ಕನ್ನಡ ಸುದ್ದಿ  /  ಜೀವನಶೈಲಿ  /  Baklava: ಅರಬ್‌ ದೇಶಗಳಲ್ಲಿ ದೊರೆಯುವ ಸಿಹಿತಿಂಡಿ ಬಕ್ಲವಾ ಹುಟ್ಟಿದ್ದು ಹೇಗೆ, ವೈಶಿಷ್ಟ್ಯವೇನು; ರಂಗಸ್ವಾಮಿ ಮೂಕನಹಳ್ಳಿ ಬರಹ

Baklava: ಅರಬ್‌ ದೇಶಗಳಲ್ಲಿ ದೊರೆಯುವ ಸಿಹಿತಿಂಡಿ ಬಕ್ಲವಾ ಹುಟ್ಟಿದ್ದು ಹೇಗೆ, ವೈಶಿಷ್ಟ್ಯವೇನು; ರಂಗಸ್ವಾಮಿ ಮೂಕನಹಳ್ಳಿ ಬರಹ

ಬಕ್ಲವಾ ಸಿಹಿತಿಂಡಿಯನ್ನು ಜೀಸಸ್ ಸತ್ತ ನಂತರ ಆತನ ನೆನಪಿನಲ್ಲಿ ತಯಾರಿಸಲು ಪ್ರಾರಂಭಿಸಿದರು. ಇದು 33 ಪದರಗಳನ್ನು ಹೊಂದಿರುತ್ತದೆ , ಒಂದೊಂದು ಪದರವೂ ಜೀಸಸ್ ಬದುಕಿದ ಒಂದೊಂದು ವರ್ಷವನ್ನು ನೆನಪಿಸುತ್ತದೆ ಎನ್ನುತ್ತಾರೆ. ಈ ಖಾದ್ಯವನ್ನು ಅರಬ್ಬರು , ಟರ್ಕಿಶರು , ಇಸ್ರೇಲಿಗಳು , ಮಸೆಡೊನಿಯಾ , ಸೆರ್ಬಿಯ , ಅರ್ಮೇನಿಯ ಹೀಗೆ ಹಲವಾರು ದೇಶಗಳಲ್ಲಿ ತಯಾರಿಸುತ್ತಾರೆ.

ಬಕ್ಲವಾ ಕುರಿತು ಖ್ಯಾತ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಸೋಷಿಯಲ್‌ ಮೀಡಿಯಾ ಪೋಸ್ಟ್‌
ಬಕ್ಲವಾ ಕುರಿತು ಖ್ಯಾತ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ (PC: Unsplash)

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿವಿಧ ರೀತಿಯ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಾರೆ. ಪ್ರಪಂಚದಲ್ಲಿ ವೆಜ್‌, ನಾನ್‌ ವೆಜ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಫುಡ್‌ ವೆರೈಟಿಗಳಿವೆ. ಕೆಲವೆಡೆ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನದಂತೆ ವಿಶ್ವ ಕಾಫಿ ದಿನ, ವಿಶ್ವ ಕೇಕ್‌ ದಿನ ಹೀಗೆ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. ನವೆಂಬರ್‌ 17, ವಿಶ್ವ ಬಕ್ಲವಾ ದಿನದ ಅಂಗವಾಗಿ ಖ್ಯಾತ ಬರಹಗಾರ, ರಂಗಸ್ವಾಮಿ ಮೂಕನಹಳ್ಳಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಊಟ ತಿಂಡಿ ಯಾರಿಗೆ ಇಷ್ಟವಾಗೋಲ್ಲ ಹೇಳಿ ಅದರಲ್ಲೂ ನನಗೆ ಸ್ವಲ್ಪ ಜಾಸ್ತಿನೇ ಇಷ್ಟ ! ಯಾವುದೇ ದೇಶಕೆ ಹೋಗಲಿ ಅಲ್ಲಿನ ಸಿಗ್ನೇಚರ್ ಡಿಶ್ ತಿನ್ನಬೇಕು ಎನ್ನುವ ಆಸೆ ಆಗುತ್ತೆ. ಆದರೆ ನಾನು ಹೇಳಿಕೇಳಿ ಪಕ್ಕಾ ಸಸ್ಯಾಹಾರಿ. ಹೀಗಾಗಿ ಕೆಲವು ಆಸೆಗಳು ಕೇವಲ ಆಸೆಗಳಾಗಿ ಉಳಿದುಕೊಳ್ಳುತ್ತದೆ. ಆದರೆ ಊರು ಯಾವುದೇ ಇರಲಿ , ಧರ್ಮ ಯಾವುದೇ ಇರಲಿ ಅಲ್ಲಿನ ಜನ ಒಂದಲ್ಲ ಒಂದು ಸಸ್ಯಾಹಾರಿ ಖಾದ್ಯ ತಿಂದೆ ತಿನ್ನುತ್ತಾರೆ ಅಲ್ವಾ ? ಹೀಗಾಗಿ ಅದರ ಹುಡುಕಾಟ ಸದಾ ಇದ್ದೆ ಇರುತ್ತದೆ.

