ಕನ್ನಡ ಸುದ್ದಿ  /  ಜೀವನಶೈಲಿ  /  ಛೀ.. ಆಲೂಗಡ್ಡೆ ಅಂತಾ ಮೂಗು ಮುರಿಯಬೇಡಿ: ಆಲೂಗಡ್ಡೆಯಿಂದ ತಯಾರಿಸಬಹುದು ಮಕ್ಕಳಿಗೆ ಇಷ್ಟವಾಗುವ ಹಲವು ಟೇಸ್ಟಿ ತಿನಿಸುಗಳು

ಛೀ.. ಆಲೂಗಡ್ಡೆ ಅಂತಾ ಮೂಗು ಮುರಿಯಬೇಡಿ: ಆಲೂಗಡ್ಡೆಯಿಂದ ತಯಾರಿಸಬಹುದು ಮಕ್ಕಳಿಗೆ ಇಷ್ಟವಾಗುವ ಹಲವು ಟೇಸ್ಟಿ ತಿನಿಸುಗಳು

ಬೆಳಗ್ಗೆ ತಿಂಡಿಗೆ ಅಥವಾ ಮಕ್ಕಳ ಸ್ಕೂಲ್ ಸ್ನಾಕ್ಸ್ ಬಾಕ್ಸ್ ಗೆ ಏನು ತಿಂಡಿ ಮಾಡಿ ಕಳುಹಿಸುವುದು ಅಂತಾ ದಿನಾ ಯೋಚನೆ ಮಾಡುತ್ತಿದ್ದೀರಾ? ಆಲೂಗಡ್ಡೆಯಿಂದ ಹಲವು ಬಗೆಯ ಸ್ವಾದಿಷ್ಟ ತಿನಿಸುಗಳನ್ನು ತಯಾರಿಸಬಹುದು. ಇವು ಸಂಜೆಯ ಸ್ನಾಕ್ಸ್‌ಗೂ ಸೂಪರ್ ಆಗಿರುತ್ತೆ. ಇವನ್ನು ಮಕ್ಕಳು ಬಾಯಿಚಪ್ಪರಿಸಿ ತಿನ್ನುತ್ತಾರೆ. (ಬರಹ: ಪ್ರಿಯಾಂಕಾ)

ಆಲೂಗೆಡ್ಡೆ ಬಳಸಿ ಮಾಡಬಹುದಾದ ಜನಪ್ರಿಯ ರೆಸಿಪಿಗಳು
ಆಲೂಗೆಡ್ಡೆ ಬಳಸಿ ಮಾಡಬಹುದಾದ ಜನಪ್ರಿಯ ರೆಸಿಪಿಗಳು

ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುವ ಬಹುಮುಖ ತರಕಾರಿಗಳಲ್ಲಿ ಆಲೂಗಡ್ಡೆಯೂ ಒಂದು. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಅಲ್ಲದೆ, ಈ ತರಕಾರಿಯು ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಹೊಂದಿರುತ್ತದೆ. ಮಧ್ಯಮ ಆಲೂಗಡ್ಡೆಯು 3 ಗ್ರಾಂ ಪ್ರೊಟೀನ್ ಅನ್ನು ಹೊಂದಿರುತ್ತದೆ. ಇದು ಬಹಳ ರುಚಿಕರ ತರಕಾರಿಯಾಗಿದ್ದು, ಮಧುಮೇಹ ಹೊಂದಿರುವವರೂ ಸೇರಿದಂತೆ ಎಲ್ಲರೂ ಸೇವಿಸಬಹುದು. ಹಲವು ಭಕ್ಷ್ಯಗಳಲ್ಲಿ ಆಲೂಗಡ್ಡೆಯನ್ನು ಸೇರಿಸಲಾಗುತ್ತದೆ. ಚಿಕನ್ ಸಾಂಬಾರ್, ಮಟನ್ ಸಾಂಬಾರ್‌ಗೂ ಆಲೂಗಡ್ಡೆಯನ್ನು ಸೇರಿಸಲಾಗುತ್ತದೆ.

