ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಮಾವಿನಹಣ್ಣಿನಿಂದ ಭಿನ್ನ ರುಚಿಯ ಪಾಯಸ ಮಾಡಬೇಕು ಅನ್ನೋ ಆಸೆ ನಿಮಗೂ ಇದ್ಯಾ? ಆದ್ರೆ ಹೇಗೆ ಮಾಡಬಹುದು ಅಂತ ನೀವು ಚಿಂತಿಸುತ್ತಿರಬಹುದು. ಒಂದಲ್ಲ, ಎರಡಲ್ಲ ಮೂರು ಬಗೆಯ ಮಾವಿನಹಣ್ಣಿನ ರೆಸಿಪಿಯನ್ನು ನಾವು ನಿಮಗೆ ಕಲಿಸುತ್ತೇವೆ. ಇಲ್ಲಿದೆ ಬಗೆ ಬಗೆ ಮಾವಿನಹಣ್ಣಿನ ಪಾಯಸದ ರೆಸಿಪಿ. (ಬರಹ: ಭಾಗ್ಯ ದಿವಾಣ)

ಮಾವಿನಹಣ್ಣಿನ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ
ಮಾವಿನಹಣ್ಣಿನ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ (Canva)

ಪಾಯಸವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಗಸಗಸೆ ಪಾಯಸ, ಶ್ಯಾವಿಗೆ ಪಾಯಸ, ಕಡ್ಲೆಬೇಳೆ ಪಾಯಸ, ಸಾಬಕ್ಕಿ ಪಾಯಸ, ಹೆಸರುಬೇಳೆ ಪಾಯಸ, ಅವಲಕ್ಕಿ ಪಾಯಸ ಹೀಗೆ ಹೇಳುತ್ತಾ ಹೋದರೆ ಬಗೆಬಗೆಯ ಪಾಯಸಗಳನ್ನು ನಾವು ಹಬ್ಬ ಹರಿದಿನಗಳಲ್ಲಿ ಇಲ್ಲವೇ ತಿನ್ನಬೇಕೆನ್ನಿಸಿದಾಗಲೆಲ್ಲಾ ಮಾಡುತ್ತಲೇ ಇರುತ್ತೇವೆ. ಆದರೆ ಈ ಪಾಯಸಗಳನ್ನು ತಿಂದು ಬೇಸರವಾಗಿದ್ದು, ಈ ಸೀಸನ್‌ಗೆ ತಕ್ಕಹಾಗೆ ಪಾಯಸ ಮಾಡಿಕೊಂಡರೆ ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಬೆಸ್ಟ್‌ ಆಯ್ಕೆ ಮಾವಿನಹಣ್ಣಿನ ಪಾಯಸ.

ಟ್ರೆಂಡಿಂಗ್​ ಸುದ್ದಿ

ಹೌದು, ಸದ್ಯ ಹಣ್ಣುಗಳ ರಾಜನದ್ದೇ ಕಾಲವಾಗಿರುವುದರಿಂದ ಮಾವಿನಹಣ್ಣಿನಿಂದ ಬಗೆ ಬಗೆಯ ಪಾಯಸಗಳನ್ನು ತಯಾರಿಸಿ ತಿನ್ನಬಹುದು. ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ನೀಡುವಂತಹ ಮಾವಿನಹಣ್ಣಿನ ಪಾಯಸಗಳು ಯಾವುವು, ಅದನ್ನು ತಯಾರಿಸುವ ವಿಧಾನ ಹೇಗೆ ಎಂಬೆಲ್ಲದರ ಮಾಹಿತಿ ಇಲ್ಲಿದೆ.

ಮಾವಿನ ಹಣ್ಣಿನ ಅಕ್ಕಿ ಪಾಯಸ

ಬೇಕಾಗಿರುವ ಸಾಮಗ್ರಿಗಳು: 3 ಮಾವಿನ ಹಣ್ಣು, 4 ಚಮಚ ಅಕ್ಕಿ, 1 ಕಪ್‌ ನೀರು, ಅರ್ಧ ಲೀಟರ್ ಹಾಲು, 100 ಗ್ರಾಂ ಸಪ್ಪೆ ಕೋವಾ, ಅರ್ಧ ಕಪ್‌ ಸಕ್ಕರೆ, ಸ್ವಲ್ಪ ಗೋಡಂಬಿ ಹಾಗೂ ಬಾದಾಮಿ, 3 ಚಮಚ ಹಾಲಿನ ಕೆನೆ, 1 ಚಮಚ ತುಪ್ಪ

