ಬೆಳಗ್ಗಿನ ಉಪಾಹಾರ, ಮಕ್ಕಳ ಲಂಚ್ ಬಾಕ್ಸ್‌ಗಾದ್ರೂ ಸರಿ, ತಯಾರಿಸಿ ರುಚಿಕರ ಪಾಲಕ್ ಪನೀರ್ ಪಲಾವ್; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗಿನ ಉಪಾಹಾರ, ಮಕ್ಕಳ ಲಂಚ್ ಬಾಕ್ಸ್‌ಗಾದ್ರೂ ಸರಿ, ತಯಾರಿಸಿ ರುಚಿಕರ ಪಾಲಕ್ ಪನೀರ್ ಪಲಾವ್; ಇಲ್ಲಿದೆ ರೆಸಿಪಿ

ಬೆಳಗ್ಗಿನ ಉಪಾಹಾರ, ಮಕ್ಕಳ ಲಂಚ್ ಬಾಕ್ಸ್‌ಗಾದ್ರೂ ಸರಿ, ತಯಾರಿಸಿ ರುಚಿಕರ ಪಾಲಕ್ ಪನೀರ್ ಪಲಾವ್; ಇಲ್ಲಿದೆ ರೆಸಿಪಿ

ಪನೀರ್ ಮತ್ತು ಪಾಲಕ್ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವೆರಡನ್ನೂ ಬೆರೆಸಿ ರುಚಿಕರವಾದ ಪಲಾವ್ ತಯಾರಿಸಬಹುದು. ಪಾಕವಿಧಾನವೂ ತುಂಬಾ ಸರಳವಾಗಿದೆ. ಮಧ್ಯಾಹ್ನದ ಊಟ, ಬೆಳಗ್ಗಿನ ಉಪಾಹಾರ ಅಥವಾ ಮಕ್ಕಳ ಲಂಚ್ ಬಾಕ್ಸ್‌ಗೂ ಇದನ್ನು ಮಾಡಿ ಕಳುಹಿಸಬಹುದು. ಇಲ್ಲಿದೆ ಪಾಕವಿಧಾನ.

ರುಚಿಕರ ಪಾಲಕ್ ಪನೀರ್ ಪಲಾವ್ ರೆಸಿಪಿ
ರುಚಿಕರ ಪಾಲಕ್ ಪನೀರ್ ಪಲಾವ್ ರೆಸಿಪಿ (Youtube)

ಪನೀರ್ ಮತ್ತು ಪಾಲಕ್ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವೆರಡನ್ನೂ ಬೆರೆಸಿ ರುಚಿಕರ ಅಡುಗೆ ತಯಾರಿಸಬಹುದು. ರೆಸ್ಟೋರೆಂಟ್‍ ಹೋದಾಗ ಕೆಲವರು ರೋಟಿ ಜತೆ ಪಾಲಕ್ ಪನೀರ್ ಗ್ರೇವಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಉತ್ತಮ ರುಚಿ ಹೊಂದಿರುತ್ತದೆ. ಪಾಲಕ್ ಪನೀರ್‌ನಿಂದ ರುಚಿಕರವಾದ ಪಲಾವ್ ಕೂಡ ಮಾಡಬಹುದು. ಒಂದೇ ರೀತಿಯ ಪಲಾವ್ ತಿಂದು ಬೇಜಾರಾಗಿದ್ದರೆ, ಪಾಲಕ್ ಪನೀರ್ ಪಲಾವ್ ರೆಸಿಪಿ ಪ್ರಯತ್ನಿಸಬಹುದು. ಬೆಳಗ್ಗೆ ಉಪಾಹಾರವಾಗಿಯೂ ತಿನ್ನಬಹುದು. ಮಧ್ಯಾಹ್ನದ ಊಟ ಅಥವಾ ಮಕ್ಕಳ ಲಂಚ್ ಬಾಕ್ಸ್‌ಗೂ ಕೊಟ್ಟು ಕಳುಹಿಸಬಹುದು. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಪಾಲಕ್ ಪನೀರ್ ಪಲಾವ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಪಾಲಕ್ ಸೊಪ್ಪು- 1 ಕಪ್, ಪನೀರ್- ಅರ್ಧ ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ- ಮೂರು ಟೀ ಚಮಚ, ತುಪ್ಪ- ಎರಡು ಟೀ ಚಮಚ, ಜೀರಿಗೆ- ಒಂದು ಟೀ ಚಮಚ, ಮೆಣಸಿನಕಾಯಿ- ಎರಡು, ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಶುಂಠಿ ಪೇಸ್ಟ್- ಎರಡು ಟೀ ಚಮಚ, ಮೆಣಸಿನ ಪುಡಿ- ಒಂದೂವರೆ ಚಮಚ, ಈರುಳ್ಳಿ- ಕಾಲು ಕಪ್, ಕಾಳುಮೆಣಸಿನ ಪುಡಿ- 1 ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಬೇಯಿಸಿದ ಅನ್ನ- ಎರಡು ಕಪ್.

