ಕನ್ನಡ ಸುದ್ದಿ  /  ಜೀವನಶೈಲಿ  /  ಮಹಾರಾಜ ಮಟನ್‌ ಕರಿಯಿಂದ ಫಿಶ್‌ ಬಿರಿಯಾನಿವರೆಗೆ ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ವೆಜ್ ಅಡುಗೆಗಳಿವು; ರೆಸಿಪಿ ಇಲ್ಲಿದೆ

ಮಹಾರಾಜ ಮಟನ್‌ ಕರಿಯಿಂದ ಫಿಶ್‌ ಬಿರಿಯಾನಿವರೆಗೆ ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ವೆಜ್ ಅಡುಗೆಗಳಿವು; ರೆಸಿಪಿ ಇಲ್ಲಿದೆ

ಬೇಸಿಗೆಯ ಬಿರು ಬಿಸಿಲಿನಲ್ಲಿ ಕೆಲವು ನಾನ್‌ವೆಜ್‌ ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ಹೀಟ್‌ ಆಗುವುದು ಸಹಜ. ಸಾಮಾನ್ಯವಾಗಿ ಚಿಕನ್‌ ಖಾದ್ಯಗಳು ದೇಹದ ಉಷ್ಣಾಂಶವನ್ನು ಹೆಚ್ಚಿಸಬಹುದು. ಅದಕ್ಕಾಗಿ ನೀವು ಮಟನ್‌, ಫಿಶ್‌, ಎಗ್‌, ಫೋರ್ಕ್‌ನಿಂದ ತಯಾರಿಸಿದ ಆಹಾರವನ್ನು ಸವಿಯಬಹುದು. ಬೇಸಿಗೆಗೆ ಹೇಳಿ ಮಾಡಿಸಿದ 5 ಬೆಸ್ಟ್‌ ನಾನ್‌ವೆಜ್‌ ಅಡುಗೆಗಳ ರೆಸಿಪಿ ಇಲ್ಲಿದೆ.

ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ ವೆಜ್ ಅಡುಗೆಗಳು
ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ ವೆಜ್ ಅಡುಗೆಗಳು

ಬೇಸಿಗೆಯಲ್ಲಿ ನಾನ್‌ವೆಜ್‌ ಪ್ರಿಯರಿಗೆ ಒಂಥರಾ ಬೇಸರ ಕಾಡುವುದು ಸಹಜ. ತಾವು ಇಷ್ಟಪಡುವ ಬಗೆಬಗೆಯ ಖಾದ್ಯಗಳು ಕಣ್ಣೆದುರೇ ಇದ್ದರೂ ತಿನ್ನಲು ದೇಹ ಬಯಸುವುದಿಲ್ಲ. ಅದರಲ್ಲೂ ಚಿಕನ್‌ ಖಾದ್ಯಗಳು ದೇಹಕ್ಕೆ ಸಿಕ್ಕಾಪಟ್ಟೆ ಹೀಟ್‌. ಹಾಗಂತ ನಾನ್‌ವೆಜ್‌ ತಿನ್ನದೇ ಇರಲು ಆಗುವುದೇ, ಖಂಡಿತ ಇಲ್ಲ. ಅದಕ್ಕಾಗಿ ಬೇಸಿಗೆಗೆ ಹೊಂದುವ ಖಾದ್ಯಗಳನ್ನು ತಿನ್ನಬೇಕು. ಬೇಸಿಗೆಗೆ ಯಾವ ರೀತಿಯ ನಾನ್‌ವೆಜ್‌ ಬೆಸ್ಟ್‌ ಎಂದು ಕೇಳಿದ್ರೆ ಮಟನ್‌, ಫಿಶ್‌, ರೆಡ್‌ಮೀಟ್‌ಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಿನ್ನಬಹುದು. ಇವು ದೇಹಕ್ಕೆ ಚಿಕನ್‌ನಷ್ಟು ಹೀಟ್‌ ಎನ್ನಿಸುವುದಿಲ್ಲ. ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ವೆಜ್‌ ರೆಸಿಪಿಗಳು ಹಾಗೂ ಅವುಗಳನ್ನು ತಯಾರಿಸುವ ವಿಧಾನ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮಟನ್‌ ಮಹಾರಾಜ ಕರಿ

