ಗೋಬಿ, ಚಿಕನ್ ಮಂಚೂರಿಯನ್‍ನಂತೆ ಸಖತ್ ಟೇಸ್ಟಿಯಾಗಿರುತ್ತೆ ಈರುಳ್ಳಿ ಮಂಚೂರಿಯನ್: ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗೋಬಿ, ಚಿಕನ್ ಮಂಚೂರಿಯನ್‍ನಂತೆ ಸಖತ್ ಟೇಸ್ಟಿಯಾಗಿರುತ್ತೆ ಈರುಳ್ಳಿ ಮಂಚೂರಿಯನ್: ಇಲ್ಲಿದೆ ರೆಸಿಪಿ

ಗೋಬಿ, ಚಿಕನ್ ಮಂಚೂರಿಯನ್‍ನಂತೆ ಸಖತ್ ಟೇಸ್ಟಿಯಾಗಿರುತ್ತೆ ಈರುಳ್ಳಿ ಮಂಚೂರಿಯನ್: ಇಲ್ಲಿದೆ ರೆಸಿಪಿ

ಗೋಬಿ ಮಂಚೂರಿಯನ್, ಎಲೆಕೋಸು ಮಂಚೂರಿಯನ್, ಚಿಕನ್ ಮಂಚೂರಿಯನ್ ಇತ್ಯಾದಿ ಮಂಚೂರಿಯನ್ ಖಾದ್ಯಗಳನ್ನು ತಿಂದಿರಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಇದೇ ರೀತಿ ಈರುಳ್ಳಿ ಮಂಚೂರಿಯನ್ ಭಕ್ಷ್ಯವನ್ನೂ ತಯಾರಿಸಬಹುದು. ಸಂಜೆ ಸ್ನಾಕ್ಸ್‌ಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ ಇದನ್ನು ತಯಾರಿಸಿ. ರೆಸಿಪಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಈರುಳ್ಳಿ ಮಂಚೂರಿಯನ್ ರೆಸಿಪಿ (ಸಾಂಕೇತಿಕ ಚಿತ್ರ)
ಈರುಳ್ಳಿ ಮಂಚೂರಿಯನ್ ರೆಸಿಪಿ (ಸಾಂಕೇತಿಕ ಚಿತ್ರ) (Canva)

ಗೋಬಿ ಮಂಚೂರಿಯನ್, ಎಲೆಕೋಸು ಮಂಚೂರಿಯನ್, ಚಿಕನ್ ಮಂಚೂರಿಯನ್ ಇತ್ಯಾದಿ ಮಂಚೂರಿಯನ್ ಖಾದ್ಯಗಳನ್ನು ತಿಂದಿರಬಹುದು. ಆದರೆ, ಎಂದಾದರೂ ಈರುಳ್ಳಿ ಮಂಚೂರಿಯನ್ ತಿಂದಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಈರುಳ್ಳಿ ಪಕೋಡ ಎಷ್ಟು ರುಚಿಕರವಾಗಿರುತ್ತದೋ, ಅದೇ ರೀತಿ ಈರುಳ್ಳಿ ಮಂಚೂರಿಯನ್ ರುಚಿಕರವಾಗಿರುತ್ತದೆ. ಆದರೆ, ರುಚಿ ಸ್ವಲ್ಪ ಬೇರೆ ರೀತಿ ಇರುತ್ತದೆ. ಈ ಭಕ್ಷ್ಯ ಖಂಡಿತ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಈರುಳ್ಳಿ ಮಂಚೂರಿಯನ್ ತಯಾರಿಸುವುದು ಹೇಗೆ, ಇಲ್ಲಿದೆ ರೆಸಿಪಿ.

ಈರುಳ್ಳಿ ಮಂಚೂರಿಯನ್ ಪಾಕವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಈರುಳ್ಳಿ- 5, ಮೆಣಸಿನ ಪುಡಿ- 3 ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಮೈದಾ ಹಿಟ್ಟು- 4 ಚಮಚ, ಕಾರ್ನ್ ಫ್ಲೋರ್- 4 ಚಮಚ, ಎಣ್ಣೆ- ಕರಿಯಲು, ಶುಂಠಿ- 1 ಸಣ್ಣ ಇಂಚು, ಬೆಳ್ಳುಳ್ಳಿ- 5 ಎಸಳು, ಹಸಿಮೆಣಸಿನಕಾಯಿ- 2, ಈರುಳ್ಳಿ- 1, ಸೋಯಾ ಸಾಸ್- 2 ಚಮಚ, ಟೊಮೆಟೊ ಸಾಸ್- 3 ಚಮಚ, ಚಿಲ್ಲಿ ಸಾಸ್- 1 ಚಮಚ, ಕಾರ್ನ್ ಫ್ಲೋರ್‌- 2 ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಈರುಳ್ಳಿಯನ್ನು ಲಂಬವಾಗಿ ಅಥವಾ ಉದ್ದವಾಗಿ ಕತ್ತರಿಸಿ. ಇದಕ್ಕೆ ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ ನೀರು ಬಿಡುವವರೆಗೆ ಮಿಶ್ರಣ ಮಾಡಿ. ನಂತರ ಮೈದಾ ಹಾಗೂ ಕಾರ್ನ್ ಫ್ಲೋರ್ ಹಾಕಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಚಿಕ್ಕದಾಗಿ ಉಂಡೆ ಕಟ್ಟಿ.

ಈಗ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಈರುಳ್ಳಿಯ ಉಂಡೆಯನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ. ಎರಡೂ ಬದಿಗೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಕರಿಯಿರಿ. ಗರಿಗರಿಯಾದ ನಂತರ ಇದನ್ನು ಒಂದು ತಟ್ಟೆಗೆ ಹಾಕಿ. ಸ್ಟವ್ ಅನ್ನು ಮಧ್ಯಮ ಉರಿಯಲ್ಲಿಟ್ಟು ಕರಿಯಬೇಕು.

ಈಗ ಇನ್ನೊಂದು ಬಾಣಲೆಯನ್ನು ಒಲೆ ಮೇಲಿಟ್ಟು 2 ಚಮಚದಷ್ಟು ಎಣ್ಣೆ ಹಾಕಿ. ಇದಕ್ಕೆ ಸಣ್ಣಗೆ ಹೆಚ್ಚಿಟ್ಟ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಹಸಿಮೆಣಸಿನಕಾಯಿ ಹಾಗೂ ಸಣ್ಣದಾಗಿ ಹೆಚ್ಚಿದ 1 ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈ ವೇಳೆ ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಸೋಯಾ ಸಾಸ್, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಹಾಕಿ ಮಿಶ್ರಣ ಮಾಡಿ. ಉರಿ ಕಡಿಮೆಯಿರಲಿ.

ಈಗ 2 ಚಮಚ ಕಾರ್ನ್ ಫ್ಲೋರ್‌ಗೆ ಸ್ವಲ್ಪ ನೀರು ಸೇರಿಸಿ ಬೆರೆಸಿ. ಇದನ್ನು ಈರುಳ್ಳಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಬಹುದು. ನಂತರ ಕರಿದಿರುವ ಈರುಳ್ಳಿಯನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಈರುಳ್ಳಿ ಮಂಚೂರಿಯನ್ ಸವಿಯಲು ಸಿದ್ಧ.

ಸಂಜೆ ಸ್ನಾಕ್ಸ್‌ಗೆ ಏನಾದರೂ ತಿಂಡಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ ರುಚಿಕರವಾದ ಈರುಳ್ಳಿ ಮಂಚೂರಿಯನ್ ತಯಾರಿಸಿ. ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ.

Whats_app_banner