ಹೊರಗೆ ಆರ್ಡರ್ ಮಾಡುವ ಬದಲು ಮನೆಯಲ್ಲೇ ಚಿಕನ್ ನಗೆಟ್ಸ್ ತಯಾರಿಸಿ; ಮೊಟ್ಟೆ, ಬ್ರೆಡ್ ಜೊತೆಗೆ ಇನ್ನೊಂದಿಷ್ಟು ಸಾಮಗ್ರಿ ಇದ್ರೆ ಸಾಕು
ರೆಸ್ಟೋರೆಂಟ್‌ನಲ್ಲಿ ನಾವು ತಿನ್ನುವ ಎಲ್ಲಾ ತಿಂಡಿಗಳನ್ನು ಮನೆಯಲ್ಲಿ ಕೂಡಾ ತಯಾರಿಸಬಹುದು. ಎಲ್ಲಾ ಸಾಮಗ್ರಿಗಳು ದೊರೆತರೆ ಆ ರೆಸಿಪಿ ತಯಾರಿಸುವುದು ದೊಡ್ಡ ವಿದ್ಯೇಯೇನಲ್ಲ. ಚಿಕನ್ ನಗೆಟ್ಸ್ ಕೂಡಾ ಮನೆಯಲ್ಲಿ ತಯಾರಿಸಬಹುದು. ಮೊಟ್ಟೆ, ಬ್ರೆಡ್ ಜೊತೆಗೆ ಇನ್ನೊಂದಿಷ್ಟು ಸಾಮಗ್ರಿಗಳಿದ್ದರೆ ಸಾಕು.
ಮನೆಗೆ ಚಿಕನ್ ತಂದರೆ ಸಾಮಾನ್ಯವಾಗಿ ನಾವೆಲ್ಲಾ ತಯಾರಿಸುವುದು ಚಿಕನ್ ಸಾಂಬಾರ್, ಗ್ರೇವಿ, ಚಾಪ್ಸ್, ಬಿರಿಯಾನಿ ಅಥವಾ ಚಿಲ್ಲಿ ಚಿಕನ್. ಆದರೆ ಚಿಕನ್‌ನಲ್ಲಿ ಇದನ್ನು ಹೊರತುಪಡಿಸಿ ಲೆಕ್ಕವಿಲ್ಲದಷ್ಟು ರುಚಿಯಾದ ತಯಾರಿಸಬಹುದು. ಅದೆಲ್ಲಾ ಗೊತ್ತಿದ್ರೂ ಆ ರೆಸಿಗಳನ್ನು ಮಾಡುವುದು ಕಷ್ಟ ಅಂತ ಪ್ರತಿ ಬಾರಿ ಒಂದೇ ಅಡುಗೆ ಮಾಡಿ ತಿನ್ನುತ್ತೇವೆ.
ರೆಸ್ಟೋರೆಂಟ್‌ನಲ್ಲಿ ಸಿಗೋದೆಲ್ಲಾ ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅನೇಕರು ತಪ್ಪು ತಿಳಿದಿದ್ದಾರೆ. ಆದರೆ ನೀವು ಅಷ್ಟೇ ರುಚಿಯಾದ ರೆಸಿಪಿಯನ್ನು ಮನೆಯಲ್ಲಿ ದೊರೆಯುವ ಸಾಮಗ್ರಿಗಳಿಂದ ತಯಾರಿಸಬಹುದು. ಉದಾಹರಣೆಗೆ ಚಿಕನ್ ನಗೆಟ್ಸ್. ಹೊರಗೆ ಇದನ್ನು ತಿಂದಿರುತ್ತೇವೆ. ಆದರೆ ಮನೆಯಲ್ಲಿ ಎಂದಾದರೂ ಟ್ರೈ ಮಾಡಿದ್ದೀರಾ? ಇಲ್ಲವಾದರೆ ಈ ಭಾನುವಾರ ತಪ್ಪದೆ ಟ್ರೈ ಮಾಡಿ. ಇದಕ್ಕೆ ಬೇಕಾದ ಸಾಮಗ್ರಿಗಳು ಸುಲಭವಾಗಿ ಮನೆಯಲ್ಲೇ ದೊರೆಯುತ್ತದೆ. ಚಿಕನ್ ನಗೆಟ್ಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ನೋಡೋಣ.
