Mysore Bonda Recipe: ದೀಪಾವಳಿ ಹಬ್ಬಕ್ಕೆ ಮನೆಗೆ ಬಂದ ಅತಿಥಿಗಳಿಗೆ ಮೈಸೂರು ಬೋಂಡಾ ತಯಾರಿಸಿ ಕೊಡಿ; ರೆಸಿಪಿ ಇಲ್ಲಿದೆ ನೋಡಿ
ಸಾಂಸ್ಕೃತಿಕ ನಗರಿ ಮೈಸೂರು ಅನೇಕ ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಮೈಸೂರು ಪೇಟಾ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಮೈಸೂರು ಮಸಾಲೆ ದೋಸೆ, ಮೈಸೂರು ಪಾಕ್ ಹಾಗೇ ಮೈಸೂರು ಬೋಂಡಾ. ಹೀಗೆ ಊರಿನ ಜೊತೆ ಜೊತೆಗೆ ಇಲ್ಲಿನ ವಿಶೇಷ ರೆಸಿಪಿಗಳು ಕೂಡಾ ವಿಶ್ವವಿಖ್ಯಾತಿ ಪಡೆದಿದೆ. ಇಂದು ದೀಪಾವಳಿ, ಈ ದಿನ ಮೈಸೂರು ಬೋಂಡಾ ತಯಾರಿಸೋದು ಹೇಗೆ ತಿಳಿಯೋಣ.
ಮೈಸೂರು ಬೋಂಡಾ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯ, ಹೊರ ರಾಜ್ಯಗಳಲ್ಲೂ ಬಹಳ ಫೇಮಸ್. ಆದರಲ್ಲೂ ಆಂಧ್ರ ಪ್ರದೇಶ, ತೆಲಂಗಾಣದವರು ಈ ಗರಿಯಾದ, ರುಚಿಯಾದ ಮೈಸೂರು ಬೋಂಡಾವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ತಯಾರಿಸುವುದು ಕೂಡಾ ಬಹಳ ಸುಲಭ. ಮೈಸೂರು ಬೋಂಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ ಹೀಗಿದೆ. ಇದಕ್ಕೆ ಹೆಚ್ಚಿನ ಸಾಮಗ್ರಿಗಳು ಕೂಡಾ ಅಗತ್ಯವಿಲ್ಲ.
ಮೈಸೂರು ಬೋಂಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಮೈದಾ ಹಿಟ್ಟು - 1 1/2 ಕಪ್
- ಮೊಸರು - 1 ಕಪ್
- ಜೀರ್ಗೆ - 1 ಟೀ ಸ್ಪೂನ್
- ಸೋಡಾ - 1/2 ಟೀ ಸ್ಪೂನ್
- ಎಣ್ಣೆ - ಕರಿಯಲು
- ಉಪ್ಪು - ರುಚಿಗೆ ತಕ್ಕಷ್ಟು
ಮೈಸೂರು ಬೋಂಡಾ ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಒಂದು ಕಪ್ ಮೊಸರು ಹಾಗೂ ಅಷ್ಟೇ ಅಳತೆಯ ನೀರು ಸೇರಿಸಿಕೊಳ್ಳಿ
ಇದರೊಂದಿಗೆ ಜೀರ್ಗೆ, ಉಪ್ಪು, 1 ಸ್ಪೂನ್ ಎಣ್ಣೆ, ಮೈದಾಹಿಟ್ಟು ಸೇರಿಸಿ, ಎಲ್ಲವನ್ನೂ ಮಿಕ್ಸ್ ಮಾಡಿ
ಈ ಮಿಶ್ರಣಕ್ಕೆ ಮತ್ತೆ ಒಂದೆರಡು ಚಮಚ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ 2-3 ಗಂಟೆಗಳ ಕಾಲ ಹುದುಗಲು ಬಿಡಿ
2-3 ಗಂಟೆಗಳ ನಂತರ 1/2 ಟೀ ಸ್ಪೂನ್ ಸೋಡಾ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ
ಎಣ್ಣೆ ಬಿಸಿ ಮಾಡಿ, ಕೈಗೆ ಹಿಟ್ಟು ತೆಗೆದುಕೊಂಡು ಮುಷ್ಟಿಯ ಮಧ್ಯದಿಂದ ಹಿಟ್ಟನ್ನು ಎಣ್ಣೆಗೆ ಬಿಡಿ
ಬೋಂಡಾವನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವೆಗೂ ಫ್ರೈ ಮಾಡಿದರೆ ರುಚಿಯಾದ ಗರಿ ಗರಿಯಾದ ಮೈಸೂರು ಬೋಂಡಾ ತಿನ್ನಲು ರೆಡಿ
ಮನೆಗೆ ಬಂದ ಅತಿಥಿಗಳಿಗೆ , ನಿಮ್ಮ ಕುಟುಂಬದವರಿಗೆ ಊಟದ ಜೊತೆಗೆ ನೆಂಚಿಕೊಳ್ಳಲು ಮೈಸೂರು ಬೋಂಡಾ ಕೊಡಿ, ಅಥವಾ ಚಟ್ನಿ/ಪುದೀನಾ ಚಟ್ನಿ ಜೊತೆ ಬಿಸಿ ಬಿಸಿ ಸರ್ವ್ ಮಾಡಿ