ಮನೆಯಲ್ಲಿ ತರಕಾರಿ ಇಲ್ಲದಿದ್ದರೆ, ಬಾಯಿ ಸಪ್ಪೆ ಎನಿಸಿದರೆ ಮಾಡಿ ರುಚಿಕರ ಬೆಳ್ಳುಳ್ಳಿ ಗ್ರೇವಿ; ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ತರಕಾರಿ ಇಲ್ಲದಿದ್ದರೆ, ಬಾಯಿ ಸಪ್ಪೆ ಎನಿಸಿದರೆ ಮಾಡಿ ರುಚಿಕರ ಬೆಳ್ಳುಳ್ಳಿ ಗ್ರೇವಿ; ಇಲ್ಲಿದೆ ಪಾಕವಿಧಾನ

ಮನೆಯಲ್ಲಿ ತರಕಾರಿ ಇಲ್ಲದಿದ್ದರೆ, ಬಾಯಿ ಸಪ್ಪೆ ಎನಿಸಿದರೆ ಮಾಡಿ ರುಚಿಕರ ಬೆಳ್ಳುಳ್ಳಿ ಗ್ರೇವಿ; ಇಲ್ಲಿದೆ ಪಾಕವಿಧಾನ

ಪ್ರತಿದಿನ ಬೆಳ್ಳುಳ್ಳಿ ತಿನ್ನುವುದರಿಂದ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಖಾದ್ಯಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಅಥವಾ ಬಾಯಿ ಸಪ್ಪೆ ಎನಿಸಿದಾಗ ಬೆಳ್ಳುಳ್ಳಿ ಗ್ರೇವಿ ಮಾಡಬಹುದು. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ರುಚಿಕರ ಬೆಳ್ಳುಳ್ಳಿ ಗ್ರೇವಿ ಪಾಕವಿಧಾನ
ರುಚಿಕರ ಬೆಳ್ಳುಳ್ಳಿ ಗ್ರೇವಿ ಪಾಕವಿಧಾನ (Mana Chef/YouTube )

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳ್ಳುಳ್ಳಿ ತಿನ್ನುವುದರಿಂದ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಖಾದ್ಯಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಒಗ್ಗರಣೆ ಅಥವಾ ಇತರೆ ಪದಾರ್ಥಗಳೊಂದಿಗೆ ರುಬ್ಬುವಾಗ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಮಾಂಸಾಹಾರ ಖಾದ್ಯಗಳಿಗಂತೂ ಬೆಳ್ಳುಳ್ಳಿ ಬೇಕೇ ಬೇಕು. ಇದರಿಂದ ರುಚಿಕರವಾದ ಖಾದ್ಯ ಕೂಡ ತಯಾರಿಸಬಹುದು.

ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಅಥವಾ ಬಾಯಿ ಸಪ್ಪೆ ಎನಿಸಿದಾಗ ಬೆಳ್ಳುಳ್ಳಿ ಗ್ರೇವಿ ಮಾಡಬಹುದು. ಇದು ನಾಲಿಗೆಗೆ ಉತ್ತಮ ರುಚಿಯನ್ನು ನೀಡುತ್ತದೆ. ಅನ್ನ, ದೋಸೆ, ಇಡ್ಲಿಯೊಂದಿಗೂ ತಿನ್ನಲು ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳ್ಳುಳ್ಳಿ ಗ್ರೇವಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಬೆಳ್ಳುಳ್ಳಿ ಎಸಳು- 20, ಎಣ್ಣೆ- ಎರಡು ಚಮಚ, ಸಾಸಿವೆ- ಒಂದು ಚಮಚ, ಕಡಲೆಬೇಳೆ ಬೇಳೆ- ಅರ್ಧ ಚಮಚ, ಕಪ್ಪು ಬೇಳೆ- ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಕರಿಬೇವು- ಒಂದು ಹಿಡಿ, ಅರಿಶಿನ- ¼ ಚಮಚ, ಈರುಳ್ಳಿ- ಒಂದು, ಟೊಮೆಟೊ- ಒಂದು, ಮೆಂತ್ಯ- 4 ಕಾಳು, ಹುಣಸೆಹಣ್ಣು ಪೇಸ್ಟ್- ¼ ಕಪ್, ಮೆಣಸಿನ ಪುಡಿ- ಅರ್ಧ ಚಮಚ, ಹಸಿಮೆಣಸಿನಕಾಯಿ- ಎರಡು, ಕೊತ್ತಂಬರಿ ಪುಡಿ- ಒಂದು ಚಮಚ, ನೀರು ಅಗತ್ಯಕ್ಕೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲಿಗೆ ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಸುಲಿದು 2 ಭಾಗಗಳಾಗಿ ಕತ್ತರಿಸಿ. ಈಗ ಒಲೆ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ. ಈಗ ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳನ್ನು ಬೆರಿಸಿ ಚೆನ್ನಾಗಿ ಹುರಿಯಿರಿ. ಒಂದು ಹಿಡಿ ಹಸಿಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.

ಈಗ ನುಣ್ಣಗೆ ಕತ್ತರಿಸಿದ ಈರುಳ್ಳಿ ಬೆರೆಸಿ, ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಟೊಮೆಟೊವನ್ನು ಕತ್ತರಿಸಿ ಹಾಕಬಹುದು ಅಥವಾ ಅದನ್ನು ರುಬ್ಬಿ ಹಾಕಬಹುದು. ಹಸಿಯಾಗಿ ರುಬ್ಬಿದರೆ, ಟೊಮೆಟೊದ ಹಸಿವಾಸನೆ ಹೋಗುವವರೆಗೆ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.

ನಂತರ ಹುಣಸೆಹಣ್ಣಿನ ಪೇಸ್ಟ್ ಅಥವಾ ನೀರಿನಲ್ಲಿ ನೆನೆಸಿದ ಹುಣಸೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಲೋಟದಷ್ಟು ನೀರು ಹಾಕಿ ಮುಚ್ಚಳವನ್ನು ಮುಚ್ಚಿ, ಚೆನ್ನಾಗಿ ಬೇಯಿಸಿ.

ಚೆನ್ನಾಗಿ ಬೆಂದ ನಂತರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಬೆಳ್ಳುಳ್ಳಿ ಗ್ರೇವಿ ತಿನ್ನಲು ಸಿದ್ಧ. ಇದನ್ನು ಬಿಸಿ ಬಿಸಿ ಅನ್ನ, ದೋಸೆ, ಇಡ್ಲಿ ಜೊತೆಗೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ ಆರೋಗ್ಯಕ್ಕೂ ಅದ್ಭುತ ಪ್ರಯೋಜನಗಳಿವೆ.

ಬೆಳ್ಳುಳ್ಳಿಯನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮವಾದ ಪೋಷಕಾಂಶಗಳು ಸಿಗುತ್ತವೆ. ಅವು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ. ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವೂ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹೃದಯ ಮತ್ತು ರಕ್ತನಾಳಗಳನ್ನು ರಕ್ಷಿಸುವ ಉರಿಯೂತ ನಿವಾರಕ ಗುಣಗಳಿವೆ.

ಪ್ರತಿದಿನ ಎರಡು ಹಸಿ ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಬೆಳ್ಳುಳ್ಳಿ ಗ್ರೇವಿಯನ್ನು ತಿನ್ನುವುದರಿದಂಲೂ ಪೋಷಕಾಂಶ ಲಭ್ಯವಿದೆ. ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಒಮ್ಮೆ ರೆಸಿಪಿ ಮಾಡಿನೋಡಿ. ಖಂಡಿತ ಇಷ್ಟವಾಗುತ್ತದೆ. ಜ್ವರ ಬಂದು ಬಾಯಿ ಸಪ್ಪೆ ಎನಿಸಿದಾಗಲೂ ಈ ಪಾಕವಿಧಾನವನ್ನು ಪ್ರಯತ್ನಿಸಬಹುದು.

Whats_app_banner