Masala Dosa: ಮನೆಯಲ್ಲೇ ಮಾಡಿ ಹೋಟೆಲ್ ಶೈಲಿಯ ಪರ್ಫೆಕ್ಟ್ ಮಸಾಲೆ ದೋಸೆ; ಇಲ್ಲಿದೆ ರೆಸಿಪಿ
Masala Dosa Recipe In Kannada: ಯಾವಾಗ್ಲೂ ಹೋಟೆಲ್ಗೇ ಹೋಗಿ ಯಾಕೆ ಮಸಾಲೆ ದೋಸೆ ತಿಂತೀರಾ? ನಿಮಗೆ ಆಸೆ ಆದಾಗೆಲ್ಲ ಮನೆಯಲ್ಲಿಯೇ ಮಾಡಿ ಸವಿಯಿರಿ. ಇಲ್ಲಿದೆ ಹೋಟೆಲ್ ಶೈಲಿಯ ಪರ್ಫೆಕ್ಟ್ ಮಸಾಲೆ ದೋಸೆ ರೆಸಿಪಿ.

ಎಷ್ಟೋ ಜನರಿಗೆ ಮಸಾಲೆ ದೋಸೆ ಅಂದ್ರೆ ಬಹಳ ಪ್ರೀತಿ. ಹೋಟೆಲ್ಗೆ ಹೋದಾಗ ಅವರ ಮೊದಲ ಆಯ್ಕೆ ಮಸಾಲಾ ದೋಸೆಯೇ ಆಗಿರುತ್ತದೆ. ಆದರೆ ಮನೆಯಲ್ಲಿ ಮಸಾಲೆ ದೋಸೆ ಮಾಡಿ ತಿನ್ನುವವರ ಸಂಖ್ಯೆ ಬಹಳ ಕಡಿಮೆ. ನಿಮಗೆ ಆಸೆ ಆದಾಗೆಲ್ಲ ಮನೆಯಲ್ಲಿಯೇ ಮಸಾಲೆ ದೋಸೆ ಮಾಡಿ ಸವಿಯಿರಿ. ನಿಮಗಾಗಿ ನಾವಿಲ್ಲಿ ಮಸಾಲೆ ದೋಸೆ ಮಾಡುವ ಸರಳ ವಿಧಾನವನ್ನ ಹೇಳುತ್ತಿದ್ದೇವೆ.
ಮಸಾಲೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ರೇಷನ್ ಅಕ್ಕಿ
ಉದ್ದಿನ ಬೇಳೆ
ಮೆಂತೆ ಕಾಳು
ಸಬ್ಬಕ್ಕಿ
ಉಪ್ಪು
ಚಿರೋಟಿ ರವೆ
ಸಕ್ಕರೆ
ಅಡುಗೆ ಸೋಡ
ಎಣ್ಣೆ
ಮಸಾಲೆ ದೋಸೆ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎರಡು ಕಪ್ ನಾರ್ಮಲ್ ಅಕ್ಕಿ (ರೇಷನ್ ಅಕ್ಕಿ), ಅರ್ಧ ಕಪ್ ಉದ್ದಿನ ಬೇಳೆ, ಒಂದು ಚಮಚ ಮೆಂತೆ ಸೇರಿಸಿ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಅದಕ್ಕೆ 2 ಚಮಚ ಸಬ್ಬಕ್ಕಿ ಸೇರಿಸಿ. ಈಗ ಅದಕ್ಕೆ ಮತ್ತೆ ಸ್ವಲ್ಪ ಜಾಸ್ತಿ ನೀರು ಹಾಕಿ 3-4 ಗಂಟೆಗಳ ಕಾಲ ನೆನೆಸಿಡಿ.
