ಯುಗಾದಿಗೆ ತಯಾರಿಸಿ ಈ ಸ್ಪೆಷಲ್ ಹೆಸರುಬೇಳೆ ಸಮೋಸಾ: ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ, ಇಲ್ಲಿದೆ ರೆಸಿಪಿ
ಯುಗಾದಿ ಹಬ್ಬಕ್ಕೆ ತಯಾರಿಸಿ ಈ ಸ್ಪೆಷಲ್ ಹೆಸರುಬೇಳೆ ಸಮೋಸಾ. ಮನೆಗೆ ಬರುವ ಅತಿಥಿಗಳಿಗೆ ಈ ಬಿಸಿ ಬಿಸಿ ಸಮೋಸಾ ಮಾಡಿ ಕೊಡಿ. ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ತಿಂಡಿ. ಈ ರುಚಿಕರವಾದ ಹಾಗೂ ಆರೋಗ್ಯಕರವಾದ ಹೆಸರುಬೇಳೆ ಸಮೋಸಾ ಪಾಕವಿಧಾನ ಇಲ್ಲಿದೆ.

ಯುಗಾದಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ. ಬೇವು-ಬೆಲ್ಲ ಹಂಚುವ ಹಬ್ಬ ಯುಗಾದಿ. ಯುಗಾದಿಯಂತದು ಮನೆಗೆ ಅತಿಥಿಗಳು ಬರುತ್ತಾರೆ. ಅವರಿಗಾಗಿ ರುಚಿಕರವಾದ, ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ಯುಗಾದಿ ಹಬ್ಬದ ಸಂಜೆ ವೇಳೆಗೆ ಈ ಹೆಸರು ಬೇಳೆ ಸಮೋಸಾ ಸ್ನಾಕ್ಸ್ ತಯಾರಿಸಿ ತಿನ್ನಿ. ಮನೆಗೆ ಬರುವ ಅತಿಥಿಗಳಿಗೂ ಮಾಡಿಕೊಡಿ. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ.
ಬಹುತೇಕ ಮಂದಿ ಆಲೂಗಡ್ಡೆ ಅಥವಾ ಈರುಳ್ಳಿ ಸಮೋಸಾ ತಯಾರಿಸುತ್ತಾರೆ. ಆದರೆ, ಇದಕ್ಕಿಂತ ರುಚಿಕರವಾಗಿರುತ್ತೆ ಹೆಸರುಬೇಳೆ ಸಮೋಸಾ. ಇದನ್ನು ತಯಾರಿಸುವುದು ಸಹ ತುಂಬಾ ಸುಲಭ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟಪಡುವ ಈ ಪ್ರೋಟೀನ್ ಭರಿತ ಖಾದ್ಯವನ್ನು ತಯಾರಿಸಿ. ಹೆಸರು ಬೇಳೆ ಸಮೋಸಾ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಹೆಸರು ಬೇಳೆ ಸಮೋಸಾ ತಯಾರಿಸುವ ವಿಧಾನ
ಬೇಕಾಗುವ ಪದಾರ್ಥಗಳು: 1 ಕಪ್ ಹೆಸರುಬೇಳೆ, 3 ಚಮಚ ಸೋಯಾಬೀನ್ ಎಣ್ಣೆ, 2 ಚಮಚ ಮೆಣಸಿನ ಪುಡಿ, 1 ಚಮಚ ಕಪ್ಪು ಉಪ್ಪು, 1/2 ಸಣ್ಣ ಚಮಚ ಗರಂ ಮಸಾಲೆ ಪುಡಿ, 1/2 ಚಮಚ ಕಾಳುಮೆಣಸಿನ ಪುಡಿ, 2 ಚಮಚ - ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಭಾರತದ ಸಮೋಸಾ ವೆರೈಟಿ ಹೀಗಿದೆ ನೋಡಿ
ಸಮೋಸಾ ಹಿಟ್ಟಿಗಾಗಿ: 2 ಕಪ್ ಮೈದಾ, 1/2 ಚಮಚ ಉಪ್ಪು, 1/2 ಚಮಚ ಓಂಕಾಳು, ಎಣ್ಣೆ- ಕರಿಯಲು
ಮಾಡುವ ವಿಧಾನ: ಹೆಸರು ಬೇಳೆ ಸಮೋಸಾ ತಯಾರಿಸಲು ಮೊದಲು 1 ಕಪ್ ಹೆಸರುಬೇಳೆಯನ್ನು 3 ರಿಂದ 4 ಬಾರಿ ಚೆನ್ನಾಗಿ ತೊಳೆದು ಪಕ್ಕಕ್ಕೆ ಇಡಿ. ಈಗ ಬೇಳೆಯನ್ನು 3 ಕಪ್ ನೀರಿನಲ್ಲಿ 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನಿಗದಿತ ಸಮಯದ ನಂತರ, ಹೆಸರು ಬೇಳೆಯನ್ನು ಸೋಸಿ, ನೀರನ್ನು ಹೊರಹಾಕಿ.
