Idli Manchurian: ಇಡ್ಲಿ ತಿಂದು ತಿಂದು ಬೇಸರ ಆಗಿದ್ಯಾ, ಇದ್ರಿಂದ ಮಂಚೂರಿಯನ್‌ ಮಾಡಿ ನೋಡಿ; ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  Idli Manchurian: ಇಡ್ಲಿ ತಿಂದು ತಿಂದು ಬೇಸರ ಆಗಿದ್ಯಾ, ಇದ್ರಿಂದ ಮಂಚೂರಿಯನ್‌ ಮಾಡಿ ನೋಡಿ; ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ

Idli Manchurian: ಇಡ್ಲಿ ತಿಂದು ತಿಂದು ಬೇಸರ ಆಗಿದ್ಯಾ, ಇದ್ರಿಂದ ಮಂಚೂರಿಯನ್‌ ಮಾಡಿ ನೋಡಿ; ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ

ಇಡ್ಲಿ ಎಂದಾಕ್ಷಣ ಮಕ್ಕಳು ಮುಖ ಗಂಟಿಕ್ಕುವುದು ಸಹಜ. ಹಾಗಾಗಿ ಮಕ್ಕಳಿಗೆ ಏನು ತಿಂಡಿ ಮಾಡೋದಪ್ಪಾ ಎಂದು ತಾಯಂದಿರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಇಡ್ಲಿ ತಿನ್ನದೇ ಇರುವ ಮಕ್ಕಳಿಗಾಗಿಯೇ ಇಲ್ಲಿದೆ ಸ್ಪೆಷಲ್‌ ಇಡ್ಲಿ ಮಂಚೂರಿಯನ್‌ ರೆಸಿಪಿ. ಇಡ್ಲಿಯಲ್ಲಿ ಮಂಚೂರಿಯನ್‌ ಮಾಡಿಕೊಟ್ಟರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಇಡ್ಲಿ ಮಂಚೂರಿಯನ್‌
ಇಡ್ಲಿ ಮಂಚೂರಿಯನ್‌

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಾಹಾರಕ್ಕೆ ಬೆಸ್ಟ್‌ ತಿನಿಸು ಎಂದರೆ ಇಡ್ಲಿ. ಬಹುತೇಕ ಹೋಟೆಲ್‌ ಮನೆಗಳಲ್ಲಿ ಇಡ್ಲಿ ಮಾಡುತ್ತಾರೆ. ಆದರೆ ಪದೇ ಪದೇ ಇಡ್ಲಿ ಮಾಡಿದ್ರೆ ಮಕ್ಕಳ ಬೇಸರ ಮಾಡಿಕೊಳ್ಳುತ್ತಾರೆ. ತಿನ್ನುವುದಿಲ್ಲ ಎಂದು ಹಟ ಹಿಡಿಯುತ್ತಾರೆ. ಅದಕ್ಕಾಗಿ ಇಡ್ಲಿಯಲ್ಲೇ ಸ್ಪೆಷಲ್‌ ಏನಾದ್ರೂ ಮಾಡಿ. ಇಡ್ಲಿ ಬಳಸಿಕೊಂಡು ಡಿಫ್ರೆಂಟಾಗಿ ರೆಸಿಪಿ ತಯಾರಿಸಿದ್ರೆ ಮಕ್ಕಳಾದಿಯಾಗಿ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಅಂತಹ ರೆಸಿಪಿಗಳಲ್ಲಿ ಇಡ್ಲಿ ಮಂಚೂರಿಯನ್‌ ಕೂಡ ಒಂದು.

ಇಡ್ಲಿ ಮಂಚೂರಿಯನ್‌ ಮಾಡಿದಾಗ ಚಟ್ನಿ ಮಾಡಬೇಕು ಎಂದೇನಿಲ್ಲ. ಇದ್ರಿಂದ ನಿಮಗೆ ಸಮಯವೂ ಉಳಿಯುತ್ತದೆ. ಬೆಳಗಿನ ಉಪಾಹಾರದಲ್ಲಿ ಇಡ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು, ಹಾಗಾಗಿ ಈ ರೆಸಿಪಿ ತಯಾರಿಸಿ ಮಕ್ಕಳಿಗೆ ತಿನ್ನಲು ಕೊಟ್ಟು ನೋಡಿ. ಇದನ್ನು ಸುಲಭವಾಗಿ ಹಾಗೂ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದು.

