ಕನ್ನಡ ಸುದ್ದಿ  /  ಜೀವನಶೈಲಿ  /  Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಮ್ಯಾಂಗೋ ಮಲೈ ಖಾಂಡ್ವಿ ರೋಲ್‌... ಹೆಸರು ವಿಭಿನ್ನವಾಗಿರುವಂತೆ ಇದನ್ನು ತಯಾರಿಸುವ ವಿಧಾನವೂ ಕೂಡ ಕೊಂಚ ವಿಭಿನ್ನ. ಮಾವಿನಹಣ್ಣಿನಿಂದ ತಯಾರಿಸಬಹುದಾದ ಈ ಗುಜರಾತಿ ಮೂಲದ ಸಿಹಿತಿನಿಸನ್ನು ನೀವೂ ಇಷ್ಟಪಟ್ಟು ತಿನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಮಾಡೋದು ಹೇಗೆ ನೋಡಿ. (ಬರಹ: ಭಾಗ್ಯ ದಿವಾಣ)

ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ
ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ

ಕರ್ನಾಟಕದಲ್ಲಿ ಅಷ್ಟಾಗಿ ಪರಿಚಿತವಲ್ಲವಾದರೂ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಪಾಕಶೈಲಿಯಲ್ಲಿ ಪ್ರಮುಖವಾಗಿರುವ ಖಾದ್ಯ ಖಾಂಡ್ವಿ. ಪಟುಲಿ, ದಹಿವಾದಿ ಅಥವಾ ಸುರಳೀಚಿ ವಡಿ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಖಾಂಡ್ವಿಯು ಒಂದು ಖಾರದ ತಿಂಡಿಯಾಗಿದೆ. ಅಲ್ಲದೇ ಲಘು ಉಪಹಾರವಾಗಿಯೂ ಬಳಕೆ ಮಾಡುವ ಖಾದ್ಯ. ಕಡಲೆಹಿಟ್ಟು ಮತ್ತು ಮೊಸರಿನಿಂದ ತಯಾರಿಸಲಾಗುವ ಈ ಖಾಂಡ್ವಿ ರಾಜ್ಯಗಳ ಗಡಿಯನ್ನೂ ದಾಟಿ ದೇಶದೆಲ್ಲೆಡೆ ಬಹು ಬೇಡಿಕೆಯನ್ನು ಪಡೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಆದರೆ ನಿತ್ಯದಂತೆ ಖಾಂಡ್ವಿ ತಿನ್ನುವ ಬದಲು ರುಚಿಯಲ್ಲಿ ವ್ಯತ್ಯಾಸ ಮಾಡಿಕೊಂಡರೆ ಹೇಗೆ? ಹೌದು, ಖಾರ ಖಾರವಾದ ಖಾಂಡ್ವಿಗೆ ಬದಲಾಗಿ ಸಿಹಿ ರುಚಿಯ ಖಾಂಡ್ವಿ, ಅದರಲ್ಲೂ ಈಗ ಮಾವಿನ ಸೀಸನ್‌ ಶುರುವಾಗಿದೆ. ಮಾವಿನ ಹಣ್ಣು ಮಲೈ ಖಾಂಡ್ವಿ ಮಾಡಿದ್ರೆ ಮಕ್ಕಳಿಂದ ವಯಸ್ಸಾದವರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಾದರೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಮ್ಯಾಂಗೋ ಮಲೈ ಖಾಂಡ್ವಿಗೆ ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಮಾವಿನ ಹಣ್ಣಿನ ಪ್ಯೂರಿ, 2 ಚಮಚ ಸಕ್ಕರೆ, 2 ಚಮಚ ಕಂಡೆನ್ಸ್ಡ್‌ ಮಿಲ್ಕ್‌, 2 ಚಮಚ ಸಕ್ಕರೆ ಹುಡಿ, 4 ಚಮಚ ಒಣಗಿದ ತೆಂಗಿನ ತುರಿ, 7-8 ಪಿಸ್ತಾ, ಅರ್ಧ ಚಮಚ ಏಲಕ್ಕಿ ಪುಡಿ, 2 ಚಮಚ ಹಾಲು

