ಅಮಟೆ ಎಂದರೆ ಅಸಡ್ಡೆಯೇಕೆ; ತಂಬುಳಿ, ಕಾಯಿರಸ, ಸಾರು… ಆಹಾ, ತಿಂದವನೇ ಬಲ್ಲ ಅಮಟೆಕಾಯಿ ಖಾದ್ಯಗಳ ರುಚಿಯ; ಜಯಶ್ರೀ ಕಾಸರವಳ್ಳಿ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಅಮಟೆ ಎಂದರೆ ಅಸಡ್ಡೆಯೇಕೆ; ತಂಬುಳಿ, ಕಾಯಿರಸ, ಸಾರು… ಆಹಾ, ತಿಂದವನೇ ಬಲ್ಲ ಅಮಟೆಕಾಯಿ ಖಾದ್ಯಗಳ ರುಚಿಯ; ಜಯಶ್ರೀ ಕಾಸರವಳ್ಳಿ ಬರಹ

ಅಮಟೆ ಎಂದರೆ ಅಸಡ್ಡೆಯೇಕೆ; ತಂಬುಳಿ, ಕಾಯಿರಸ, ಸಾರು… ಆಹಾ, ತಿಂದವನೇ ಬಲ್ಲ ಅಮಟೆಕಾಯಿ ಖಾದ್ಯಗಳ ರುಚಿಯ; ಜಯಶ್ರೀ ಕಾಸರವಳ್ಳಿ ಬರಹ

ಜಯಶ್ರೀ ಕಾಸರವಳ್ಳಿ ಬರಹ: ಅಮಟೆ ಮಾವಿನಕಾಯಿಯಂತೆ ಬಲು ಉಪಯೋಗಿಯೆಂದರೂ ತಪ್ಪಾಗಲಾರದು. ಉಪ್ಪಿನಕಾಯಿ, ತೊಕ್ಕು, ಚಿತ್ರಾನ್ನ ತಿಳಿದಿರುವುದೇ. ಆದರೆ ಅಪ್ಪೆ ಸಾರಿನಂತೆ ಅಮಟೆ ಸಾರು, ಚಟ್ನಿ, ಪಲ್ಯ, ಕಾಯಿರಸ, ತಂಬುಳಿ, ಗೊಜ್ಜು - ಎಲ್ಲದರಲ್ಲೂ ತನ್ನದೇ ವಿಶಿಷ್ಟ ಸ್ವಾದ ಬಿಟ್ಟುಕೊಳ್ಳುವ ಸರ್ವಾನುಮತ ಕಾಯಿಯದು. ಏಳೆ ಕೆಸುವಿನ ಎಲೆಯ ಗಂಟು ಮುದ್ದುಳಿಗೆ ಅಮಟೆ ಬೇಕೇಬೇಕು.

ಅಮಟೆಕಾಯಿ ಖಾದ್ಯಗಳು
ಅಮಟೆಕಾಯಿ ಖಾದ್ಯಗಳು (PC: Jayashree Kasaravalli/ Facebook)

ಹಳ್ಳಿಗಳಲ್ಲಿ ಸಿಗುವ ಕೆಲವು ಹಣ್ಣು, ತರಕಾರಿಗಳೆಂದರೆ ಬಹುತೇಕರಿಗೆ ಅಸಡ್ಡೆ. ಅದರಲ್ಲೂ ಹುಳಿ ಅಂಶ ಇರುವ ಹಣ್ಣುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅಂತಹ ಹಣ್ಣುಗಳ ಸಾಲಿಗೆ ಅಮಟೆಕಾಯಿ ಹಾಗೂ ಹಣ್ಣುಗಳ ಕೂಡ ಸೇರುತ್ತದೆ. ಅಮಟೆ ಹುಳಿ ಅಂಶ ಇರುವ ಹಣ್ಣಾಗಿರುವ ಕಾರಣ ಇದನ್ನು ಬಳಸುವವರ ಸಂಖ್ಯೆ ಕಡಿಮೆ. ಆದರೆ ಇದರಿಂದ ಸಾಕಷ್ಟು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಿಂದ ತಯಾರಿಸಿದ ಖಾದ್ಯಗಳ ರುಚಿಯೂ ಅದ್ಭುತ. ಇಂತಹ ಅಮಟೆಕಾಯಿ ಖಾದ್ಯಗಳ ಸ್ವಾದದ ಬಗ್ಗೆ ಬರೆದಿದ್ದಾರೆ ಜಯಶ್ರೀ ಕಾಸರವಳ್ಳಿ. ಅವರ ಲೇಖನ ಓದಿದ್ರೆ ನಿಮಗೆ ಬಾಯಲ್ಲಿ ನೀರು ಬರೋದು ಮಾತ್ರವಲ್ಲ, ನೀವು ಕೂಡ ಅಮಟೆ ಪ್ರಿಯರಾಗ್ತೀರಿ.

