ಕೊರಿಯನ್ ಭಕ್ಷ್ಯಗಳ ರುಚಿ ನೋಡಿರದಿದ್ದರೆ ಈ ಪಾಕವಿಧಾನವನ್ನು ಪ್ರಯತ್ನಿಸಿ; ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುತ್ತೆ ಆಲೂಗಡ್ಡೆ ಚಿಲ್ಲಿ
Korean Potato Chilli Balls: ನೀವು ಇನ್ನೂ ಕೊರಿಯನ್ ಭಕ್ಷ್ಯಗಳನ್ನು ರುಚಿ ನೋಡಿರದಿದ್ದರೆ, ಈ ಬಾರಿ ಕೊರಿಯನ್ ಆಲೂಗಡ್ಡೆ ಚಿಲ್ಲಿ ತಯಾರಿಸಿ. ಮಕ್ಕಳು ಇದನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ತ್ವರಿತವಾಗಿ ತಯಾರಾಗುವ ಈ ಖಾದ್ಯ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೊರಿಯನ್ ಆಲೂಗಡ್ಡೆ ಚಿಲ್ಲಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಕೊರಿಯನ್ನರ ಬ್ಯೂಟಿ ಟಿಪ್ಸ್ ಭಾರತದಲ್ಲಿ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೊರಿಯನ್ನರ ತ್ವಚೆಯ ಕಾಳಜಿಯಲ್ಲಿ ಅವರು ತಿನ್ನುವ ಆಹಾರವು ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನಂಬಲಾಗಿದೆ. ಹೀಗಾಗಿ ಕೊರಿಯನ್ ಪಾಕಪದ್ಧತಿಯ ವಿಡಿಯೋಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕೊರಿಯನ್ ನೂಡಲ್ಸ್ ಅನ್ನು ಅನೇಕರು ಮೆಚ್ಚಿದ್ದಾರೆ. ಇದು ವಿಭಿನ್ನ ರುಚಿ ಹೊಂದಿರುವುದರಿಂದ ಸಾಕಷ್ಟು ಮಂದಿಗೆ ಬಹಳ ಇಷ್ಟವಾಗಿದೆ. ನೀವು ಕೊರಿಯನ್ ಪಾಕವಿಧಾನವನ್ನು ಪ್ರಯತ್ನಿಸಲು ಬಯಸಿದರೆ ಮತ್ತು ಕೊರಿಯನ್ ಆಹಾರದ ರುಚಿ ನೋಡದಿದ್ದರೆ, ಆಲೂಗಡ್ಡೆ ಚಿಲ್ಲಿ ಮಾಡಿ ನೋಡಿ. ಇದು ತುಂಬಾ ರುಚಿಯಾಗಿರುತ್ತದೆ. ಕೊರಿಯನ್ ಆಲೂಗಡ್ಡೆ ಚಿಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ,
ಕೊರಿಯನ್ ಆಲೂಗಡ್ಡೆ ಚಿಲ್ಲಿ ಪಾಕವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಆಲೂಗಡ್ಡೆ- ನಾಲ್ಕು, ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- ನಾಲ್ಕು ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಬೆಳ್ಳುಳ್ಳಿ ಎಸಳು- 5, ಸೋಯಾ ಸಾಸ್- ಎರಡು ಚಮಚ, ಕೊತ್ತಂಬರಿ ಸೊಪ್ಪು- 1 ಚಮಚ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ- ಅರ್ಧ ಚಮಚ, ಬಿಳಿ ಎಳ್ಳು- ಅರ್ಧ ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಮೊದಲಿಗೆ, ಆಲೂಗಡ್ಡೆ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಈ ಆಲೂಗಡ್ಡೆಯನ್ನು ಸ್ವಲ್ಪ ಉಪ್ಪು ಬೆರೆಸಿ ನೀರಿನಲ್ಲಿ ಹಾಕಿ ಬೇಯಿಸಿ. ಬೇಯಿಸಿದ ನಂತರ, ಅದರ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ. ನಂತರ ರುಬ್ಬಿರುವ ಆಲೂಗಡ್ಡೆಗೆ 4 ಚಮಚ ಜೋಳದ ಹಿಟ್ಟನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ಸಣ್ಣ ತುಂಡುಗಳಾಗಿ ತೆಗೆದುಕೊಂಡು ಅದನ್ನು ಉಂಡೆಗಳಾಗಿ ಮಾಡಿ ಪಕ್ಕಕ್ಕೆ ಇರಿಸಿ.
ಈಗ ಒಂದು ಪಾತ್ರೆಯಲ್ಲಿ ಒಂದು ಲೀಟರ್‌ನಷ್ಟು ನೀರು, ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಆಲೂಗಡ್ಡೆ ಉಂಡೆಗಳನ್ನು ಹಾಕಿ. ಅವುಗಳನ್ನು ಕನಿಷ್ಠ 10 ನಿಮಿಷಗಳ ಕಾಲ ಬೇಯಿಸಬೇಕು. ನಂತರ ನೀರನ್ನು ಸೋಸಿ. ಬೇಯಿಸಿದ ಆಲೂಗಡ್ಡೆಗೆ ಕೊತ್ತಂಬರಿ ಸೊಪ್ಪು, ಸಣ್ಣ ತುಂಡುಗಳಾಗಿ ಕತ್ತರಿಸಿದ ಬೆಳ್ಳುಳ್ಳಿ ಎಸಳು, ಎರಡು ಚಮಚ ಸೋಯಾ ಸಾಸ್, ಅರ್ಧ ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಬಿಳಿ ಎಳ್ಳು ಮತ್ತು 3 ಚಮಚದಷ್ಟು ಬಿಸಿ ಮಾಡಿರುವ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಕೊರಿಯನ್ ಆಲೂಗಡ್ಡೆ ಚಿಲ್ಲಿ ತಿನ್ನಲು ಸಿದ್ಧ.
ತುಂಬಾ ಸರಳ ಹಾಗೂ ಬೇಗನೆ ತಯಾರಾಗುವ ಈ ಖಾದ್ಯ ಅಷ್ಟೇ ರುಚಿಕರವಾಗಿರುತ್ತದೆ. ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ಮಾಡಬೇಕು ಎಂದೆನಿಸುತ್ತದೆ. ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು. ಒಮ್ಮೆ ತಯಾರಿಸಿ ನೋಡಿ. ಮಕ್ಕಳು ಕೂಡ ಇಷ್ಟಪಡುತ್ತಾರೆ.

ವಿಭಾಗ