ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ; ಇದನ್ನು ತಯಾರಿಸುವುದು ತುಂಬಾನೇ ಸುಲಭ, ಒಮ್ಮೆ ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ; ಇದನ್ನು ತಯಾರಿಸುವುದು ತುಂಬಾನೇ ಸುಲಭ, ಒಮ್ಮೆ ಮಾಡಿ ನೋಡಿ

ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ; ಇದನ್ನು ತಯಾರಿಸುವುದು ತುಂಬಾನೇ ಸುಲಭ, ಒಮ್ಮೆ ಮಾಡಿ ನೋಡಿ

ನೀವು ಎಂದಾದರೂಒಣ ಸೀಗಡಿ ಚಟ್ನಿಯ ರುಚಿ ಸವಿದಿದ್ದೀರಾ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿರುವ ಖಾದ್ಯವಿದು. ಕುಚ್ಚಲಕ್ಕಿ ಗಂಜಿ ಜೊತೆ ಒಣ ಸೀಗಡಿ ಚಟ್ನಿ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಸಮುದ್ರಾಹಾರ ಪ್ರಿಯರಿಗಂತೂ ಈ ಚಟ್ನಿ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಒಣ ಸೀಗಡಿ ಚಟ್ನಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ
ಅನ್ನದ ಜೊತೆ ತಿನ್ನಲು ಸಖತ್ ರುಚಿ ಒಣ ಸೀಗಡಿ ಚಟ್ನಿ (Pinterest )

ನೀವು ತೆಂಗಿನಕಾಯಿ, ಕೊಬ್ಬರಿ, ಹುರುಳಿ ಚಟ್ನಿ ಇತ್ಯಾದಿ ಚಟ್ನಿಯ ಖಾದ್ಯಗಳನ್ನು ತಿಂದಿರಬಹುದು ಎಂದಾದರೂ ಒಣ ಸೀಗಡಿ ಚಟ್ನಿಯ ರುಚಿ ಸವಿದಿದ್ದೀರಾ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿರುವ ಖಾದ್ಯವಿದು. ಕುಚ್ಚಲಕ್ಕಿ ಗಂಜಿ ಜೊತೆ ಒಣ ಸೀಗಡಿ ಚಟ್ನಿ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಒಣ ಸೀಗಡಿಗೆ ಪುಡಿಮಾಡಿದ ಮಸಾಲೆ, ಒಣಕೊಬ್ಬರಿ ಹಾಕಿ ತಯಾರಿಸಲಾಗುವ ಈ ಖಾದ್ಯದ ರುಚಿ ಮಾತ್ರ ಅದ್ಭುತ. ಸಮುದ್ರಾಹಾರ ಪ್ರಿಯರಿಗಂತೂ ಈ ಚಟ್ನಿ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೆ ಒಣ ಸೀಗಡಿ ಚಟ್ನಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಒಣ ಸೀಗಡಿ ಚಟ್ನಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಒಣ ಸೀಗಡಿ- 2 ಕಪ್, ಬ್ಯಾಡಗಿ ಮೆಣಸು- 35, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಅರಿಶಿನ- ಅರ್ಧ ಚಮಚ, ಹುಳಿ- 1 ಸಣ್ಣ ನಿಂಬೆ ಗಾತ್ರ, ಉಪ್ಪು- ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ ಎಸಳು- 12, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಒಣಕೊಬ್ಬರಿ- 2 ಕಪ್.

ಮಾಡುವ ವಿಧಾನ: ಮೊದಲಿಗೆ ಒಣ ಸೀಗಡಿಯನ್ನು ಸ್ವಚ್ಛಗೊಳಿಸಬೇಕು. ನೀರಿನಲ್ಲಿ ಮೂರರಿಂದ ನಾಲ್ಕು ಬಾರಿ ತೊಳೆದು ಸ್ವಚ್ಛಗೊಳಿಸಿ. ಅದರ ತಲೆಭಾಗ, ಬಾಲದ ಭಾಗವನ್ನು ತೆಗೆಯಬೇಕು. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ. ಬಳಿಕ ಚಟ್ನಿಗೆ ಬಳಕೆ ಮಾಡಬಹುದು. ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಸೀಗಡಿ ಹಾಕಿ ಚೆನ್ನಾಗಿ ಹುರಿಯಿರಿ. ಕಡಿಮೆ ಉರಿಯಲ್ಲಿ ಇದನ್ನು 5 ರಿಂದ 10 ನಿಮಿಷ ಕಾಲ ಹುರಿಯಬೇಕು. ಅದು ವಿಭಿನ್ನ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಇದನ್ನೊಂದು ತಟ್ಟೆಗೆ ಎತ್ತಿಡಿ.

ಈಗ ಚಟ್ನಿ ಪುಡಿ ತಯಾರಿಸಲು ಮಸಾಲೆ ತಯಾರಿಸಬೇಕು. ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಈಗ ಬ್ಯಾಡಗಿ ಮೆಣಸು ಹಾಕಿ ಹುರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಎತ್ತಿಡಿ. ನಂತರ ಕೊತ್ತಂಬರಿ ಪುಡಿ, ಜೀರಿಗೆ, ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಹುರಿದ ನಂತರ ಮೆಣಸು ಎತ್ತಿಟ್ಟ ತಟ್ಟೆಗೆ ಇದನ್ನು ಹಾಕಿ.

ಹುರಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ. ಮಿಕ್ಸಿ ಹಾಕುವಾಗ ಅರಿಶಿನ, ಉಪ್ಪು ಹಾಗೂ ಹುಣಸೆಹುಳಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಬಟ್ಟಲಿಗೆ ಹಾಕಿ. ನಂತರ ಒಣ ಕೊಬ್ಬರಿ ತೆಗೆದುಕೊಂಡು ಅದನ್ನು ಬಾಣಲೆಗೆ ಹಾಕಿ ಒಲೆ ಮೇಲಿಟ್ಟು ಹುರಿಯಿರಿ. ಹುರಿದು ತಣ್ಣಗಾದ ನಂತರ ಇದನ್ನು ಕೂಡ ಮಿಕ್ಸಿ ಜಾರ್‌ನಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.

ಪುಡಿ ಮಾಡಿದ ಒಣಕೊಬ್ಬರಿಯನ್ನು ಮಸಾಲೆ ಪುಡಿಗೆ ಮಿಶ್ರಣ ಮಾಡಿ. ನಂತರ ಹುರಿದಿಟ್ಟಿರುವ ಒಣ ಸೀಗಡಿಯನ್ನು ಕೈಯಿಂದಲೇ ಪುಡಿ ಮಾಡಿ ಈ ಮಿಶ್ರಣಕ್ಕೆ ಬೆರೆಸಿ. ಇವನ್ನು ಕೈಯಿಂದಲೇ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಒಣಸೀಗಡಿ ಚಟ್ನಿ ಸಿದ್ಧ.

ಈ ಚಟ್ನಿಯು ಅನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಅಲ್ಲದೆ ಕುಚ್ಚುಲಕ್ಕಿ ಗಂಜಿ ಹಾಗೂ ಈ ಸೀಗಡಿ ಚಟ್ನಿ ಇದ್ದರಂತೂ ಅದರ ರುಚಿಯೇ ಬೇರೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಇದನ್ನು ಒಂದರಿಂದ 2 ತಿಂಗಳವರೆಗೆ ಸಂಗ್ರಹಿಸಿಡಬಹುದು. ಗಾಳಿಯಡದ ಡಬ್ಬದಲ್ಲಿ ಹಾಕಿಡಬಹುದು.

Whats_app_banner