ಜಯಶ್ರೀ ಕಾಸರವಳ್ಳಿ ಬರಹ

ನನಗೂ ಅಮಟೆಕಾಯಿಗೂ ಅವಿನಾಭಾವ ಸಂಬಂಧ. ಬಹಳಷ್ಟು ಜನರಿಗೆ ಅಮಟೆಕಾಯಿ ಅಷ್ಟಕಷ್ಟೇ. ಅದರಲ್ಲೇನು ವಿಶೇಷವೆಂಬ ಅಸಡ್ಡೆ. ಮನೆಯಲ್ಲೇನೂ ಇಲ್ಲದಾಗ ‘ಕಡೆಗೊಂದು ಅಮಟೆಕಾಯಿ ಗೊಜ್ಜು ಮಾಡಿ ಬಡಿಸಿದ್ದು‘ ಎಂದು ಯಾರಾದರೂ ರಾಗ ಎಳೆದರೆ, ಅದೆಷ್ಟು ನಿಕೃಷ್ಟವೆಂದು ಊಹಿಸಿಕೊಳ್ಳಿ. ಚಿಕ್ಕವರಿರುವಾಗ ಮನೆಯಲ್ಲಿ ತರಕಾರಿಯಿಲ್ಲದಾಗ ಏನು ಅಡುಗೆಯೆಂದು ನನ್ನಮ್ಮನನ್ನು ಕೇಳಿದರೆ, ಸಿಟ್ಟಿನಿಂದ ‘ಅಡುಗೆಯೆಂತೆ ಅಡುಗೆ, ಅಮಟೆಕಾಯಿ ಗೊಜ್ಜು, ಶುಂಠಿ ತಂಬುಳಿ!‘ ಎಂದು ಹೇಳಿಸಿಕೊಳ್ಳುವ ಈ ಅಮಟೆ ಮೇಲೆ ಯಾಕಿಷ್ಟು ಸಿಟ್ಟು ನಾನರಿಯೆ. ಯಾರನ್ನಾದರೂ ಬೈಯಬೇಕಿದ್ದರೂ, ‘ಅವನಿಗೆಂತಾ ಗೊತ್ತು, ಅಮಟೆಕಾಯಿ!‘ ಎನ್ನುವುದು ನಮ್ಮಲ್ಲಿ ಸರ್ವೇಸಾಮಾನ್ಯ.

ಇಂತಿಪ್ಪ ಅಮಟೆಕಾಯಿಯ ಮೇಲೆ ನನಗಂತೂ ವಿಪರೀತ ವ್ಯಾಮೋಹ. ಬಹಳಷ್ಟು ಜನರಿಗೆ ಅದರ ಹುಳಿ ಆಗುವುದಿಲ್ಲ. ಆದರೆ ನಾನು ಹುಳಿ ಪ್ರಿಯೆ. ಹಾಗಂತ ವಿಪರೀತ ಹುಳಿ ನನಗೂ ಆಗಿ ಬರುವುದಿಲ್ಲ. ಬೇಳೆ ಅಡುಗೆಗಳನ್ನು ಅಷ್ಟಾಗಿ ಇಷ್ಟಪಡದ ನನಗೆ, ಹುಳಿ, ಸಿಹಿ, ಖಾರ, ಉಪ್ಪು ಸಮ್ಮಿಶ್ರಣದ ಅಡುಗೆಗಳು ಯಾವತ್ತಿಗೂ ನನ್ನ ಪ್ರಧಾನ ಲಿಸ್ಟ್‌ನಲ್ಲಿರುವ ಪ್ರಿಯಪಾತ್ರ ಅಡುಗೆಗಳು. ಅದರಲ್ಲೂ ಮಲೆನಾಡಿನ ಮೂಲವಾದ ಮಾವು, ಹಲಸು, ಕೆಸು, ಅಮಟೆಗಾಯಿಗಳೆಂಬ ಅಪರೂಪದ ಕಾಯಿಪಲ್ಯೆಗಳ ಮೇಲೆ ವಿಶೇಷ ಮುತುರ್ವಜಿ. ಅವುಗಳಿಂದ ತಯಾರಾದ ಅಡುಗೆಗಳಿದ್ದರೆ ಒಂದು ತಪ್ಪಲೆ ಅನ್ನ ನಾನೊಬ್ಬಳೇ ತಿನ್ನಬಲ್ಲೆ ಎಂದು ಖಂಡಿತಾ ಉತ್ಪ್ರೇಕ್ಷೆ ಮಾಡಿ ಹೇಳದಿದ್ದರೂ, ಅಂದು ಎಂದಿಗಿಂತ ಒಂದು ತುತ್ತು ಜಾಸ್ತಿ ತಿಂದೇನು ಅಷ್ಟೇ.

