Jack fruits Recipes: ಘಮಘಮಿಸೋ, ಬಾಯಲ್ಲಿ ನೀರೂರಿಸೋ ಹಲಸಿನ ರಸಂ, ಬನ್ಸ್, ಪಾಯಸ ರೆಸಿಪಿಗಳು ನಿಮಗಾಗಿ ಇಲ್ಲಿದೆ; ನೀವು ಒಮ್ಮೆ ಟ್ರೈ ಮಾಡಿ
Jack fruits Recipes: ಇದು ಹಲಸಿನ ಸೀಸನ್. ತಣ್ಣಗೆ ಮಳೆ ಸುರಿಯುತ್ತಿರುವ ಘಮ್ ಎನ್ನಿಸುವ ಹಲಸಿನ ಹಣ್ಣು ನಾಲಿಗೆಯನ್ನು ಸೆಳೆಯುತ್ತದೆ. ಆದರೆ ಹಲಸಿನ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ರೆಸಿಪಿಗಳನ್ನು ತಯಾರಿಸಿ ತಿನ್ನುವುದು ಉತ್ತಮ. ನೀವು ಕಂಡಿರದ, ಕೇಳಿರದ ಹಲಸಿನ ರೆಸಿಪಿಗಳು ಇಲ್ಲಿವೆ ನೋಡಿ. ನೀವು ಮನೆಯಲ್ಲಿ ತಯಾರಿಸಿ ತಿನ್ನಿ.
ಈಗ ಎಲ್ಲಿ ನೋಡಿದರೂ ಹಲಸಿನ ವಾಸನೆ ಘಮ್ ಎನ್ನುತ್ತಿದೆ. ಎಲ್ಲರ ಮನೆಯಲ್ಲೂ ಹಲಸಿನ ಹಣ್ಣಿನ ತರಹೇವಾರಿ ಖಾದ್ಯಗಳು. ಬಾಯಲ್ಲಿ ನೀರೂರಿಸುವ ರುಚಿ ರುಚಿಕರ ತಿನಿಸುಗಳು. ಒಮ್ಮೆಯಾದರೂ ಹೊಸ ರುಚಿಯನ್ನು ಸವಿಯಬೇಕು ಎನ್ನುವವರಿಗೆ ಇಲ್ಲಿದೆ ಸಿಂಪಲ್ ರೆಸಿಪಿಗಳು.
ಹಲಸಿನಹಣ್ಣಿನ ರಸಂ
ಹಲಸಿನ ಕಾಯಿ ತೊಳೆಗಳನ್ನು ಬಿಡಿಸಿಕೊಂಡು ಅದಕ್ಕೆ ಉಪ್ಪು, ಖಾರದ ಪುಡಿ, ರಸಂ ಪುಡಿ ಸೇರಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು.
ನಂತರ ಸಾರು ಮಾಡುವ ಪಾತ್ರೆಗೆ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಒಣಮೆಣಸಿನಕಾಯಿ ಹಾಕಿಕೊಂಡು ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಕುದಿಸಬೇಕು. ಹದಕ್ಕೆ ತಕ್ಕಂತೆ ನೀರು ಹಾಕಿಕೊಳ್ಳಬಹುದು, ಸ್ವಲ್ಪ ಹುಣಸೆರಸವನ್ನು ಸೇರಿಸಬಹುದು. ಚೆನ್ನಾಗಿ ಕುದಿದ ಬಳಿಕ ಸವಿಯಲು ಸಿದ್ಧ.
