Millet Biryani: ಬಿರಿಯಾನಿ ಪ್ರಿಯರು ಒಮ್ಮೆಯಾದ್ರೂ ಟ್ರೈ ಮಾಡಲೇಬೇಕಾದ ರೆಸಿಪಿಯಿದು; ಸಿರಿಧಾನ್ಯಗಳ ಬಿರಿಯಾನಿ ಮಾಡೋದು ಹೀಗೆ
ಸಿರಿಧಾನ್ಯಗಳಲ್ಲಿರುವ ಹೆಚ್ಚಿನ ಫೈಬರ್ ಅಂಶ,ಖನಿಜಗಳಿಂದಾಗಿಇದು ಸಮತೋಲಿತ ಊಟಕ್ಕೆ ಪರಿಪೂರ್ಣ ಆಯ್ಕೆ ಎಂದರೆ ತಪ್ಪಲ್ಲ. ನಿಮಗೆ ಬಿರಿಯಾನಿ ಅಂದ್ರೆ ಬಹಳ ಅಚ್ಚುಮೆಚ್ಚಾಗಿದ್ದು, ಆರೋಗ್ಯಕರ ಆಹಾರವನ್ನು ಅನ್ವೇಷಿಸುತ್ತದ್ದರೆ, ಈ ಸಿರಿಧಾನ್ಯಗಳ ಬಿರಿಯಾನಿಯನ್ನು ಟ್ರೈ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ.
ಬಿರಿಯಾನಿ ಅಂದ್ರೆ ಬಹುತೇಕರು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮಾಂಸಾಹಾರ ಪ್ರಿಯರು ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಫಿಶ್ ಬಿರಿಯಾನಿ ಅಂತೆಲ್ಲಾ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಸಸ್ಯಾಹಾರಿಗಳಾದ್ರೆ ವೆಜ್ ಬಿರಿಯಾನಿ ಮಾಡುತ್ತಾರೆ. ಆದರೆ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಬಿರಿಯಾನಿಯನ್ನೂ ಮಾಡಿ ಸವಿಯಬಹುದು.
ಶ್ರಾವಣ ಮಾಸ ಅಂದ್ರೆ ಹಬ್ಬ, ಮದುವೆ ಮುಂತಾದ ಶುಭ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಸಕ್ಕರೆ ಕಾಯಿಲೆ ಇರುವವರಿಗೆ ಎಷ್ಟೇ ಆಸೆಪಟ್ಟರೂ ಬಿರಿಯಾನಿಯನ್ನು ಹೆಚ್ಚು ತಿನ್ನುವಂತಿಲ್ಲ. ಹಾಗಂತ ಮಧುಮೇಹಿಗಳು ತಮ್ಮ ಆರೋಗ್ಯವನ್ನು ಹೆಚ್ಚಿಸಲು ಸಿರಿಧಾನ್ಯಗಳ ಬಿರಿಯಾನಿಯನ್ನು ಸವಿಯಬಹುದು. ಸಿರಿಧಾನ್ಯವು ಆರೋಗ್ಯಕ್ಕೆ ಬಹಳ ಉಪಯುಕ್ತವಾದುದರಿಂದ ಇದರ ಜೊತೆಗೆ ತರಕಾರಿಗಳ ಮಿಶ್ರಣವಿರುವ ಬಿರಿಯಾನಿಯನ್ನು ತಯಾರಿಸಿ ಸವಿಯಬಹುದು. ಈ ಖಾದ್ಯವನ್ನು ತಯಾರಿಸುವುದು ತುಂಬಾನೇ ಸರಳವಾಗಿದ್ದು, ಹೇಗೆ ಮಾಡುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸಿರಿಧಾನ್ಯ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು
ಸಿರಿಧಾನ್ಯ- 1 ಕಪ್, ತರಕಾರಿಗಳು (ಬೀನ್ಸ್, ಕ್ಯಾರೆಟ್, ಹೂಕೋಸು, ಆಲೂಗಡ್ಡೆ, ಬಟಾಣಿ ಇತ್ಯಾದಿ)- 1 ಕಪ್, ಅಡುಗೆ ಎಣ್ಣೆ- 2 ಚಮಚ, ತುಪ್ಪ- 1 ಚಮಚ, ಬಿರಿಯಾನಿ ಎಲೆ- 1, ಹಸಿರು ಮೆಣಸಿನಕಾಯಿಗಳು- 2, ಕತ್ತರಿಸಿದ ಈರುಳ್ಳಿ- 2, ಟೊಮೆಟೊ-1, ನೀರು- 2 ಕಪ್, ಅರಿಶಿನ- ಕಾಲು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಪುದೀನ ಎಲೆ- ಸ್ವಲ್ಪ
ಮಸಾಲೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿ- ಏಳು, ಲವಂಗ- 2, ಶುಂಠಿ- ಇಂಚಿನಷ್ಟು, ಮೆಣಸಿನಕಾಯಿ- 1 ಚಮಚ, ಕೊತ್ತಂಬರಿ ಪುಡಿ- 1 ಚಮಚ, ಈರುಳ್ಳಿ- ಅರ್ಧ, ಜೀರಿಗೆ- 1 ಚಮಚ
ಸಿರಿಧಾನ್ಯ ಬಿರಿಯಾನಿ ಮಾಡುವ ವಿಧಾನ
ಮೊದಲು ಸಿರಿಧಾನ್ಯವನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನಂತರ 6 ರಿಂದ 8 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿಯಲ್ಲಿ ಬೆಳ್ಳುಳ್ಳಿ, ಶುಂಠಿ ತುಂಡು, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಈರುಳ್ಳಿ, ಲವಂಗ ಮತ್ತು ಜೀರಿಗೆ ಸೇರಿಸಿ ನಿಧಾನವಾಗಿ ರುಬ್ಬಿಕೊಂಡು, ಪೇಸ್ಟ್ ಮಾಡಿಟ್ಟುಕೊಳ್ಳಿ.
ನಂತರ ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ. ಇದು ಬಿಸಿಯಾದ ನಂತರ ಹಸಿರು ಮೆಣಸಿನಕಾಯಿ ಮತ್ತು ಬಿರಿಯಾನಿ ಎಲೆಗಳನ್ನು ಹಾಕಿ ಬೇಯಿಸಲು ಬಿಡಿ. ನಂತರ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಟೊಮ್ಯಾಟೊ ಸೇರಿಸಿ ಇನ್ನೊಂದು ನಿಮಿಷ ಬೇಯಿಸಿ. ನಂತರ ಮಿಕ್ಸಿಯಲ್ಲಿ ರುಬ್ಬಿರುವ ಮಸಾಲಾ ಮಿಶ್ರಣವನ್ನು ಇದಕ್ಕೆ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಒಂದು ನಿಮಿಷ ಎಣ್ಣೆಯಲ್ಲಿ ಹುರಿದ ನಂತರ, ಎಲ್ಲಾ ತರಕಾರಿ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೆನೆಸಿಟ್ಟಿರುವ ಸಿರಿಧಾನ್ಯವನ್ನು ಹಾಕಿ ಮಿಕ್ಸ್ ಮಾಡಿ. ಜೊತೆಗೆ ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ಕಪ್ ನೀರು ಹಾಕಿ ಕುಕ್ಕರ್ ಮುಟ್ಟಳವನ್ನು ಮುಚ್ಚಿ.
ಕನಿಷ್ಠ ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಕುಕ್ಕರ್ ಸೀಟಿ ಹಾಕಿಸುವುದಾದರೆ ಎರಡು ಸೀಟಿಗಳು ಸಾಕು. ಕೊನೆಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಬಡಿಸಿದರೆ ರುಚಿಕರವಾದ ಸಿರಿಧಾನ್ಯ ಬಿರಿಯಾನಿ ಸವಿಯಲು ರೆಡಿ. ಇದನ್ನು ರಾಯಿತ ಅಥವಾ ಗ್ರೇವಿಯೊಂದಿಗೆ ಬಡಿಸಬಹುದು.
ವಿಭಾಗ