ತೆಂಗಿನಕಾಯಿ ಹಾಲು ಹಾಕಿ ಈ ರೀತಿ ಚಿಕನ್ ಸಾಂಬಾರ್ ಮಾಡಿ ನೋಡಿ: ಅನ್ನ, ದೋಸೆ, ಇಡ್ಲಿಗೂ ಸೂಪರ್ ಕಾಂಬಿನೇಷನ್ ಈ ರೆಸಿಪಿ
ಭಾನುವಾರದ ಬಾಡೂಟಕ್ಕೆ ತೆಂಗಿನಕಾಯಿ ಹಾಲು ಹಾಕಿ ಮಾಡುವ ಚಿಕನ್ ಸಾಂಬಾರ್ ರೆಸಿಪಿ ಮಾಡಿ ನಿಮ್ಮವರನ್ನು ಇಂಪ್ರೆಸ್ ಮಾಡಿ.ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಖಾದ್ಯ ಪ್ರಯತ್ನಿಸಿ. ಖಂಡಿತ ಅವರು ಇಷ್ಟಪಟ್ಟು ತಿನ್ನುತ್ತಾರೆ. ರೊಟ್ಟಿ, ದೋಸೆ, ಇಡ್ಲಿ, ಅನ್ನದ ಜತೆಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ರೆಸಿಪಿ ಇಲ್ಲಿದೆ.
ಭಾನುವಾರ ಬಂತೆಂದ್ರೆ ಮಾಂಸಾಹಾರ ಪ್ರಿಯರ ಮನೆಗಳಲ್ಲಿ ಚಿಕನ್, ಮಟನ್ ಖಾದ್ಯಗಳ ಪರಿಮಳ ಬರುತ್ತದೆ. ಎಲ್ಲರೂ ತರಹೇವಾರಿ ಖಾದ್ಯಗಳನ್ನು ತಯಾರಿಸುತ್ತಾರೆ. ನೀವು ಚಿಕನ್ ಪ್ರಿಯರಾಗಿದ್ದರೆ ಒಮ್ಮೆ ಈ ರೀತಿ ಚಿಕನ್ ಸಾಂಬಾರ್ ಮಾಡಿ ನೋಡಿ. ತೆಂಗಿನಕಾಯಿ ಹಾಲು ಹಾಕಿ ಮಾಡುವ ಈ ಚಿಕನ್ ಸಾಂಬಾರ್ ಖಂಡಿತ ನಿಮಗೆ ಇಷ್ಟವಾಗಬಹುದು. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಖಾದ್ಯ ತಯಾರಿಸಿದರೆ ನಿಮ್ಮ ಕೈ ರುಚಿಯನ್ನು ಬಹಳ ಇಷ್ಟಪಡುತ್ತಾರೆ. ರೊಟ್ಟಿ, ದೋಸೆ, ಇಡ್ಲಿ, ಅನ್ನದ ಜತೆಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ಚಿಕನ್ ಸಾಂಬಾರ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಸಾಂಬಾರ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ- 1 ಕೆಜಿ, ಬ್ಯಾಡಗಿ ಮೆಣಸು- 25, ಮೆಣಸಿನ ಪುಡಿ- ಅರ್ಧ ಟೀ ಚಮಚ, ಹಸಿಮೆಣಸಿನಕಾಯಿ- 2, ಧನಿಯಾ (ಕೊತ್ತಂಬರಿ) ಬೀಜ- 3 ಟೀ ಚಮಚ, ಜೀರಿಗೆ- 1 ಟೀ ಚಮಚ, ಮೆಂತ್ಯ- ಕಾಲು ಟೀ ಚಮಚದಷ್ಟು, ಅರಿಶಿನ- 1 ಟೀ ಚಮಚ, ಹುಣಸೆಹುಳಿ- 1 ಸಣ್ಣ ನಿಂಬೆ ಗಾತ್ರದಷ್ಟು, ಈರುಳ್ಳಿ- 2, ಬೆಳ್ಳುಳ್ಳಿ- 16 ಎಸಳು, ಶುಂಠಿ- 2 ಸಣ್ಣ ಇಂಚಿನಷ್ಟು, ತೆಂಗಿನತುರಿ- 1 ಕಪ್, ಗೋಡಂಬಿ- 4, ಗಸಗಸೆ- ಅರ್ಧ ಟೀ ಚಮಚ, ಸೋಂಪು ಕಾಳು- ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ- ಅಗತ್ಯಕ್ಕೆ ತಕ್ಕಂತೆ, ಕರಿಬೇವು ಸೊಪ್ಪು- 2, ಕೊತ್ತಂಬರಿ ಸೊಪ್ಪು- ಸ್ವಲ್ಪ, ಟೊಮೆಟೊ- 1.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದಕ್ಕೆ ಸ್ವಲ್ಪ ಉಪ್ಪು, ಮೆಣಸಿನ ಪುಡಿ ಹಾಗೂ ಅರ್ಧ ಟೀ ಚಮಚ ಅರಿಶಿನ ಪುಡಿ ಹಾಕಿ ಮಿಶ್ರಣ ಮಾಡಿ. ಇದನ್ನು 15 ರಿಂದ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
