ಉಳಿದ ಅನ್ನವನ್ನು ವ್ಯರ್ಥ ಮಾಡದಿರಿ: ಇದರಿಂದ ತಯಾರಿಸಬಹುದು ರುಚಿಕರವಾದ ಪಕೋಡ, ಇಲ್ಲಿದೆ ರೆಸಿಪಿ
ಅನ್ನ ಉಳಿದರೆ ವ್ಯರ್ಥ ಮಾಡುವಿರಾ?ಇನ್ಮುಂದೆ ಈ ರೀತಿ ಮಾಡಬೇಡಿ. ಉಳಿದ ಅನ್ನದಿಂದ ರುಚಿಕರವಾದ ಪಕೋಡಗಳನ್ನು ತಯಾರಿಸಬಹುದು. ಈ ಚಳಿಗೆ ಬಿಸಿ ಬಿಸಿಯಾದ ಗರಿಗರಿ ಪಕೋಡ ತಿನ್ನುತ್ತಾ ಇದ್ದರೆ ಅದರ ಮಜಾವೇ ಬೇರೆ. ಇದನ್ನು ತಯಾರಿಸುವುದು ಕೂಡ ತುಂಬಾನೇ ಸಿಂಪಲ್. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಉಳಿದ ಅನ್ನವನ್ನು ಬಿಸಾಡಲು ಮನಸ್ಸು ಉಪ್ಪುವುದಿಲ್ಲ. ಕೆಲವರು ಚಿತ್ರಾನ್ನ, ಪುಳಿಯೋಗರೆ, ಫ್ರೈಡ್ ರೈಸ್ ಇತ್ಯಾದಿ ಉಪಾಹಾರಗಳನ್ನು ತಯಾರಿಸುತ್ತಾರೆ. ಇನ್ನೂ ಕೆಲವರು ವ್ಯರ್ಥ ಮಾಡಬಹುದು. ಆದರೆ, ಉಳಿದ ಅನ್ನದಿಂದ ಗರಿಗರಿಯಾಗಿರುವ ಪಕೋಡ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ. ಈ ಪಕೋಡಗಳು ಬಹಳ ರುಚಿಕರವಾಗಿರುತ್ತದೆ. ಇವುಗಳನ್ನು ತಯಾರಿಸುವುದು ಅಷ್ಟು ಕಷ್ಟವೇನಲ್ಲ. ತುಂಬಾ ಸರಳವಾಗಿ, ಸಿಂಪಲ್ ಆಗಿ ತಯಾರಿಸಬಹುದಾದ ರೆಸಿಪಿಯಿದು. ತ್ವರಿತವಾಗಿ ಸಿದ್ಧವಾಗಬಹುದಾದ ಪಕೋಡವಿದು. ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಉಳಿದ ಅನ್ನದಿಂದ ಪಕೋಡ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅನ್ನ- 2 ಕಪ್, ಮೊಸರು- ಎರಡು ಟೀ ಚಮಚ, ಅಕ್ಕಿ ಹಿಟ್ಟು- ಎರಡು ಟೀ ಚಮಚ, ರವೆ- ಎರಡು ಟೀ ಚಮಚ, ಈರುಳ್ಳಿ(ಸಣ್ಣದಾಗಿ ಕೊಚ್ಚಿದ)- 1, ಜೀರಿಗೆ- ಒಂದು ಟೀ ಚಮಚ, ಹಸಿರು ಮೆಣಸಿನಕಾಯಿಗಳು (ಸಣ್ಣದಾಗಿ ಕೊಚ್ಚಿದ)- ಎರಡು, ಕಾಳುಮೆಣಸಿನ ಪುಡಿ- ಅರ್ಧ ಟೀ ಚಮಚ, ಶುಂಠಿ- ಒಂದು ಟೀ ಚಮಚ, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಉಳಿದ ಅನ್ನದಿಂದ ಪಕೋಡ ಮಾಡುವ ವಿಧಾನ: ಮೊದಲು ಅನ್ನಯನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ. ಅದರಲ್ಲಿ ಮೊಸರು ಹಾಕಿ. ಅನ್ನ ಮತ್ತು ಮೊಸರನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ.
- ಒಂದು ಬಟ್ಟಲಿನಲ್ಲಿ ರುಬ್ಬಿರುವ ಮಿಶ್ರಣವನ್ನು ತೆಗೆದುಕೊಳ್ಳಿ. ಇದಕ್ಕೆ ಅಕ್ಕಿ ಹಿಟ್ಟು, ಉಪ್ಮಾ ರವೆ, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ ಪೇಸ್ಟ್, ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿರಬೇಕು.
- ಚೆನ್ನಾಗಿ ಮಿಶ್ರಣ ಮಾಡಿದ ಹಿಟ್ಟನ್ನು 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
- 15 ನಿಮಿಷಗಳ ನಂತರ ಒಂದು ಬಾಣಲೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಸ್ವಲ್ಪ ಹಿಟ್ಟು ತೆಗೆದುಕೊಂಡು ಮಧ್ಯದಲ್ಲಿ ರಂಧ್ರ ಮಾಡಿ ಕಾದ ಎಣ್ಣೆಯಲ್ಲಿ ಬಿಡಿ.
- ಪಕೋಡಗಳನ್ನು ಚೆನ್ನಾಗಿ ಫ್ರೈ ಮಾಡಬೇಕು. ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ನಂತರ ಅವುಗಳನ್ನು ಹೊರತೆಗೆದು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿದರೆ ಬಿಸಿ ಬಿಸಿಯಾದ ರುಚಿಕರ ಪಕೋಡ ಸವಿಯಲು ಸಿದ್ಧ.
ಈ ಚುಮು ಚುಮು ಚಳಿಯಲ್ಲಿ ಸಂಜೆ ಹೊತ್ತಿಗೆ ಏನಾದರೂ ಬಿಸಿ ಬಿಸಿ ತಿಂಡಿ ತಿನ್ನಬೇಕು ಎಂದು ಅನಿಸಿದರೆ ಮಧ್ಯಾಹ್ನ ಅನ್ನ ಉಳಿದಿದ್ದರೆ ಈ ರೀತಿ ಪಕೋಡ ಮಾಡಿ ಸವಿಯಬಹುದು. ಈಗಂತೂ ಚಳಿ ತುಸು ಹೆಚ್ಚಾಗಿಯೇ ಇದೆ. ಈ ಚಳಿಗೆ ಬಿಸಿ ಬಿಸಿ ಪಕೋಡ ತಿನ್ನುತ್ತಾ ಆನಂದಿಸಬಹುದು.
ವಿಭಾಗ