ಅನ್ನ, ಚಪಾತಿ, ಪಲಾವ್ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್ ಟೊಮೆಟೊ ಮಸಾಲೆ ಗ್ರೇವಿ: ಈ ರೆಸಿಪಿ ಮಾಡುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ
ಅನ್ನ, ಚಪಾತಿ, ದೋಸೆ, ಪಲಾವ್, ಬಿರಿಯಾನಿ ಸೇರಿದಂತೆ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್ ಟೊಮೆಟೊ ಮಸಾಲೆ ಗ್ರೇವಿ. ಬಹಳ ರುಚಿಕರವಾದ ಈ ಗ್ರೇವಿ ಮಾಡುವುದು ತುಂಬಾನೇ ಸಿಂಪಲ್. ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕು ಎನಿಸುತ್ತದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಬಿರಿಯಾನಿ, ಚಪಾತಿ, ಪಲಾವ್, ಅನ್ನ, ದೋಸೆ ಹೀಗೆ ಎಲ್ಲದಕ್ಕೂ ಟೊಮೆಟೊ ಮಸಾಲೆ ಕರಿ ಜತೆ ತಿನ್ನುವುದರಿಂದ, ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ದಿನಾ ಒಂದೇ ರೀತಿಯ ಗ್ರೇವಿ ಮಾಡುವುದಕ್ಕಿಂತ ಕೊಂಚ ವಿಭಿನ್ನವಾಗಿ ಕರಿ ಮಾಡಬಹುದು. ಟೊಮೆಟೊ ಮಸಾಲೆ ಗ್ರೇವಿಯು ಅನ್ನ, ಚಪಾತಿ, ಪಲಾವ್ ಎಲ್ಲದಕ್ಕೂ ಸೂಪರ್ ಕಾಂಬಿನೇಷನ್ ಎಂದರೆ ತಪ್ಪಿಲ್ಲ. ಬಹಳ ರುಚಿಕರವಾಗಿರುವ ಈ ಖಾದ್ಯವನ್ನು ತಯಾರಿಸುವುದು ತುಂಬಾನೇ ಸಿಂಪಲ್. ಈ ರೆಸಿಪಿ ತಯಾರಿಸುವುದು ಹೇಗೆ, ಇಲ್ಲಿದೆ ಪಾಕವಿಧಾನ.
ಟೊಮೆಟೊ ಮಸಾಲೆ ಗ್ರೇವಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಟೊಮೆಟೊ – 4, ಕಡಲೆಕಾಯಿ- ಎರಡು ಚಮಚ, ತೆಂಗಿನತುರಿ- ಒಂದು ಟೀ ಚಮಚ, ಕೊತ್ತಂಬರಿ ಸೊಪ್ಪು- ಒಂದು ಟೀ ಚಮಚ, ಲವಂಗ- ನಾಲ್ಕು, ದಾಲ್ಚಿನ್ನಿ- ಸಣ್ಣ ತುಂಡು, ಏಲಕ್ಕಿ- ಮೂರು, ಜೀರಿಗೆ - ಅರ್ಧ ಚಮಚ, ಮೆಂತ್ಯ ಕಾಳು- ಕಾಲು ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ಬಿಳಿ ಎಳ್ಳು- ಒಂದು ಟೀ ಚಮಚ, ಕಸೂರಿ ಮೇತಿ- ಒಂದು ಟೀ ಚಮಚ, ಈರುಳ್ಳಿ- ಎರಡು, ಎಣ್ಣೆ- ಎರಡು ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಕರಿಬೇವು- 1 ಹಿಡಿ, ಮೆಣಸಿನಪುಡಿ- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಮೆಣಸಿನಕಾಯಿ- ನಾಲ್ಕು, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಹುಣಸೆಹಣ್ಣಿನ ಹುಳಿ- 1 ನಿಂಬೆ ಗಾತ್ರ.
ಪಾಕವಿಧಾನ: ಟೊಮೆಟೊ ಮಸಾಲೆ ಗ್ರೇವಿಯನ್ನು ತಯಾರಿಸಲು ಮೊದಲಿಗೆ ಮಸಾಲೆ ಪೇಸ್ಟ್ ತಯಾರಿಸಿ.
- ಕಡಾಯಿಯನ್ನು ಸ್ಟೌವ್ ಮೇಲೆ ಇರಿಸಿ, ಕಡಲೆಕಾಯಿ ಸೇರಿಸಿ ಹುರಿಯಿರಿ.
- ಹಸಿ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಲವಂಗ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಮೆಂತ್ಯ, ಕಾಳುಮೆಣಸು, ಎಳ್ಳು, ಕಸೂರಿ ಮೇತಿ ಎಲ್ಲವನ್ನೂ ಸೇರಿಸಿ ಹುರಿಯಿರಿ.
- ಅವುಗಳನ್ನು ಮಿಕ್ಸಿಯಲ್ಲಿ ಹಾಕಿ ಸಾಕಷ್ಟು ನೀರು ಸೇರಿಸಿ ನಿಧಾನವಾಗಿ ರುಬ್ಬಿ ಪಕ್ಕಕ್ಕೆ ಇಡಿ.
- ಈಗ ಟೊಮೆಟೊವನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ.
- ಟೊಮೆಟೊಗೆ ಫೋರ್ಕ್‌ನಿಂದ ರಂಧ್ರಗಳನ್ನು ಹಾಕಿ.
- ಈಗ ಕಡಾಯಿಯನ್ನು ಸ್ಟೌವ್ ಮೇಲಿಟ್ಟು, ಅದರಲ್ಲಿ ಎಣ್ಣೆಯನ್ನು ಹಾಕಿ.
- ನಂತರ ಈರುಳ್ಳಿಯನ್ನು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
- ಕರಿಬೇವಿನ ಎಲೆಗಳು ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಹುರಿಯಿರಿ.
- ಮೊದಲೇ ರುಬ್ಬಿರುವ ಮಸಾಲೆ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಸ್ವಲ್ಪ ಸಮಯದ ನಂತರ, ಅರಿಶಿನ ಪುಡಿ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
- ಮಿಶ್ರಣಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹುಣಸೆಹಣ್ಣನ್ನು ನೆನೆಸಿ ಅದರ ನೀರನ್ನು ಸೇರಿಸಿ.
- ಮಿಶ್ರಣ ಕುದಿಯುತ್ತಿರುವಾಗ, ಅದಕ್ಕೆ ಕತ್ತರಿಸಿದ ಟೊಮೆಟೊ ತುಂಡುಗಳನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ ಬೇಯಿಸಿ.
- ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
- ಎಣ್ಣೆ ಮೇಲಕ್ಕೆ ತೇಲುತ್ತಿದ್ದರೆ, ಗ್ರೇವಿ ಆಗಿದೆ ಎಂದರ್ಥ. ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ, ಸ್ಟೌವ್ ಆಫ್ ಮಾಡಿ.
ಇಷ್ಟು ಮಾಡಿದರೆ ರುಚಿಕರವಾದ ಟೊಮೆಟೊ ಮಸಾಲೆ ಗ್ರೇವಿ ಸವಿಯಲು ಸಿದ್ಧ. ಇದು ಬಹಳ ರುಚಿಕರವಾಗಿರುತ್ತದೆ. ಅನ್ನ, ದೋಸೆ, ಚಪಾತಿ, ಪಲಾವ್ ಸೇರಿದಂತೆ ಎಲ್ಲದಕ್ಕೂ ಚೆನ್ನಾಗಿರುತ್ತದೆ. ಒಮ್ಮೆ ಈ ರೆಸಿಪಿ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗಬಹುದು.
ವಿಭಾಗ