ಬೇಕಾಗುವ ಸಾಮಗ್ರಿಗಳು: ಹುರಿದುಕೊಳ್ಳಲು: ಎಣ್ಣೆ - 1/2 ಕಪ್‌, ತುಪ್ಪು - 1 ರಿಂದ 2 ಚಮಚ, ಗೋಡಂಬಿ - 15 ರಿಂದ 20

ಇತರೆ ಸಾಮಗ್ರಿಗಳು: ತುಪ್ಪ ಹಾಗೂ ಎಣ್ಣೆ - ಸ್ವಲ್ಪ, ಈರುಳ್ಳಿ - 4 ರಿಂದ 5, ಕಪ್ಪು ಏಲಕ್ಕಿ - 1, ಲವಂಗ - 2 ರಿಂದ 3, ಹಸಿರು ಏಲಕ್ಕಿ - 1, ಚಕ್ಕೆ - ಅರ್ಧ ಇಂಚು, ದಾಲ್ಚಿನ್ನಿ ಎಲೆ - 1, ಮಟನ್‌ - 1 ಕೆಜಿ, ಉಪ್ಪು - ರುಚಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ, ಖಾರದ ಪುಡಿ - 1 ಚಮಚ, ಅರಿಸಿನ ಪುಡಿ - 1 ಚಮಚ, ಕೊತ್ತಂಬರಿ ಪುಡಿ - 1 ಚಮಚ, ಬೆಲ್ಲ - ಒಂದೂವರೆ ಚಮಚ, ಮೊಸರು - ಒಂದು ಕಾಲು ಕಪ್‌, ಕೇಸರಿ ದಳ - ಚಿಟಿಕೆ, ನೀರು - 2 ರಿಂದ 3 ಲೋಟ, ಕಾಳುಮೆಣಸು - 1 ಚಮಚ ಜಜ್ಜಿದ್ದು, ಹುರಿದುಕೊಂಡು ಗೋಡಂಬಿ ಪೇಸ್ಟ್‌ - 2 ಚಮಚ, ಕೊತ್ತಂಬರಿ ಸೊಪ್ಪು - 2 ಚಮಚ, ನಿಂಬೆರಸ - 1 ಚಮಚ,

ಮಟನ್‌ ಮಹಾರಾಜ ಕರಿ ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಎಣ್ಣೆ, ತುಪ್ಪ ಸೇರಿಸಿ ಬಿಸಿಯಾದ ಮೇಲೆ ಗೋಡಂಬಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪೇಸ್ಟ್‌ ತಯಾರಿಸಿಕೊಂಡು ಒಂದು ಪಾತ್ರೆ ಹಾಕಿ ಇಡಿ.

ಇನ್ನೊಂದು ಪಾತ್ರೆಯಲ್ಲಿ ಉಳಿದ ತುಪ್ಪು ಹಾಗೂ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಈರುಳ್ಳಿ ಸೇರಿಸಿ ಅದನ್ನು ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಕಪ್ಪು ಏಲಕ್ಕಿ, ಲವಂಗ, ಹಸಿರು ಏಲಕ್ಕಿ, ಮೇಸ್‌, ಚಕ್ಕೆ, ದಾಲ್ಚಿನ್ನಿ ಎಲೆ, ಮಟನ್‌, ರುಚಿಗೆ ತಕ್ಕಷ್ಟು ತಪ್ಪು ಸೇರಿಸಿ ಈ ಎಲ್ಲವನ್ನೂ ಮಿಶ್ರಣ ಮಾಡಿ. ಅರ್ಧ ಬೆಂದ ನಂತರ ಖಾರದಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಬೆಲ್ಲ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮೊಸರು, ಕೇಸರಿ ದಳ ಸೇರಿಸಿ ಕುದಿಯಲು ಬಿಡಿ. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ, ಪಾತ್ರೆಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 30 ರಿಂದ 40 ನಿಮಿಷ ಬೇಯಿಸಿ. ಅದಕ್ಕೆ ಕಾಳುಮೆಣಸು, ಕೇಸರಿ ದಳ, ಏಲಕ್ಕಿ ಪುಡಿ ಹಾಗೂ ರುಬ್ಬಿಕೊಂಡ ಗೋಡಂಬಿ ಪೇಸ್ಟ್‌ ಸೇರಿಸಿ ಒಂದು ಕುದಿಸಿ ಬರಿಸಿ. ಒಂದು ಚಿಕ್ಕ ಬೌಲ್‌ನಲ್ಲಿ ಬಿಸಿ ಮಾಡಿದ ಕೆಂಡವನ್ನು ಹಾಕಿ. ಅದಕ್ಕೆ ಲವಂಗ, ಸ್ವಲ್ಪ ತುಪ್ಪ ಸೇರಿಸಿ ಪಾತ್ರೆಯೊಳಗೆ ಇಟ್ಟು ಮುಚ್ಚಳ ಮುಚ್ಚಿ 7 ರಿಂದ 8 ನಿಮಿಷ ಇಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆರಸ ಸೇರಿಸಿ. ಈ ನಿಮ್ಮ ಮುಂದೆ ಮಹಾರಾಜ ಮಟನ್‌ ಕರಿ ಸವಿಯಲು ಸಿದ್ಧ.

