ್ಣ, ಹಸಿಮೆಣಸಿನಕಾಯಿ- 2, ಮೆಣಸಿನ ಪುಡಿ- ಚಿಟಿಕೆ, ಜೀರಿಗೆ ಪುಡಿ- ಚಿಟಿಕೆ, ಗರಂ ಮಸಾಲೆ- ಚಿಟಿಕೆ, ಕೊತ್ತಂಬರಿ ಪುಡಿ- ಚಿಟಿಕೆ.

ಮಾಡುವ ವಿಧಾನ: ಮೊದಲಿಗೆ ಕಡಾಯಿಯನ್ನು ಸ್ಟೌವ್ ಮೇಲೆ ಇರಿಸಿ, ಅರ್ಧ ಚಮಚ ಎಣ್ಣೆ ಸೇರಿಸಿ.

- ಅದಕ್ಕೆ ಪಾಲಕ್ ಸೊಪ್ಪನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ.

- ಸ್ವಲ್ಪ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

- ಈಗ ಒಂದು ಬೌಲ್‍ನಲ್ಲಿ ಎರಡು ಮೊಟ್ಟೆಗಳನ್ನು ಒಡೆಯಿರಿ.

- ಈ ಮೊಟ್ಟೆಗೆ ಪಾಲಕ್ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಕಿ.

- ನಂತರ ಈರುಳ್ಳಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ, ಗರಂ ಮಸಾಲೆ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿ.

- ಬಾಣಲೆಯನ್ನು ಸ್ಟೌವ್ ಮೇಲೆ ಇರಿಸಿ, ಅರ್ಧ ಚಮಚ ಎಣ್ಣೆಯನ್ನು ಸೇರಿಸಿ.

- ನಂತರ ಮಾಡಿಟ್ಟಿರುವ ಮೊಟ್ಟೆಯ ಮಿಶ್ರಣವನ್ನು ಬಾಣಲೆಗೆ ಹಾಕಿ.

- ಎರಡೂ ಬದಿಗಳಲ್ಲಿ ಚೆನ್ನಾಗಿ ಬೇಯಿಸಿ, ತಟ್ಟೆಗೆ ವರ್ಗಾಯಿಸಿದರೆ ರುಚಿಕರವಾದ ಪಾಲಕ್ ಆಮ್ಲೆಟ್ ಸವಿಯಲು ಸಿದ್ಧ.

- ಪಾಲಕ್ ಮತ್ತು ಮೊಟ್ಟೆಗಳಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ರುಚಿ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಒಂದು ಬಾರಿ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗಬಹುದು. ಮಕ್ಕಳಿಗೂ ಮಾಡಿಕೊಡಿ. ಸಂಜೆ ಸ್ನಾಕ್ಸ್, ಬೆಳಗಿನ ಉಪಾಹಾರ ಅಥವಾ ಊಟದ ಜತೆ ನೆಂಚಿಕೊಳ್ಳಲು ಕೂಡ ಇದು ತುಂಬಾ ಚೆನ್ನಾಗಿರುತ್ತದೆ.

ಇನ್ನು ಪಾಲಕ್ ಸೊಪ್ಪು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇದು ಫೋಲೇಟ್ ಅಂಶವನ್ನು ಹೊಂದಿರುತ್ತದೆ. ಎಲ್ಲರೂ ಪಾಲಕ್ ಸೊಪ್ಪು ಸೇವಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು. ಹಾಲುಣಿಸುವ ತಾಯಂದಿರು, ಚಿಕ್ಕ ಮಕ್ಕಳು, ವೃದ್ಧರು ಎಲ್ಲರಿಗೂ ಫೋಲೇಟ್ ಬಹಳ ಅವಶ್ಯಕ. ಹಾಗೆಯೇ ಕೋಳಿ ಮೊಟ್ಟೆಯಲ್ಲಿ ಕೂಡ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿವೆ ಎಂದು ಹೇಳಲಾಗುತ್ತದೆ. ಒಂದು ಮೊಟ್ಟೆಯಲ್ಲಿ ಒಂಬತ್ತು ಅಮೈನೋ ಆಮ್ಲಗಳಿವೆ. ನಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿರುವ ಏಕೈಕ ಆಹಾರವೆಂದರೆ ಅದು ಕೋಳಿ ಮೊಟ್ಟೆ ಎಂದು ಹೇಳಲಾಗುತ್ತದೆ. ಪ್ರತಿದಿನ ಮೊಟ್ಟೆಯನ್ನು ಸೇವಿಸುವಂತೆ ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಹೀಗಾಗಿ ಇವೆರಡರ ಮಿಶ್ರಣವಿರುವ ಆಮ್ಲೆಟ್ ತಯಾರಿಸಿ ತಿನ್ನುವುದರಿಂದ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳಿವೆ.

Whats_app_banner