ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ; ನಿಮ್ಮ ಕೈಯಡುಗೆ ರುಚಿಯನ್ನು ಎಲ್ಲರೂ ಹಾಡಿ ಹೊಗಳುತ್ತಾರೆ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ; ನಿಮ್ಮ ಕೈಯಡುಗೆ ರುಚಿಯನ್ನು ಎಲ್ಲರೂ ಹಾಡಿ ಹೊಗಳುತ್ತಾರೆ, ಇಲ್ಲಿದೆ ರೆಸಿಪಿ

ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ; ನಿಮ್ಮ ಕೈಯಡುಗೆ ರುಚಿಯನ್ನು ಎಲ್ಲರೂ ಹಾಡಿ ಹೊಗಳುತ್ತಾರೆ, ಇಲ್ಲಿದೆ ರೆಸಿಪಿ

ಚಿಕನ್ ಚಾಪ್ಸ್ ಒಂದು ರುಚಿಕರ ಮತ್ತು ಜನಪ್ರಿಯ ಖಾದ್ಯವಾಗಿದ್ದು,ಇದನ್ನು ಮುಖ್ಯವಾಗಿ ಹಸಿಮೆಣಸಿನಕಾಯಿ, ಪುದೀನ ಸೊಪ್ಪು, ಕೊತ್ತಂಬರಿಸೊಪ್ಪು ಹಾಕಿ ತಯಾರಿಸಲಾಗುತ್ತದೆ. ಅನ್ನದ ಜೊತೆ ಮಾತ್ರವಲ್ಲ ಚಪಾತಿ, ದೋಸೆ, ಇಡ್ಲಿಯೊಂದಿಗೂ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿದೆ ಚಿಕನ್ ಚಾಪ್ಸ್ ಪಾಕವಿಧಾನ.

ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ (ಸಾಂಕೇತಿಕ ಚಿತ್ರ)
ಈ ರೀತಿ ಚಿಕನ್ ಚಾಪ್ಸ್ ಮಾಡಿ ನೋಡಿ (ಸಾಂಕೇತಿಕ ಚಿತ್ರ) (Slurrp)

ಚಿಕನ್ ಚಾಪ್ಸ್ ಒಂದು ರುಚಿಕರ ಮತ್ತು ಜನಪ್ರಿಯ ಖಾದ್ಯವಾಗಿದ್ದು, ಇದನ್ನು ಮುಖ್ಯವಾಗಿ ಹಸಿಮೆಣಸಿನಕಾಯಿ, ಪುದೀನ ಸೊಪ್ಪು, ಕೊತ್ತಂಬರಿಸೊಪ್ಪು ಹಾಕಿ ತಯಾರಿಸಲಾಗುತ್ತದೆ. ಅನ್ನದ ಜೊತೆ ಮಾತ್ರವಲ್ಲ ಚಪಾತಿ, ದೋಸೆ, ಇಡ್ಲಿಯೊಂದಿಗೂ ತಿನ್ನಲು ರುಚಿಕರವಾಗಿರುತ್ತದೆ. ಚಿಕನ್‍ನಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮನೆಗೆ ಅತಿಥಿಗಳು ಬಂದಾಗ ಇದನ್ನು ತಯಾರಿಸಿ ಬಡಿಸಬಹುದು. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ. ಚಿಕನ್ ಚಾಪ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕನ್ ಚಾಪ್ಸ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆಜಿ, ಅಡುಗೆ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಈರುಳ್ಳಿ- 2, ಟೊಮೆಟೊ- 1, ಹಸಿಮೆಣಸಿನಕಾಯಿ- 10, ಶುಂಠಿ- 1 ಇಂಚಿನಷ್ಟು, ಬೆಳ್ಳುಳ್ಳಿ ಎಸಳು- 10, ಕೊತ್ತಂಬರಿ ಸೊಪ್ಪು- ಒಂದೂವರೆ ಕಪ್, ಪುದೀನಾ ಸೊಪ್ಪು- ಒಂದೂವರೆ ಕಪ್, ಕೊತ್ತಂಬರಿ ಪುಡಿ- 3 ಚಮಚ, ಅರಶಿನ- ಅರ್ಧ ಚಮಚ, ತೆಂಗಿನತುರಿ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ- 2 ಚಮಚ, ಕಾಳುಮೆಣಸು- 1 ಚಮಚ, ಚೆಕ್ಕೆ- 1 ಸಣ್ಣ ಇಂಚು, ಲವಂಗ- 2, ಗೋಡಂಬಿ- 4.

ಮಾಡುವ ವಿಧಾನ: ಮೊದಲಿಗೆ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ 3 ಚಮಚದಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಣ್ಣಗೆ ಕತ್ತರಿಸಿದ 1 ಈರುಳ್ಳಿಯನ್ನು ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿದ ಟೊಮೆಟೊವನ್ನು ಹಾಕಿ ಹುರಿಯಿರಿ. ಜೊತೆಗೆ ಗೋಡಂಬಿ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ಹಾಕಿ ಹುರಿಯಿರಿ. ನಂತರ ಇದಕ್ಕೆ ಜೀರಿಗೆ, ಚೆಕ್ಕೆ, ಕಾಳುಮೆಣಸು, ಲವಂಗ ಹಾಗೂ ತೆಂಗಿನತುರಿ ಹಾಕಿ ಹುರಿಯಿರಿ. ನಂತರ ಇದನ್ನು ತಣ್ಣಗಾಗಲು ಬಿಡಿ.

ಇನ್ನೊಂದು ಪಾತ್ರೆಯಲ್ಲಿ ಎರಡರಿಂದ ಮೂರು ಚಮಚದಷ್ಟು ಎಣ್ಣೆ ಹಾಕಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಅರಶಿನ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಸ್ವಚ್ಛಗೊಳಿಸಿ ಕೋಳಿ ಮಾಂಸವನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಮಚದ ಸಹಾಯದಿಂದ ಮಿಶ್ರಣ ಮಾಡಿ. ನಂತರ ಮುಚ್ಚಳವನ್ನು ಮುಚ್ಚಿಟ್ಟು ಬೇಯಲು ಬಿಡಿ.

ಈ ವೇಳೆ ಹುರಿದಿರುವ ಮಸಾಲೆ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕೋಳಿ ಮಾಂಸ ಬೆಂದ ನಂತರ ನುಣ್ಣಗೆ ರುಬ್ಬಿದ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಜೊತೆಗೆ 3 ಚಮಚದಷ್ಟು ಕೊತ್ತಂಬರಿ ಪುಡಿ ಹಾಗೂ ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಕುದಿಯಲು ಬಿಡಿ. ಚೆನ್ನಾಗಿ ಕುದಿದ ನಂತರ ಮೇಲೆ ಸ್ವಲ್ಪ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಚಿಕನ್ ಚಾಪ್ಸ್ ತಿನ್ನಲು ಸಿದ್ಧ.

ಚಿಕನ್ ಚಾಪ್ಸ್ ಪಾಕವಿಧಾನ ತುಂಬಾ ಸರಳ. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ರೀತಿಯ ಚಿಕನ್ ಗ್ರೇವಿ ಮಾಡಿ ಬಡಿಸಬಹುದು. ಅನ್ನ, ದೋಸೆ, ಚಪಾತಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ. ಈವರೆಗೂ ಚಿಕನ್ ಚಾಪ್ಸ್ ಮಾಡಿರದಿದ್ದರೆ ಒಮ್ಮೆ ಈ ರೀತಿ ಮಾಡಿ ನೋಡಿ ಖಂಡಿತ ಇಷ್ಟವಾಗಬಹುದು.

Whats_app_banner