ಎಗ್‌ ಟಿಕ್ಕಾ ಮಸಾಲ

ಬೇಕಾಗುವ ಸಾಮಗ್ರಿಗಳು: ಎಗ್‌ ಮಿಶ್ರಣಕ್ಕೆ: ಎಗ್‌ 10 ರಿಂದ 12, ಉಪ್ಪು - ರುಚಿಗೆ, ಖಾರದ ಪುಡಿ - 1 ಚಮಚ, ಅರಿಸಿನ ಪುಡಿ - 1/2 ಚಮಚ, ಎಣ್ಣೆ - 1 ಚಮಚ,

ಮೊಟ್ಟೆ ಬೇಯಿಸಲು: ಎಣ್ಣೆ - 1 ಚಮಚ, ಎಗ್‌ ಮಿಶ್ರಣ, ತುಪ್ಪ - 1 ಚಮಚ,

ಟಿಕ್ಕಾ ಮಸಾಲ ಮಾಡುವ ವಿಧಾನ: ಎಣ್ಣೆ - 2 ಚಮಚ, ತುಪ್ಪ - 1 ಚಮಚ, ದಾಲ್ಚಿನ್ನಿ ಎಲೆ - 1, ಹಸಿರು ಏಲಕ್ಕಿ - 3, ಈರುಳ್ಳಿ - 4, ಅರಿಸಿನ ಪುಡಿ - ಕಾಲು ಚಮಚ, ಕೊತ್ತಂಬರಿ ಪುಡಿ - 1ಚಮಚ, ಖಾರದ ಪುಡಿ - 1/2 ಚಮಚ, ನೀರು - ಕಾಲು ಕಪ್‌, ಟೊಮೆಟೊ ಪ್ಯೂರಿ - ಒಂದೂವರೆ ಚಮಚ, ಉಪ್ಪು - ರುಚಿಗೆ, ನೀರು - 2 ಕಪ್‌, ಫ್ರೆಶ್‌ ಕ್ರೀಮ್‌ - 1 ಕಪ್‌, ಕೊತ್ತಂಬರಿ ಸೊಪ್ಪು - 2 ಚಮಚ, ಬೆಣ್ಣೆ - 2 ರಿಂದ 3 ಚಮಚ, ಮೆಂತ್ಯೆ ಎಲೆ - ಅರ್ಧ ಚಮಚ,

ಮ್ಯಾರಿನೇಟ್‌ ಮಾಡಲು: ಸಾಸಿವೆ ಎಣ್ಣೆ - 2 ಚಮಚ, ಉಪ್ಪು - ರುಚಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ, ಅರಿಸಿನ ಪುಡಿ - ಚಿಟಿಕೆ, ಖಾರದ ಪುಡಿ - ಅರ್ಧ ಚಮಚ, ನಿಂಬೆರಸ - 2 ಚಮಚ, ಮೊಸರು - 2 ರಿಂದ 3 ಚಮಚ, ಕ್ಯಾಲ್ಸಿಕಂ - 1, ಟೊಮೆಟೊ - 1, ಶ್ಯಾಲೊ ಫ್ರೈ ಮಾಡಲು: ಎಣ್ಣೆ - 2 ಚಮಚ, ಮ್ಯಾರಿನೇಟ್‌ ಮಾಡಿಕೊಂಡ ಮೊಟ್ಟೆ ಹಾಗೂ ತರಕಾರಿ

ಎಗ್‌ ಟಿಕ್ಕಾ ಮಸಾಲ ತಯಾರಿಸುವ ವಿಧಾನ: ಮೊಟ್ಟೆ ಮಿಶ್ರಣ ಮಾಡಿ: ಒಂದು ಅಗಲ ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರದಪುಡಿ, ಅರಿಸಿನ ಪುಡಿ, ಎಣ್ಣೆ ಈ ಎಲ್ಲವನ್ನೂ ಮಿಶ್ರಣ ಮಾಡಿ ಬದಿಗೆ ಇರಿಸಿಕೊಳ್ಳಿ.