ಅರಬ್‌ ದೇಶಗಳಲ್ಲಿ ದೊರೆಯುವ ಬಕ್ಲವಾ

ಫಲಾಫಲ್ ಅಂತಹ ಖಾದ್ಯ. ಸಸ್ಯಾಹಾರಿ ಲೊಟ್ಟೆ ಹೊಡೆದು ತಿನ್ನಬಹುದು. ಆದರೆ ನಾನು ಹೇಳಲು ಬಂದದ್ದು ಅದರ ಬಗ್ಗೆಯಲ್ಲ ! ಸಿಹಿ ಖಾದ್ಯ ಬಕ್ಲವಾ ಬಗ್ಗೆ , ಹೌದು ಬಕ್ಲವಾ ನಿಮಗೆ ಎಲ್ಲಾ ಅರಬ್ ದೇಶದಲ್ಲೂ ಸಿಗುತ್ತದೆ. ಜೊತೆಗೆ ಗ್ರೀಸ್ ದೇಶದಲ್ಲಿ ಕೂಡ ಇದು ಅವರದೇ ಖಾದ್ಯ ಎನ್ನುವಷ್ಟು ಪ್ರಸಿದ್ಧವಾಗಿದೆ. ನಾವು ಇದರ ಮೂಲ ಕೆದಕುತ್ತಾ ಹೋದರೆ ತಿಳಿಯುವುದು ಇದರ ಜನನವಾದದ್ದು ಟರ್ಕಿಯಲ್ಲಿ ಎನ್ನುವುದು. ಇಂದಿಗೂ ಇದು ಟರ್ಕಿಯ ಗಲ್ಲಿಗಲ್ಲಿಯಲ್ಲೂ ಸಿಗುತ್ತದೆ. ಟರ್ಕಿಶ್ ದಾಳಿಕೋರರು ಹಂಗರಿ ದೇಶದ ಮೇಲೆ 16 ನೇ ಶತಮಾನದಲ್ಲಿ ದಾಳಿ ಮಾಡುತ್ತಾರೆ. ಅವರ ಜೊತೆಗೆ ಬಕ್ಲವಾ ಹಂಗರಿ ಸೇರಿತು ಎನ್ನುವ ಕಥೆಯಿದೆ. ಆದರೆ ಗ್ರೀಸರು ಹೇಳುವ ಕಥೆಯೇ ಬೇರೆಯಿದೆ. ಈ ತಿಂಡಿಯನ್ನು ಜೀಸಸ್ ಸತ್ತ ನಂತರ ಆತನ ನೆನಪಿನಲ್ಲಿ ತಯಾರಿಸಲು ಪ್ರಾರಂಭಿಸಿದರು. 33 ಪದರಗಳನ್ನು ಇದು ಹೊಂದಿರುತ್ತದೆ , ಒಂದೊಂದು ಪದರವೂ ಜೀಸಸ್ ಬದುಕಿದ ಒಂದೊಂದು ವರ್ಷವನ್ನು ನೆನಪಿಸುತ್ತದೆ ಎನ್ನುತ್ತಾರೆ. ಈ ಖಾದ್ಯವನ್ನು ಅರಬ್ಬರು , ಟರ್ಕಿಶರು , ಇಸ್ರೇಲಿಗಳು , ಮಸೆಡೊನಿಯಾ , ಬುಲ್ಗರಿಯ ಸೆರ್ಬಿಯ , ಅರ್ಮೇನಿಯ ಹೀಗೆ ಹಲವಾರು ದೇಶಗಳಲ್ಲಿ ತಯಾರಿಸುತ್ತಾರೆ. ವಾಲ್ನಟ್ ಮತ್ತು ಸಕ್ಕರೆಯಿಂದ ಇದನ್ನು ತಯಾರಿಸುತ್ತಾರೆ. ಆದರೆ ಅರ್ಮೇನಿಯ ದೇಶದಲ್ಲಿ ಇದರ ಜೊತೆಗೆ ಚಕ್ಕೆ (ಸಿನಮಮ್ ) ಮತ್ತು ಲವಂಗವನ್ನು ಕೂಡಾ ಬಳಸುತ್ತಾರೆ. ಇಸ್ರೇಲಿಗಳು ಕೂಡ ಚಕ್ಕೆ , ಲವಂಗ ಬಳಸುತ್ತಾರೆ. ಮಜಾ ಏನು ಗೊತ್ತಾ ? ಇದು ಭಾರತೀಯ ಸಿಹಿ ತಿಂಡಿಗಳಂತೆ ಅತಿ ಸಿಹಿ ಇರುವುದಿಲ್ಲ , ಜೊತೆಗೆ ಇದರ ಗಾತ್ರ ಕೂಡ ಚಿಕ್ಕದಾಗಿರುವ ಕಾರಣ ಮುಜುಗರವಿಲ್ಲದೆ ಒಂದೆರೆಡು ಸ್ವಾಹ ಮಾಡಿ ಬಿಡಬಹುದು.