ನೀವು ಆಲೂಗಡ್ಡೆಯನ್ನು ತಿನ್ನಲು ಇಷ್ಟಪಡುವವರಾಗಿದ್ದರೆ, ಇಲ್ಲಿವೆ ಜನಪ್ರಿಯ ಆಲೂಗಡ್ಡೆ ರೆಸಿಪಿಗಳು.

1) ಆಲೂಗಡ್ಡೆ ಪ್ಯಾನ್‌ಕೇಕ್‌

ಪ್ಯಾನ್‌ಕೇಕ್‌ಗಳು ವಿಶ್ವದ ಹಲವೆಡೆ ಜನರು ಇಷ್ಟಪಡುತ್ತಾರೆ. ಈ ಖಾದ್ಯಕ್ಕಾಗಿ ನಿಮಗೆ ಬೇಕಾಗಿರುವುದು ಆಲೂಗಡ್ಡೆ, ಮೊಟ್ಟೆ, ಹಿಟ್ಟು, ಉಪ್ಪು, ಮೆಣಸು, ಈರುಳ್ಳಿ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ತುರಿದುಕೊಳ್ಳಿ. ನಂತರ ಮೇಲೆ ತಿಳಿಸಿದ ಪದಾರ್ಥಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಒಂದು ಹಿಡಿಯಷ್ಟು ಕೈಯಲ್ಲಿ ತೆಗೆದುಕೊಂಡು ಚಪ್ಪಟೆಗೊಳಿಸಿ. ನಂತರ ಇದನ್ನು ಗರಿಗರಿಯಾಗುವವರೆಗೆ ಫ್ರೈ ಮಾಡಿ.

ಟ್ರೆಂಡಿಂಗ್​ ಸುದ್ದಿ

2) ಹ್ಯಾಶ್ ಬ್ರೌನ್ಸ್

ಹ್ಯಾಶ್ ಬ್ರೌನ್ಸ್ ತಯಾರಿಸುವುದು ತುಂಬಾ ಸುಲಭ. ಈ ಭಕ್ಷ್ಯವನ್ನು ತಯಾರಿಸಲು ನೀವು ಮೊದಲು ಆಲೂಗಡ್ಡೆಯನ್ನು ತುರಿಯಬೇಕು. ನಂತರ ಅದರಲ್ಲಿರುವ ತೇವಾಂಶ ತೆಗೆಯಬೇಕು. ನಂತರ ಉಪ್ಪು, ಕಾಳುಮೆಣಸು ಮತ್ತು ಈರುಳ್ಳಿ ಮಿಶ್ರಣ ಮಾಡಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ ಅಥವಾ ಮೈಕ್ರೋವೇವ್‌ನಲ್ಲಿಡಿ.

3) ಆಲೂಗಡ್ಡೆ ಚೀಸ್

ಈ ರೆಸಿಪಿಯನ್ನು ಮಾಡಲು ಮೊದಲಿಗೆ ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದ ನಂತರ ಮಧ್ಯಕ್ಕೆ ಕತ್ತರಿಸಿ. ನಂತರ ಅದರ ಮಧ್ಯದ ಭಾಗವನ್ನು ಕೊರೆಯಿರಿ. ಬಳಿಕ ನಿಮಗಿಷ್ಟವಾದ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಆಲೂಗಡ್ಡೆಯ ಮಧ್ಯದಲ್ಲಿ ತುಂಬಿಸಿ. ಅದರ ಮೇಲೆ ಚೀಸ್ ಹಾಕಿ ಬೇಯಿಸಲು ಬಿಡಿ. ಹೀಗೆ ಸವಿಯಲು ರುಚಿಕರವಾದ ಚೀಸ್ ಆಲೂಗಡ್ಡೆ ರೆಡಿಯಾಗುತ್ತದೆ.