ಮೊಟ್ಟೆ ಮಿಶ್ರಣಕ್ಕೆ: ಪ್ಯಾನ್‌ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೊದಲೇ ಮಾಡಿಟ್ಟುಕೊಂಡ ಮಿಶ್ರಣ ಸೇರಿಸಿ. ಇದನ್ನು ಸಣ್ಣ ಉರಿಯಲ್ಲಿ ಕುದಿಸಿ. ಇದನ್ನು ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಕುದಿಸಿ. ಇದನ್ನು ಇನ್ನೊಂದು ಪಾತ್ರೆಗೆ ಮಗುಚಿ ಹಾಕಿ ಅದನ್ನು ಪುನಃ 15 ರಿಂದ 20 ನಿಮಿಷ ಬೇಯಿಸಿಕೊಳ್ಳಿ. ಇದನ್ನು ಪ್ಲೇಟ್‌ಗೆ ಹಾಕಿ ತಣ್ಣಗಾಗಲು ಬಿಡಿ.

ಮೊಟ್ಟೆ ಚಿಕ್ಕ ಮಸಾಲ ಮಾಡುವ ವಿಧಾನ: ಪಾತ್ರೆಯೊಂದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿ. ಬಿಸಿಯಾದ ಮೇಲೆ ದಾಲ್ಚಿನ್ನಿ ಎಲೆ, ಹಸಿರು ಏಲಕ್ಕಿ, ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಕೈಯಾಡಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ. ಹಸಿವಾಸನೆ ಹೋಗುವಂತೆ ಹುರಿದುಕೊಳ್ಳಿ. ಅದಕ್ಕೆ ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಖಾರದಪುಡಿ ಎಲ್ಲವನ್ನೂ ಸೇರಿಸಿ ಒಂದು ನಿಮಿಷ ಕೈಯಾಡಿಸಿ. ನೀರು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಟೊಮೆಟೊ ಪ್ಯೂರಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ಫ್ರೆಶ್‌ ಕ್ರೀಮ್‌ ಸೇರಿಸಿ ಕುದಿಸಿ. ನಂತರ ಕೊತ್ತಂಬರಿ ದಂಟು, ಹುರಿದುಕೊಂಡ ಮೊಟ್ಟೆ, ತರಕಾರಿ, ಬೆಣ್ಣೆ ಸೇರಿಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಕೊನೆಯಲ್ಲಿ ಮೆಂತ್ಯೆ ಸೊಪ್ಪು ಸೇರಿ ಮಿಶ್ರಣ ಮಾಡಿ. ಇದನ್ನು ಅನ್ನ, ರೋಟಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮಂಗಳೂರು ಶೈಲಿಯ ಫಿಶ್‌ ಕರಿ

ಬೇಕಾಗುವ ಸಾಮಗ್ರಿಗಳು: ಬೂತಾಯಿ ಮೀನು - ಅರ್ಧ ಕೆಜಿ, ತೆಂಗಿನತುರಿ - ಒಂದೂವರೆ ಕಪ್‌, ಒಣಮೆಣಸು - 10 ರಿಂದ 12, ಕಾಳುಮೆಣಸು - 4 ರಿಂದ 5, ಮೆಂತ್ಯೆ - 4 ಕಾಳು, ಈರುಳ್ಳಿ - 1 ಮಧ್ಯಮ ಗಾತ್ರದ್ದು, ಬೆಳ್ಳುಳ್ಳಿ - 5 ರಿಂದ 6 ಎಸಳು, ಕೊತ್ತಂಬರಿ - 2 ಚಮಚ, ಜೀರಿಗೆ - ಮುಕ್ಕಾಲು ಚಮಚ, ಹುಣಸೆಹಣ್ಣು - ಅರ್ಧ ನಿಂಬೆ ಗಾತ್ರದ್ದು, ಶುಂಠಿ - ಅರ್ಧ ಇಂಚು, ಕರಿಬೇವು, ಟೊಮೆಟೊ

