ದಿನಾ ಎಳನೀರು ಕುಡಿದು ಬೇಸರವಾಗಿದ್ಯಾ; ಈ 5 ಭಿನ್ನ ವಿಧಾನಗಳಲ್ಲಿಯೂ ಎಳನೀರನ್ನು ದೇಹ ಸೇರಿಸಬಹುದು
ಎಳನೀರನ್ನು ನಿತ್ಯವೂ ಕುಡಿಯುವುದರಿಂದ ಅನೇಕ ಅರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ನಿತ್ಯವೂ ಅದೇ ಎಳನೀರನ್ನು ಕುಡಿದು ಬೇಸರವಾಗಿದೆಯಾ? ಹಾಗಾದರೆ ಎಳನೀರಿನ ರುಚಿ ಹಾಗೂ ಪೌಷ್ಟಿಕಾಂಶದ ವಿಚಾರದಲ್ಲಿ ಯಾವುದೇ ರೀತಿಯ ರಾಜಿಯಾಗದೆಯೇ, ನಿತ್ಯದ ನಿಮ್ಮ ಆಹಾರದಲ್ಲಿ ಹೇಗೆಲ್ಲಾ ಎಳನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.
ಬಿಸಿಲ ತಾಪಕ್ಕೆ ಎಲ್ಲರೂ ಮೊರೆಹೋಗುವ ಪಾನೀಯಗಳ ಪೈಕಿ ಎಳನೀರು ಪ್ರಮುಖವಾದದ್ದು. ಯಾಕೆಂದರೆ ಎಳನೀರನ್ನು ಕುಡಿಯುವುದರಿಂದ ದೇಹವು ತಂಪಾಗುವುದಲ್ಲದೆ ಅನೇಕ ಆರೋಗ್ಯಕರ ಪ್ರಯೋಜನಗಳು ಇರುವುದರಿಂದ ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಎಳನೀರಿನಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ನಂಥ ಅಂಶಗಳಿದ್ದು, ಇತರ ಪಾನೀಯಗಳಿಗೆ ಉತ್ತಮ ಪರ್ಯಾಯವಾಗಿದೆ. ಇತರ ಎನರ್ಜಿ ಡ್ರಿಂಕ್ಸ್‌ಗಳಿಗೆ ಹೋಲಿಸಿದರೆ, ಎಳನೀರಿನಲ್ಲಿ ಕ್ಯಾಲರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ತುಲನಾತ್ಮಕವಾಗಿ ಕಡಿಮೆಯಿದ್ದು, ವ್ಯಾಯಾಮದ ನಂತರದ ಸೇವನೆಗೆ ಸೂಕ್ತವಾಗಿದೆ. ಆದರೆ ಎಳನೀರನ್ನು ನಿತ್ಯವೂ ಕುಡಿಯಲು ನಿಮಗೆ ಬೇಸರವಾಗಿರಬಹುದು? ಹೀಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಎಳನೀರನ್ನು ಸೇರಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಎಳನೀರನ್ನು ಸೇವಿಸುವ ವಿಧಾನಗಳು
ಎಳನೀರನ್ನು ಕುಡಿಯುವುದು ಉತ್ತಮ ಆಯ್ಕೆ. ಎಳನೀರನ್ನು ಸೇವಿಸುವ ಸಾಮಾನ್ಯ ವಿಧಾನವೆಂದರೆ, ಅದರ ನೀರನ್ನು ಕುಡಿಯುವುದು. ನೀವು ಎಳನೀರನ್ನು ಯಾವುದೇ ಮಿಶ್ರಣಗಳಿಲ್ಲದೆಯೇ ನೇರವಾಗಿ ಕುಡಿಯಬಹುದು. ಆದರೆ ಹಸಿರು ಮತ್ತು ತಾಜಾ ಎಳನೀರನ್ನು ಆಯ್ಕೆ ಮಾಡಿಕೊಂಡರೆ ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ದೇಹವನ್ನು ಸೇರಲು ಸಾಧ್ಯವಾಗುತ್ತದೆ.
ಸ್ಮೂತಿಗಳೊಂದಿಗೆ ಮಿಶ್ರಣ ಮಾಡಿಕೊಳ್ಳಿ
ಎಳನೀರನ್ನು ಕುಡಿಯುವ ಮತ್ತೊಂದು ಉತ್ತಮ ವಿಧಾನವೆಂದರೆ, ನೀವು ಕುಡಿಯುವ ಸ್ಮೂತಿಯೊಂದಿಗೆ ಎಳನೀರನ್ನು ಮಿಶ್ರಣ ಮಾಡಿಕೊಳ್ಳುವುದು. ಈ ಮೂಲಕ ನೀವು ಅವರ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ನೀವು ನಿತ್ಯವೂ ಬಳಸುವ ನೀರಿಗೆ ಬದಲಾಗಿಯೂ ಎಳನೀರನ್ನು ಬಳಕೆ ಮಾಡಿಕೊಳ್ಳಬಹುದು.
