Mango Recipe: ಮ್ಯಾಂಗೋ ಕೇಕ್‌ನಿಂದ ಕುಲ್ಫಿವರೆಗೆ; ಬೇಸಿಗೆಗೆ ಬೆಸ್ಟ್ ಎನ್ನಿಸುವ ಮಾವಿನಹಣ್ಣಿನ ರೆಸಿಪಿಗಳಿವು, ನೀವೂ ಟ್ರೈ ಮಾಡಿ
ಬೇಸಿಗೆ ಎಂದರೆ ಮಾವಿನಹಣ್ಣಿನ ಕಾಲ. ಈ ಕಾಲದಲ್ಲಿ ಬಗೆ ಬಗೆ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಾಗಂತ ಮಾವಿನಹಣ್ಣುಗಳನ್ನೇ ತಿನ್ನುತ್ತಿದ್ದರೆ ನಿಮಗೆ ಬೇಸರ ಬರಬಹುದು. ಹಾಗಿದ್ದಾಗ ನೀವು ಮಾವಿನಹಣ್ಣಿನಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು. ಇದು ಮಕ್ಕಳಿಂದ ದೊಡ್ಡವವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ಮಾವಿನಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ, ಇದರ ಪರಿಮಳ ರುಚಿಗೆ ಮನ ಸೋಲದವರಿಲ್ಲ. ಏಪ್ರಿಲ್, ಮೇ ತಿಂಗಳ ಎಂದರೆ ಹಣ್ಣುಗಳ ರಾಜ ಮಾವಿನದ್ದೇ ದರ್ಬಾರು. ಹಾಗಂತ ಪ್ರತಿದಿನ ಮಾವಿನಹಣ್ಣು ತಿಂದರೆ ಬೇಸರ ಮೂಡಬಹುದು. ಅದಕ್ಕಾಗಿ ನೀವು ಮಾವಿನಹಣ್ಣಿನಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು. ನೀವು ಈ ಬಾರಿ ಮಾವಿನ ಸೀಸನ್‌ನಲ್ಲಿ ವಿಶೇಷ ರೆಸಿಪಿಗಳನ್ನು ತಯಾರಿಸುವ ಬಯಕೆ ನಿಮಗಿದ್ದರೆ ಇಲ್ಲಿದೆ ಒಂದಿಷ್ಟು ರೆಸಿಪಿಗಳು.
ಮಾವಿನಹಣ್ಣಿನ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿಗಳು: ಅಲ್ಫಾನ್ಸೋ ಮಾವಿನಹಣ್ಣು - 3 ಮಧ್ಯಮ ಗಾತ್ರದ್ದು, ಕಂಡೆನ್ಸ್ಡ್ ಮಿಲ್ಕ್ - 400 ಗ್ರಾಂ, ಕ್ರೀಮ್ - 3 ರಿಂದ 4 ಕಪ್, ವೆನಿಲ್ಲಾ ಎಕ್ಸಾರ್ಟ್, ಹಾಲು - 1 ಕಪ್,
ಮಾವಿನಹಣ್ಣಿನ ಐಸ್‌ಕ್ರೀಮ್ ತಯಾರಿಸುವ ವಿಧಾನ: ಕಳಿತ ಮಾವಿನಹಣ್ಣುಗಳನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬ್ಲೆಂಡರ್‌ನಲ್ಲಿ ಹೆಚ್ಚಿದ ಮಾವಿನಹಣ್ಣುಗಳನ್ನು ಹಾಕಿ. ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣ ಯಾವುದೇ ಗಂಟುಗಳಿಲ್ಲದಂತೆ ನುಣ್ಣಗಿನ ಪೇಸ್ಟ್ ಆಗಬೇಕು. ಒಂದು ದೊಡ್ಡ ಬೌಲ್‌ನಲ್ಲಿ 4 ಕಪ್ ಕ್ರೀಮ್ ಸೇರಿಸಿ. ಕ್ರೀಮ್ ದಪ್ಪಗಿದ್ದರೆ ಎಲೆಕ್ಟ್ರಿಕ್ ಬೀಟರ್‌ನಿಂದ ತೆಳ್ಳನೆಯ ರೂಪಕ್ಕೆ ತನ್ನಿ. ಕ್ರೀಮ್ ಒಂದು ಹದಕ್ಕೆ ಬಂದ ಮೇಲೆ ಮಾವು ಕಂಡೆನ್ಸ್ಡ್ ಮಿಲ್ಕ್ ಸೇರಿಸಿದ ಮಿಶ್ರಣವನ್ನು ಅದಕ್ಕೆ ಹಾಕಿ. ಅದಕ್ಕೆ 1/2 ಟೇಬಲ್ ಚಮಚ ವೆನ್ನಿಲಾ ಎಕ್ಸ್ಟಾರ್ಟ್ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ವಿಸ್ಕ್ ಮಾಡಿ. ಈ ಮಿಶ್ರಣ ಎಲ್ಲವೂ ಚೆನ್ನಾಗಿ ಬೆರೆತ ನಂತರ 3 ಟೇಬಲ್ ಚಮಚ ಹಾಲು ಸೇರಿಸಿ ಮತ್ತೆ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಅಲ್ಯೂಮಿನಿಯಂ ಹಾಳೆ ಹಾಸಿರುವ ಅಗಲ ಬಾಯಿ ಇರುವ ಪಾತ್ರೆಯ ಮೇಲೆ ಸುರಿಯಿರಿ. ಇದನ್ನು 7 ರಿಂದ 8 ಗಂಟೆಗಳ ಕಾಲ ಫ್ರಿಜರ್‌ನಲ್ಲಿಡಿ. ಈಗ ನಿಮ್ಮ ಮುಂದೆ ರುಚಿಯಾದ ಮಾವಿನಹಣ್ಣಿನ ಐಸ್‌ಕ್ರೀಮ್ ತಿನ್ನಲು ಸಿದ್ಧ.
ಮಾವಿನಹಣ್ಣಿನ ಕೇಕ್
ಬೇಕಾಗುವ ಸಾಮಗ್ರಿಗಳು: ಅಲ್ಫಾನ್ಸೋ ಮಾವಿನಹಣ್ಣು - 3, ಆಲ್ ಪರ್ಪಸ್ ಫ್ಲೋರ್ - (ಇದಕ್ಕೆ ಮೈದಾಹಿಟ್ಟು ಅಥವಾ ಗೋಧಿಹಿಟ್ಟು ಯಾವುದನ್ನು ಬೇಕಾದ್ರೂ ಬಳಸಬಹುದು), ಸಕ್ಕರೆ - ಒಂದೂವರೆ ಕಪ್, ತುಪ್ಪ - 1 ಚಮಚ, ಎಣ್ಣೆ - 1 ಚಮಚ, ಕಾಲು - 2 ಚಮಚ, ಏಲಕ್ಕಿ ಪುಡಿ - ಚಿಟಿಕೆ, ಅಡುಗೆ ಸೋಡಾ ಹಾಗೂ ಬೇಕಿಂಗ್ ಪೌಡರ್ ಸ್ವಲ್ಪ.
ತಯಾರಿಸುವ ವಿಧಾನ: ನಿಮಗೆ ಬೇಕಾದ ಗಾತ್ರದ ಕೇಕ್ ಟಿನ್‌ಗೆ ಪಾರ್ಚ್‌ಮೆಂಟ್ ಪೇಪರ್ ಹಾಕಿ, ಅದರ ಮೇಲೆ ಎಣ್ಣೆ ಸವರಿ. ಒಂದು ಕಪ್‌ನಲ್ಲಿ 1 ಕಪ್ ಮೈದಾ, ಚಿಟಿಕೆ ಏಲಕ್ಕಿ ಪುಡಿ, ಸ್ವಲ್ಪ ಬೇಕಿಂಗ್ ಪುಡಿ, ಸ್ವಲ್ಪ ಅಡುಗೆ ಸೋಡಾ ಹಾಕಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಡೆ ಇಡಿ. ಇನ್ನೊಂದು ಬೌಲ್‌ನಲ್ಲಿ ಕಾಲು ಕಪ್ ಎಣ್ಣೆ, ಅರ್ಧ ಕಪ್ ಕ್ಯಾಸ್ಟರ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಕಳಿತ ಮಾವಿನಹಣ್ಣಿನ ತಿರುಳು ಸೇರಿಸಿ, ಚೆನ್ನಾಗಿ ತಿರುಗಿಸಿ. ಇದಕ್ಕೆ ಮೊದಲೇ ಕುದಿಸಿಟ್ಟುಕೊಂಡಿದ್ದ ಹಾಲು ಹಾಕಿ ಈ ಎಲ್ಲವನ್ನೂ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಿಟ್ಟು