Wheat Rava Idli: ಥಟ್ ಅಂತಾ ತಯಾರಾಗುತ್ತೆ ಗೋಧಿ ರವೆ ಇಡ್ಲಿ: ಇದನ್ನ ತಯಾರಿಸುವುದು ಬಲು ಸುಲಭ
Wheat Rava Idli Recipe: ಬೆಳಗ್ಗೆ ತಿಂಡಿಗೆ ಏನು ಮಾಡೋದು ಎನ್ನುವುದೇ ಅನೇಕ ಮಹಿಳೆಯರಿಗೆ ತಲೆ ಕೆಡಿಸುವಂತಹ ವಿಷಯ. ಬೆಳಗ್ಗೆ ತಿಂಡಿಗೆ ಸುಲಭವಾದ, ರುಚಿಕರವಾದ ಏನಾದರೂ ಹೊಸ ಬಗೆಯ ತಿಂಡಿ ಮಾಡಬೇಕು ಎಂದುಕೊಂಡಿದ್ದರೆ ನೀವು ಗೋಧಿ ರವೆ ಇಡ್ಲಿ ತಯಾರಿಸಬಹುದು.
ಇಂದು ಮನೆಯಲ್ಲಿ ತಿಂಡಿ ಇಡ್ಲಿ ಎಂದ ಕೂಡಲೇ ನೆನಪಾಗುವುದು ಅದೇ ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ತಯಾರಿಸಿದ ಇಡ್ಲಿ. ಒಂದೇ ತರನಾದ ಇಡ್ಲಿ ತಿಂದು ತಿಂದು ನಿಮಗೂ ಬೋರಾಗಿರಬಹುದು. ಹೀಗಾಗಿ ಈ ಸಮಸ್ಯೆಗೆ ಪರಿಹಾರವನ್ನು ನಾವು ಹುಡುಕಿದ್ದೇವೆ. ಇದು ಹೊಸ ಮಾದರಿಯ ಇಡ್ಲಿಯಾಗಿದ್ದು ಇದು ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಲಾಭ ತಂದುಕೊಡುವುದರ ಜೊತೆಯಲ್ಲಿ ಸಖತ್ ಟೇಸ್ಟ್ ಕೂಡ ನೀಡುತ್ತದೆ.
ಅಂದಹಾಗೆ ಈ ಇಡ್ಲಿಯನ್ನು ತಯಾರಿಸಲು ನೀವು ಅಕ್ಕಿ ಬಳಕೆ ಮಾಡಬೇಕು ಎಂದಿಲ್ಲ. ಇದನ್ನು ನೀವು ಗೋಧಿ ರವಾದಿಂದ ತಯಾರಿಸಬಹುದಾಗಿದೆ. ಮಾರುಕಟ್ಟೆಗಳಲ್ಲಿ ಗೋಧಿ ರವಾ ಅಥವಾ ಗೋಧಿ ಕಡಿ ಸುಲಭವಾಗಿ ಸಿಗಲಿದ್ದು ಇದನ್ನು ಮನೆಗೆ ತಂದು ಬಳಿಕ ಬಗೆ ಬಗೆಯ ಪದಾರ್ಥಗಳನ್ನು ಸೇರಿಸಿ ಗೋಧಿ ಇಡ್ಲಿಯನ್ನು ಥಟ್ ಎಂದು ತಯಾರಿಸಬಹುದಾಗಿದೆ. ಹಾಗಾದರೆ ಈ ಇಡ್ಲಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ :
ಗೋಧಿ ರವೆ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು :
ಗೋಧಿ ರವಾ 2 ಕಪ್, ಗಟ್ಟಿ ಮೊಸರು 1 ಕಪ್, ನೀರು ಅಳತೆಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು 3 ಟೇಬಲ್ ಸ್ಪೂನ್ ಸಣ್ಣದಾಗಿ ಕತ್ತರಿಸಿದ್ದು, ಅಡುಗೆ ಎಣ್ಣೆ ಸ್ವಲ್ಪ.
ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು
ಎಣ್ಣೆ 1 ಚಮಚ, ಸಾಸಿವೆ 1 ಟೀ ಚಮಚ, ಉದ್ದಿನ ಬೇಳೆ 1 ಟೀ ಸ್ಪೂನ್, ಇಂಗು 1/4 ಟೀ ಚಮಚ, ಹಸಿರು ಮೆಣಸಿನ ಕಾಯಿ 1 , ಅರಿಶಿಣ ಪುಡಿ 1/2 ಚಮಚ
ಗೋಧಿ ರವಾ ಇಡ್ಲಿ ತಯಾರಿಸುವ ವಿಧಾನ :
ಗೋಧಿ ರವೆಯನ್ನು ಒಮ್ಮೆ ಮಿಕ್ಸಿಯಲ್ಲಿ ಹಾಕಿ ಸಣ್ಣದಾಗಿ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ನೀರು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಇನ್ನೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಮಸಾಲೆಗೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ಈಗ ಮೊಸರಿನ ಮಿಶ್ರಣಕ್ಕೆ ಪುಡಿ ಮಾಡಿಕೊಂಡ ಗೋಧಿ ರವೆಯನ್ನು ಹಾಕಿ ಕಲಿಸಿಕೊಳ್ಳಿ. ಇದಾದ ಬಳಿಕ ಮಸಾಲೆ ಪದಾರ್ಥ ತಣ್ಣಗಾದ ಮೇಲೆ ಅದನ್ನೂ ಪುಡಿ ಮಾಡಿಕೊಂಡು ಇಡ್ಲಿ ಹಿಟ್ಟಿಗೆ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ.
ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೂ ಈ ಮಿಶ್ರಣಕ್ಕೆ ನೀರು ಸೇರಿಸುತ್ತಲೇ ಇರಿ. ಇದಾದ ಬಳಿಕ ಬೇಕಿಂಗ್ ಸೋಡಾ ಸೇರಿಸಿ ಮಿಶ್ರಣ ಮಾಡಿ. ಇಡ್ಲಿ ಮಾಡುವ ಪಾತ್ರೆಗಳಿಗೆ ಎಣ್ಣೆಯನ್ನು ಸವರಿ. ನೆನಪಿಡಿ ಅತಿಯಾಗಿ ಎಣ್ಣೆ ಹಾಕುವುದು ಬೇಡ, ಸವರಿದರೆ ಸಾಕು. ಈಗ ಇಡ್ಲಿ ಪಾತ್ರೆಗೆ ಇಡ್ಲಿ ಹಿಟ್ಟನ್ನು ಹಾಕಿ 8-10 ನಿಮಿಷಗಳ ಕಾಲ ಬೇಯಲು ಬಿಡಿ. ಒಲೆಯಿಂದ ಇಡ್ಲಿ ಪಾತ್ರೆಯನ್ನು ತೆಗೆದ ಬಳಿಕ ಐದು ನಿಮಿಷಗಳ ಕಾಲ ಅದನ್ನು ತಣ್ಣಗಾಗಲು ಬಿಡಿ. ಈಗ ನಿಮ್ಮ ಗೋಧಿ ರವೆಯ ಇಡ್ಲಿ ತಯಾರಾಯಿತು. ಇದನ್ನು ಚಟ್ನಿಯ ಜೊತೆ ನೀವು ಸವಿಯಬಹುದು.
ವಿಭಾಗ