ಹಲಸಿನ ಹಣ್ಣಿನ ಕಡುಬು
ಬೇಕಾಗುವ ಸಾಮಗ್ರಿಗಳು: ಹಲಸಿನ ಹಣ್ಣು, ಅಕ್ಕಿ, ತೆಂಗಿನತುರಿ, ಬೆಲ್ಲ, ಉಪ್ಪು
ವಿಧಾನ: ಕತ್ತರಿಸಿದ ಹಲಸಿನ ಹಣ್ಣು, ಎರಡು ಬಟ್ಟಲು ದೋಸೆ ಅಕ್ಕಿಯನ್ನು ಎರಡು ಗಂಟೆ ಕಾಲ ನೆನೆಸಿಡಬೇಕು. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು. ಅಕ್ಕಿ ಹಾಗೂ ಅರ್ಧ ಕಪ್ ಕಾಯಿತುರಿ, ಚೂರು ಬೆಲ್ಲ ಹಾಗೂ ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ ನಂತರ ತರಿತರಿಯಾಗಿ ರುಬ್ಬಿದ ಹಣ್ಣಿನ ತೊಳೆಗಳನ್ನು ಸೇರಿಸಿ ಚೆನ್ನಾಗಿ ಕಲಸಿ ಗಟ್ಟಿ ಹಿಟ್ಟನ್ನು ಸಿದ್ಧಮಾಡಿಕೊಳ್ಳಬೇಕು. ಬಳಿಕ ಬಾಳೆ ಎಲೆಗೆ ಹಿಟ್ಟನ್ನು ದಪ್ಪವಾಗಿ ಸವರಿಕೊಂಡು ಮಡಚಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಬೇಕು. ನಂತರ ಬೆಂದ ವಾಸನೆ ಬರುತ್ತದೆ. ತುಪ್ಪದೊಂದಿಗೆ ಕಡುಬು ಸವಿದರೆ ಚೆನ್ನಾಗಿರಲಿದೆ.
ಹಣ್ಣಿನ ಬನ್ಸ್
ಸಾಮಗ್ರಿಗಳು: ನೀರು ಹಾಕದೇ ರುಬ್ಬಿಕೊಂಡ 1ಕಪ್ ಹಲಸಿನ ಹಣ್ಣಿನ ರಸ , 4 ಚಮಚ ಸಕ್ಕರೆ , 1/2 ಕಪ್ ಬೆಲ್ಲ ಗೋಧಿಹಿಟ್ಟು 1 ಕಪ್ , ಅಡುಗೆ ಸೋಡ 1/4 ಟೀ ಚಮಚ ಅಥವಾ ಇನೋ 1/2 ಟೀ ಚಮಚ, 1/4 ಚಮಚ ಜೀರಿಗೆ, ರುಚಿಗೆ ಉಪ್ಪು.
ವಿಧಾನ: ಎಲ್ಲ ಸಾಮಗ್ರಿಗಳನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿಕೊಂಡು ನೀರು ಸೇರಿಸಿ ಕಲಸಿಕೊಳ್ಳಬೇಕು. ಚೆನ್ನಾಗಿ ನಾದ ಬೇಕು. ಅರ್ಧ ಗಂಟೆಯ ನಂತರ ಪೂರಿಯ ಆಕಾರದಲ್ಲಿ ಲಟ್ಟಿಸಿ ಕಾದ ಎಣ್ಣೆಗೆ ಬಿಡಬೇಕು. ಮಧ್ಯಮ ಉರಿಯಲ್ಲಿ ಕರಿಯಿರಿ. ಪೂರಿ ತರಹ ಉಬಬುತ್ತದೆ. ಇದಕ್ಕೆ ನಿಮಗಿಷ್ಟವಾದ ಕರಿ ಅಥವಾ ಚಟ್ನಿಯೊಂದಿಗೆ ಸವಿಯಿರಿ.
ಹಲಸಿನ ಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿಗಳು: ಹಲಸಿನ ಹಣ್ಣು, ಬೆಲ್ಲ, ಕಾಯಿ ತುರಿ, ಅಕ್ಕಿ, ತುಪ್ಪ, ದ್ರಾಕ್ಷಿ ಗೋಡಂಬಿ
ವಿಧಾನ : ಹಣ್ಣಿನ ತೊಳೆ ಸಣ್ಣ ಹೆಚ್ಚಿ ಒಂದು ಪಾತ್ರೆಗೆ ಹಾಕಿ ಸ್ವಲ್ಪ ಬೆಲ್ಲ ನೀರು ಹಾಕಿ ಬೇಯಿಸಿ.ನಂತರ ಸ್ವಲ್ಪ ಕಾಯಿ ತುರಿ, ಎರಡು ಚಮಚ ಅಕ್ಕಿ ಸೇರಿಸಿ ರುಬ್ಬಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡುತ್ತಾ ಕುದಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಮಿಕ್ಸ್ ಮಾಡಿ. ನಂತರ ಸವಿಯಿರಿ.
ಚಿತ್ರ, ಲೇಖನ: ಅಕ್ಷರ ಕಿರಣ್
ವಿಭಾಗ