ತಯಾರಿಸುವ ವಿಧಾನ: 4 ಚಮಚ ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿಕೊಳ್ಳಿ. ನಂತರ ಅಕ್ಕಿಯಲ್ಲಿರುವ ನೀರನ್ನು ಸೋಸಿಕೊಂಡು ಕೈಯಲ್ಲೇ ಸಣ್ಣದಾಗಿ ಹುಡಿ ಮಾಡಿಕೊಳ್ಳಿ. ಇದನ್ನು ಕುಕ್ಕರ್‌ಗೆ ಹಾಕಿ 1 ಕಪ್‌ ನೀರು, ಅರ್ಧ ಕಪ್‌ ಹಾಲು ಹಾಕಿ ಲಿಡ್‌ ಮುಚ್ಚಿ, ಮಧ್ಯಮ ಉರಿಯಲ್ಲಿ ಅನ್ನವನ್ನು ಸರಿಯಾಗಿ 4 ವಿಸಿಲ್‌ ಹಾಕಿಸಿಕೊಳ್ಳಿ. ನಂತರ ಕುಕ್ಕರ್‌ ತಣ್ಣಗಾದ ಮೇಲೆ ಲಿಡ್‌ ಓಪನ್‌ ಮಾಡಿ ಬೆಂದ ಅನ್ನಕ್ಕೆ ಕಾಲು ಲೀಟರ್‌ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಇದಕ್ಕೆ 100 ಗ್ರಾಂನಷ್ಟು ಸಪ್ಪೆ ಕೋವಾ ಹಾಗೂ ಅರ್ಧ ಕಪ್‌ ಸಕ್ಕರೆ, ಗೋಡಂಬಿ, ಬಾದಾಮಿ ಸೇರಿದಂತೆ ನಿಮ್ಮಷ್ಟದ ಡ್ರೈ ಫ್ರುಟ್ಸ್‌, ಮೂರು ಚಮಚ ಹಾಲಿನ ಕೆನೆ ಹಾಗೂ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಮಧ್ಯಮ ಉರಿಯಲ್ಲಿ ಕೈಯಾಡಿಸುತ್ತಲೇ ಇರಿ. 10 ನಿಮಿಷಗಳ ನಂತರ ಪಾಯಸ ಕುದಿದು ಗಟ್ಟಿಯಾಗುತ್ತಾ ಬಂದಾಗ ಸ್ಟೌವ್‌ ಆಫ್‌ ಮಾಡಿ, ತಣ್ಣಗಾಗಲು ಬಿಡಿ. ನಂತರ ಇದಕ್ಕೆ 2 ಮಾವಿನ ಹಣ್ಣುಗಳ ಪ್ಯೂರಿಯನ್ನು ಸೇರಿಸುವುದರ ಜೊತೆಗೆ ಒಂದು ಮಾವಿನ ಹಣ್ಣನ್ನು ಸಣ್ಣಗೆ ಹೆಚ್ಚಿ ಸೇರಿಸಿಕೊಂಡರೆ ರುಚಿಕರವಾದ ಮಾವಿನ ಹಣ್ಣಿನ ಅಕ್ಕಿ ಪಾಯಸವನ್ನು ಸವಿಯಬಹುದು.

ಮಾವಿನಹಣ್ಣಿನ ಶಾಬಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು: 2 ಸಿಹಿ ಮಾವಿನ ಹಣ್ಣು, ಅರ್ಧ ಕಪ್‌ ನೈಲಾನ್‌ ಸಾಬಕ್ಕಿ, 2 ಚಮಚ ತುಪ್ಪ, ಅರ್ಧ ಲೀಟರ್‌ ನೀರು, ಅರ್ಧ ಲೀಟರ್‌ ಹಾಲು, 1 ಕಪ್‌ ಸಕ್ಕರೆ, 2 ಚಮಚ ಕಸ್ಟರ್ಡ್‌ ಪೌಡರ್‌, 15 ಗೋಡಂಬಿ, 20 ಒಣದ್ರಾಕ್ಷಿ