ಅಮಟೆಕಾಯಿ ಖಾದ್ಯಗಳು
ಅಮಟೆಕಾಯಿ ಖಾದ್ಯಗಳು (PC: Jayashree Kasaravalli/ Facebook)

ಈ ಅಮಟೆಕಾಯಿಯಲ್ಲೂ ಎರಡು ವಿಧವಿದೆ. ಹುಳಿ ಅಮಟೆ ಮತ್ತು ಸಿಹಿ ಅಮಟೆ. ಸಾಮಾನ್ಯವಾಗಿ ಹುಳಿ ಅಮಟೆ ಮಿಡಿ ಇರುವಾಗಲೇ ಕಿತ್ತು ಉಪ್ಪಿನಕಾಯಿ ಹಾಕಿ ಬಿಡುತ್ತಾರೆ. ಸಿಹಿ ಅಮಟೆ ಏನಿದ್ದರೂ ಅಡುಗೆಗೆ. ಊರಿನಲ್ಲಿ ನಮ್ಮನೆಯಲ್ಲಿ ಎರಡೂ ಮರಗಳಿದ್ದವು. ಹುಳಿ ಅಮಟೆ ಚಿಕ್ಕ ಮರ, ಆರಾಮವಾಗಿ ಕೀಳಬಹುದಿತ್ತು. ಸಿಹಿ ಅಮಟೆ ಹೆಮ್ಮರ. ಅಡುಗೆಗೆ ಬೇಕೆಂದರೆ ಮಾತ್ರ ಕೀಳುವ ಪದ್ಧತಿ. ಇಲ್ಲವೆಂದರೆ ಇಲ್ಲ. ಮತ್ತುಳಿದಷ್ಟು ದಿನವೂ ಅವು ಮರದಲ್ಲೇ ಹಣ್ಣಾಗಿ ಗಾಳಿ, ಮಳೆಗೆ ಕೆಳಗುದುರಿ ಹೋಗುತ್ತಿತ್ತು. ಮಕ್ಕಳಿರುವಾಗ ಜೋರು ಮಳೆ, ಗಾಳಿಗೆ ಹೆಡೆಗೆ ಹಿಡಿದು ಕಾಟು ಮಾವಿನಕಾಯಿ ಅರಿಸಲು ಹೋಗುವಂತೆ ನಾವು ದಂಡು ಕಟ್ಟಿಕೊಂಡು ಕೆರೆ ಬದಿಯ ಮರದಡಿ ಉದುರಿದ್ದ ದೋರುಗಾಯಿ, ಹಣ್ಣಗಾಯಿ ಅಮಟೆ ಹೆಕ್ಕಿ ತಂದು ಉಗ್ರಾಣದಲ್ಲಿ ಶೇಕರಿಸಿಡುತ್ತಿದ್ದವು. ಯಾರೂ ಕೇಳುವವರಿಲ್ಲದ ಅದನ್ನು ಅಡುಗೆಗೆ ಉಪಯೋಗಿಸಿದರೆ ಉಂಟು, ಇಲ್ಲವೆಂದರೆ ಇಲ್ಲ. ಹಾಗೆ ಕೊಳೆತು ಹುಳ ಬಂದು ಗೊಬ್ಬರಗುಂಡಿ ಸೇರುತ್ತಿದ್ದುದ್ದೇ ಜಾಸ್ತಿ. ಆದರೆ ಅಮಟೆ ಪ್ರಿಯೆ ನಾನು ಕೆಲವೊಮ್ಮೆ ದೋರುಗಾಯಿ ಅಮಟೆಗೆ ಉಪ್ಪು, ಖಾರದಪುಡಿ ಬಳಿದುಕೊಂಡು, ಉಯ್ಯಾಲೆಯಲ್ಲಿ ಜೀಗಿಕೊಳ್ಳುತ್ತಾ ಅನ್ಯಮನಸ್ಕಳಾಗಿ ಎತ್ತಲೋ ನೋಡುತ್ತಾ ಗಂಟೆಗಟ್ಟಲೆ ಹದವಾಗಿ ಬೆರೆತ ಅಮಟೆಯೆಂಬ ಸ್ವರ್ಗ ಸುಖದ ರಸಲೋಕದಲ್ಲಿ ಮುಳುಗಿ ಹೋಗಿರುತ್ತಿದ್ದದ್ದು ಇತ್ತು. ಇತ್ತ ಪರಿ ಇಲ್ಲದಂತೆ, ಅದರಿಂದ ರಸ ಒಸರಿದಷ್ಟೂ ಹೊತ್ತು ಜಗ ಮರೆಸುವ ಅದರ ತಾದಾತ್ಮ್ಯ ಗುಣ ನೆನೆಪಿಸಿಕೊಳ್ಳುತ್ತಾ, ಹಾಗೆ ತೂಗಿಕೊಳ್ಳುತ್ತಾ ಯಾವುದೋ ಲೋಕದಲ್ಲಿ ಕಳೆದುಹೋಗುತ್ತಿದ್ದದ್ದು ಅದೆಷ್ಟು ಸಲವೋ!