4) ಆಲೂಗಡ್ಡೆ-ಮೊಟ್ಟೆಯ ಬೇಕ್

ಮೊಟ್ಟೆ ಮತ್ತು ಆಲೂಗಡ್ಡೆ ಎರಡೂ ಸಾಕಷ್ಟು ಪೋಷಕಾಂಶಗಳನ್ನು ಹೊಂದಿವೆ. ಇವೆರೆಡೂ ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಇದಕ್ಕಾಗಿ ನೀರಿಗೆ ಆಲೂಗಡ್ಡೆ, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಆಲೂಗಡ್ಡೆ ಚೆನ್ನಾಗಿ ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ಆಲೂಗಡ್ಡೆಗಳನ್ನು ಮ್ಯಾಶ್ ಮಾಡಿ, ಫ್ರೈ ಪ್ಯಾನ್‌ನಲ್ಲಿ ದಪ್ಪ ಪದರದಲ್ಲಿ ಹರಡಿ. ಅದಕ್ಕೆ ನಿಮಗಿಷ್ಟವಾದ ತರಕಾರಿಗಳು ಮತ್ತು ಮಸಾಲೆಗಳನ್ನು ಸೇರಿಸಿ. ಜೊತೆಗೆ ಮೊಟ್ಟೆಯನ್ನು ಸೇರಿಸಿ. ನಂತರ ಚೆನ್ನಾಗಿ ಬೇಯಿಸಿದರೆ ಈ ವಿಶಿಷ್ಟ ತಿನಿಸು ಸವಿಯಲು ಸಿದ್ಧವಾಗಿರುತ್ತದೆ.

5) ಆಲೂಗಡ್ಡೆ ವಾಫಲ್ಸ್

ಬೆಳಗಿನ ಉಪಾಹಾರಕ್ಕೆ ವಾಫಲ್ ಅಂದ್ರೆ ಮಕ್ಕಳು ಬಹಳ ಇಷ್ಟಪಟ್ಟು ತಿಂತಾರೆ. ಇದನ್ನು ತಯಾರಿಸಲು ಬೇಕಾಗಿರುವುದು ಇಷ್ಟೇ; ಬೆಣ್ಣೆ, ಕತ್ತರಿಸಿದ ಈರುಳ್ಳಿ, ಸ್ವಲ್ಪ ಬೆಳ್ಳುಳ್ಳಿ, ಮ್ಯಾಶ್ ಮಾಡಿದ ಆಲೂಗಡ್ಡೆ, ಮೊಟ್ಟೆ, ಸ್ವಲ್ಪ ಮೈದಾ, ಉಪ್ಪು, ಕರಿಮೆಣಸು. ಮೊದಲಿಗೆ ಬೆಣ್ಣೆಯನ್ನು (ಎಣ್ಣೆ ಬದಲಿಗೆ) ಹಾಕಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ಆಲೂಗಡ್ಡೆ, ಮೊಟ್ಟೆ, ಹಿಟ್ಟು, ಉಪ್ಪು ಮತ್ತು ಕರಿಮೆಣಸು ಸೇರಿಸಿ. ವಾಫಲ್ ಪ್ಯಾನ್‌ಗೆ ಈ ಮಿಶ್ರಣವನ್ನು ಹಾಕಿ, ಮುಚ್ಚಳವನ್ನು ಮುಚ್ಚಿ 3 ರಿಂದ 5 ನಿಮಿಷ ಬೇಯಿಸಿ.

ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ಸ್ನಾಕ್ಸ್‌ಗೆ ಆಲೂಗಡ್ಡೆ ರೆಸಿಪಿಯನ್ನು ತಯಾರಿಸಿ ಸವಿಯಬಹುದು. ಮಕ್ಕಳಿಗೂ ಇದು ಇಷ್ಟವಾಗುತ್ತದೆ. ನೀವು ಒಮ್ಮೆಯಾದರೂ ಈ ರೆಸಿಪಿಗಳನ್ನು ತಯಾರಿಸಿ ನಿಮ್ಮ ಪ್ರೀತಿ-ಪಾತ್ರರಿಗೆ ಉಣಬಡಿಸಿ.