ಭಾನುವಾರ ಏನು ಸ್ಪೆಷಲ್? ಬಿಸಿ ಬಿಸಿ ಚಿಕನ್ ಸಮೋಸಾ ಮಾಡಿ ಮನೆಯವರ ಜೊತೆ ಖುಷಿ ಖುಷಿಯಾಗಿ ತಿನ್ನಿ; ರೆಸಿಪಿ ಇಲ್ಲಿದೆ
ಭಾನುವಾರ ನಾನ್ ವೆಜ್ ಪ್ರಿಯರಿಗೆ ಬಹಳ ವಿಶೇಷವಾದ ದಿನ. ಆ ದಿನ ಮನೆಯಲ್ಲಿ ಚಿಕನ್, ಮಟನ್ ಅಥವಾ ಫಿಶ್ ಅಡುಗೆ ಘಮ ಇಲ್ಲದಿದ್ದರೇ ಏನೋ ಮಿಸ್ ಮಾಡಿಕೊಂಡಂತೆ ಅನ್ನಿಸೋದು ಸಹಜ. ಈ ಬಾರಿ ನಿಮ್ಮ ಮನೆಯವರಿಗಾಗಿ ಚಿಕನ್ ಸಮೋಸಾ ಮಾಡಿಕೊಡಿ, ಎಲ್ಲರೂ ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಸಮೋಸಾ ರೆಸಿಪಿ ಇಲ್ಲಿದೆ.
ರುಚಿಯಾದ, ಗರಿ ಗರಿಯಾದ ಕುರುಕಲು ತಿಂಡಿ ಸಿಕ್ರೆ ಯಾರೂ ಬೇಡ ಅಂತಾರೆ? ಅದರಲ್ಲೂ ಟಿವಿ ನೋಡುತ್ತಾ ನಮಗಿಷ್ಟವಾದ ಸಿನಿಮಾ ನೋಡುತ್ತಾ, ಅಥವಾ ನಮ್ಮ ಆತ್ಮೀಯರೊಂದಿಗೆ ಹರಟುತ್ತಾ ಇಷ್ಟವಾದ ಸ್ನಾಕ್ಸ್ ತಿನ್ನುತ್ತಾ ಹರಟೆ ಹೊಡೆದರೆ ಹೇಗೆ? ಅದನ್ನ ನೆನಪಿಸಿಕೊಂಡರೇ ಖುಷಿ ಎನಿಸುತ್ತದೆ.
ಸಮೋಸಾ, ಭಾರತೀಯರ ಇಷ್ಟದ ಸ್ನಾಕ್ಸ್‌ನಲ್ಲಿ ಒಂದು. ಮೊದಲೆಲ್ಲಾ ಸಮೋಸಾಗೆ ತರಕಾರಿ ಪಲ್ಯವನ್ನು ಫಿಲ್ಲಿಂಗ್ ಆಗಿ ಬಳಸಲಾಗುತ್ತಿತ್ತು. ಆದರೆ ಈಗ ಕಾರ್ನ್ ಸಮೋಸಾ, ಆಲೂ ಸಮೋಸಾ, ಪಿಜ್ಜಾ ಸಮೋಸಾ, ಚಾಕೊಲೇಟ್ ಸಮೋಸಾ ಹೀಗೆ ವೆರೈಟಿ ವೆರೈಟಿ ಸಮೋಸಾ ಹೊರಗೆ ದೊರೆಯುತ್ತದೆ. ಜೊತೆಗೆ ಚಿಕನ್ ಸಮೋಸಾ ಕೂಡಾ. ಕುಕಿಂಗ್ ಆಸಕ್ತಿ ಇರುವವರು ಮನೆಯಲ್ಲಿ ಒಮ್ಮೆ ಚಿಕನ್ ಸಮೋಸಾ ಟ್ರೈ ಮಾಡಬಹುದು. ಚಿಕನ್ ಸಮೋಸಾ ತಯಾರಿಸಲು ಬೇಕಾಗುವ ಸಾಮಗ್ರಿಗಳು, ಹಾಗೂ ತಯಾರಿಸುವ ವಿಧಾನ ನೋಡೋಣ.