ತಯಾರಿಸುವ ವಿಧಾನ: ಕಡಾಯಿಯನ್ನು ಬಿಸಿ ಮಾಡಿಕೊಂಡು ಅರ್ಧ ಕಪ್‌ ಅಳತೆಯ ನೈಲಾನ್‌ ಸಾಬಕ್ಕಿಯನ್ನು ಹಾಕಿ, 1 ಚಮಚ ತುಪ್ಪ ಸೇರಿಸಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. ಇದಕ್ಕೆ ಅರ್ಧ ಲೀಟರ್‌ ಕುದಿಯುತ್ತಿರುವ ನೀರನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು 5 ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿ. ನಂತರ ಅರ್ಧ ಲೀಟರ್‌ ಹಾಲನ್ನು ಕುದಿಸಿ ಈ ಮಿಶ್ರಣಕ್ಕೆ ಸೇರಿಸಿ ಮತ್ತೆ ಹಾಲಲ್ಲಿ ಸಬ್ಬಕ್ಕಿಯನ್ನು 5 ನಿಮಿಷಗಳ ಕಾಲ ಬೇಯಿಸಿ. ಇದಕ್ಕೆ 1 ಕಪ್‌ ಸಕ್ಕರೆಯನ್ನು ಸೇರಿಸಿ. ಇನ್ನೊಂದು ಬೌಲ್‌ನಲ್ಲಿ 2 ಚಮಚ ಕಸ್ಟರ್ಡ್‌ ಪೌಡರಿಗೆ 4 ಚಮಚ ಹಾಲನ್ನು ಸೇರಿಸಿ, ಗಂಟುಗಳಾಗದಂತೆ ಚೆನ್ನಾಗಿ ಮಿಶ್ರ ಮಾಡಿಕೊಂಡು ಪಾಯಸಕ್ಕೆ ಸೇರಿಸಿ ಬೆರೆತುಕೊಳ್ಳಲು ಬಿಡಿ. ಈಗ ಸ್ಟೌವ್‌ ಆಪ್‌ ಮಾಡಿಕೊಳ್ಳಿ. 2 ಸಿಹಿ ಮಾವಿನಹಣ್ಣಿನ ತಿರುಳನ್ನು ಪಾಯಸಕ್ಕೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಕರವಾದ ಮಾವಿನ ಹಣ್ಣಿನ ಸಾಬಕ್ಕಿ ಪಾಯಸ ತಯಾರಾಗುತ್ತದೆ.

ಮಾವಿನಹಣ್ಣಿನ ಶಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು: 1 ಮಾವಿನ ಹಣ್ಣು, 1 ಕಪ್‌ ಶಾವಿಗೆ, ಮುಕ್ಕಾಲು ಕಪ್‌ ಸಕ್ಕರೆ, 3 ಕಪ್‌ ಹಾಲು, 2.5 ಕಪ್‌ ನೀರು, ದ್ರಾಕ್ಷೆ ಗೋಡಂಬಿ, 1 ಚಿಟಿಕೆ ಏಲಕ್ಕಿ

ತಯಾರಿಸುವ ವಿಧಾನ: ಪಾತ್ರೆಯಲ್ಲಿ 3 ಕಪ್‌ ಹಾಲಿಗೆ 2.5 ಕಪ್‌ ನೀರು ಸೇರಿಸಿ ಕಾಯಿಸಿಕೊಳ್ಳಿ. ಮತ್ತೊಂದು ಕಡಾಯಿಗೆ 4 ಚಮಚ ತುಪ್ಪ ಹಾಕಿ ಬಿಸಿಯಾದ ನಂತರ ದ್ರಾಕ್ಷೆ ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಅದೇ ತುಪ್ಪಕ್ಕೆ 1 ಕಪ್‌ ಶಾವಿಗೆ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಕುದಿದ ಹಾಲನ್ನೂ ನಿಧಾನವಾಗಿ ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಇದಕ್ಕೆ ಮುಕ್ಕಾಲು ಕಪ್‌ ಸಕ್ಕರೆ ಸೇರಿಸಿ ಕರಗಿಸಿ ಮತ್ತೆ 5 ನಿಮಷ ಬೇಯಿಸಿಕೊಳ್ಳಿ. ಇದಕ್ಕೆ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿ, 1 ಚಿಟಿಕೆ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ ತಣ್ಣಗಾಗಲು ಬಿಡಿ. ಇದಕ್ಕೆ ಸಿಹಿಯಾದ ಒಂದು ಮಾವಿನ ಹಣ್ಣಿನ ಪೇಸ್ಟನ್ನು ಚೆನ್ನಾಗಿ ಬೆರೆಸಿಕೊಂಡರೆ ಮಾವಿನಹಣ್ಣಿನ ಶಾವಿಗೆ ಪಾಯಸ ಸವಿಯಲು ಸಿದ್ಧವಾಗುತ್ತದೆ.

ಹೀಗೆ ಒಂದೇ ವಿಧವಾದ ಪಾಯಸವನ್ನು ಮಾಡಿ, ರುಚಿಸಿ, ಬೇಜಾರಾಗಿದ್ದರೆ ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಈ ಪಾಯಸಗಳನ್ನೂ ಒಮ್ಮೆ ತಯಾರಿಸಿ ನೋಡಿ. ನೀವೂ ಮೆಚ್ಚಿಕೊಳ್ಳುತ್ತೀರಿ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