ಎಲ್ಲವನ್ನೂ ಮತ್ತೊಮ್ಮೆ ನೆನೆಯುತ್ತಾ ನನ್ನ ಕೈ ಸೇರಿದ ಶಾಲಿನಿ ಮನೆ ಅಮಟೆ ಹಾಗೂ ನೆಲ್ಲಿಕಾಯಿಗೆ ಒಂದು ರೂಪ ಕೊಡುವುದರಲ್ಲಿ ಮುಳುಗಿ ಹೋಗಿದ್ದೇನೆ ಇಂದು.

ಹಾಗೆ ನೋಡಿದರೆ ಶಾಲಿನಿ ನನಗೆ ಪರಿಚಯವಾದಾಗಿನಿಂದಲೂ ಅವರ ಮನೆಯಿಂದ ನಮ್ಮನೆಗೆ ಈ ಅಮಟೆ ಪ್ರತಿ ವರುಷ ಬರುತ್ತಲೇ ಇದೆ ನಿರಂತರವಾಗಿ ಹಾಗೂ ನಾನೂ ಕೂಡಾ ಹಲವಾರು ನೆನಪುಗಳನ್ನು ಕಣ್ಣೆದುರು ಸುರಿವಿಕೊಂಡು ಅದಕ್ಕೊಂದು ಕಾಯಕಲ್ಪ ನೀಡುತ್ತಲೇ ಬಂದಿದ್ದೇನೆ ನಿರಂತರವಾಗಿ ಪ್ರತಿ ವರುಷವೂ.

ಮಲೆನಾಡಿಗರಾದ ನಾವು ಆಹಾರವನ್ನು ಆ ಕ್ಷಣವೇ ಭಕ್ಷಿಸುವುದಕ್ಕಿಂತ ಹೆಚ್ಚಾಗಿ ಸಂರಕ್ಷಿಸಿಡುವುದೇ ಜಾಸ್ತಿ. ಅಮಟೆ ಮೇಲೆ ಅಧಿಕ ಪ್ರೀತಿ ಇರುವ ನಾನಂತೂ ಶಾಲಿನಿ ಕೊಟ್ಟ ಗಳಿಗೆಯಿಂದ ಹಿಡಿದು ಮುಂದಿನ ವರುಷ ಅವರು ಕೊಡುವವರೆಗೂ ಸಂರಕ್ಷಿಸಿ ಇಟ್ಟಿರುತ್ತೇನೆ. ಹಾಗಂತ ಮನೆಗೆ ಬರುವವರಿಗೆಲ್ಲಾ ಅಮಟೆ ಅಡುಗೆ ಮಾಡಿ ಬಡಿಸುತ್ತೇನೆ ಎಂದೇನಿಲ್ಲ. ಯಾರು ತಿನ್ನಬಹುದೆಂದು ಖಾತ್ರಿ ಇದೆಯೋ ಅವರಿಗೆ ಮಾತ್ರ ಪ್ರೀತಿಯಿಂದ ಮಾಡಿ ಬಡಿಸುವೆನಷ್ಟೇ. ಹಾಗಾಗಿ ಸಂರಕ್ಷಿಸಿದ್ದು ವರ್ಷಪೂರ್ತಿ ಬರುತ್ತೆ.