ಪಾಕವಿಧಾನ: ಈ ಪಲಾವ್ ತಯಾರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ. ಇದಕ್ಕೆ ಪಾಲಕ್ ಸೊಪ್ಪನ್ನು ಹಾಕಿ ಬೇಯಿಸಿ. ನಂತರ ಬೇಯಿಸಿದ ಪಾಲಕ್ ಸೊಪ್ಪನ್ನು ಪಕ್ಕಕ್ಕೆ ಇಟ್ಟು, ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿ ಜಾರಿನಲ್ಲಿ ಹಾಕಿ ನಿಧಾನವಾಗಿ ರುಬ್ಬಿ.

ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಇದಕ್ಕೆ ಎಣ್ಣೆ ಮತ್ತು ತುಪ್ಪ ಎರಡನ್ನೂ ಸೇರಿಸಿ. ಇದು ಬಿಸಿಯಾದ ನಂತರ, ಜೀರಿಗೆ ಮತ್ತು ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಎಸಳು ಮತ್ತು ಕತ್ತರಿಸಿದ ಶುಂಠಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿಯ ಬಣ್ಣ ಬದಲಾಗುವವರೆಗೆ ಮಿಶ್ರಣವನ್ನು ಹುರಿಯಬೇಕು.

ಈರುಳ್ಳಿ ಬಣ್ಣ ಬದಲಾದ ನಂತರ ಪನೀರ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕಸೂರಿ ಮೆಂತ್ಯ ಬೆರೆಸಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಚೆನ್ನಾಗಿ ಎಣ್ಣೆಯಲ್ಲಿ ಹುರಿಯಬೇಕು. ನಂತರ ರುಬ್ಬಿರುವ ಪಾಲಕ್ ಸೊಪ್ಪಿನ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಣ್ಣ ಉರಿಯಲ್ಲಿಟ್ಟು ಬೇಯಿಸಿ. ನಂತರ ಇದಕ್ಕೆ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಬೇಕು. ನಂತರ ಇದಕ್ಕೆ ಬೇಯಿಸಿದ ಅನ್ನ ಹಾಕಿ. ಅದಕ್ಕೆ ಒಂದು ಚಮಚ ತುಪ್ಪ, ಸ್ವಲ್ಪ ಕಸೂರಿ ಮೆಂತ್ಯ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಪುಳಿಯೋಗರೆ ಮಿಶ್ರಣ ಮಾಡುವಂತೆ ಚೆನ್ನಾಗಿ ಮಿಶ್ರಣ ಮಾಡಿ, ಒಲೆ ಆಫ್ ಮಾಡಿ.

ಇಷ್ಟಾದರೆ ರುಚಿಕರವಾದ ಪಾಲಕ್ ಪನೀರ್ ಪಲಾವ್ ತಿನ್ನಲು ಸಿದ್ಧ. ಇದು ಮಧ್ಯಾಹ್ನದ ಊಟಕ್ಕೆ ಅಥವಾ ಬೆಳಗ್ಗಿನ ಉಪಾಹಾರಕ್ಕೂ ಮಾಡಿ ತಿನ್ನಬಹುದು. ಮಕ್ಕಳ ಲಂಚ್ ಬಾಕ್ಸ್‌ಗೂ ಪಾಲಕ್ ಪನೀರ್ ಪಲಾವ್ ಅನ್ನು ಹಾಕಿ ಕಳುಹಿಸಬಹುದು.

ಮೇಲೆ ತಿಳಿಸಿದಂತೆ ಪಾಲಕ್ ಪನೀರ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಾಲಕ್ ಮತ್ತು ಪನೀರ್ ಎರಡೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಪಾಲಕ್ ಸೊಪ್ಪಿನಲ್ಲಿರುವ ಫೋಲೇಟ್ ಎಲ್ಲರಿಗೂ ಅತ್ಯಗತ್ಯ. ಪನೀರ್‌ನಲ್ಲಿರುವ ಕ್ಯಾಲ್ಸಿಯಂ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಅಗತ್ಯವಾಗಿದೆ. ನೀವು ಒಮ್ಮೆ ಈ ರೆಸಿಪಿ ಪ್ರಯತ್ನಿಸಿ, ಖಂಡಿತಾ ಇಷ್ಟವಾಗಬಹುದು.

Whats_app_banner