ಬಾಯಿಗೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ; ಮೊಟ್ಟೆಯಿಂದ ಖಾರ ಭಕ್ಷ್ಯವಲ್ಲ, ಈ ರೀತಿ ತಯಾರಿಸಿ ಸಿಹಿಖಾದ್ಯ, ಮಕ್ಕಳು ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಿಗೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ; ಮೊಟ್ಟೆಯಿಂದ ಖಾರ ಭಕ್ಷ್ಯವಲ್ಲ, ಈ ರೀತಿ ತಯಾರಿಸಿ ಸಿಹಿಖಾದ್ಯ, ಮಕ್ಕಳು ಇಷ್ಟಪಟ್ಟು ತಿಂತಾರೆ

ಬಾಯಿಗೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ; ಮೊಟ್ಟೆಯಿಂದ ಖಾರ ಭಕ್ಷ್ಯವಲ್ಲ, ಈ ರೀತಿ ತಯಾರಿಸಿ ಸಿಹಿಖಾದ್ಯ, ಮಕ್ಕಳು ಇಷ್ಟಪಟ್ಟು ತಿಂತಾರೆ

ಮೊಟ್ಟೆಯಿಂದ ವಿವಿಧ ಬಗೆಯ ಖಾದ್ಯ ತಯಾರಿಸಬಹುದು. ಬಹುತೇಕ ಮಂದಿ ಇದರಿಂದ ಮಸಾಲೆಯುಕ್ತ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಆದರೆ, ಮೊಟ್ಟೆಯಿಂದ ಸಿಹಿತಿಂಡಿ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಬಾಯಿಗೂ ರುಚಿ, ದೇಹಕ್ಕೆ ಪ್ರೋಟೀನ್ ಒದಗಿಸುವ ಈ ಖಾದ್ಯ ತಯಾರಿಸುವುದು ತುಂಬಾನೇ ಸರಳ. ಇಲ್ಲಿದೆ ರೆಸಿಪಿ.

ಮೊಟ್ಟೆಯಿಂದ ಖಾರ ಭಕ್ಷ್ಯವಲ್ಲ, ಈ ರೀತಿ ತಯಾರಿಸಿ ಸಿಹಿಖಾದ್ಯ
ಮೊಟ್ಟೆಯಿಂದ ಖಾರ ಭಕ್ಷ್ಯವಲ್ಲ, ಈ ರೀತಿ ತಯಾರಿಸಿ ಸಿಹಿಖಾದ್ಯ

ಮೊಟ್ಟೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಮೊಟ್ಟೆ ತಿನ್ನುವಂತೆ ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳು, ಪ್ರೋಟೀನ್, ಜೀವಸತ್ವ, ಖನಿಜಗಳಿವೆ. ಅವು ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತ. ಪ್ರೋಟೀನ್ ಸಮೃದ್ಧ ಆಹಾರಕ್ಕಾಗಿ ಮೊಟ್ಟೆ ತಿನ್ನುವುದು ಬಹಳ ಪ್ರಯೋಜನಕಾರಿಯಾಗಿದೆ. ಮೊಟ್ಟೆಯಿಂದ ವಿವಿಧ ಬಗೆಯ ಖಾದ್ಯ ತಯಾರಿಸಬಹುದು. ಮೊಟ್ಟೆ ಬಿರಿಯಾನಿ, ಮೊಟ್ಟೆ ಆಮ್ಲೆಟ್, ಮೊಟ್ಟೆ ಸಾಂಬಾರ್, ಮೊಟ್ಟೆ ಘೀ ರೋಸ್ಟ್ ಇತ್ಯಾದಿ ಖಾರ (ಮಸಾಲೆಯುಕ್ತ) ಖಾದ್ಯಗಳನ್ನು ತಿಂದಿರಬಹುದು. ಮೊಟ್ಟೆಯಿಂದ ಸಿಹಿ ಭಕ್ಷ್ಯವನ್ನು ಕೂಡ ತಯಾರಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಟ್ಟೆಯ ಸಿಹಿ ಭಕ್ಷ್ಯ ತಯಾರಿಸುವುದು ತುಂಬಾನೇ ಸುಲಭ, ಇಲ್ಲಿದೆ ರೆಸಿಪಿ.

ಮೊಟ್ಟೆಯ ಸಿಹಿತಿಂಡಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಹಾಲು- 1 ಲೀಟರ್, ಮೊಟ್ಟೆ- 6, ಸಕ್ಕರೆ- 200 ಗ್ರಾಂ, ತುಪ್ಪ- ಅಗತ್ಯಕ್ಕೆ ತಕ್ಕಷ್ಟು, ಬಾದಾಮಿ- 100 ಗ್ರಾಂ, ಕೇಸರಿ- 1, ಜೇನುತುಪ್ಪ– 1 ಚಮಚ, ಏಲಕ್ಕಿ ಪುಡಿ- 1 ಚಮಚ.