ಅಮಟೆ ಮಾವಿನಕಾಯಿಯಂತೆಯೇ ಬಲು ಉಪಯೋಗಿಯೆಂದರೂ ತಪ್ಪಾಗಲಾರದು. ಉಪ್ಪಿನಕಾಯಿ, ತೊಕ್ಕು, ಚಿತ್ರಾನ್ನ ತಿಳಿದಿರುವುದೇ. ಆದರೆ ಅಪ್ಪೆ ಸಾರಿನಂತೆ ಅಮಟೆ ಸಾರು, ಚಟ್ನಿ, ಪಲ್ಯ, ಕಾಯಿರಸ, ತಂಬುಳಿ, ಗೊಜ್ಜು - ಎಲ್ಲದರಲ್ಲೂ ತನ್ನದೇ ವಿಶಿಷ್ಟ ಸ್ವಾದ ಬಿಟ್ಟುಕೊಳ್ಳುವ ಸರ್ವಾನುಮತ ಕಾಯಿಯದು. ಏಳೇ ಕೆಸುವಿನ ಎಲೆಯ ಗಂಟು ಮುದ್ದುಳಿಗೆ ಅಮಟೆ ಬೇಕೇ ಬೇಕು. ನಮ್ಮೂರಿನಲ್ಲಿ ರೈತಾಪಿ ಜನರು ಮೀನು ಸಾರಿಗೆ ಅಮಟೆ ಬೇಕೆಂದು ಕಿತ್ತುಕೊಂಡು ಹೋಗುತ್ತಿದ್ದ ನೆನಪು. ಅಮಟೆಕಾಯಿಯ ಹುಳಿ ಆಲೆಮನೆಯ ಹೊಸ ಬೆಲ್ಲದಲ್ಲಿ ಕುದ್ದು ಪಾಕಗೊಂಡು ಧಾರಾಳ ಬಿದ್ದ ತೆಂಗಿನಕಾಯಿ, ಉಪ್ಪು, ಮತ್ತುಳಿದ ಲವಜಮೆಯೊಡನೆ ಬೆರೆತು, ತನ್ನದೇ ಘಮದೊಡನೆ ತಯಾರಾದ ವ್ಯಂಜನವವೊಂದನ್ನು ಬಿಸಿ ಅನ್ನ, ಕೊಬ್ಬರಿಯೆಣ್ಣೆಯೊಡನೆ ಕಲೆಸಿಕೊಂಡು ತಿನ್ನುವಾಗಿನ ಆಹ್ಲಾದಕರಕ್ಕೆ ಸುಮ್ಮನೆ ಪದ ಪ್ರಯೋಗ ಮಾಡಿ ಸಮಯ ವ್ಯಯಿಸಲಾರೆ. ಬನ್ನಿ, ಬಾಲ್ಯದಲೊಮ್ಮೆ ಸುತ್ತಾಡಿ ಬರೋಣ, ಅಮಟೆ ತಿಂದು ಅಮಿತಾನಂದದಲ್ಲಿ ಮುಳುಗೇಳೋಣ. ತಂಬುಳಿ, ಕಾಯಿರಸ, ಅಮಟೆ ಸಾರು, ಪಲ್ಯ, ಚಿತ್ರಾನ್ನ, ಚಟ್ನಿ ಎಲ್ಲವೂ ಇವೆ. ಬಾಟಲಿಯಲ್ಲಿ ಶೇಕರಿಸಿಟ್ಟ ಅಮಟೆ ಹಾಗೂ ನೆಲ್ಲಿಕಾಯಿಗಳು. Thank you so much Shalini Murthy. 

