ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ತುಂಬಾ ಸರಳ: ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ತುಂಬಾ ಸರಳ: ಇಲ್ಲಿದೆ ರೆಸಿಪಿ

ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ತುಂಬಾ ಸರಳ: ಇಲ್ಲಿದೆ ರೆಸಿಪಿ

ಮನೆಗೆ ಬರುವ ಅತಿಥಿಗಳಿಗೆ ನೀವು ಏನಾದರೂ ವಿಶೇಷವಾದ ಖಾದ್ಯ ಮಾಡಲು ಬಯಸುವಿರಾದರೆ ಊಟಕ್ಕೆ ನಾನ್ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಇಲ್ಲಿದೆ ಪಾಕವಿಧಾನ.

ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ತುಂಬಾ ಸರಳ
ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ತುಂಬಾ ಸರಳ (Shutterstock)

ಮನೆಗೆ ಬರುವ ಅತಿಥಿಗಳಿಗೆ ನೀವು ಏನಾದರೂ ವಿಶೇಷವಾದ ಖಾದ್ಯ ಮಾಡಲು ಬಯಸುವಿರಾದರೆ ಊಟಕ್ಕೆ ನಾನ್ ತಯಾರಿಸಬಹುದು. ಅದರಲ್ಲೂ ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿದ ನಾನ್ ತಿನ್ನಲು ಮತ್ತಷ್ಟು ರುಚಿಕರವಾಗಿರುತ್ತದೆ. ನಿಮ್ಮ ನೆಚ್ಚಿನ ತರಕಾರಿ, ಪನೀರ್ ಅಥವಾ ಚಿಕನ್ ಖಾದ್ಯದೊಂದಿಗೆ ಇದನ್ನು ಬಡಿಸಬಹುದು. ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಬೆಳ್ಳುಳ್ಳಿ ನಾನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರುಚಿಕರ ಬೆಳ್ಳುಳ್ಳಿ ನಾನ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು- 1/2 ಕಪ್, ಯೀಸ್ಟ್- 1/2 ಚಮಚ, ಮೊಸರು- 1 ಚಮಚ, ಹಾಲು- 1/3 ಕಪ್, ಸಕ್ಕರೆ- 1/2 ಚಮಚ, ಎಣ್ಣೆ- 1 ಚಮಚ, ಉಗುರು ಬೆಚ್ಚಗಿನ ನೀರು- 1/2 ಕಪ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ- 2 ಚಮಚ, ಕೊತ್ತಂಬರಿ ಸೊಪ್ಪು- 3 ಚಮಚ, ಬೆಣ್ಣೆ.

ತಯಾರಿಸುವ ವಿಧಾನ: ಹೋಟೆಲ್ ಶೈಲಿಯ ರುಚಿಕರವಾದ ಬೆಳ್ಳುಳ್ಳಿ ನಾನ್ ತಯಾರಿಸಲು, ಮೊದಲಿಗೆ ಒಂದು ಬಟ್ಟಲಿನಲ್ಲಿ ಒಣ ಯೀಸ್ಟ್ ಹಾಕಿ ಮತ್ತು ಅದಕ್ಕೆ ಸಕ್ಕರೆ ಬೆರೆಸಿ. 1/2 ಕಪ್ ಬೆಚ್ಚಗಿನ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. 15 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿಡಿ.

ಮಿಶ್ರಣ ಮಾಡುವಾಗ ನೊರೆಯನ್ನು ಹೊಂದಿದ್ದರೆ, ಮಿಶ್ರಣವು ಚೆನ್ನಾಗಿ ಆಗಿದೆ ಎಂದು ಅರ್ಥ. ಮಿಶ್ರಣವು ನೊರೆಯನ್ನು ಹೊಂದಿಲ್ಲದಿದ್ದರೆ, ಮಿಶ್ರಣವನ್ನು ಮತ್ತೆ ಸಿದ್ಧಪಡಿಸಿ ಇಲ್ಲದಿದ್ದರೆ ನಾನ್ ಉತ್ತಮ ರುಚಿಯನ್ನು ಹೊಂದಿರುವುದಿಲ್ಲ.