ಮಾಡುವ ವಿಧಾನ: ಮೊದಲಿಗೆ 50 ಗ್ರಾಂ ಸಿಪ್ಪೆ ಸುಲಿದ ಬಾದಾಮಿಯನ್ನು ನೆನೆಸಿ ಮತ್ತು ಉಳಿದ ಬಾದಾಮಿಯನ್ನು ಪುಡಿ ಮಾಡಬೇಕು. ನಂತರ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ಒಂದು ಲೀಟರ್ ಹಾಲು ಹಾಕಿ ಚೆನ್ನಾಗಿ ಕುದಿಸಿ. ಅದು ದಪ್ಪಗಾಗುವವರೆಗೆ ಕುದಿಸಿ ಒಲೆ ಆಫ್ ಮಾಡಿ. ಈಗ ಈ ಹಾಲಿಗೆ ನೆನೆಸಿದ ಬಾದಾಮಿ ಸೇರಿಸಿ ಚೆನ್ನಾಗಿ ಕಲಸಿ.

ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆ ಒಡೆಯಿರಿ. ಇದಕ್ಕೆ ಪುಡಿ ಮಾಡಿದ ಸಕ್ಕರೆ, ಪುಡಿ ಮಾಡಿದ ಬಾದಾಮಿ ಬೆರಿಸಿ ಮಿಶ್ರಣ ಮಾಡಿ. ನಂತರ ಜೇನುತುಪ್ಪ, ಏಲಕ್ಕಿ ಪುಡಿಯ ಮಿಶ್ರಣವನ್ನು ಬೆರೆಸಿ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಒಂದು ಕಡಾಯಿಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ. ನಂತರ ಅದಕ್ಕೆ ಮೊದಲೇ ಹಾಲು ಹಾಗೂ ಸಕ್ಕರೆ ಮಿಶ್ರಣವನ್ನು ಬೆರೆಸಿ, ದಪ್ಪವಾಗುವವರೆಗೆ ಬೇಯಿಸಿ, ಒಲೆ ಆಫ್ ಮಾಡಿ.

ಈ ಮಿಶ್ರಣವನ್ನು ಒಂದು ಸಣ್ಣ ತಟ್ಟೆಗೆ ಹಾಕಿ. ಈಗ ಒಲೆಯ ಮೇಲೆ ಕಡಾಯಿಯನ್ನು ಇರಿಸಿ, ಕೆಲವು ನಿಮಿಷಗಳ ಕಾಲ ಬಿಸಿ ಮಾಡಿ. ಅದರ ಮೇಲೆ ತಟ್ಟೆಯನ್ನು ಇರಿಸಿ. ನೇರವಾಗಿ ಅದರ ಮೇಲೆ ತಟ್ಟೆಯನ್ನು ಇರಿಸುವ ಬದಲು ಚಿಕ್ಕ ಬೌಲ್ ಇಟ್ಟು ಅದರ ಮೇಲೆ ತಟ್ಟೆಯನ್ನು ಇಡಬಹುದು. ಅದರ ಮೇಲೆ ಮುಚ್ಚಳವನ್ನು ಇರಿಸಿ, 40 ರಿಂದ 45 ನಿಮಿಷಗಳ ಕಾಲ ಬೇಯಿಸಿ.

ನಂತರ ಅದನ್ನು ಕೆಳಗಿಳಿಸಿ ತಣ್ಣಗಾಗಿಸಿ. ತಣ್ಣಗಾದ ನಂತರ ಒಂದು ತಟ್ಟೆಯಲ್ಲಿ ತುಪ್ಪ ಸವರಿ ಬೇಕಿದ್ದರೆ ಸ್ವಲ್ಪ ಒಣ ಬಾದಾಮಿಯನ್ನು ಪುಡಿ ಮಾಡಿ ಹಾಕಬಹುದು. ಇದಕ್ಕೆ ತಣ್ಣಾಗಾಗಿರುವ ಮಿಶ್ರಣವನ್ನು ಹಾಕಿದರೆ ರುಚಿಕರವಾದ ಮೊಟ್ಟೆಯಿಂದ ಮಾಡಿರುವ ಸಿಹಿಖಾದ್ಯ ತಿನ್ನಲು ಸಿದ್ಧ. ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ತಿನ್ನಬಹುದು, ತುಂಬಾ ರುಚಿಕರವಾಗಿರುತ್ತದೆ.

ಸಕ್ಕರೆ ಇಷ್ಟವಿಲ್ಲದಿದ್ದರೆ ಇದರ ಬದಲು ಬೆಲ್ಲ ಬಳಸಬಹುದು. ಈ ಮೊಟ್ಟೆಯ ಸಿಹಿ ಖಾದ್ಯವನ್ನು ನಿಮ್ಮ ಮನೆಯಲ್ಲಿ ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ಮಾಡಬೇಕು ಎಂದೆನಿಸುತ್ತದೆ. ಮಕ್ಕಳು ಮೊಟ್ಟೆ ತಿನ್ನದಿದ್ದರೆ ಈ ರೀತಿಯ ಸಿಹಿಖಾದ್ಯ ಮಾಡಿಕೊಡಬಹುದು. ಖಂಡಿತ ಮಕ್ಕಳು ಇಷ್ಟಪಟ್ಟು ತಿಂತಾರೆ.

Whats_app_banner