ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ
ಕನ್ನಡ ಸುದ್ದಿ  /  ಜೀವನಶೈಲಿ  /  ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

ದಕ್ಷಿಣ ಭಾರತದ ಯಾವುದೇ ಮದುವೆ, ನಾಮಕರಣ ಮುಂತಾದ ಕಾರ್ಯಕ್ರಮದಲ್ಲಿ ಅನಾನಸ್ ಕೇಸರಿಬಾತ್ ಇಲ್ಲದಿದ್ದರೆ ಹೇಗೆ ಹೇಳಿ? ಬಹುತೇಕ ಎಲ್ಲಾ ಶುಭ ಸಮಾರಂಭಗಳಲ್ಲೂ ಈ ಸಿಹಿ ಖಾದ್ಯವನ್ನು ತಯಾರಿಸಲಾಗುತ್ತದೆ. ಬಹಳ ಸರಳ ಹಾಗೂ ತಿನ್ನಲೂ ರುಚಿಕರವಾಗಿರುವ ಈ ಸಿಹಿ ಖಾದ್ಯಕ್ಕೆ ಮಾರು ಹೋಗದವರಾರು? ಅಂದಹಾಗೆ, ಅನಾನಸ್ ಕೇಸರಿಬಾತ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅನಾನಸ್ ಸ್ಪೆಷಲ್ ಕೇಸರಿಬಾತ್ ಮಾಡುವ ವಿಧಾನ
ಅನಾನಸ್ ಸ್ಪೆಷಲ್ ಕೇಸರಿಬಾತ್ ಮಾಡುವ ವಿಧಾನ (Instagram/pixel)

ದಕ್ಷಿಣ ಭಾರತದ ವಿಶಿಷ್ಟ, ರುಚಿಕರವಾದ ತಿನಿಸುಗಳಲ್ಲಿ ಅನಾನಸ್ ಕೇಸರಿಬಾತ್ ಕೂಡ ಒಂದು. ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಈ ಜನಪ್ರಿಯ ತಿಂಡಿ ಕಂಡುಬರುತ್ತದೆ. ಕೆಲವೇ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಬಹಳ ಬೇಗನೆ ಈ ರುಚಿಕರವಾದ ತಿಂಡಿ ಸಿದ್ಧವಾಗುತ್ತದೆ. ರವೆ, ಅನಾನಸ್, ಸಕ್ಕರೆ ಮತ್ತು ತುಪ್ಪ ಇದ್ರೆ ಸಾಕು ಕೆಲವೇ ನಿಮಿಷಗಳಲ್ಲಿ ಈ ಸಿಹಿ ಖಾದ್ಯ ತಯಾರಾಗುತ್ತದೆ. ಬೇಕಿದ್ದರೆ ಡ್ರೈ ಫ್ರೂಟ್ಸ್ ಸೇರಿಸಬಹುದು. ರುಚಿ ಇನ್ನೂ ಚೆನ್ನಾಗಿರುತ್ತದೆ.

ಹಣ್ಣಿನ ಫ್ಲೇವರ್ ಅನ್ನು ಬಳಸದೆ ನೈಸರ್ಗಿಕವಾಗಿ ಸಿಗುವ ಮಾಗಿದ ಅನಾನಸ್ ನಿಂದ ರುಚಿತಕರವಾದ ಕೇಸರಿಬಾತ್ ತಯಾರಿಸಬಹುದು. ಸಾಮಾನ್ಯವಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಕೇಸರಿ ಬಾತ್‌ ಮಾಡುವಾಗ ಪೈನಾಪಲ್‌ ಸೇರಿಸುತ್ತಾರೆ. ಇದರಿಂದ ಕೇಸರಿ ಬಾತ್ ರುಚಿ ಹೆಚ್ಚಿಸುವುದಲ್ಲದೆ, ಬಾಯಿಗಿಡುತ್ತಿದ್ದಂತೆಯೇ ಕರಗುತ್ತದೆ.‌ ಕೆಲವೊಂದು ಕಡೆ ಪೈನಾಪಲ್‌ ಬದಲಿಗೆ ಅದರ ಎಸೆನ್ಸ್‌ ಹಾಕುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಅದು ಒಳ್ಳೆಯದಲ್ಲ. ಅನಾನಸು ಹಾಕಿದ ಕೇಸರಿ ಬಾತ್ ತಯಾರಿಸುವುದು ತುಂಬಾ ಸರಳ. ಈ ಕೇಸರಿಬಾತ್ ತಯಾರಾಗುವಾಗ ಬರುವ ಸುವಾಸನೆಯಿಂದ ನಾಲಿಗೆಯಲ್ಲಿ ನೀರು ಬರಲು ಶುರುವಾಗುತ್ತದೆ. ರುಚಿ ಕೂಡ ಅಷ್ಟೇ ಚೆನ್ನಾಗಿರುತ್ತದೆ.