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಮೆಣಸು ಹುರಿದುಕೊಳ್ಳಿ. ನಂತರ ಅದೇ ಪಾತ್ರೆಯಲ್ಲಿ ಕೊತ್ತಂಬರಿ, ಜೀರಿಗೆ, ಮೆಂತ್ಯೆ, ಕಾಳುಮೆಣಸು, ತೆಂಗಿನತುರಿ ಹುರಿದುಕೊಳ್ಳಿ. ಹುರಿದುಕೊಂಡ ಸಾಮಗ್ರಿಗಳು ಹುಣಸೆಹಣ್ಣು, ನೀರು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಯೊಂದಕ್ಕೆ ಸೇರಿಸಿ ಸ್ವಲ್ಪ ಕುದಿಸಿ. ನಂತರ ಸ್ವಲ್ಪ ಮಾಡಿ ತೊಳೆದು ಕತ್ತರಿಸಿ ಇರಿಸಿಕೊಂಡು ಮೀನುಗಳನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಇದಕ್ಕೆ ಶುಂಠಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ ಕುದಿಸಿ. ಈಗ ನಿಮ್ಮ ಮುಂದೆ ರುಚಿಯಾದ ಮಂಗಳೂರು ಶೈಲಿಯ ಮೀನು ಸಾರು ತಿನ್ನಲು ಸಿದ್ಧ.

ಫಿಶ್‌ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮೀನು - 1 ಕೆಜಿ, ಎಣ್ಣೆ - 2 ಚಮಚ, ಈರುಳ್ಳಿ - 1 ಕಪ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ, ಜೀರಿಗೆ - 1ಚಮಚ, ಕೊತ್ತಂಬರಿ ಪುಡಿ - 1 ಚಮಚ, ಗರಂ ಮಸಾಲ - 1 ಚಮಚ, ಖಾರದ ಪುಡಿ - 1 ಚಮಚ, ಅರಿಸಿನ ಪುಡಿ - 1 ಚಮಚ, ಉಪ್ಪು - ರುಚಿಗೆ, ಮೊಸರು - 1 ಕಪ್‌, ಹೆಚ್ಚಿಕೊಂಡು ಕೊತ್ತಂಬರಿ ಸೊಪ್ಪು - 1 ಕಪ್‌, ಹಸಿಮೆಣಸು - ಸಣ್ಣಗೆ ಹೆಚ್ಚಿದ್ದು, ಬಿರಿಯಾನಿ ಮಸಾಲ - 1 ಚಮಚ, ಈರುಳ್ಳಿ - ಮುಕ್ಕಾಲು ಕಪ್‌,

ರೈಸ್‌ಗೆ: ರೈಸ್‌ - 2 ಕಪ್‌, ಎಣ್ಣೆ - 2 ಚಮಚ, ಲವಂಗ - 4, ಕಾಳುಮೆಣಸು - 4, ಚಕ್ಕೆ - 1, ಏಲಕ್ಕಿ - 4, ಉಪ್ಪು - ರುಚಿಗೆ, ಬಿಸಿನೀರು - 3 ಕಪ್‌, ಕೇಸರಿ ದಳ

ಫಿಶ್‌ ಬಿರಿಯಾನಿ ಮಾಡುವ ವಿಧಾನ: ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಸೇರಿಸಿ. ಸಿಡಿಯಲು ಆರಂಭಿಸಿದ ಮೇಲೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಗರಂಮಸಾಲ, ಕೊತ್ತಂಬರಿ ಪುಡಿ, ಖಾರದ ಪುಡಿ, ಅರಿಸಿನ ಪುಡಿ, ಉಪ್ಪು ಹಾಗೂ ಮೊಸರು ಸೇರಿಸಿ. ಅದಕ್ಕೆ ಮೀನು ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ. ಅದರ ಮೇಲೆ ಮೊದಲೇ ಬೇಯಿಸಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಬಿರಿಯಾನಿ ಮಸಾಲ ಸೇರಿಸಿ. ಅನ್ನ ಮಾಡಲು ಎಣ್ಣೆ ಬಿಸಿಮಾಡಿ ಅದಕ್ಕೆ ಲವಂಗ, ಕಾಳುಮೆಣಸು, ದಾಲ್ಚಿನ್ನಿ ಮತ್ತು ಏಲಕ್ಕಿ ಸೇರಿಸಿ. ಅದು ಬಣ್ಣ ಬದಲಾದಾಗ ಅಕ್ಕಿ, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅನ್ನ ಅರೆಬೆಂದ ನಂತರ ಮೊದಲೇ ಮಾಡಿಟ್ಟುಕೊಂಡ ಮಿಶ್ರಣ ಮೇಲೆ ಅನ್ನವನ್ನು ಹರಡಿ. ಅದರ ಮೇಲೆ ಕೇಸರಿ ದಳದ ನೀರು ಚಿಮುಕಿಸಿ. ಇದನ್ನು ಪುನಃ 15 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಫಿಶ್‌ ಬಿರಿಯಾನಿ ತಿನ್ನಲು ಸಿದ್ಧ.