ಈಗ ಒಂದು ಕಡಾಯಿಯಲ್ಲಿ 3 ಚಮಚ ಸೋಯಾಬೀನ್ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ನೆನೆಸಿದ ಹೆಸರು ಬೇಳೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಇದು ಸುಮಾರು 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈಗ ಹುರಿದ ಹೆಸರು ಬೇಳೆಯನ್ನು ಒಂದು ತಟ್ಟೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ.
ಹೆಸರು ಬೇಳೆ ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ನಿಧಾನವಾಗಿ ಪುಡಿ ಮಾಡಿ. ಈಗ ಇದಕ್ಕೆ ಮೆಣಸಿನ ಪುಡಿ, ಕಪ್ಪು ಉಪ್ಪು, ಗರಂ ಮಸಾಲೆ ಪುಡಿ, ಕಾಳುಮೆಣಸಿನ ಪುಡಿ, ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಪಕ್ಕಕ್ಕೆ ಇರಿಸಿ.
ಈಗ ಸಮೋಸಾ ಹಿಟ್ಟನ್ನು ತಯಾರಿಸಿ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಮೈದಾ, ಉಪ್ಪು, ಓಂಕಾಳು, ಎಣ್ಣೆ ಹಾಕಿ ಸ್ವಲ್ಪ ನೀರು ಹಾಕಿ ಹಿಟ್ಟು ಗಟ್ಟಿಯಾಗುವವರೆಗೆ ಮಿಶ್ರಣ ಮಾಡಿ. ಈ ಹಿಟ್ಟನ್ನು ಬಟ್ಟೆಯಿಂದ ಮುಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಿಗದಿತ ಸಮಯದ ನಂತರ, ಹಿಟ್ಟನ್ನು ಮತ್ತೆ ಕಲಕಿ ಮತ್ತು ಅದರಿಂದ 20-25 ಸಣ್ಣ ಉಂಡೆಗಳನ್ನು ಮಾಡಿ.
ಈಗ ಒಂದು ಉಂಡೆ ತೆಗೆದುಕೊಂಡು ಅದನ್ನು ತೆಳುವಾಗಿ ಅಂಡಾಕಾರದಲ್ಲಿ ಚಪ್ಪಟೆ ಮಾಡಿ. ಈಗ ಅದನ್ನು ಮಧ್ಯದಿಂದ ಕತ್ತರಿಸಿ, ಅಂಚುಗಳಿಗೆ ನೀರು ಹಾಕಿ ಮತ್ತು ಕೋನ್ ಆಕಾರದಲ್ಲಿ ಮಡಚಿ. ಸಮೋಸಾ ಮಿಶ್ರಣವನ್ನು ಕೋನ್ ಒಳಗೆ ಇರಿಸಿ. ನಿಮ್ಮ ಬೆರಳುಗಳಿಂದ ಒತ್ತಿ. ಇದನ್ನು ಮಾಡುವಾಗ, ಸಮೋಸಾದ ತುದಿಗಳನ್ನು ಒಟ್ಟಿಗೆ ಮುಚ್ಚಿ. ಎಲ್ಲವನ್ನೂ ಹೀಗೆ ಸಮೋಸಾ ಮಾಡಿ.
ಕಡಾಯಿಯಲ್ಲಿ ಕರಿಯಲು ಸಾಕಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ, ಜ್ವಾಲೆಯನ್ನು ಕಡಿಮೆ ಮಾಡಿ. ಮಧ್ಯಮ ಉರಿಯಲ್ಲಿಟ್ಟು ಸಮೋಸಾಗಳನ್ನು ಎಣ್ಣೆಯಲ್ಲಿ ಹಾಕಿ ಕರಿಯಿರಿ. ಸಮೋಸಾಗಳನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ.
ಈಗ ಕರಿದ ಸಮೋಸಾಗಳನ್ನು ಟಿಶ್ಯೂ ಪೇಪರ್ ಇಟ್ಟಿರುವ ತಟ್ಟೆ ಮೇಲೆ ಹಾಕಿ. ನಂತರ ಸಮೋಸಾವನ್ನು ಬಿಸಿಬಿಸಿಯಾಗಿ ತಿನ್ನಿ. ಯುಗಾದಿಗೆ ಈ ಸ್ನಾಕ್ಸ್ ಅನ್ನು ಮನೆಗೆ ಬರುವ ಅತಿಥಿಗಳಿಗೂ ಬಡಿಸಿ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ 15 ದಿನಗಳವರೆಗೆ ಸಂಗ್ರಹಿಸಬಹುದು.