ಅನಾನಸ್ ಕೇಸರಿಬಾತ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

ಬೇಕಾಗುವ ಸಾಮಾಗ್ರಿಗಳು:

  • ಚಿರೋಟಿ ರವೆ - 1 ಕಪ್
  • ಅನಾನಸ್ - 1 ಕಪ್
  • ಸಕ್ಕರೆ - 1 ½ ಕಪ್
  • ನೀರು - 2 ½ ಕಪ್
  • ತುಪ್ಪ - 1 ½ ಕಪ್
  • ಗೋಡಂಬಿ, ದ್ರಾಕ್ಷಿ - ಸ್ವಲ್ಪ
  • ಲವಂಗ - 4ರಿಂದ 5
  • ಉಪ್ಪು - ಚಿಟಿಕೆ
  • ಕೇಸರಿ ದಳ - ½ ಗ್ರಾಂ
  • ಹಾಲು - 1 ರಿಂದ 2 ಚಮಚ
  • ಏಲಕ್ಕಿ - 2

ಮಾಡುವ ವಿಧಾನ

ಮೊದಲಿಗೆ ತುಪ್ಪ ತೆಗೆದುಕೊಂಡು ಅದಕ್ಕೆ ಗೋಡಂಬಿ, ಲವಂಗ, ಹಾಕಿ ಹುರಿಯಿರಿ. ನಂತರ ಚಿರೋಟಿ ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಗೋಲ್ಡನ್ ಬ್ರೌನ್ ಬಣ್ಣ ಬರುತ್ತಿದ್ದಂತೆ 1 ಕಪ್ ಅನಾನಸ್, ಒಣದ್ರಾಕ್ಷಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ 2 ½ ಕಪ್ ಬಿಸಿ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಹೀರಿ ರವಾ ಗಟ್ಟಿ ಹದಕ್ಕೆ ಬರುತ್ತಿದ್ದಂತೆ ಅದಕ್ಕೆ 1 ½ ಕಪ್ ಸಕ್ಕರೆ ಸೇರಿಸಿ. ಸಿಹಿ ಜಾಸ್ತಿ ಇಷ್ಟಪಡುವವರು ಸ್ವಲ್ಪ ಹೆಚ್ಚು ಶುಗರ್‌ ಸೇರಿಸಬಹುದು. ಹಾಲಿನಲ್ಲಿ ಮೊದಲೇ ಕೇಸರಿದಳವನ್ನು ನೆನೆಸಿಟ್ಟುಕೊಳ್ಳಬೇಕು. ಪಾಕಕ್ಕೆ ತುಪ್ಪ ಹಾಕಿ, ಅದು ಕರಗಿ ಗಟ್ಟಿಯಾಗುತ್ತಾ ಬರುವಾಗ ನೆನೆಸಿಟ್ಟ ಕೇಸರಿದಳವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸ್ವಲ್ಪ ಸಕ್ಕರೆ ಜೊತೆ ಏಲಕ್ಕಿಯನ್ನು ಪುಡಿ ಮಾಡಿ ಮಿಶ್ರಣಕ್ಕೆ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿದರೆ ಸವಿಯಲು ರುಚಿಯಾದ ಪೈನಾಪಲ್ ಕೇಸರಿಬಾತ್ ರೆಡಿ.

ಇದನ್ನೂ ಓದಿ | Benne Chakli: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ

ಪೈನಾಪಲ್ ಕೇಸರಿಬಾತ್ ಅನ್ನು ನೀವಿನ್ನೂ ಮನೆಯಲ್ಲಿ ತಯಾರಿಸಿಲ್ಲವೆಂದರೆ ಈಗಲೇ ಮಾಡಿ ನೋಡಿ. ಮೇಲೆ ಹೇಳಿರುವ ಅಳತೆಯಂತೆಯೇ ನೀವು ಪೈನಾಪಲ್ ಕೇಸರಿಬಾತ್ ಮಾಡಿದರೆ ಖಂಡಿತಾ ನಿಮ್ಮ ಪಾಕ ಚೆನ್ನಾಗಿ ಬರುತ್ತದೆ. ಮತ್ತೆ ಮತ್ತೆ ಮಾಡಿ ಸವಿಯಲು ಇಷ್ಟಪಡುವಿರಿ. ಹಾಗಂತೆ ಕೇಸರಿದಳ ಹಾಕಲು ಇಷ್ಟಪಡದವರು ಸ್ವಲ್ಪ ಅರಶಿನ ಬಳಸಬಹುದು. ಇದು ಕೇಸರಿಬಾತ್ ಅನ್ನು ಹಳದಿ ಬಣ್ಣದಿಂದ ಕಾಣುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಫುಡ್ ಕಲರ್ ಬಳಸದಿರಿ. ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ಆರೋಗ್ಯಕರ ಸಿಹಿತಿಂಡಿ ತಯಾರಿಸಿ ನೋಡಿ.

Whats_app_banner