ಈಗ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದೂವರೆ ಕಪ್ ಮೈದಾ ಹಿಟ್ಟನ್ನು ಹಾಕಿ ಅದಕ್ಕೆ ಒಂದು ಚಮಚ ಮೊಸರು, ಎಣ್ಣೆ ಮತ್ತು ಉಪ್ಪನ್ನು ಬೆರೆಸಿ. ನಂತರ ಅದಕ್ಕೆ ಮೊದಲೇ ತಯಾರಿಸಿದ ಯೀಸ್ಟ್ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರನ್ನು ಬಳಸಿ.

ನಂತರ ಹಿಟ್ಟಿಗೆ ಎಣ್ಣೆ ಸವರಿ, ಒದ್ದೆ ಬಟ್ಟೆಯಿಂದ ಮುಚ್ಚಿ ಒಂದೂವರೆ ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ. ಒಂದು ನಿರ್ದಿಷ್ಟ ಸಮಯದ ನಂತರ ಬಟ್ಟೆಯನ್ನು ತೆಗೆದರೆ, ಹಿಟ್ಟು ಮೃದುವಾಗುತ್ತದೆ. ಈಗ ಹಿಟ್ಟನ್ನು ಮತ್ತಷ್ಟು ಮೃದುಗೊಳಿಸಲು, ಅದನ್ನು ಮತ್ತೆ ಸ್ವಲ್ಪ ನಾದಿಕೊಳ್ಳಿ. ನಂತರ ಸಣ್ಣ ಉಂಡೆಗಳನ್ನು ಮಾಡಿ.

ಈಗ ಮತ್ತೆ ಬಟ್ಟೆಯಿಂದ ಮುಚ್ಚಿಟ್ಟು, ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಈಗ ಉಂಡೆಯನ್ನು ತೆಗೆದುಕೊಂಡು ಲಟ್ಟಣಿಗೆಯಲ್ಲಿ ಉದ್ದವಾಗಿ ಲಟ್ಟಿಸಿ. ಲಟ್ಟಿಸುವಾಗ ಸ್ವಲ್ಪ ಕತ್ತರಿಸಿದ ಬೆಳ್ಳುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ, ನಿಧಾನವಾಗಿ ಲಟ್ಟಿಸಿ.

ನಾನ್‍ನ ಇನ್ನೊಂದು ಬದಿಯಲ್ಲಿ ಕೈಯಿಂದ ಅಥವಾ ಬ್ರಷ್ ಸಹಾಯದಿಂದ ಸ್ವಲ್ಪ ನೀರಿನಿಂದ ಒದ್ದೆ ಮಾಡಿ. ಒಲೆ ಮೇಲೆ ಕಬ್ಬಿಣದ ತವಾ ಇಟ್ಟು ಬಿಸಿ ಮಾಡಿ. ತವಾ ಬಿಸಿಯಾದಾಗ ಒದ್ದೆಯಾಗದ ಬದಿಯನ್ನು ಬೇಯಲು ಇಡಿ. ನಾನ್‌ನಲ್ಲಿ ಗುಳ್ಳೆಗಳು ಏಳಲಾರಂಭಿಸುತ್ತವೆ ಮತ್ತು ಬಣ್ಣ ಬದಲಾದಾಗ ಇನ್ನೊಂದು ಬದಿಗೆ ತಿರುಗಿಸಿ ಬೇಯಿಸಿ. ನಾನ್ ಕಂದು ಬಣ್ಣಕ್ಕೆ ತಿರುಗಲು ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಬಹುದು. ಇಷ್ಟೇ, ರುಚಿಕರ ಬೆಳ್ಳುಳ್ಳಿ ನಾನ್ ತಿನ್ನಲು ಸಿದ್ಧ. ನಿಮಗಿಷ್ಟದ ಗ್ರೇವಿಯೊಂದಿಗೆ ಇದನ್ನು ಬಡಿಸಿ ತಿನ್ನಿ.

ನಾನ್‌ಗೆ ಬೆಳ್ಳುಳ್ಳಿ ಸೇರಿಸುವುದರಿಂದ ಹೆಚ್ಚು ರುಚಿಕರವಾಗಿರುತ್ತದೆ. ಇದನ್ನು ಖಂಡಿತ ಎಲ್ಲರೂ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ.

Priyanka Gowda

eMail
Whats_app_banner