ಮಕರ ಸಂಕ್ರಾಂತಿ ಹಬ್ಬಕ್ಕೆ ಮಾಡಿ ರುಚಿಕರ ಹೆಸರುಬೇಳೆ ಪಾಯಸ: ಎಲ್ಲರಿಗೂ ಇಷ್ಟವಾಗುವ ಸಿಹಿ ತಿನಿಸಿದು, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕರ ಸಂಕ್ರಾಂತಿ ಹಬ್ಬಕ್ಕೆ ಮಾಡಿ ರುಚಿಕರ ಹೆಸರುಬೇಳೆ ಪಾಯಸ: ಎಲ್ಲರಿಗೂ ಇಷ್ಟವಾಗುವ ಸಿಹಿ ತಿನಿಸಿದು, ಇಲ್ಲಿದೆ ರೆಸಿಪಿ

ಮಕರ ಸಂಕ್ರಾಂತಿ ಹಬ್ಬಕ್ಕೆ ಮಾಡಿ ರುಚಿಕರ ಹೆಸರುಬೇಳೆ ಪಾಯಸ: ಎಲ್ಲರಿಗೂ ಇಷ್ಟವಾಗುವ ಸಿಹಿ ತಿನಿಸಿದು, ಇಲ್ಲಿದೆ ರೆಸಿಪಿ

ಮಕರ ಸಂಕ್ರಾಂತಿಯಂದು ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಹಾಗೆಯೇ ಹಬ್ಬಕ್ಕೆ ವಿಶೇಷವಾಗಿ ಮನೆಯಲ್ಲಿ ಏನಾದರೂ ಸಿಹಿ ತಿನಿಸು ಮಾಡಲೇಬೇಕು. ಹೆಚ್ಚಾಗಿ ಶ್ಯಾವಿಗೆ ಪಾಯಸ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಹೆಸರುಬೇಳೆ ಪಾಯಸ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನವೂ ಸರಳ. ಇಲ್ಲಿದೆ ಪಾಕವಿಧಾನ.

ಮಕರ ಸಂಕ್ರಾಂತಿ ಹಬ್ಬಕ್ಕೆ ಮಾಡಿ ರುಚಿಕರ ಹೆಸರುಬೇಳೆ ಪಾಯಸ
ಮಕರ ಸಂಕ್ರಾಂತಿ ಹಬ್ಬಕ್ಕೆ ಮಾಡಿ ರುಚಿಕರ ಹೆಸರುಬೇಳೆ ಪಾಯಸ (Mana Chef/Youtube)

ಸಂಕ್ರಾಂತಿ ಹಬ್ಬ ಹತ್ತಿರದಲ್ಲಿದೆ. ಸಿಹಿ ತಿನಿಸು ಮಾಡದಿದ್ದರೆ ಹಬ್ಬ ಪೂರ್ಣವಾಗುವುದಿಲ್ಲ ಎಂದೇ ಹೇಳಬಹುದು. ಈ ಬಾರಿ ಹಬ್ಬಕ್ಕೆ ವಿಶೇಷವಾಗಿ ಹೆಸರುಬೇಳೆ ಪಾಯಸ ಮಾಡಬಹುದು. ಇದನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸಬಹುದು. ಪರಮಾನ್ನ ಅಥವಾ ಶ್ಯಾವಿಗೆ ಪಾಯಸದ ಹೊರತಾಗಿ, ಹೆಸರು ಬೇಳೆ ಪಾಯಸ ಕೂಡ ತುಂಬಾ ರುಚಿಕರವಾಗಿರುತ್ತದೆ. ಹೆಸರು ಬೇಳೆಯ ಸುವಾಸನೆ ಪಾಯಸಕ್ಕೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ. ಹೆಸರು ಬೇಳೆ ಪಾಯಸವನ್ನು ರುಚಿಕರವಾಗಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹೆಸರುಬೇಳೆ ಪಾಯಸ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಹೆಸರುಬೇಳೆ- 1 ಕಪ್, ಬೆಲ್ಲದ ಪುಡಿ- 1 ಕಪ್, ತುಪ್ಪ- 4 ಟೀ ಚಮಚ, ಗೋಡಂಬಿ-ದ್ರಾಕ್ಷಿ- ಸ್ವಲ್ಪ, ಏಲಕ್ಕಿ ಪುಡಿ- ಕಾಲು ಟೀ ಚಮಚ, ತೆಂಗಿನತುರಿ- ಅರ್ಧ ಕಪ್, ಹಾಲು- ಅರ್ಧ ಲೀಟರ್.

