Idli History: ದಕ್ಷಿಣ ಭಾರತದಲ್ಲಿ ಸಖತ್ ಫೇಮಸ್ ಆಗಿರೋ ಇಡ್ಲಿ ಹುಟ್ಟಿದ್ದೆಲ್ಲಿ, ಮೂಲ ಯಾವುದು? ಇಲ್ಲಿದೆ ಅಚ್ಚರಿಯ ಸಂಗತಿ
ದಕ್ಷಿಣ ಭಾರತದ ಪಾಕಪದ್ಧತಿ ಹಾಗೂ ಉತ್ತರ ಭಾರತ ಶೈಲಿಯ ಪಾಕಪದ್ಧತಿ ಸಂಪೂರ್ಣ ಬೇರೆ ಬೇರೆಯಾಗಿದೆ. ಅದರಲ್ಲೂ ಇಡ್ಲಿ ಅಂದ್ರೆ ನೆನಪಾಗುವುದೇ ದಕ್ಷಿಣ ಭಾರತೀಯನ್ನರು. ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಮನೆ-ಹೋಟೆಲ್‌ಗಳಲ್ಲಿ ಇದು ತುಂಬಾನೇ ಫೇಮಸ್. ಇಡ್ಲಿಯ ಮೂಲದ ಬಗ್ಗೆ ಗೊತ್ತಾದ್ರೆ ಖಂಡಿತಾ ನೀವು ಅಚ್ಚರಿ ಪಡ್ತೀರಾ. (ಬರಹ: ಪ್ರಿಯಾಂಕ ಗೌಡ)

ದಕ್ಷಿಣ ಭಾರತೀಯ ಶೈಲಿಯ ಉಪಹಾರ ಅಂದ್ರೆ ಮೊದಲು ನೆನಪಾಗೋದೇ ಇಡ್ಲಿ. ಪೌಷ್ಠಿಕ ಆಹಾರವಾಗಿರುವ ಇಡ್ಲಿಯನ್ನು ಬಹುಶಃ ದಕ್ಷಿಣ ಭಾರತೀಯರು ತಯಾರಿಸದ ಮನೆಗಳೇ ಇರಲಿಕ್ಕಿಲ್ಲ. ಹಾಗಿದ್ದರೆ ಇಡ್ಲಿಯ ಮೂಲ ಯಾವುದಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ದಕ್ಷಿಣ ಭಾರತದ ಮನೆ-ಮನೆಗಳಲ್ಲಿ ತಯಾರಾಗುವ ಈ ಭಕ್ಷ್ಯವು ಮೂಲತಃ ನಮ್ಮದಲ್ಲ. ಇದರ ಮೂಲ ಆಗ್ನೇಯ ಏಷ್ಯಾ ಎಂದರೆ ನೀವು ನಂಬಲೇಬೇಕು.
ಹೌದು, 17ನೇ ಶತಮಾನದ ನಂತರದಲ್ಲಿ ತಮಿಳುನಾಡು ರಾಜ್ಯವು ಇಡ್ಲಿಯ ಇರುವಿಕೆಯನ್ನು ಹೊಂದಿದೆ. ಆದರೂ ಇಡ್ಲಿಯು ಇಂಡೋನೇಷ್ಯಾದಿಂದ ಬಂದಿರುವ ಸಾಧ್ಯತೆಗಳಿವೆ ಎಂದು ಪ್ರಸಿದ್ಧ ಆಹಾರ ಇತಿಹಾಸಕಾರ ಕೆಟಿ ಆಚಾರ್ಯ ಅವರು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸಿದ್ದಾರೆ. ಇದು 13ನೇ ಶತಮಾನದಲ್ಲಿ ಹಿಂದೂ ಸಾಮ್ರಾಜ್ಯದಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ.
ಏನಿದು ಇಡ್ಲಿ ಕಥೆ?
ಶೈಲೇಂದ್ರ, ಇಸ್ಯಾನ ಮತ್ತು ಸಂಜಯನ ರಾಜವಂಶಗಳು ರಾಜಮನೆತನದ ಅಡುಗೆ ಮನೆಗಳಲ್ಲಿ ಅಡುಗೆ ಮಾಡಲು ಭಾರತದಿಂದ ಬಾಣಸಿಗರನ್ನು ನೇಮಿಸಿಕೊಂಡರು. ಈ ವೇಳೆ ಹೊಸ ಪಾಕವಿಧಾನವನ್ನು ಮಾಡಿದ ಬಾಣಸಿಗರು ಇದಕ್ಕೆ ಕೆಡ್ಲಿ ಎಂದು ಹೆಸರಿಟ್ಟರು. ಬಳಿಕ ತಮ್ಮ ಊರಿಗೆ (ದೇಶಕ್ಕೆ) ಬಂದಾಗ ಈ ಪಾಕವಿಧಾನವನ್ನು ಇತರರಿಗೆ ಪರಿಚಯಿಸಿದರು ಎಂದು ನಂಬಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ, ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಿದ್ದ ಇಂಡೋನೇಷಿಯಾದ ರಾಜರು ಇಡ್ಲಿಯನ್ನು ದಕ್ಷಿಣ ಭಾರತೀಯರಿಗೆ ಪರಿಚಯಿಸಿದರು ಎಂದೂ ನಂಬಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ, ಇಡ್ಲಿಯು ಅರಬ್ ವ್ಯಾಪಾರಿಗಳ ಮುಖೇನ ನಮ್ಮ ದೇಶಕ್ಕೆ ಕಾಲಿಟ್ಟಿತು ಎಂದು ನಂಬಲಾಗಿದೆ. ಅರಬರಿಗೆ ಹಲಾಲ್ ಆಹಾರದ ಅಗತ್ಯವಿದ್ದುದರಿಂದ, ಅವರು ತಿನ್ನಲು ಚಪ್ಪಟೆಯಾದ ಅಕ್ಕಿ ಚೆಂಡಿನ ಪಾಕವಿಧಾನವನ್ನು ಅನ್ವೇಷಿಸಿದರು ಎಂದು ಹೇಳಲಾಗಿದೆ.