ನೆನೆದ ನಂತರ ನೀರು ಸೋಸಿಕೊಂಡು ಅಕ್ಕಿ, ಉದ್ದು, ಮೆಂತೆ, ಸಬ್ಬಕ್ಕಿ- ಈ ಎಲ್ಲವನ್ನೂ ಮಿಕ್ಸಿ ಜಾರ್ಗೆ ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ. ಒಂದೇ ಬಾರಿಗೆ ಎಲ್ಲವನ್ನೂ ಹಾಕಿ ರುಬ್ಬಬೇಡಿ. ಅರ್ಧ ಜಾರ್ಗಿಂತ ಕಡಿಮೆ ಪ್ರಮಾಣದಲ್ಲಿ ಇರಲಿ. ರುಬ್ಬಿದ ನಂತರ ಅದನ್ನು ಒಂದು ಪಾತ್ರೆಗೆ ಸುರಿಯಿರಿ. ಸುರಿದು 6-7 ಗಂಟೆಗಳ ವರೆಗೆ ಒಂದು ಪ್ಲೇಟ್ ಮುಚ್ಚಿಡಿ. ಆಗ ಹಿಟ್ಟು ಉಬ್ಬಿ ಬಂದಿರುತ್ತದೆ. ಹಿಂದಿನ ದಿನ ಸಂಜೆಯ ವೇಳೆ ನೆನೆಸಿಟ್ಟು, ರಾತ್ರಿ ರುಬ್ಬಿಟ್ಟರೆ ಮರುದಿನ ಬೆಳಗ್ಗೆ ದೋಸೆ ಮಾಡಬಹುದು.
ನಂತರ ಅದನ್ನು ಹುಟ್ಟಿನಲ್ಲಿ ಚೆನ್ನಾಗಿ ಕಲಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಚಿರೋಟಿ ರವೆ, 1 ಚಮಚ ಸಕ್ಕರೆ, ಚಿಟಿಕೆ ಅಡುಗೆ ಸೋಡ ಹಾಕಿ ಮತ್ತೆ ಚೆನ್ನಾಗಿ ಕಲಸಿ. ಈಗ ದೋಸೆ ಹಿಟ್ಟು ರೆಡಿ. (ದೋಸೆ ಹೊಯ್ದಾಗ ಕಂದು ಬಣ್ಣ ಬರಲೆಂದು ಸಕ್ಕರೆ ಹಾಕಲಾಗುತ್ತದೆ).
ಈಗ ನೀವು ಕಾವಲಿ (ಹೆಂಚು) ಮೇಲೆ ಎಣ್ಣೆ ಬದಲು ನೀರು ಹಾಕಿ ಅದನ್ನು ದಪ್ಪನೆಯ ಕಾಟನ್ ಬಟ್ಟೆಯಲ್ಲಿ ಒರೆಸಿಕೊಂಡು ವೃತ್ತಾಕಾರದಲ್ಲಿ ದೊಡ್ಡದಾಗಿ ದೋಸೆ ಹೊಯ್ಯಿರಿ. 10 ಸೆಕೆಂಡ್ ಬಿಟ್ಟು ದೋಸೆ ಮೇಲೆ ಚಮಚ ಬಳಸಿ ಎಣ್ಣೆಯನ್ನು ಹಾಕಿ. ಕಾವಲಿಯನ್ನು ಮುಚ್ಚುವುದು ಬೇಡ. ಹಾಗೆಯೆ ಚೆನ್ನಾಗಿ ಬೇಯಿಸಿ ದೋಸೆ ಎತ್ತಿರಿ. ಮಸಾಲೆ ದೋಸೆ ರೆಡಿಯಾಯ್ತು. ಹಸಿಮೆಣಸು-ತೆಂಗಿನ ಕಾಯಿ ಬಳಸಿ ತಯಾರಿಸಿದ ಚಟ್ಟನಿ, ಆಲೂಗಡ್ಡೆ ಸಾಗೂ ಜೊತೆ ಮಸಾಲೆ ದೋಸೆ ತಿಂದರೆ ಸ್ವರ್ಗದ ಬಾಗಿಲು ತೆರೆದಂತೆ ಆಗುತ್ತದೆ.