- ಈ ಸಮಯದಲ್ಲಿ ಮಸಾಲೆ ಸಿದ್ಧಪಡಿಸಿ. ಇದಕ್ಕಾಗಿ ಮೊದಲಿಗೆ 1 ಕಪ್ ತೆಂಗಿನತುರಿಯನ್ನು (ಬೇಕಿದ್ದರೆ ಇನ್ನು ಹೆಚ್ಚು ಸೇರಿಸಬಹುದು) ಬಾಣಲೆಗೆ ಹಾಕಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ತೆಂಗಿನ ಹಾಲನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಪಕ್ಕಕ್ಕೆ ಇಡಿ.
- ನಂತರ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಬ್ಯಾಡಗಿ ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಮೆಂತ್ಯ, ಸೋಂಪು ಕಾಳು, 1 ಕರಿಬೇವು ಸೊಪ್ಪು, ಗೋಡಂಬಿ, 1 ಈರುಳ್ಳಿಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಇದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇವೆಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ 1 ಇಂಚಿನಷ್ಟು ಶುಂಠಿ, 8 ಬೆಳ್ಳುಳ್ಳಿ, ಅರ್ಧ ಟೀ ಚಮಚ ಅರಿಶಿನ, ಹುಣಸೆಹಣ್ಣು ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ನಂತರ 1 ಈರುಳ್ಳಿ ಹಾಗೂ ಟೊಮೆಟೊವನ್ನು ಸಣ್ಣಗೆ ಕತ್ತರಿಸಿ. 8 ಬೆಳ್ಳುಳ್ಳಿ ಎಸಳು ಮತ್ತು 1 ಸಣ್ಣ ಇಂಚಿನಷ್ಟು ಶುಂಠಿಯನ್ನು ತುಂಬಾ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಎಣ್ಣೆ ಅಥವಾ ತುಪ್ಪ ಹಾಕಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ ಹುರಿಯಿರಿ. ಬಳಿಕ ಕರಿಬೇವು ಸೊಪ್ಪು, ಹಸಿಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ-ಬೆಳ್ಳುಳ್ಳಿ ಹಾಕಿ. ನಂತರ ಮ್ಯಾರಿನೇಟ್ ಮಾಡಿಟ್ಟ ಕೋಳಿಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಲು ಬಿಡಿ.
- ಚಿಕನ್ ಚೆನ್ನಾಗಿ ಬೆಂದಾಗ ಅದಕ್ಕೆ ರುಬ್ಬಿರುವ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಜಾಸ್ತಿ ನೀರು ಸೇರಿಸಬೇಡಿ. ಮಸಾಲೆ ಚೆನ್ನಾಗಿ ಕುದಿ ಬಂದಾಗ, ತೆಂಗಿನಹಾಲನ್ನು ಸೇರಿಸಿ. ಇದನ್ನು ಮತ್ತೆ ಒಂದು ಕುದಿ ಬರಲು ಬಿಡಿ. ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಚಿಕನ್ ಸಾಂಬಾರು ಸವಿಯಲು ಸಿದ್ಧ.
ಈ ಚಿಕನ್ ಸಾಂಬಾರ್ ರೊಟ್ಟಿ, ಚಪಾತಿ, ದೋಸೆ, ಇಡ್ಲಿ, ಅನ್ನದೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ರೀತಿ ಕೋಳಿ ಸಾರು ಮಾಡಿ ನೋಡಿ. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ.