ಒಣಮೀನಿನ ಜೊತೆ ಟೊಮೆಟೊ ಸೇರಿಸಿ ಈ ರೀತಿ ಸಾರು ಮಾಡಿ, ಚಳಿಗಾಲಕ್ಕೆ ಸೂಪರ್ ಆಗಿರುತ್ತೆ ಈ ರೆಸಿಪಿ; ಅನ್ನದ ಜೊತೆ ಮಸ್ತ್ ಕಾಂಬಿನೇಷನ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಒಣಮೀನಿನ ಜೊತೆ ಟೊಮೆಟೊ ಸೇರಿಸಿ ಈ ರೀತಿ ಸಾರು ಮಾಡಿ, ಚಳಿಗಾಲಕ್ಕೆ ಸೂಪರ್ ಆಗಿರುತ್ತೆ ಈ ರೆಸಿಪಿ; ಅನ್ನದ ಜೊತೆ ಮಸ್ತ್ ಕಾಂಬಿನೇಷನ್‌

ಒಣಮೀನಿನ ಜೊತೆ ಟೊಮೆಟೊ ಸೇರಿಸಿ ಈ ರೀತಿ ಸಾರು ಮಾಡಿ, ಚಳಿಗಾಲಕ್ಕೆ ಸೂಪರ್ ಆಗಿರುತ್ತೆ ಈ ರೆಸಿಪಿ; ಅನ್ನದ ಜೊತೆ ಮಸ್ತ್ ಕಾಂಬಿನೇಷನ್‌

ದಕ್ಷಿಣ ಭಾರತದ ಕರಾವಳಿ ಭಾಗಗಳಲ್ಲಿ ಹಸಿ ಮೀನಿನಷ್ಟೇ ಒಣಮೀನಿನ ಬಳಕೆಯೂ ಇದೆ. ಹಸಿ ಮೀನು ಸಿಗದೇ ಇದ್ದಾಗ ಒಣ ಮೀನಿನ ಖಾದ್ಯಗಳನ್ನ ತಯಾರಿಸಿ ತಿನ್ನಲಾಗುತ್ತದೆ. ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಒಣಮೀನಿನ ಜತೆ ಟೊಮೆಟೊ ಸೇರಿಸಿ ಇಗುರು ಎಂಬ ರೆಸಿಪಿ ಮಾಡಲಾಗುತ್ತದೆ. ಇದರ ರುಚಿ ಸೂಪರ್ ಆಗಿರುತ್ತೆ. ಇದನ್ನ ಮಾಡೋದು ಹೇಗೆ ನೋಡಿ.

ಒಣ ಮೀನಿನ ರೆಸಿಪಿ
ಒಣ ಮೀನಿನ ರೆಸಿಪಿ

ಒಣ ಮೀನಿನ ಬಳಕೆ ಕಡಿಮೆ ಆದ್ರೂ ಕರಾವಳಿ ಭಾಗದವರಿಗೆ ಇದು ಚಿರಪರಿಚಿತ. ಹಸಿ ಮೀನಿನಂತೆ ಒಣಮೀನಿನಲ್ಲೂ ಹಲವು ಬಗೆಗಳಿವೆ. ಹಸಿ ಮೀನಿಗೆ ಉಪ್ಪು ಸೇರಿಸಿ ಚೆನ್ನಾಗಿ ಒಣಗಿಸಿ ಒಣ ಮೀನು ತಯಾರಿಸಲಾಗುತ್ತದೆ. ಇದರ ರುಚಿಯೂ ಹಸಿ ಮೀನಿಗಿಂತ ಭಿನ್ನವಾಗಿರುತ್ತೆ. ಈ ಚಳಿಗಾಲದಲ್ಲಿ ಖಾರ ಕೊಂಚ ಜಾಸ್ತಿ ಹಾಕಿ ಒಣ ಮೀನಿನ ಖಾದ್ಯಗಳನ್ನು ಮಾಡಿದ್ರೆ ಆಹಾ, ಅದರ ರುಚಿಯೇ ಬೇರೆ.

ನೀವು ಬೇರೆ ರೀತಿಯ ಒಣ ಮೀನಿನ ಖಾದ್ಯಗಳನ್ನು ತಿಂದಿರಬಹುದು. ಆದರೆ ಆಂಧ್ರಶೈಲಿಯ ಇಗುರು ತಿಂದಿರಲಿಕ್ಕಿಲ್ಲ. ಇದು ಟೊಮೆಟೊ ಹಾಗೂ ಒಣಮೀನು ಹಾಕಿ ಮಾಡಿರುವ ಸಾರಿನ ರೀತಿಯ ಪದಾರ್ಥ. ಇದು ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತೆ. ಹಾಗಾದರೆ ಈ ರೆಸಿಪಿ ಮಾಡೋದು ಹೇಗೆ ನೋಡಿ.

ಒಣ ಮೀನು ಇಗುರು ರೆಸಿಪಿ

 

ಬೇಕಾಗುವ ಸಾಮಗ್ರಿಗಳು

ಸಣ್ಣ ಒಣಗಿದ ಮೀನು - ಒಂದು ಕಪ್, ನೀರು - ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ - ಎರಡು ಚಮಚ, ಸಾಸಿವೆ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ, ಈರುಳ್ಳಿ - ಎರಡು, ಮೆಣಸಿನಕಾಯಿ - ಎರಡು, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಟೊಮೆಟೊ – 2, ಅರಿಶಿನ - ಅರ್ಧ ಚಮಚ, ಖಾರದಪುಡಿ - ಒಂದು ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಪುಡಿ - ಒಂದು ಚಮಚ, ಹುಣಸೆಹಣ್ಣು - ಚಿಕ್ಕ ನೆಲ್ಲಿಕಾಯಿ ಗಾತ್ರದ್ದು, ಕರಿಬೇವು - ಐದಾರು ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ

ಒಣಮೀನು ಇಗುರು ಮಾಡುವ ವಿಧಾನ

ಒಣಮೀನನ್ನು ಒಂದಿಷ್ಟು ಹೊತ್ತು ನೀರಿನಲ್ಲಿ ನೆನೆಸಿಡಿ. ಬೇಗ ಮೃದುವಾಗಬೇಕು ಎಂದರೆ ಬಿಸಿನೀರಿನಲ್ಲಿ ನೆನೆಸಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ ಹುರಿಯಿರಿ. ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈರುಳ್ಳಿ ಫ್ರೈ ಮಾಡುವಾಗಲೇ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈಗ ಕತ್ತರಿಸಿಟ್ಟುಕೊಂಡ ಹಸಿಮೆಣಸು ಕೂಡ ಸೇರಿಸಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಚಿಕ್ಕದಾಗಿ ಹೆಚ್ಚಿದ ಟೊಮೆಟೊವನ್ನು ಅದಕ್ಕೆ ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಟೊಮೆಟೊ ಮೃದುವಾಗುವವರೆಗೂ ಹುರಿದುಕೊಳ್ಳಿ. ನಂತರ ಅರಿಸಿನ, ಖಾರದಪುಡಿ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯದಲ್ಲಿ ಹುಣಸೆಹಣ್ಣಿನ ತಿರುಳನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ ಆ ನೀರನ್ನು ಪಾತ್ರೆಗೆ ಸೇರಿಸಿ ಎಲ್ಲವನ್ನೂ ಒಮ್ಮೆ ಮಿಶ್ರಣ ಮಾಡಿ. ಈಗ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಸ್ವಲ್ಪ ಕುದಿಯಲು ಆರಂಭಿಸಿದಾಗ ಒಣ ಮೀನು ಸೇರಿಸಿ. ಅದರ ಮೇಲೆ ಕರಿಬೇವಿನ ಎಲೆ ಹಾಕಿ. ಮೀನು ಬೇಯಿಸುವವರೆಗೂ ಮುಚ್ಚಿಟ್ಟು ಚೆನ್ನಾಗಿ ಕುದಿಸಿ. ನಂತರ ಗರಂಮಸಾಲ ಸೇರಿಸಿ ಮತ್ತೆ ಮುಚ್ಚಿಡಿ. ಸ್ಟೌ ಆಫ್ ಮಾಡುವ ಮೊದಲು ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಅಷ್ಟೇ ಟೇಸ್ಟಿ ಡ್ರೈ ಫಿಶ್ ಟೊಮೇಟೊ ಇಗುರು ರೆಡಿ. ಈ ಇಗುರು ರೆಸಿಪಿ ಅನ್ನಕ್ಕೆ ಮಸ್ತ್ ಕಾಂಬಿನೇಷನ್ ದೋಸೆ, ಇಡ್ಲಿ ಜೊತೆಗೂ ಇದನ್ನು ನೆಂಜಿಕೊಂಡು ತಿನ್ನಬಹುದು.

Whats_app_banner