ಡಿಸೆಂಬರ್ 23 ರಂದು ಜಯಶ್ರೀ ಕಾಸರವಳ್ಳಿ ಈ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು, 80ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 130ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 

ಜಯಶ್ರೀ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು 

ಮಲೆನಾಡಿನ ಬಾಲ್ಯದ ನೆನಪು ಮಾಡಿದ್ದಕ್ಕೆ ಧನ್ಯವಾದ: ನಮ್ಮದು ಮಲೆನಾಡಿನ ಮಡಿಲು ಗುಬ್ಬಿಗ ಎನ್ನುವ ಗ್ರಾಮ, ಅಲ್ಲಿ ಮಳೆಗಾಲದಲ್ಲಿ ಪೇಟೆಯ ಸಂಪರ್ಕ ಇರುತ್ತಿರಲಿಲ್ಲ. ಮೂರು ತಿಂಗಳಿಗಾಗುವಷ್ಟು ದಿನಸಿ ಮುಂತಾದ ಸಾಮಾನು ಬೇಸಿಗೆಯ ಅಕೇರಿಯಲ್ಲಿ ದಾಸ್ತಾನು ಮಾಡಿದರೆ ಮುಗಿಯಿತು. ಮಳೆಗಾಲದಲ್ಲಿ ಈ ಅಮಟೆಕಾಯಿ ನೀವು ಹೇಳಿದ ಹಾಗೇ ಹಲವು ಬಗೆಯ ಪದಾರ್ಥಗಳ ರೂಪದಲ್ಲಿ ನಮ್ಮ ಊಟದ ಭಾಗವಾಗಿ ರುಚಿ ಹೆಚ್ಚಿಸುತ್ತಿತ್ತು. ಕೇಸುವಿನ ಚೀಪಿನ ಹುಳಿಗೆ ಇದು ವಿಶೇಷ ರುಚಿ ನೀಡುತಿತ್ತು. ನನ್ನ ಅಮ್ಮ ಹರಿವೆಸೊಪ್ಪಿನ ಹುಳಿಗೂ ಅಮಟೆಕಾಯಿ ಹಾಕುತ್ತಿದ್ದಳು, ವಿಶೇಷವಾಗಿ ಇದರ ಪದಾರ್ಥಗಳನ್ನು ಮಣ್ಣಿನ ಅಥವಾ ಬಳಪದ ಕಲ್ಲಿನ ಮಡಿಕೆಯಲ್ಲಿ ಮಾಡಿದರೆ ರುಚಿ ಜಾಸ್ತಿ ಅಂತ ಮಣ್ಣಿನ ಮಡಿಕೆಯಲ್ಲಿ ಹೆಚ್ಚಾಗಿ ಮಾಡುತಿದ್ದದು ನೆನಪು. ಮತ್ತೊಮ್ಮೆ ಮಲೆನಾಡಿನ ಬಾಲ್ಯದ ದಿನಗಳಿಗೆ ಕರೆದೊಯ್ದ ನಿಮ್ಮ ಅಮಟೆಕಾಯಿ ಬರಹಕ್ಕೆ ಧನ್ಯವಾದಗಳು ಅಕ್ಕಾ... ತುಂಬಾ ಸಂತೋಷವಾಯಿತು ನಿಮ್ಮ ಈ ಲೇಖನ ಓದಿ‘ ಎಂದು ಶಶಿಕಾಂತ್ ರಾವ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

‘ಅಮಟೆ ಕಾಯಿಯ ದಿಢೀರ್ ಉಪ್ಪಿನಕಾಯಿ - ನಮ್ಮಲ್ಲಿ ಅದಕ್ಕೆ ಅಡಗಾಯಿ ಎನ್ನುತ್ತೇವೆ. ಅಡಗಾಯಿ ಮಾಡಲಿಕ್ಕೆ ಕೋಟದವರಿಗೆ ಮೊದಲ ಪ್ರಿಫರೆನ್ಸ್ ಅಮಟೆಕಾಯಿ. ಸೆಕೆಂಡ್ ಪ್ರಿಫರೆನ್ಸ್ ಎಳೆಗುಜ್ಜೆ. 2 ಬಲಿತ ಅಮಟೆ ಕಾಯಿ + ಕಪ್ಪು ಕಡಲೆಯ ಸೀಮೆಣಸು‘ಎಂದು ಅಮಟೆಕಾಯಿ ಖಾದ್ಯಗಳ ಹೆಸರನ್ನು ಕಾಮೆಂಟ್ ತಿಳಿಸಿದ್ದಾರೆ ರಮೇಶ್ ಭಟ್ ಬೆಳಗೋಡು. 