ಸೇರಿಸಿ ಎಲ್ಲವನ್ನು ಕಲೆಸಿ. ಈಗ ನಿಮ್ಮ ಮುಂದೆ ಒಂದು ಹದವಾದ ಹಿಟ್ಟು ಸಿದ್ಧವಾಗುತ್ತದೆ. ಯಾವುದೇ ಗಂಟಿಲ್ಲದಂತೆ ಹಿಟ್ಟು ತಯಾರಿಸಿಕೊಳ್ಳಬೇಕು. ಅದಕ್ಕೆ ಉಳಿದ ಹಾಲು ಸೇರಿಸಿ ದಪ್ಪ ಕ್ರೀಮ್ ಆಕಾರಕ್ಕೆ ಹಿಟ್ಟನ್ನು ತಯಾರಿಸಿ. ಇದನ್ನು ಮೊದಲೇ ತಯಾರಿಸಿಟ್ಟುಕೊಂಡ ಕೇಕ್ ಟಿನ್ ಮೇಲೆ ಸುರಿಯಿರಿ. ಇದನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ರಿಹೀಟ್ ಮಾಡಿಕೊಂಡಿದ್ದ ಓವನ್‌ನಲ್ಲಿ 30 ರಿಂದ 35 ನಿಮಿಷ ಬೇಯಿಸಿ. ಒಮ್ಮೆ ಟೂತ್‌ಪಿಕ್ ಸಹಾಯದಿಂದ ಬೆಂದಿದ್ಯಾ ನೋಡಿಕೊಳ್ಳಿ. ಈ ಸ್ಪೆಶಲ್ ಮಾವಿನಹಣ್ಣಿನ ಕೇಕ್ ಅನ್ನು ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನದೇ ಇದ್ದರೆ ಕೇಳಿ.
ಮ್ಯಾಂಗೋ ಕುಲ್ಫಿ
ಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನಹಣ್ಣಿನ ತಿರುಳು - ಒಂದೂವರೆ ಕಪ್, ಕಂಡೆನ್ಸ್ಡ್ ಮಿಲ್ಕ್ - 1/2 ಟಿನ್, ಕ್ರೀಮ್ - 1ಕಪ್, ಏಲಕ್ಕಿ - ಚಿಟಿಕೆ, ಕೇಸರಿ - ಐದಾರು ದಳ, ಪಿಸ್ತಾ - 2 ಟೇಬಲ್ ಚಮಚ,
ತಯಾರಿಸುವ ವಿಧಾನ: 2 ಟೇಬಲ್ ಚಮಚ ಬಿಸಿನೀರಿನಲ್ಲಿ ಕೇಸರಿ ದಳಗಳನ್ನು ನೆನೆಸಿ ಒಂದೆಡೆ ಇಡಿ. ಮಾವಿನಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಬ್ಲೆಂಡರ್ ಜಾರ್‌ನಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಕ್ರೀಮ್, ಕೇಸರಿ, ಕಂಡೆನ್ಸ್ಡ್ ಮಿಲ್ಕ್, ಏಲಕ್ಕಿ ಸೇರಿಸಿ. ಈ ಎಲ್ಲವನ್ನೂ ಒಂದು ರೌಂಡ್ ತಿರುಗಿಸಿಕೊಳ್ಳಿ. ಅದಕ್ಕೆ ಪಿಸ್ತಾಗಳನ್ನು ಹೆಚ್ಚಿ ಹಾಕಿ. ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್‌ಗೆ ಹಾಕಿ. ಮಧ್ಯದಲ್ಲಿ ಒಂದು ಕಡ್ಡಿ ಇರಿಸಿ. ಇದನ್ನು 7 ರಿಂದ 8 ಗಂಟೆಗಳ ಕಾಲ ಫ್ರಿಜರ್‌ನಲ್ಲಿರಿಸಿ. ನಂತರ ಕುಲ್ಫಿ ಮೌಲ್ಡ್ ಅನ್ನು ಹೊರ ಭಾಗ ನೀರಿನಲ್ಲಿ ಅದ್ದಿ, ಕುಲ್ಫಿ ಚೆನ್ನಾಗಿ ತೆಗೆಯಲು ಬರುತ್ತದೆ. ಈಗ ನಿಮ್ಮ ಮುಂದಿನ ರುಚಿಯಾದ ಕುಲ್ಫಿ ತಿನ್ನಲು ಸಿದ್ಧವಾಗುತ್ತದೆ.
ವಿಭಾಗ