ಮನೆಯಲ್ಲಿ ತರಕಾರಿ ಖಾಲಿಯಾಗಿದ್ದರೆ ಚಿಂತೆ ಬೇಡ: ದಿಢೀರನೆ ತಯಾರಿಸಿ ಈರುಳ್ಳಿ ಅನ್ನ, ಇಲ್ಲಿದೆ ಪಾಕವಿಧಾನ
ಮನೆಯಲ್ಲಿ ಏನೂ ತರಕಾರಿ ಇಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ದಿಢೀರನೇ ಈರುಳ್ಳಿ ಅನ್ನ ತಯಾರಿಸಿ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕಾದ್ರೂ ಸರಿ ತ್ವರಿತವಾಗಿ ಸಿದ್ಧವಾಗುವ ರೆಸಿಪಿಯಿದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ರುಚಿಕರವಾದ ಈರುಳ್ಳಿ ಅನ್ನ ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೆಲವೊಮ್ಮೆ ಮನೆಯಲ್ಲಿ ಏನೂ ತರಕಾರಿ ಇರುವುದಿಲ್ಲ. ಮಾರುಕಟ್ಟೆಗೆ ಹೋಗಿ ತರಲು ಸಾಧ್ಯವಿಲ್ಲ. ಅಯ್ಯೋ ಏನು ಅಡುಗೆ ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ಏನೂ ತರಕಾರಿ ಇಲ್ಲದಿದ್ದರೂ ಚಿಂತೆ ಇಲ್ಲ. ಈರುಳ್ಳಿಯಾದರೂ ಇರುತ್ತೆ ಅಲ್ವಾ. ಇದರಿಂದ ರುಚಿಕರವಾದ ಈರುಳ್ಳಿ ರೈಸ್ (ಅನ್ನ) ಖಾದ್ಯ ತಯಾರಿಸಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಬಹಳ ತ್ವರಿತವಾಗಿ ಸಿದ್ಧವಾಗುವ ರೆಸಿಪಿಯಿದು. ಈರುಳ್ಳಿ ಅನ್ನ ತಯಾರಿಸುವುದು ಹೇಗೆ ಅನ್ನೋದು ಇಲ್ಲಿ ತಿಳಿದುಕೊಳ್ಳಿ.
ಈರುಳ್ಳಿ ಅನ್ನ ಪಾಕವಿಧಾನ ಇಲ್ಲಿದೆ
ಬೇಕಾಗುವ ಸಾಮಾಗ್ರಿಗಳು: ಎಣ್ಣೆ- 2 ಟೀ ಚಮಚ, ಕಡಲೆಬೇಳೆ- ಎರಡು ಚಮಚ, ಸಾಸಿವೆ- 1 ಚಮಚ, ಜೀರಿಗೆ- 1 ಚಮಚ, ಕಡಲೆಕಾಯಿ- ಕಾಲು ಕಪ್, ಬೆಳ್ಳುಳ್ಳಿ ಎಸಳು- 10, ಈರುಳ್ಳಿ- 1 ಕಪ್, ಮೆಣಸಿನಪುಡಿ- 1 ಚಮಚ, ಅರಿಶಿನ- ಚಿಟಿಕೆ, ಇಂಗು- ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಹಸಿಮೆಣಸಿನಕಾಯಿ- 4, ಕರಿಬೇವಿನ ಎಲೆ- ಸ್ವಲ್ಪ, ಹುಣಸೆಹಣ್ಣಿನ ರಸ- ಕಾಲು ಕಪ್, ಅನ್ನ- 2 ಕಪ್.
ಪಾಕವಿಧಾನ: ಮೊದಲಿಗೆ ಕುಕ್ಕರ್‌ನಲ್ಲಿ ಅಕ್ಕಿಯನ್ನು ಬೇಯಿಸಲು ಇಡಿ. ಉಳಿದ ಅನ್ನದಿಂದಲೂ ಈರುಳ್ಳಿ ಅನ್ನ ತಯಾರಿಸಬಹುದು. ಅನ್ನ ಉಳಿದಿಲ್ಲದಿದ್ದರೆ ಮೊದಲಿಗೆ ಅಕ್ಕಿಯನ್ನು ಬೇಯಿಸಿ. ನಂತರ ಈರುಳ್ಳಿಯನ್ನು ಲಂಬವಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
ಈಗ ಒಲೆಯ ಮೇಲೆ ಬಾಣಲೆ ಇರಿಸಿ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕಡಲೆಬೇಳೆ, ಸಾಸಿವೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಕಡಲೆಕಾಯಿ ಬೆರೆಸಿ ಹುರಿಯಿರಿ. ನಂತರ ಕಡಲೆಕಾಯಿ, ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಈಗ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈರುಳ್ಳಿಯನ್ನು ಚೆನ್ನಾಗಿ ಹುರಿದ ನಂತರ ಅದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಅರಿಶಿನ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ಹುಣಸೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಪುಳಿಯೋಗರೆ ಮಿಶ್ರಣ ಮಾಡುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಮೇಲೆ ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿಕರ ಈರುಳಿ ಅನ್ನ ತಿನ್ನಲು ಸಿದ್ಧ.
ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕಾದ್ರೂ ಸರಿ ಈರುಳ್ಳಿ ಅನ್ನವನ್ನು ತಯಾರಿಸಬಹುದು. ಬಹಳ ಸುಲಭವಾಗಿ ತಯಾರಿಸಬಹುದಾದ ಖಾದ್ಯವಿದು. ಹೆಚ್ಚು ಖಾರ ಬೇಕು ಅಂತಿದ್ದರೆ ಹಸಿಮೆಣಸಿನಕಾಯಿ ಅಥವಾ ಮೆಣಸಿನಪುಡಿಯನ್ನು ಹೆಚ್ಚು ಬೆರೆಸಬಹುದು. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತದೆ. ಅದರಲ್ಲೂ ಏನೂ ತರಕಾರಿ ಇಲ್ಲದಿದ್ದಾಗ ಮಾಡಬಹುದಾದ ಸೂಪರ್ ರೆಸಿಪಿಯಿದು.

ವಿಭಾಗ