ಸಿಹಿತಿಂಡಿ ತಿನ್ನುವ ಕಡುಬಯಕೆಯಾದರೆ ತಯಾರಿಸಿ ರುಚಿಕರ ಮಖಾನಾ ಲಾಡು: ಇದರ ಆರೋಗ್ಯ ಪ್ರಯೋಜನ ಹಲವು, ಇಲ್ಲಿದೆ ರೆಸಿಪಿ
ಸಿಹಿತಿಂಡಿ ತಿನ್ನುವ ಕಡುಬಯಕೆ ಉಂಟಾದರೆ ಈ ಆರೋಗ್ಯಕರ ರೆಸಿಪಿ ಟ್ರೈ ಮಾಡಬಹುದು. ಮಖಾನಾ ಲಾಡು ತಿನ್ನುವುದರಿಂದ ದೇಹಕ್ಕೆ ಶಕ್ತಿ ತುಂಬುತ್ತದೆ. ಮಖಾನಾ ಲಾಡು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.

ಮಖಾನಾವನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇದರಿಂದ ತಯಾರಿಸಿದ ಲಡ್ಡುಗಳು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಮಖಾನಾ ಲಾಡು ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಒಣ ಹಣ್ಣುಗಳು ಮತ್ತು ಬೀಜಗಳನ್ನು ಬೆರೆಸಿ ಈ ಲಾಡು ತಯಾರಿಸುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೆ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಸಿಹಿತಿಂಡಿ ತಿನ್ನುವ ಕಡುಬಯಕೆ ಉಂಟಾದರೆ ಈ ಆರೋಗ್ಯಕರ ರೆಸಿಪಿ ಟ್ರೈ ಮಾಡಬಹುದು. ಮಖಾನಾ ಲಾಡು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.
ಮಖಾನಾ ಲಾಡು ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಮಖಾನಾ - ಮೂರು ಕಪ್, ತುಪ್ಪ - ನಾಲ್ಕು ಚಮಚ, ಬಾದಾಮಿ - ಅರ್ಧ ಕಪ್, ಗೋಡಂಬಿ - ಅರ್ಧ ಕಪ್, ತೆಂಗಿನಕಾಯಿ ತುರಿ - ಒಂದು ಕಪ್, ಬೆಲ್ಲ - ಒಂದೂವರೆ ಕಪ್, ನೀರು - ಅರ್ಧ ಕಪ್.
ಮಾಡುವ ವಿಧಾನ: ಒಲೆಯ ಮೇಲೆ ಹುರಿಯಲು ಪ್ಯಾನ್ ಇಟ್ಟು ಅದಕ್ಕೆ ಮಖಾನಾ ಸೇರಿಸಿ ಅದು ಗರಿಗರಿಯಾಗುವವರೆಗೆ ಹುರಿಯಿರಿ. ಹುರಿದ ಮಖಾನಾವನ್ನು ತೆಗೆದು ಪಕ್ಕಕ್ಕೆ ಇಡಿ. ಈಗ ಅದೇ ಕಡಾಯಿಯಲ್ಲಿ ಎರಡು ಚಮಚ ತುಪ್ಪ ಸೇರಿಸಿ. ಅದಕ್ಕೆ ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈಗ ತೆಂಗಿನಕಾಯಿ ತುರಿಯನ್ನು ಸೇರಿಸಿ ಹುರಿಯಿರಿ. ಹುರಿದ ಬಳಿಕ ಅದನ್ನು ತಟ್ಟೆಗೆ ಹಾಕಿ ಪಕ್ಕಕ್ಕೆ ಇಡಿ.
ಈಗ ಮತ್ತೊಂದು ಕಡಾಯಿಯನ್ನು ಒಲೆಯ ಮೇಲೆ ಇರಿಸಿ ಬೆಲ್ಲದ ಪುಡಿ ಮತ್ತು ಅರ್ಧ ಕಪ್ ನೀರನ್ನು ಬೆರೆಸಿ ಸ್ವಲ್ಪ ಅಂಟಾಗುವವರೆಗೆ ಬೇಯಿಸಿ ಒಲೆಯನ್ನು ಆಫ್ ಮಾಡಿ. ನಂತರ ಹುರಿದ ಮಖಾನಾವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಪುಡಿಯನ್ನು ಒಂದು ಬಟ್ಟಲಿನಲ್ಲಿ ಬೆರೆಸಿ.
ನಂತರ ಅದೇ ಮಿಕ್ಸಿಯಲ್ಲಿ ಹುರಿದ ಗೋಡಂಬಿ, ಬಾದಾಮಿ, ತೆಂಗಿನಕಾಯಿ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಖಾನಾ ಪುಡಿಗೆ ಬೆರೆಸಿ. ಈಗ ಮಿಶ್ರಣಕ್ಕೆ ಎರಡು ಚಮಚ ತುಪ್ಪ ಮತ್ತು ಬೆಲ್ಲವನ್ನು ಪಾಕವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅವುಗಳನ್ನು ಉಂಡೆಯಂತೆ ಕಟ್ಟಿದರೆ ರುಚಿಕರ ಮಖಾನಾ ಲಾಡು ತಿನ್ನಲು ಸಿದ್ಧ.
ಮಖಾನಾ ಆರೋಗ್ಯ ಪ್ರಯೋಜನಗಳು
ಮಖಾನಾ ಲಾಡು ತಯಾರಿಸುವುದು ತುಂಬಾ ಸರಳ. ಇದು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ಹಲವು ಲಭಾಗಳಿವೆ. ಮಖಾನಾ ಲಾಡು ತಿನ್ನುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ವಿಶೇಷವಾಗಿ ಮಕ್ಕಳಿಗೆ, ಮಖಾನಾ ಲಾಡು ಆರೋಗ್ಯಕ್ಕೆ ಪ್ರಯೋಜನಕಾರಿ.
ಮಖಾನಾ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಮಖಾನಾದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ದೇಹದಲ್ಲಿನ ಫ್ರೀ ರಾಡಿಕಲ್‌ಗಳಿಂದ ಹೃದಯವನ್ನು ರಕ್ಷಿಸುತ್ತವೆ. ಅಲ್ಲದೆ, ಮಖಾನಾಗಳು ಕಬ್ಬಿಣ ಅಂಶದಿಂದ ಸಮೃದ್ಧವಾಗಿವೆ. ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಮಖಾನಾ ಬಹಳ ಒಳ್ಳೆಯದು. ಮಖಾನಾದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವೂ ಸಮೃದ್ಧವಾಗಿದೆ. ಆದ್ದರಿಂದ, ಮಖಾನಾವನ್ನು ಸೇವಿಸುವುದರಿಂದ ಈ ಎಲ್ಲಾ ಪ್ರಯೋಜನ ಪಡೆಯಬಹುದು.