‘ವಾವ್‌, ಅಮಟೆಕಾಯಿ ನಿಮ್ಮ ಕೈ ಸೇರಿ ಹೀರೊಯಿನ್ ರೀತಿ ಮೆರಿತಾ ಇದ್ದಾಳೆ. ಸೂಪರ್ ಲೇಖನ ಜಯಶ್ರೀ. ಇದು ನಿಮಗೆ ಇಷ್ಟವಾಯಿತು ಎಂಬುದನ್ನು ಕೇಳಿ ಖುಷಿ ಆಯ್ತು‘ ಎಂದು ಜಯಶ್ರೀ ಅವರಿಗೆ ಅಮಟೆಕಾಯಿ ಕೊಟ್ಟ ಶಾಲಿನಿ ಮೂರ್ತಿ ಕಾಮೆಂಟ್ ಮಾಡಿದ್ದಾರೆ. 

ಅಮಟೆ ಮರದಲ್ಲಿ ಬ್ರಹ್ಮರಾಕ್ಷಸ ಇದ್ದಾನೆ ಎಂಬ ಪ್ರತೀತಿ: ಜಯಶ್ರೀ, ನಮ್ಮಲ್ಲಿ ಅಷ್ಟಮಿ, ಚೌತಿಯ ಅಡುಗೆಗೆ ಅಮಟೆಕಾಯಿ ಬೇಕೇ ಬೇಕು. ಹರಿವೆ, ಕೆಸು ದಂಟಿನ ಸಾರಿಗೆ, ಹೆಸರು ಕಾಳು, ಸೌತೆ ಗಷಿಗೆ, ಹಾಗಲಕಾಯಿ ಮೆಣಸ್ಕಾಯಿಗೆ,‌ಬೆಂಡೆ ಕಾಯಿ ಸುಕ್ಕಾಕ್ಕೆ, ಹೀಗೆ.ಬಾಲ್ಯದಲ್ಲಿ ನಿಮ್ಮ ಮನೆ ಪಕ್ಕವೇ ದೊಡ್ಡ ಅಮಟೆ ಮರವಿತ್ತು. ಅಮಟೆ ಮರದಲ್ಲಿ ಬ್ರಹ್ಮರಾಕ್ಷಸ ಇದ್ದಾನೆ ಎಂಬ ಪ್ರತೀತಿಯಿತ್ಯು. ಕನಸು ನನ್ನ ಪ್ರತಿದಿನದ ನಿದ್ದೆಯ ಭಾಗವೇ ಆಗಿದ್ದು,ಮರದ ಕೆಳಗೆ ಆಟವಾಡುವಾಗ ಬ್ರಹ್ಮ ರಾಕ್ಷಸ ಇಳಿದು ಬಂದು ನನ್ನನ್ನು ಹಿಡಿದು ನಿಲ್ಲಿಸಿ ದಂತೆ ಕನಸು . ಮತ್ತೆ ಆ‌ಬ್ರಹ್ಮರಾಕ್ಷಸ ಮೂಲ್ಕಿ ಮಾವ ಆಗಿರುತ್ತಿದ್ದರು. ಬೆಳೆದ ಮೇಲೆ ನಾನು ಮದುವೆಯಾಗಿ ಬಂದುದು ಇದೇ ಮೂಲ್ಕಿ ಮಾವಿನ ಮನೆಗೆ. ಈಗ ಕೆಲ ವರ್ಷಗಳಿಂದ ಮಾವಿನಂತೆ ಕಾಣುವ ಗೊರಟಿರದ ಅಮಟೆ ಕಾಯಿ ಸಿಗುತ್ತಿದೆ. ಮೆಣಸು, ಬೆಲ್ಲ ಚೆನ್ನಾಗಿ ಹಾಕಿ ಸಿಹಿ, ಖಾರ, ಹುಳಿ ಮೇಲೋಗರ ನಮಗೂ ತುಂಬಾ ಇಷ್ಟ. ಅಮಟೆ ಕಾಯಿ ಉಪ್ಪಿನ ಕಾಯಿಯಂತೆ ಇಷ್ಟ. ನಿಮ್ಮಂಥದೇ ಬಾಯಿ ರುಚಿ, ನನ್ನದೂ ಕೂಡಾʼ ಎಂದು ಶ್ಯಾಮಲ ಮಾಧವ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

 

Whats_app_banner