ಇಡ್ಲಿ ಮಂಚೂರಿಯನ್‌

ಬೇಕಾಗುವ ಸಾಮಗ್ರಿಗಳು: ಇಡ್ಲಿ - 5, ಟೊಮೆಟೊ - 1, ಹುಣಸೆಹಣ್ಣು - ಚಿಕ್ಕ ಉಂಡೆ, ಗರಂಮಸಾಲಾ ಪುಡಿ - ಒಂದು ಚಮಚ, ಉಪ್ಪು - ರುಚಿಗೆ, ಈರುಳ್ಳಿ - ಅರ್ಧ ತುಂಡು, ಮೆಣಸಿನಕಾಯಿ - ಎರಡು, ಅರಿಶಿನ - ಅರ್ಧ ಚಮಚ, ಎಣ್ಣೆ - ಎರಡು ಚಮಚ, ಜೀರಿಗೆ - ಅರ್ಧ ಚಮಚ, ಸಾಸಿವೆ - ಅರ್ಧ ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ

ತಯಾರಿಸುವ ವಿಧಾನ: ಬೇಯಿಸಿಕೊಂಡ ಇಡ್ಲಿಯನ್ನು ಒಂದು ತಟ್ಟೆಯಲ್ಲಿ ಹಾಕಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಗ್ಯಾಸ್‌ ಸ್ಟೌ ಮೇಲೆ ಒಂದು ಪಾತ್ರೆ ಇರಿಸಿ, ಸ್ವಲ್ಪ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿಯಾಗಲು ಬಿಡಿ. ಜೀರಿಗೆ ಮತ್ತು ಸಾಸಿವೆ ಹಾಕಿ. ಅವು ಸಿಡಿಯುವಾಗ ಟೊಮೆಟೊ ಪೇಸ್ಟ್‌, ಈರುಳ್ಳಿ ಪೇಸ್ಟ್‌ ಹಾಗೂ ಹಸಿಮೆಣಸಿನಕಾಯಿ ಪೇಸ್ಟ್‌ ಸೇರಿಸಿ, ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರಿನಲ್ಲಿ ಹುಣಸೆಹಣ್ಣು ನೆನೆಸಿಟ್ಟುಕೊಂಡಿರಿ. ಹುಣಸೆಹಣ್ಣನ್ನು ಕಿವುಚಿ ರಸ ಹಿಂಡಿಕೊಳ್ಳಿ. ದಪ್ಪ ಪೇಸ್ಟ್‌ ಅನ್ನು ಎಣ್ಣೆಗೆ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಗರಂ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಹಾಕಿ ಮತ್ತೆಗಾಗುವವರೆಗೆ ಬೇಯಿಸಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕತ್ತರಿಸಿಕೊಂಡ ಇಡ್ಲಿಯನ್ನು ಈ ಮಿಶ್ರಣಕ್ಕೆ ಹಾಕಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವೂ ಒಂದು ಹದಕ್ಕೆ ಬರುವವರೆಗೆ ಸ್ಟೌ ಮೇಲೆ ಇರಿಸಿ. ನಂತರ ಪ್ಲೇಟ್‌ಗೆ ಸರ್ವ್‌ ಮಾಡಿ, ಅದರ ಮೇಲೆ ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದರೆ ಇಡ್ಲಿ ಮಂಚೂರಿಯನ್‌ ತಿನ್ನಲು ಸಿದ್ಧ.

ಬೆಳಗಿನ ಹೊತ್ತು ಆರೋಗ್ಯಕರ ಉಪಾಹಾರ ಸೇವಿಸುವುದು ಬಹಳ ಮುಖ್ಯ. ಈ ವಿಧದಲ್ಲಿ ಇಡ್ಲಿ ಮಂಚೂರಿಯನ್‌ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಮಕ್ಕಳು ಕೂಡ ಬೇಡ ಎನ್ನದೇ ತಿನ್ನುತ್ತಾರೆ. ಇದನ್ನು ನೀವು ಮಕ್ಕಳ ಬಾಕ್ಸ್‌ಗೆ ಕೂಡ ಹಾಕಬಹುದು.

ಈ ಮಂಚೂರಿಯನ್‌ ಮಾಡುವುದು ತುಂಬಾ ಸುಲಭ. ಇಡ್ಲಿಯನ್ನು ಬೇಯಿಸಿಟ್ಟುಕೊಂಡರೆ ಹತ್ತೇ ನಿಮಿಷದಲ್ಲಿ ಮಂಚೂರಿಯನ್‌ ಮಾಡಬಹುದು. ಒಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ. ನಿಮಗೆಲ್ಲರಿಗೂ ಖಂಡಿತ ಇಷ್ಟವಾಗುತ್ತದೆ.

Whats_app_banner