ಚಿಕನ್ ನಗೆಟ್ಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೋನ್‌ಲೆಸ್ ಚಿಕನ್ - 1/2 ಕಿಲೋ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್
ಬ್ರೆಡ್ - 4 ಸ್ಲೈಸ್
ಸೋಯಾ ಸಾಸ್ - 1 ಟೇಬಲ್ ಸ್ಪೂನ್
ಬಿಳಿ ಮೆಣಸು ಪುಡಿ - 1/2 ಟೀ ಸ್ಪೂನ್
ಅಚ್ಚ ಖಾರದ ಪುಡಿ - 1/2 ಟೀ ಸ್ಪೂನ್
ಮೊಟ್ಟೆ - 1
ಹಾಲು - 1 ಟೇಬಲ್ ಸ್ಪೂನ್
ಬ್ರೆಡ್ ಕ್ರಮ್ಸ್ - 1 ಕಪ್
ಕರಿಮೆಣಸಿನ ಪುಡಿ - 1 ಟೀ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಚಿಕನ್ ನಗೆಟ್ಸ್ ತಯಾರಿಸುವ ವಿಧಾನ
ಬ್ರೆಡ್ ಅಂಚನ್ನು ತೆಗೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ
ಇದರೊಂದಿಗೆ ಬೋನ್‌ಲೆನ್ ಚಿಕನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್ ಸೇರಿಸಿ
ಜೊತೆಗೆ ಬಿಳಿ ಮೆಣಸು ಪುಡಿ, ಅಚ್ಚ ಖಾರದ ಪುಡಿ, ಉಪ್ಪು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ ( ನೀರು ಸೇರಿಸಬೇಡಿ)
ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ 1 ಚಮಚ ಎಣ್ಣೆ ಸೇರಿಸಿ ನಾದಿಕೊಳ್ಳಿ
ಈ ಮಿಶ್ರಣದಿಂದ ಉಂಡೆಗಳನ್ನು ಮಾಡಿಕೊಂಡು ನಿಮಗಿಷ್ಟವಾದ ಶೇಪ್‌ಗೆ ತನ್ನಿ
ಒಂದು ಬೌಲ್‌ಗೆ ಮೊಟ್ಟೆ, ಉಪ್ಪು, ಕರಿಮೆಣಸಿನ ಪುಡಿ, ಹಾಲು ಸೇರಿಸಿ ಮಿಕ್ಸ್ ಮಾಡಿ
ಮತ್ತೊಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಮ್ಸ್ ಹರಡಿಕೊಳ್ಳಿ
ಚಿಕನ್ ನಗೆಟ್ಸ್‌ಗಳನ್ನು ಒಮ್ಮೆ ಮೊಟ್ಟೆ ಮಿಶ್ರಣದಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ಮೇಲೆ ಹೊರಳಿಸಿ
ನಿಮಗೆ ಅವಶ್ಯಕತೆ ಇರುವಷ್ಟನ್ನು ಕರಿಯಲು ತೆಗೆದಿಟ್ಟುಕೊಂಡು ಉಳಿದದ್ದನ್ನು ಒಂದು ಬಾಕ್ಸ್‌ನಲ್ಲಿಟ್ಟು ರೆಫ್ರಿಜರೇಟರ್‌ನಲ್ಲಿಡಿ
ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ, ಸಾಸ್ ಅಥವಾ ಕೆಚಪ್ ಜೊತೆಗೆ ಸವಿಯಲು ಕೊಡಿ
ಗಮನಿಸಿ: ರೆಫ್ರಿಜರೇಟರ್‌ನಲ್ಲಿಟ್ಟ ಚಿಕನ್ ತುಂಡುಗಳನ್ನು 15 ದಿನಗಳವರೆಗೂ ಸ್ಟೋರ್ ಮಾಡಬಹುದು.
ವಿಭಾಗ