ಇಡ್ಲಿಯ ಇನ್ನೊಂದು ಪ್ರಕಾರದಲ್ಲಿ ಇದನ್ನು ಇದ್ದಲಗೆ ಎಂದು ಕರೆಯಲಾಗುತ್ತದೆ. ಇದು 9ನೇ ಮತ್ತು 13ನೇ ಶತಮಾನದ ನಡುವೆ ಬರೆಯಲ್ಪಟ್ಟ ಗ್ರಂಥಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿವೆ. 9ನೇ ಶತಮಾನದಲ್ಲಿ ಶಿವಕೋಟಿಯಾಚಾರ್ಯರು ಬರೆದ ವಡ್ಡಾರಾಧನೆ ಕನ್ನಡ ಪಠ್ಯದಲ್ಲಿ ಉಲ್ಲೇಖಿತವಾಗಿದೆ. ಅಲ್ಲದೆ, 13ನೇ ಶತಮಾನದಲ್ಲಿ ರಾಜ ಸೋಮಶರ ಅವರು ‘ಇಡ್ಡರಿಕ’ವನ್ನು ಬರೆದಿದ್ದಾರೆ. ಇದು ಅಕ್ಕಿಯ ಬದಲಿಗೆ ಕಪ್ಪು ಬೇಳೆ ಮತ್ತು ಮಜ್ಜಿಗೆಯನ್ನು ಬಳಸಿ ತಯಾರಿಸಲಾದ ಖಾದ್ಯದ ಬಗ್ಗೆ ತಿಳಿಸಲಾಗಿದೆ. ಈ ಪ್ರಾಚೀನ ಪಾಕವಿಧಾನದಲ್ಲಿ ರಾತ್ರಿ ಪೂರ ಹಿಟ್ಟನ್ನು ಹುದುಗಿಸುವ (ಹುಳಿ ಬರಿಸುವ) ತಂತ್ರವನ್ನು ಬಳಸಲಾಗಿಲ್ಲ. ಅಲ್ಲದೆ, ಇಡ್ಲಿ ಹಿಟ್ಟನ್ನು ಆವಿಯಲ್ಲಿ ಸಹ ಬೇಯಿಸಲಿಲ್ಲ ಎನ್ನಲಾಗಿದೆ.
ಇನ್ನು ಇಡ್ಲಿಯ ಮೂಲ ಭಾರತವಲ್ಲ ಎಂಬ ಬಗ್ಗೆ ಜನಪ್ರಿಯ ಚೀನೀ ಪರಿಶೋಧಕ ಕ್ಸುವಾನ್‌ಜಾಂಗ್ ಅವರ ಲಿಖಿತ ಪಠ್ಯಗಳಿಂದಲೂ ತಿಳಿದು ಬಂದಿದೆ. ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆದಿದ್ದಾರೆ- ಸ್ಟೀಮಿಂಗ್ ಒಂದು ತಂತ್ರವಾಗಿದ್ದು, ಇದನ್ನು ಭಾರತವು ಅಳವಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. 17ನೇ ಶತಮಾನದವರೆಗೂ ತಮಿಳುನಾಡಿನ ಇತಿಹಾಸದ ಪುಟಗಳಲ್ಲಿ ಎಲ್ಲಿಯೂ ಇಡ್ಲಿಯ ಬಗ್ಗೆ ಉಲ್ಲೇಖವಿಲ್ಲ. 1 ನೇ ಶತಮಾನದಿಂದಲೂ ಇಲ್ಲಿನ ಜನರು ದೋಸೆಗಳನ್ನು ಸೇವಿಸುತ್ತಿದ್ದರು ಎಂಬುದಕ್ಕೆ ತಮಿಳು ಸಾಹಿತ್ಯ ಸಂಗಮ್ ನಲ್ಲಿ ಪುರಾವೆಯಿದೆ.

ವಿಭಾಗ