ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ; ದಿಢೀರನೇ ತಯಾರಾಗುವ ರೆಸಿಪಿಯಿದು, ಬೆಳಗ್ಗಿನ ಉಪಾಹಾರಕ್ಕೆ ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ; ದಿಢೀರನೇ ತಯಾರಾಗುವ ರೆಸಿಪಿಯಿದು, ಬೆಳಗ್ಗಿನ ಉಪಾಹಾರಕ್ಕೆ ಮಾಡಿ ನೋಡಿ

ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ; ದಿಢೀರನೇ ತಯಾರಾಗುವ ರೆಸಿಪಿಯಿದು, ಬೆಳಗ್ಗಿನ ಉಪಾಹಾರಕ್ಕೆ ಮಾಡಿ ನೋಡಿ

ಬೆಳಗ್ಗೆದ್ದು ದೋಸೆ ಮಾಡಲು ಹೊರಟಾಗ, ಅಕ್ಕಿ ನೆನೆಸಲು ಮರೆತಿದ್ದರೆ ದಿಢೀರನೆ ಬ್ರೆಡ್ ದೋಸೆ ತಯಾರಿಸಬಹುದು. ರುಚಿಕರ ಹಾಗೂ ತ್ವರಿತವಾಗಿ ತಯಾರಿಸಬಹುದಾದ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. ಕೇವಲ ಹತ್ತೇ ನಿಮಿಷದಲ್ಲಿ ಸಿದ್ಧವಾಗುತ್ತೆ ಈ ದೋಸೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ (ಸಾಂಕೇತಿಕ ಚಿತ್ರ)
ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಬ್ರೆಡ್ ದೋಸೆ (ಸಾಂಕೇತಿಕ ಚಿತ್ರ) (Canva)

ದೋಸೆ ದಕ್ಷಿಣ ಭಾರತೀಯರ ನೆಚ್ಚಿನ ಉಪಾಹಾರ ಖಾದ್ಯ ಅಂದರೆ ತಪ್ಪಿಲ್ಲ. ಮಸಾಲೆ ದೋಸೆ, ನೀರು ದೋಸೆ, ಮೆಂತ್ಯ ದೋಸೆ ಹೀಗೆ ಬಗೆ ಬಗೆಯ ದೋಸೆಗಳನ್ನು ತಯಾರಿಸಲಾಗುತ್ತದೆ. ಆದರೆ, ಈ ದೋಸೆ ಮಾಡುವ ಮುನ್ನ ಅಕ್ಕಿಯನ್ನು ಗಂಟೆಗಳ ಕಾಲ ನೆನೆಸಿಡಬೇಕು. ಬೆಳಗ್ಗೆದ್ದು ದೋಸೆ ಮಾಡಲು ಹೊರಟಾಗ, ಅಕ್ಕಿ ನೆನೆಸಲು ಮರೆತಿದ್ದರೆ, ಚಿತ್ರಾನ್ನ ಅಥವಾ ಪುಳಿಯೋಗರೆ ಮಾಡುವ ಬದಲು ದಿಢೀರನೆ ಬ್ರೆಡ್ ದೋಸೆ ತಯಾರಿಸಬಹುದು. ನೀವು ದೋಸೆ ಪ್ರಿಯರಾಗಿದ್ದರೆ ಈ ಪಾಕವಿಧಾನವನ್ನು ಪ್ರಯತ್ನಿಸಲೇಬೇಕು. ಈ ಬ್ರೆಡ್ ದೋಸೆ ಮಾಡುವುದು ತುಂಬಾನೇ ಸುಲಭ. ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.

ಬ್ರೆಡ್ ದೋಸೆ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಬ್ರೆಡ್- 6, ಚಿರೋಟಿ ರವೆ- 1/2 ಕಪ್, ಅಕ್ಕಿ ಹಿಟ್ಟು- 3/4 ಕಪ್, ಹುಳಿ ಮೊಸರು- 1 ಕಪ್, ಹಸಿ ಮೆಣಸಿನಕಾಯಿ- 2, ಕೊತ್ತಂಬರಿ ಸೊಪ್ಪು- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- 1 ಚಮಚ, ಈರುಳ್ಳಿ- 1, ಕರಿಬೇವಿನ ಎಲೆ- ಸ್ವಲ್ಪ.

ತಯಾರಿಸುವ ವಿಧಾನ: ಮೊದಲಿಗೆ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಎರಡರಿಂದ ಮೂರು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಚಿರೋಟಿ ರವೆಯನ್ನು ತೆಗೆದುಕೊಂಡು ಅದನ್ನು ತೊಳೆದು ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ನೆನೆಸಿಟ್ಟ ಬ್ರೆಡ್, ಅಕ್ಕಿ ಹಿಟ್ಟು, ಮೆಣಸಿನಕಾಯಿ, ಮೊಸರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ. ಆದರೆ ಜಾಸ್ತಿ ಸೇರಿಸಬೇಡಿ. ಉದ್ದಿನ ದೋಸೆ ಹಿಟ್ಟು ಹದದಷ್ಟಿದ್ದರೆ ದೋಸೆ ಹುಯ್ಯಲು ಚೆನ್ನಾಗಿರುತ್ತದೆ.

ರುಬ್ಬಿರುವ ಹಿಟ್ಟಿನ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ದಪ್ಪವಿದ್ದರೆ ಸ್ವಲ್ಪ ನೀರು ಸೇರಿಸಿ. ಈ ಹಿಟ್ಟಿಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕರಿಬೇವಿನ ಎಲೆ ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪು ಕೂಡ ಹಾಕಬಹುದು.

ಈಗ ಒಲೆ ಮೇಲೆ ದೋಸೆ ಕಾವಲಿಯಿಟ್ಟು ಬಿಸಿಯಾಗಲು ಬಿಡಿ. ನಂತರ ಅದಕ್ಕೆ ಎಣ್ಣೆ ಸವರಿ ಹಿಟ್ಟು ಹುಯ್ಯಿರಿ. ಹಿಟ್ಟಿಗೆ ಈರುಳ್ಳಿ, ಕರಿಬೇವಿನ ಎಲೆ ಹಾಕಲೇಬೇಕೆಂದಿಲ್ಲ. ದೋಸೆ ಹುಯ್ಯಿದ ನಂತರ ಅದರ ಮೇಲೆ ಈರುಳ್ಳಿ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು ಹಾಕಬಹುದು. ಇದು ಕೂಡ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮಧ್ಯಮ ಉರಿಯಲ್ಲಿ 1 ರಿಂದ 2 ನಿಮಿಷಗಳ ಕಾಲ ಬೇಯಿಸಿ. ಎರಡೂ ಬದಿ ಬೇಯಿಸಿ ಒಂದು ತಟ್ಟೆಗೆ ಎತ್ತಿಡಿ.

ಈಗ ಗರಿಗರಿಯಾದ ಬ್ರೆಡ್ ದೋಸೆ ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ತಿನ್ನಬಹುದು. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಈ ದೋಸೆ ತುಂಬಾ ಮೃದುವಾಗಿರುತ್ತದೆ. ಅಲ್ಲದೆ ತ್ವರಿತವಾಗಿ ತಯಾರಿಸಬಹುದಾದ್ದರಿಂದ ಈ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ.

Whats_app_banner