ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ: ರುಚಿಯ ಜೊತೆಗೆ ಆರೋಗ್ಯಕ್ಕಿದೆ ಹಲವು ಪ್ರಯೋಜನ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ: ರುಚಿಯ ಜೊತೆಗೆ ಆರೋಗ್ಯಕ್ಕಿದೆ ಹಲವು ಪ್ರಯೋಜನ, ಇಲ್ಲಿದೆ ಪಾಕವಿಧಾನ

ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ: ರುಚಿಯ ಜೊತೆಗೆ ಆರೋಗ್ಯಕ್ಕಿದೆ ಹಲವು ಪ್ರಯೋಜನ, ಇಲ್ಲಿದೆ ಪಾಕವಿಧಾನ

ಮಕ್ಕಳು ಬೀಟ್ರೂಟ್‌ನಿಂದ ತಯಾರಿಸಿದ ಖಾದ್ಯ ತಿನ್ನಲು ಇಷ್ಟಪಡದಿದ್ದರೆಓಟ್ಸ್-ಬೀಟ್ರೂಟ್ ದೋಸೆ ಮಾಡಿ ಕೊಡಿ. ಬೀಟ್ರೂಟ್‌ನಲ್ಲಿ ಕಬ್ಬಿಣ, ಜೀವಸತ್ವಗಳಂತಹ ವಿವಿಧ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಬೆಳಗ್ಗಿನ ಉಪಾಹಾರವಾಗಿ ತಿನ್ನಬಹುದು. ಓಟ್ಸ್-ಬೀಟ್ರೂಟ್ ದೋಸೆ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ
ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ (Shutterstock )

ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ, ಮಕ್ಕಳು ಹಾಗೂ ಹೆಚ್ಚಿನ ವಯಸ್ಕರಿಗೆ ಇದು ರುಚಿಸುವುದಿಲ್ಲ. ಬೀಟ್ರೂಟ್‌ನಲ್ಲಿ ಕಬ್ಬಿಣ, ಜೀವಸತ್ವಗಳಂತಹ ವಿವಿಧ ಪೋಷಕಾಂಶಗಳು ಹೇರಳವಾಗಿದೆ. ಮನೆಯಲ್ಲಿ ಯಾರೂ ಬೀಟ್ರೂಟ್ ತಿನ್ನಲು ಇಷ್ಟಪಡದಿದ್ದರೆ ಓಟ್ಸ್ ಬೀಟ್ರೂಟ್ ದೋಸೆ ಮಾಡಿ ಕೊಡಿ. ಮಕ್ಕಳು ತುಂಬಾ ಇಷ್ಟಪಟ್ಟು ತಿಂತಾರೆ. ಬೆಳಗ್ಗಿನ ಉಪಾಹಾರವಾಗಿ ತಿನ್ನಬಹುದು ಅಥವಾ ರಾತ್ರಿ ಊಟವಾಗಿಯೂ ತಿನ್ನಬಹುದು. ಹಾಗೆಯೇ ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಓಟ್ಸ್-ಬೀಟ್ರೂಟ್ ದೋಸೆ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಓಟ್ಸ್- 1 ಕಪ್, ಬಾಂಬೆ ರವೆ- 1 ಕಪ್, ಬೀಟ್ರೂಟ್- 1, ಹಸಿ ಮೆಣಸಿನಕಾಯಿ- 2, ಶುಂಠಿ- 1 ಸಣ್ಣ ತುಂಡು, ಜೀರಿಗೆ- 1 ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ: ಓಟ್ಸ್-ಬೀಟ್ರೂಟ್ ದೋಸೆ ಮಾಡುವ ಮೊದಲು ಬೀಟ್ರೂಟ್ ಅನ್ನು ಸಿಪ್ಪೆ ಸುಲಿದು ಸ್ವಚ್ಛಗೊಳಿಸಿ. ನಂತರ ಅದನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ. ನೀರು ಸ್ವಲ್ಪ ಬಿಸಿಯಾದ ನಂತರ, ಅದರಲ್ಲಿ ಬೀಟ್ರೂಟ್ ತುಂಡುಗಳನ್ನು ಸೇರಿಸಿ ಬೇಯಿಸಿ.

ಈಗ ಮತ್ತೊಂದು ಬಾಣಲೆಯಲ್ಲಿ ಓಟ್ಸ್ ಹಾಕಿ ಹುರಿಯಿರಿ. ಇದನ್ನು ಕಡಿಮೆ ಉರಿಯಲ್ಲಿ ಕಂದು ಬಣ್ಣ ಆಗುವವರೆಗೆ ಹುರಿಯಿರಿ. ನಂತರ ಓಟ್ಸ್ ಅನ್ನು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿ ಜಾರ್‌ಗೆ ಓಟ್ಸ್ ಹಾಗೂ ರವೆಯನ್ನು ಹಾಕಿ ಪುಡಿ ಮಾಡಿ.

ಇತ್ತ ಬೀಟ್ರೂಟ್ ಬೆಂದ ನಂತರ ಅದನ್ನು ತಣ್ಣಗಾಗಿಸಿ. ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ಮೃದುವಾಗಿ ರುಬ್ಬಿಕೊಳ್ಳಿ. ಬೀಟ್ರೂಟ್ ಅನ್ನು ಬೇಯಿಸಿಯೇ ರುಬ್ಬಿಕೊಳ್ಳಬೇಕು ಎಂದಿಲ್ಲ ಇದನ್ನು ಹಸಿಯಾಗಿಯೇ ರುಬ್ಬಿಕೊಳ್ಳಬಹುದು. ಬೀಟ್ರೂಟ್ ರುಬ್ಬಿಕೊಳ್ಳುವಾಗ ಅದಕ್ಕೆ ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ. ಮಿಶ್ರಣವನ್ನು ಮೃದುವಾಗಿ ರುಬ್ಬಿಕೊಳ್ಳಬೇಕು.

ಈಗ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಪುಡಿ ಮಾಡಿದ ಓಟ್ಸ್-ರವೆ ಪುಡಿಯನ್ನು ಹಾಕಿ. ನಂತರ ಅದಕ್ಕೆ ರುಬ್ಬಿರುವ ಬೀಟ್ರೂಟ್ ಮಿಶ್ರಣ, ಉಪ್ಪು ಮತ್ತು ಅಗತ್ಯಕ್ಕೆ ತಕ್ಕಷ್ಚು ನೀರು ಬೆರೆಸಿ. ಹಿಟ್ಟು ತುಂಬಾ ದಪ್ಪವಿರಬಾರದು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಒಲೆ ಮೇಲೆ ಕಬ್ಬಿಣದ ತವಾ ಇಟ್ಟು ಬಿಸಿಯಾಗಲು ಬಿಡಿ. ಬಿಸಿಯಾದ ನಂತರ ದೋಸೆ ಹುಯ್ಯಿರಿ. ಎರಡೂ ಬದಿ ಬೇಯಿಸಿ. ಬೇಯಿಸುವಾಗ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಬಹುದು. ಇದನ್ನು ಶುಂಠಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ, ನಿಮಗೆ ಇಷ್ಟವಾಗಬಹುದು.

Whats_app_banner