ಮಾಡುವ ವಿಧಾನ: ಇತರ ಪಾಯಸಗಳಿಗೆ ಹೋಲಿಸಿದರೆ ಹೆಸರುಬೇಳೆ ಪಾಯಸ ತುಂಬಾ ರುಚಿಕರವಾಗಿರುತ್ತದೆ. ಇದಕ್ಕಾಗಿ ಮೊದಲಿಗೆ ಒಂದು ಕಡಾಯಿಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಹೆಸರುಬೇಳೆಯನ್ನು ಹಾಕಿ ಹುರಿಯಬೇಕು. ಇದರಿಂದ ಉತ್ತಮ ಸುವಾಸನೆ ಬರುವವರೆಗೆ ಹುರಿಯಿರಿ. ಆದರೆ, ಸೀದು ಹೋಗಬಾರದು. ಕೆಂಪಾಗುತ್ತಿದ್ದಂತೆ ತೆಗೆದು ಒಂದು ಬಟ್ಟಲಿಗೆ ವರ್ಗಾಯಿಸಿ.

ಮತ್ತೆ ಅದೇ ಕಡಾಯಿಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿಯಬೇಕು. ಇದನ್ನು ಹುರಿದಾದ ಮೇಲೆ ಇನ್ನೊಂದು ಪ್ಲೇಟ್‍ಗೆ ವರ್ಗಾಯಿಸಿ. ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಸೇರಿಸಿ ಕುದಿಸಿ. ಹಾಲು ಕುದಿಯುವಾಗ, ಅದಕ್ಕೆ ಹೆಸರು ಬೇಳೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ಅಗತ್ಯವಿದ್ದರೆ, ಸ್ವಲ್ಪ ನೀರನ್ನು ಸಹ ಬೆರೆಸಬಹುದು. ಹೆಸರು ಬೇಳೆ ಬೇಯಲು ಸಮಯ ತೆಗೆದುಕೊಳ್ಳುವುದರಿಂದ, ನೀರನ್ನು ಬೆರೆಸುವುದು ಉತ್ತಮ.

ನೀರು ಬೆರೆಸಿದ ನಂತರ, ಹೆಸರುಬೇಳೆ ಶೇಕಡಾ 80 ರಷ್ಟು ಬೇಯುವವರೆಗೆ ಬಿಡಿ. ನಂತರ ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ತೆಂಗಿನಕಾಯಿ ಹಾಲು ಮತ್ತು ಏಲಕ್ಕಿ ಪುಡಿ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಕಾಲ ಕುದಿಯಲು ಬಿಡಿ. ಬೇಕಿದ್ದರೆ ಮತ್ತಷ್ಟು ತುಪ್ಪ ಸೇರಿಸಬಹುದು. ನಂತರ ಗೋಡಂಬಿ-ದ್ರಾಕ್ಷಿ ಹಾಕಿ ಒಲೆ ಆಫ್ ಮಾಡಿದರೆ ರುಚಿಕರವಾದ ಹೆಸರು ಬೇಳೆ ಪಾಯಸ ಸಿದ್ಧ.

ಹೆಸರು ಬೇಳೆ ಪಾಯಸ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮಕರ ಸಂಕ್ರಾಂತಿ ಹಬ್ಬದಂದು ಬಹುತೇಕ ಮಂದಿ ದೇವರಿಗೆ ಪರಮಾನ್ನ ಅಥವಾ ಶ್ಯಾವಿಗೆ ಪಾಯಸ ಅರ್ಪಿಸಲು ಬಯಸುತ್ತಾರೆ. ಒಂದೇ ರೀತಿಯ ಪಾಯಸ ಮಾಡುವ ಬದಲು ಒಮ್ಮೆ ಹೆಸರುಬೇಳೆ ಪಾಯಸ ರೆಸಿಪಿ ಪ್ರಯತ್ನಿಸಿ. ಖಂಡಿತ ಇಷ್ಟವಾಗಬಹುದು.

Whats_app_banner