ಮಟನ್‌ ಸುಕ್ಕಾ

ಬೇಕಾಗುವ ಸಾಮಗ್ರಿಗಳು: ಮಟನ್‌ ತುಂಡುಗಳು - ಅರ್ಧ ಕೆಜಿ (ಮೂಳೆ ರಹಿತ), ಸಣ್ಣ ಈರುಳ್ಳಿ - 12, ದೊಡ್ಡ ಗಾತ್ರದ ಈರುಳ್ಳಿ - 1 ಚಿಕ್ಕದಾಗಿ ಹೆಚ್ಚಿದ್ದು, ಕರಿಬೇವು - 2 ಎಸಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 1ಚಮಚ, ಅರಿಸಿನ ಪುಡಿ - ಅರ್ಧ ಚಮಚ, ದಾಲ್ಚಿನ್ನಿ ಎಲೆ - 2, ಚಕ್ಕೆ - 1 ಇಂಚು, ಉಪ್ಪು - ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಅಲಂಕಾರಕ್ಕೆ.

ಮಸಾಲೆಗೆ: ಕೆಂಪುಮೆಣಸು - 4, ಕೊತ್ತಂಬರಿ - 1 ಚಮಚ, ಕಾಳುಮೆಣಸು - 1 ಚಮಚ, ಜೀರಿಗೆ - 1 ಚಮಚ, ಮೆಂತ್ಯೆ - 1/2 ಚಮಚ

ಮಟನ್‌ ಸುಕ್ಕಾ ತಯಾರಿಸುವ ವಿಧಾನ: ಮಟನ್‌ ತುಂಡುಗಳನ್ನು ಚೆನ್ನಾಗಿ ತೊಳೆದು ಅರಿಸಿನ ಹಾಗೂ ಉಪ್ಪು ಸೇರಿಸಿ ನೆನೆಯಲು ಬಿಡಿ. ಪಾನ್‌ವೊಂದರಲ್ಲಿ ಮಸಾಲೆಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳನ್ನು ಡ್ರೈ ರೋಸ್ಟ್‌ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ಕುಕ್ಕರ್‌ ಅಥವಾ ಪ್ಯಾನ್‌ನಲ್ಲಿ 3 ಚಮಚ ಎಣ್ಣೆ ಹಾಕಿ. ಅದಕ್ಕೆ ದಾಲ್ಚಿನ್ನಿ ಎಲೆ, ಚಕ್ಕೆ ಸೇರಿಸಿ ರುಚಿ ಹೆಚ್ಚಲು ಎಳ್ಳೆಣ್ಣೆ ಬಳಸಿ. ನಂತರ ಕರಿಬೇವು ಹಾಕಿ. ಅದಕ್ಕೆ ಚಿಕ್ಕ ಹಾಗೂ ಹೆಚ್ಚಿಕೊಂಡು ದೊಡ್ಡ ಈರುಳ್ಳಿ ಸೇರಿಸಿ, ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಈರುಳ್ಳಿ ಬಣ್ಣ ಬದಲಾದ ಬಳಿಕ ಶುಂಠಿ ಪೇಸ್ಟ್‌ ಸೇರಿಸಿ, ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ನಂತರ ನೆನೆಸಿಟ್ಟ ಮಟನ್‌ ತುಂಡುಗಳನ್ನು ಹಾಕಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ರುಬ್ಬಿಕೊಂಡ ಮಸಾಲೆ ಸೇರಿಸಿ. ಕೊಂಚ ನೀರು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಎಣ್ಣೆ ಬಿಡುವವರೆಗೂ ಬೇಯಿಸಿ. ಆಗಾಗ ಕೈಯಾಡಿಸಿ, ನೀರು ಸಂಪೂರ್ಣವಾಗಿ ಆವಿಯಾದ ಮೇಲೆ ಕರಿಬೇವಿನ ಎಲೆ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಮಟನ್‌ ಸುಕ್ಕ ತಿನ್ನಲು ಸಿದ್ಧ.