ಚಿಕನ್ ಸಮೋಸಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಚಿಕನ್ ಕೈಮಾ - 1/2 ಕಿಲೋ
- ಸಮೋಸಾ ಶೀಟ್ - 20
- ಈರುಳ್ಳಿ - 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್
- ಹಸಿ ಮೆಣಸಿನಕಾಯಿ - 2
- ಕೊತ್ತಂಬರಿ ಸೊಪ್ಪು - 1/2 ಕಟ್ಟು
- ಅರಿಶಿನ - 1/2 ಟೀ ಸ್ಪೂನ್
- ಅಚ್ಚ ಖಾರದ ಪುಡಿ - 1 ಟೀ ಸ್ಪೂನ್
- ಕರಿಮೆಣಸಿನ ಪುಡಿ - 1 ಟೀ ಸ್ಪೂನ್
- ಗರಂ ಮಸಾಲ ಪುಡಿ - 1/2 ಟೀ ಸ್ಪೂನ್
- ಟೊಮೆಟೊ ಸಾಸ್ - 2 ಟೇಬಲ್ ಸ್ಪೂನ್
- ಮೈದಾ ಹಿಟ್ಟು - 2 ಟೇಬಲ್ ಸ್ಪೂನ್
- ಎಣ್ಣೆ - ಕರಿಯಲು
- ಉಪ್ಪು - ರುಚಿಗೆ ತಕ್ಕಷ್ಟು
ಇದನ್ನೂ ಓದಿ: ಬಾಯಲ್ಲಿ ನೀರೂರುವ ಮಂಗಳೂರು ಶೈಲಿಯ ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್: ಈ ರೆಸಿಪಿ ಟ್ರೈ ಮಾಡಿ ನೋಡಿ
ಚಿಕನ್ ಸಮೋಸಾ ತಯಾರಿಸುವ ವಿಧಾನ
- ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ
- ಮೈದಾಹಿಟ್ಟು , ಸ್ವಲ್ಪ ನೀರು ಬೆರೆಸಿ ಅದನ್ನು ಸ್ಟೌ ಮೇಲೆ ಬಿಸಿ ಮಾಡಿ ಅಂಟು ತಯಾರಿಸಿಕೊಳ್ಳಿ
- ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಕಂದು ಬಣ್ಣ ಬರುವರೆಗೂ ಹುರಿಯಿರಿ, ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ
- ಚಿಕನ್ ಕೈಮಾ ಸೇರಿಸಿ ಹೆಚ್ಚು ಉರಿಯಲ್ಲಿ ಬಣ್ಣ ಬದಲಾಗುವರೆಗೂ 5 ನಿಮಿಷ ಫ್ರೈ ಮಾಡಿ
- ಕೈಮಾ ಮಿಶ್ರಣ ನೀರು ಹೀರಿಕೊಂಡು ಡ್ರೈ ಆದ ನಂತರ ಉಪ್ಪು, ಅರಿಶಿನ, ಅಚ್ಚ ಖಾರದ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಾಲ ಪುಡಿ ಸೇರಿಸಿ ಮಿಕ್ಸ್ ಮಾಡಿ
- ಹತ್ತು ನಿಮಿಷಗಳವರೆಗೂ ಹುರಿದು ನಂತರ ಟೊಮೆಟೊ ಸಾಸ್ ಸೇರಿಸಿ ತಿರುವಿ ಕೊನೆಗೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ
- ಸ್ಟೌವ್ ಆಫ್ ಮಾಡಿ ಮಿಶ್ರಣ ತಣ್ಣಗಾಗುವರೆಗೂ ಬಿಡಿ
- ಸಮೋಸಾ ಶೀಟ್‌ಗಳನ್ನು ಕೋನ್ ಆಕಾರಕ್ಕೆ ಮಡಚಿಕೊಂಡು ಅದರೊಳಗೆ ಚಿಕನ್ ಕೈಮಾ ಫಿಲ್ಲಿಂಗ್ ಸೇರಿಸಿ.
- ಸುತ್ತಲೂ ಮಡಚಿ ಅಂಚು ಬಿಟ್ಟುಕೊಳ್ಳದಂತೆ ಮೈದಾ ಪೇಸ್ಟ್ ಸೇರಿಸಿ ಮೃದುವಾಗಿ ಒತ್ತಿ, ಇದೇ ರೀತಿ ಎಲ್ಲಾ ಸಮೋಸಾ ಶೀಟ್‌ಗಳನ್ನೂ ಫಿಲ್ ಮಾಡಿಕೊಳ್ಳಿ
- ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಸಮೋಸಾಗಳನ್ನು ಕಂದು ಬಣ್ಣ ಬರುವರೆಗೂ ಕರಿಯಿರಿ
ಸಿಹಿ ಹಾಗೂ ಪುದೀನಾ ಚಟ್ನಿ ಜೊತೆ ಚಿಕನ್ ಸಮೋಸಾ ಎಂಜಾಯ್ ಮಾಡಿ
ವಿಭಾಗ