ಟ್ರೆಂಡಿಂಗ್​ ಸುದ್ದಿ

ನವೆಂಬರ್‌ 17, ಬಕ್ಲವಾ ದಿನ

ನವೆಂಬರ್ 17 ನ್ಯಾಷನಲ್ ಬಕ್ಲವಾ ದಿನವಂತೆ ! ಯಾವ ನೇಷನ್ ನವರಿಗೆ ಎಂದು ಮಾತ್ರ ಕೇಳಬೇಡಿ ಏಕೆಂದರೆ ಅರಬ್ಬರು , ಇಸ್ರೇಲಿಗಳು ತಮ್ಮ ಧರ್ಮದ ಸಲುವಾಗಿ ಪ್ರಾಣ ಬಿಡುತ್ತಾರೆ. ಕ್ರಿಶ್ಚಿಯನ್ನರು ಕೂಡ ಕಡಿಮೆಯೇನಿಲ್ಲ , ಇವರ ಜೊತೆಗೆ ಇನ್ನೂ ಹತ್ತಾರು ದೇಶಗಳನ್ನು ಬೆಸೆದಿರುವುದು ಬಕ್ಲವಾದ ತಾಕತ್ತು. ಇನ್ನೊಂದು ಮಜಾ ಗೊತ್ತಾ ? ಎಲ್ಲಾ ಧರ್ಮಗಳಲ್ಲೂ ಬಕ್ಲವಾ ಮಾಡುವ ವಿಧಾನದ ಬಗ್ಗೆ , ಶುರುವಾದದಕ್ಕೆ ಬೇರೆ ಬೇರೆ ಕಥೆಗಳಿವೆ. ಆ ಎಲ್ಲಾ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಬಕ್ಲವಾ ಗೆದ್ದಿದೆ.

ಸಂಗೀತಕ್ಕೆ ಮಾತ್ರವಲ್ಲ ಕಣ್ರೀ ನಮ್ಮ ಖಾದ್ಯಗಳಿಗೂ ಎಲ್ಲರನ್ನೂ ಬೆಸೆಯುವ ಶಕ್ತಿಯಿದೆ. ದುಬೈನಲ್ಲಿ ಇದನ್ನು ಸವಿಯುತ್ತ ನೆನಪಾದ ಗೆಳೆಯರನ್ನು ಟ್ಯಾಗ್ ಮಾಡುತ್ತಿದ್ದೇನೆ. ನೀವುಗಳು ಕೂಡ ಅವಕಾಶ ಸಿಕ್ಕಾಗ ಬಕ್ಲವಾ ಸ್ವಾಹಾ ಮಾಡುವುದು ಮರೆಯಬೇಡಿ , ಅಂದಹಾಗೆ ಇದು ಪೂರ್ಣ ವೆಜ್ , ಮೊಟ್ಟೆ ಕೂಡ ಬಳಕೆ ಮಾಡುವುದಿಲ್ಲ , ಹೀಗಾಗಿ ಇದನ್ನು ಎಲ್ಲರೂ ತಿನ್ನಬಹುದು !

ಎಂದು ರಂಗಸ್ವಾಮಿ ಮೂಕನಹಳ್ಳಿ ತಾವು ಮೆಚ್ಚಿದ ವಿದೇಶಿ ತಿಂಡಿ ಬಕ್ಲವಾ ಬಗ್ಗೆ ಬರೆದುಕೊಂಡಿದ್ದಾರೆ.