ಫ್ರೆಶ್ ಜ್ಯೂಸ್‌ನಲ್ಲಿ ನೀರಿನ ಬದಲಿಗೆ ಎಳನೀರನ್ನು ಬೆರೆಸಿಕೊಳ್ಳಿ
ನೀವು ಜ್ಯೂಸ್ ಪ್ರಿಯರೇ? ನಿತ್ಯವೂ ಬಗೆ ಬಗೆಯ ಜ್ಯೂಸ್ ಮಾಡಿಕೊಂಡು ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ಈ ಬಾರಿ ಜ್ಯೂಸ್ ಮಾಡುವ ವೇಳೆ ನೀರಿಗೆ ಬದಲಾಗಿ ಎಳನೀರನ್ನು ಮಿಶ್ರ ಮಾಡಿಕೊಳ್ಳಿ. ಇದು ಜ್ಯೂಸ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅದರಿಂದ ಲಭ್ಯವಾಗುವ ಪೌಷ್ಟಿಕಾಂಶಗಳನ್ನೂ ದುಪ್ಪಟ್ಟು ಮಾಡುತ್ತದೆ.
ಇದನ್ನೂ ಓದಿ | Sweating Benefits: ಸೆಖೆ ಹೆಚ್ಚಾಗಿ ಮೈಯೆಲ್ಲಾ ಬೆವರುತ್ತೆ ಅಂತಾ ಬೇಸರ ಮಾಡ್ಬೇಡಿ; ಬೆವರುವುದರಿಂದ ದೇಹಕ್ಕೆ ಇಷ್ಟೆಲ್ಲಾ ಲಾಭವಿದೆ
ಐಸ್ ಕ್ಯೂಬ್‌ಗಳನ್ನು ತಯಾರಿಸಿಕೊಂಡು ನೋಡಿ
ನೀವು ಎಳನೀರನ್ನು ಐಸ್ ಕ್ಯೂಬ್‌ಗಳಾಗಿ ಘನೀಕರಿಸುವ ಮೂಲಕ ಅವುಗಳನ್ನು ನಿಮ್ಮ ನೆಚ್ಚಿನ ಪಾನೀಯಗಳಿಗೆ ಸೇರಿಸಿಕೊಳ್ಳಬಹುದು. ಇದರಿಂದ ಅತಿಯಾದ ಬಿಸಿಲಿನ ತಾಪದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಕೋಲ್ಡ್ ಕಾಫಿ ಅಥವಾ ಹಣ್ಣಿನ ಜ್ಯೂಸ್ ಗಳಲ್ಲೂ ನೀವು ಈ ಎಳನೀರಿನ ಐಸ್ ಕ್ಯೂಬ್‌ಗಳನ್ನು ಸೇರಿಸಬಹುದು. ಸುಡು ಬೇಸಿಗೆಯಲ್ಲಿ ತಣ್ಣನೆಯ ಪಾನೀಯಗಳನ್ನು ಕುಡಿಯುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳಬಹುದು.
ಎಳನೀರಿನ ಐಸ್ ಕ್ಯಾಂಡಿಗಳು
ಎಳನೀರಿನಿಂದ ತಯಾರಿಸಿದ ಐಸ್ ಕ್ಯಾಂಡಿಗಳು ವೇಗವಾಗಿ ಬಾಯಾರಿಕೆಯನ್ನು ನೀಗಿಸುತ್ತದೆ. ಅದಷ್ಟೇ ಅಲ್ಲದೆ ದೇಹವನ್ನು ಹೈಡ್ರೀಕರಿಸುತ್ತದೆ. ಎಲೆಕ್ಟ್ರೊಲೈಟ್ಸ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಸಾಕಷ್ಟು ಪ್ರಮಾಣದ ವಿಟಮಿನ್‌ಗಳು, ಖನಿಜಗಳು ಮತ್ತು ಪೊಟ್ಯಾಸಿಯಮ್‌ನೊಂದಿಗೆ ದೇಹವನ್ನು ಪೋಷಿಸುತ್ತದೆ. ಐಸ್ ಕ್ಯಾಂಡಿಗಳನ್ನು ತಯಾರಿಸುವಾಗ, ಅವುಗಳನ್ನು ಫ್ರೀಜ್ ಮಾಡುವ ಮೊದಲು ನಿಮ್ಮ ನೆಚ್ಚಿನ ಹಣ್ಣುಗಳ ತುಂಡುಗಳನ್ನು ಅದರ ಜೊತೆಗೆ ಸೇರಿಸಿಕೊಳ್ಳುವುದನ್ನು ಮರೆಯದಿರಿ.
ದೇಹಕ್ಕೆ ಉತ್ತಮವೆಂಬ ಕಾರಣಕ್ಕೆ ನಿತ್ಯವೂ ಎಳನೀರನ್ನು ಹಾಗೆಯೇ ಕುಡಿದು ಬೇಸರವಾಗಿದ್ದರೆ, ಇಂತಹ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕವೂ ಎಳನೀರು ನಿಮ್ಮ ದೇಹವನ್ನು ಸೇರುವಂತೆ ಮಾಡಬಹುದು. ಇನ್ಯಾಕೆ ತಡ, ಎಳನೀರನ್ನು ಹೀಗೂ ಒಮ್ಮೆ ಬಳಸಿಕೊಂಡು ನೋಡಿ.