ಮಾವಿನಹಣ್ಣಿನ ಖಾಂಡ್ವಿ ಮಾಡುವ ವಿಧಾನ

ಕಡಲೆ ಹಿಟ್ಟು ಅರ್ಧ ಕಪ್ ತೆಗೆದುಕೊಂಡು, ಅದಕ್ಕೆ ಕಾಲು ಕಪ್ ಮಾವಿನ ತಿರುಳು ಅಥವಾ ಪ್ಯೂರಿಯನ್ನು ಸೇರಿಸಿ ಗಂಟುಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಒಂದು ಕಪ್ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಗ್ರೈಂಡ್‌ ಮಾಡಿಕೊಳ್ಳಿ. ಈ ಮಿಶ್ರಣ ಗಟ್ಟಿಯೆನ್ನಿಸಿದರೆ ಮತ್ತೆ ಅರ್ಧ ಕಪ್‌ ನೀರು ಸೇರಿಸಿ ಮತ್ತೊಮ್ಮೆ ಗ್ರೈಂಡ್‌ ಮಾಡಿ. ಈ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಮಧ್ಯಮ ಉರಿಯಲ್ಲಿ ಕೈಬಿಡದೆ ಚೆನ್ನಾಗಿ ಬೇಯಿಸಿಕೊಳ್ಳಿ. 5 ನಿಮಿಷಗಳ ನಂತರ ಇದಕ್ಕೆ 3 ಚಮಚ ಸಕ್ಕರೆ ಸೇರಿಸಿ ಮಧ್ಯಮ ಉರಿಯಲ್ಲೇ ಬೇಯಲು ಬಿಡಿ. ಅದು ಕುದಿಯಲು ಪ್ರಾರಂಭವಾಗುವವರೆಗೆ ಬೇಯಿಸಿ, ನಂತರ 10 ನಿಮಿಷಗಳಿಗಿಂತ ಹೆಚ್ಚು ಕಾಲ ಬೇಯಿಸಿ. ಈಗ ಹದವಾಗಿ ಸಿದ್ಧವಾದ ಈ ಮಿಶ್ರಣವನ್ನು ಒಂದು ತಟ್ಟೆಯನ್ನು ಕವಚಿ ಹಾಕಿಕೊಂಡು ಅದರ ಮೇಲೆ ಒಂದೊಂದು ಸೌಟು ಹಿಟ್ಟನ್ನು ತೆಳುವಾಗಿ ಹರಡಿ 10 ನಿಮಿಷಗಳ ಕಾಲ ಆರಲು ಬಿಡಿ. ಇದು ಸೆಟ್ ಆದ ನಂತರ ಅದನ್ನು 1.5 ರಿಂದ 2 ಇಂಚುಗಳಷ್ಟು ತುಂಡುಗಳಾಗಿ ಕತ್ತರಿಸಿ. ಖಾಂಡ್ವಿಯನ್ನು ಚಾಕುವನ್ನು ಬಳಸಿ ಬೇರ್ಪಡಿಸಿ ಸಣ್ಣ ಸಣ್ಣ ಸುರುಳಿಗಳಾಗಿ ಸುತ್ತಿಕೊಳ್ಳಿ.

ಖಾಂಡ್ವಿ ಸಿದ್ಧವಾದ ಬಳಿಕ ಅದನ್ನು ಸರ್ವ್‌ ಮಾಡುವುದಕ್ಕಾಗಿ ಒಂದು ಬೌಲ್‌ನಲ್ಲಿ 2 ರಿಂದ 3 ಚಮಚ ಮಾವಿನ ತಿರುಳನ್ನು ತೆಗೆದುಕೊಳ್ಳಿ. ಅದಕ್ಕೆ 2 ಚಮಚ ಕಂಡೆನ್ಸ್ಡ್‌ ಮಿಲ್ಕ್ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ. ಅದರ ಸ್ಥಿರತೆಯನ್ನು ಸರಿಪಡಿಸಲು 2 ಚಮಚ ಹಾಲು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸುರುಳಿಗಳಾಗಿ ಸುತ್ತಿಕೊಂಡಿಟ್ಟಿರುವ ಖಾಂಡ್ವಿಗಳ ಮೇಲೆ ಹರಡಿ, ಸಣ್ಣದಾಗಿ ಹೆಚ್ಚಿಕೊಂಡಿರುವ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರ ಮಾವಿನ ಖಾಂಡ್ವಿ ಸವಿಯಲು ಸಿದ್ಧ.

ಮಾವಿನಹಣ್ಣು ಹೇರಳವಾಗಿ ಸಿಗುವ ಕಾಲದಲ್ಲೇ ಹೀಗೆ ಬಗೆಬಗೆಯ ಸಿಹಿತಿನಿಸುಗಳನ್ನು ನೀವೂ ತಯಾರಿಸಿ ನೋಡಿ. ಅದರ ರುಚಿಗೆ ತಲೆಬಾಗದೇ ಇರುವುದಕ್ಕೆ ಸಾಧ್ಯವೇ ಇಲ್ಲ, ಏನಂತೀರಿ? 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